Prajwal Revanna Case | ವಕೀಲರ ನೇಮಕ; ಕಾಲಾವಕಾಶಕ್ಕಾಗಿ ಅಂಗಲಾಚಿ ಬೇಡಿಕೊಂಡ ಪ್ರಜ್ವಲ್‌ ರೇವಣ್ಣ- ಭವಾನಿ ರೇವಣ್ಣ

ಪ್ರಜ್ವಲ್‌ ಪ್ರಕರಣದ ವಕೀಲ ಜಿ.ಅರುಣ್ ಅವರು ವಕೀಲಿಕೆಯಿಂದ ನಿವೃತ್ತಿ ಹೊಂದಿದ್ದರು. ಹೊಸ ವಕೀಲರ ನೇಮಕಕ್ಕೆ ಕಾಲಾವಕಾಶ ನೀಡುವಂತೆ ಸೋಮವಾರ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಜ್ವಲ್‌ ರೇವಣ್ಣ ಹಾಗೂ ಭವಾನಿ ರೇವಣ್ಣ ಪರಿಪರಿಯಾಗಿ ಬೇಡಿಕೊಂಡರೂ ನ್ಯಾಯಾಧೀಶರು ಅವಕಾಶ ನಿರಾಕರಿಸಿದರು.;

Update: 2025-04-28 14:43 GMT

ಅತ್ಯಾಚಾರ ಪ್ರಕರಣದಲ್ಲಿ ವಕಾಲತ್ತು ವಹಿಸಲು ಹೊಸ ವಕೀಲರ ನೇಮಕಕ್ಕೆ ಕಾಲಾವಕಾಶ ನೀಡುವಂತೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ತಾಯಿ ಭವಾನಿ ರೇವಣ್ಣ ನ್ಯಾಯಾಧೀಶರ ಮುಂದೆ ಅಂಗಲಾಚಿ ಬೇಡಿಕೊಂಡ ಪ್ರಸಂಗ ನಡೆದಿದೆ.

ಪ್ರಜ್ವಲ್‌ ಪ್ರಕರಣದಲ್ಲಿ ವಕಾಲತ್ತು ವಹಿಸಿದ್ದ ವಕೀಲ ಜಿ.ಅರುಣ್ ಅವರು ವಕೀಲಿಕೆಯಿಂದ ನಿವೃತ್ತಿ ಹೊಂದಿದ್ದರು. ಹೊಸ ವಕೀಲರನ್ನು ನೇಮಿಸಿಕೊಳ್ಳಲು ಕಾಲಾವಕಾಶ ನೀಡುವಂತೆ ಸೋಮವಾರ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಜ್ವಲ್‌ ರೇವಣ್ಣ ಹಾಗೂ ಭವಾನಿ ರೇವಣ್ಣ ಪರಿಪರಿಯಾಗಿ ಬೇಡಿಕೊಂಡರು. ಆದರೆ, ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಕಾಲಾವಕಾಶ ನೀಡಲು ನಿರಾಕರಿಸಿ ಏ.29ರೊಳಗೆ ಹೊಸ ವಕೀಲರನ್ನು ನೇಮಿಸಿಕೊಳ್ಳಬೇಕು. ಇಲ್ಲದಿದ್ದರೆ ವಕೀಲರ ಗೈರು ಹಾಜರಿಯಲ್ಲೇ ವಿಚಾರಣೆ ಆರಂಭಿಸಲಾಗುವುದು ಎಂದು ಖಡಕ್ಕಾಗಿ ಹೇಳಿದರು. 

ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆಯಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಅವರನ್ನು ಬದಲಿಸುವಂತೆ ಪ್ರಜ್ವಲ್ ಪರ ವಕೀಲರು ಕೋರಿದ್ದರು. ಈ ಸಂಬಂಧದ ಜ್ಞಾಪನಾ ಪತ್ರವನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರು ತಿರಸ್ಕರಿಸಿದ್ದರು. ಇದರ ಬೆನ್ನಲ್ಲೇ ಪ್ರಜ್ವಲ್ ಪರ ವಕೀಲ ಜಿ. ಅರುಣ್ ಅವರು ವಕಾಲತ್ತಿನಿಂದ ನಿವೃತ್ತಿ ಹೊಂದಿ ನ್ಯಾಯಾಧೀಶರಿಗೆ ಮೆಮೋ ಸಲ್ಲಿಸಿದ್ದರು.

ಬೇರೆ ವಕೀಲರನ್ನು ನೇಮಿಸಿಕೊಳ್ಳಲು ಮೇ 2ರವರೆಗೆ ಕಾಲಾವಕಾಶ ನೀಡುವಂತೆ ಪ್ರಜ್ವಲ್ ರೇವಣ್ಣ ಮನವಿ ಮಾಡಿದ್ದರು. ಈ ವೇಳೆ ನ್ಯಾಯಾಲಯಕ್ಕೆ ಬಂದಿದ್ದ ಭವಾನಿ ರೇವಣ್ಣ ಕೂಡ ಸಮಯಾವಕಾಶ ನೀಡುವಂತೆ ಕೋರಿದರು. ಆದರೆ, ಇಬ್ಬರ ಮನವಿಯನ್ನು ನ್ಯಾಯಾಧೀಶರು ಸಾರಸಗಟಾಗಿ ತಳ್ಳಿ ಹಾಕಿದರು. ನೀವು ಕೇಳಿದಷ್ಟು ಸಮಯ ನೀಡಲು ಆಗುವುದಿಲ್ಲ. ನಿಮ್ಮ ತಾಯಿಯವರಿಗೆ ತಕ್ಷಣ ವಕೀಲರನ್ನು ನೇಮಿಸುವಂತೆ ಹೇಳಿ ಎಂದು ಸೂಚಿಸಿದರು. ಆಗ ಭವಾನಿ ರೇವಣ್ಣ ಕೋರ್ಟ್‌ ಹಾಲ್‌ನಿಂದ ಹೊರನಡೆದರು ಎಂದು ಮೂಲಗಳು ತಿಳಿಸಿವೆ. ಬಳಿಕ ನ್ಯಾಯಾಲಯವು ವಿಚಾರಣೆಯನ್ನು ಏ.29 ಕ್ಕೆ ಮುಂದೂಡಿತು. 

Tags:    

Similar News