ಪ್ರಲ್ಹಾದ ಜೋಷಿ ಭಯೋತ್ಪಾದಕ: ಕೇಂದ್ರ ಸಚಿವರ ವಿರುದ್ಧ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸು ವಾಪಸ್ ಪಡೆಯುವ ಸರ್ಕಾರದ ನಿಲುವಿನ ಕುರಿತ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವಿನ ವಾಕ್ಸಮರ ಮುಂದುವರಿದಿದ್ದು, ಆ ವಿಷಯದಲ್ಲಿ ಪ್ರಲ್ಹಾದ ಜೋಷಿ ಟೀಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಕೇಂದ್ರ ಸಚಿವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ.;

Update: 2024-10-13 11:47 GMT

ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಹಲವರ ವಿರುದ್ಧದ ಕೇಸು ವಾಪಸ್ ಪಡೆಯುವ ಸರ್ಕಾರದ ನಿಲುವಿನ ಕುರಿತ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವಿನ ವಾಕ್ಸಮರ ಮುಂದುವರಿದಿದ್ದು, ಆ ವಿಷಯದಲ್ಲಿ ಬಿಜೆಪಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಟೀಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಲ್ಹಾದ ಜೋಷಿ ಭಯೋತ್ಪಾದಕ ಎಂದು ಕಿಡಿ ಕಾರಿದ್ದಾರೆ.

ಮುಖ್ಯಮಂತ್ರಿಗಳ ಈ ಹೇಳಿಕೆ ಇದೀಗ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಚಾಲನೆ ನೀಡಿದ್ದು, ಬಿಜೆಪಿ ವಲಯದಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣವನ್ನು ಹಿಂಪಡೆಯಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಸಂಪುಟದ ನಿರ್ಧಾರ ನ್ಯಾಯಾಲದ ಮುಂದೆ ಹೋಗಬೇಕು. ನ್ಯಾಯಲಯ ಒಪ್ಪಿದರೆ ಮಾತ್ರ ಪ್ರಕರಣ ಹಿಂಪಡೆಯಲು ಆಗುತ್ತೆ ಎಂದು ತಿಳಿಸಿದರು.

ಬಿಜೆಪಿಯವರು ಸುಖಾ ಸುಮ್ಮನೆ ಪ್ರತಿಭಟನೆ ಮಾಡುತ್ತಾರೆ. ಸುಳ್ಳು ಕೇಸ್ ಇದ್ದರೆ, ಉದ್ದೇಶಪೂರ್ವಕವಾಗಿ ಮೊಕದ್ದಮೆ ಹಾಕಿದ್ದರೆ, ಹೋರಾಟ ಮಾಡಿದಾಗ ಕೇಸ್ ಹಾಕಿದ್ದರೆ ವಾಪಸ್ ತೆಗೆದುಕೊಳ್ಳಲು ಅವಕಾಶವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಭಯೋತ್ಪಾದಕ: ಟೆಂಗಿನಕಾಯಿ

ಕೇಸು ವಾಪಸ್ ಪಡೆಯುವ ಸಚಿವ ಸಂಪುಟ ನಿರ್ಧಾರವನ್ನು ಖಂಡಿಸಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಪ್ಪು ಬಟ್ಟೆ ತೋರಿಸಿ ಪ್ರತಿಭಟನೆ ನಡೆಸಿತು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭಯೋತ್ಪಾದಕರು. ಪ್ರಹ್ಲಾದ್ ಜೋಶಿ ಅವರು ಭಯೋತ್ಪಾದಕರಲ್ಲ, ದೇಶ ಭಕ್ತರು ಎಂದು ಹೇಳಿದರು.

ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಮೇಲಿನ ಕೇಸು ಹಿಂಪಡೆದಿದ್ದೀರಿ. ಸಿದ್ದರಾಮಯ್ಯನವರೇ ಭಯೋತ್ಪಾದಕರು. ಟಿಪ್ಪು ಜಯಂತಿ ಮಾಡಿದ ಕೀರ್ತಿ ನಿಮಗೆ ಸಲ್ಲುತ್ತದೆ. ರಾಜ್ಯದಲ್ಲಿ ನೀವು ಅರಾಜಕತೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದೀರಿ. ಸಿದ್ದರಾಮಯ್ಯ ಪೊಲೀಸರ ನೈತಿಕತೆ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾದರೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ನಮ್ಮ ಮನವಿ ತಗೆದುಕೊಂಡಿಲ್ಲ. ಇದು ದುರ್ದೈವದ ಸಂಗತಿ. ಪೊಲೀಸರನ್ನು ಬಳಸಿ‌ ನಮ್ಮನ್ನು ಅರೆಸ್ಟ್ ಮಾಡಿಸಿದರು. ನಾವು ಪೊಲೀಸರ ಪರವಾಗಿ ಹೋರಾಟ ಮಾಡುತ್ತಿದ್ವಿ. ಕಪ್ಪು ಬಾವುಟ‌ ಪ್ರದರ್ಶನ ಮಾಡಿದ ಇಬ್ಬರನ್ನು ವಶಕ್ಕೆ ತಗೆದುಕೊಂಡಿದ್ದಾರೆ. ನಮ್ಮ ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ್ದಾರೆ. ಸರ್ಕಾರದಲ್ಲಿ ಏನು ನಡೆಯುತ್ತಿದೆ. ನಮ್ಮ ಹೋರಾಟ ನಿರಂತರ ಎಂದರು.

Tags:    

Similar News