ಪರಪ್ಪನ ಅಗ್ರಹಾರ ಜೈಲಿನ ಗ್ರಂಥಾಲಯದಲ್ಲಿ ಪ್ರಜ್ವಲ್‌ ರೇವಣ್ಣ ಕ್ಲರ್ಕ್‌

ಕೈದಿಗಳಿಗೆ ಪುಸ್ತಕ ನೀಡುವ, ಎರವಲು ಪಡೆದ ದಾಖಲೆಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿ ವಹಿಸಲಾಗಿದೆ. ಈ ಕೆಲಸಕ್ಕಾಗಿ ದಿನವೊಂದಕ್ಕೆ ಪ್ರಜ್ವಲ್‌ ರೇವಣ್ಣಗೆ 522 ರೂ. ಪಾವತಿಸಲಾಗುತ್ತದೆ.;

Update: 2025-09-07 12:17 GMT

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಗ್ರಂಥಾಲಯ ಸಹಾಯಕನನ್ನಾಗಿ ನೇಮಿಸಲಾಗಿದೆ. 

ಕೈದಿಗಳಿಗೆ ಪುಸ್ತಕ ನೀಡುವ, ಎರವಲು ಪಡೆದ ದಾಖಲೆಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿ ವಹಿಸಲಾಗಿದೆ. ಈ ಕೆಲಸಕ್ಕಾಗಿ ದಿನವೊಂದಕ್ಕೆ ಪ್ರಜ್ವಲ್‌ ರೇವಣ್ಣಗೆ 522 ರೂ. ಪಾವತಿಸಲಾಗುತ್ತದೆ. ಜೈಲಿನ ನಿಯಮಾನುಸಾರ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳು ಶ್ರಮಾಧಾರಿತ ಕೆಲಸಗಳಲ್ಲಿ ತೊಡಗಿಸಬೇಕು. ಅಲ್ಲದೇ ಕೌಶಲ್ಯ ಹಾಗೂ ಆಸಕ್ತಿ ಗಮನಿಸಿ ಕೆಲಸ ನೀಡಬೇಕು. ಆದರೆ, ಪ್ರಜ್ವಲ್‌ ಎಂಜಿನಿಯರಿಂಗ್‌ ಪದವೀಧರನಾಗಿರುವ ಕಾರಣ ಪ್ರಜ್ವಲ್‌ಗೆ ಗ್ರಂಥಾಲಯದ ಕ್ಲರ್ಕ್‌ ಕೆಲಸ ನೀಡಲಾಗಿದೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣಗೆ ಕೈದಿಗಳ ವಿಭಾಗದಲ್ಲಿ 15528 ಸಂಖ್ಯೆ ನೀಡಲಾಗಿದೆ. ತಿಂಗಳಲ್ಲಿ ಕನಿಷ್ಠ 12 ದಿನ ಕೆಲಸ ಮಾಡಲೇಬೇಕು. ಪ್ರಜ್ವಲ್ ರೇವಣ್ಣ ಆಡಳಿತಾತ್ಮಕ ಕೆಲಸದಲ್ಲಿ ಆಸಕ್ತಿ ತೋರಿದ್ದರೂ, ಜೈಲು ಅಧಿಕಾರಿಗಳು ಆತನನ್ನು ಗ್ರಂಥಾಲಯಕ್ಕೆ ನಿಯೋಜಿಸಿದ್ದಾರೆ.  ಕೈದಿಗಳು ವಾರಕ್ಕೆ ಮೂರು ದಿನಗಳಂತೆ ತಿಂಗಳಿಗೆ ಕನಿಷ್ಠ 12 ದಿನ ಕೆಲಸ ಮಾಡಬೇಕೆಂಬ ನಿಯಮವಿದೆ. 

ಭೇಟಿಗಳಲ್ಲೇ ಸಮಯ ಕಳೆಯಲಿದೆ 

ಪ್ರಜ್ವಲ್‌ ರೇವಣ್ಣನನ್ನು ಗ್ರಂಥಾಲಯಕ್ಕೆ ನಿಯೋಜಿಸಿದರೂ ಕೆಲಸದ ಅವಧಿ ಕಡಿಮೆಯಾಗಿದೆ. ಏಕೆಂದರೆ, ನ್ಯಾಯಾಲಯಕ್ಕೆ ಹಾಜರು, ವಕೀಲರ ಭೇಟಿಗಳಲ್ಲೇ ಹೆಚ್ಚು ಸಮಯ ಕಳೆದು ಹೋಗುತ್ತಿದೆ.  ಇನ್ನು ನ್ಯಾಯಾಲಯಕ್ಕೆ ಹಾಜರಾಗುವ ದಿನದ ಸಂಭಾವನೆ ಗಣನೆಗೆ ಇಲ್ಲ. 

ಮನೆ ಕೆಲದಾಕೆಯ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಆ.2 ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಒಂದು ವರ್ಷದಿಂದ ವಿಚಾರಣಾಧೀನ ಕೈದಿಯಾಗಿದ್ದ ಪ್ರಜ್ವಲ್ ರೇವಣ್ಣ ಈಗ ಅಪರಾಧಿಯಾಗಿ ಕಾಯಂ ಕೈದಿಯಾಗಿದ್ದಾರೆ. 

Tags:    

Similar News