ಸಭಾಪತಿಯಾಗಲು ಕೈ ಎತ್ತಿದರೆ ಸಾಕು; ಹೊರಟ್ಟಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಯಾವುದೇ ರೀತಿಯಲ್ಲೂ ಭ್ರಷ್ಟಾಚಾರ ಮಾಡಿಲ್ಲ. ಅವರ ಮೇಲೆ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಮುಸ್ಲಿಂ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ದೂರಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಶಾಸಕ ಪ್ರದೀಪ್ ಈಶ್ವರ್
ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ಸಹಜ. ಆದರೆ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಾತಿನ ಭರದಲ್ಲಿ ವೈಯಕ್ತಿಕ ನಿಂದನೆಗೆ ಇಳಿದಿದ್ದು, ಸಾರ್ವಜನಿಕರ ಟೀಕೆಗೂ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯೆ ಮಾತಿನ ಸಮರ ಆರಂಭವಾಗಿದೆ.
ಇತ್ತೀಚೆಗೆ ಮಾಧ್ಯಮದ ಜೊತೆ ಮಾತನಾಡುವಾಗ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಪ್ರದೀಪ್ ಈಶ್ವರ್ ಒಬ್ಬ ಆಕಸ್ಮಿಕ ಶಾಸಕ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಗುರುವಾರ ಬೆಂಗಳೂರಿನಲ್ಲಿ ತಿರುಗೇಟು ನೀಡಿರುವ ಪ್ರದೀಪ್ ಈಶ್ವರ್ ಅವರು, ಸಭಾಪತಿಗಳ ಮೇಲೆ ನನಗೆ ಗೌರವ ಇದೆ. ಅವರು ಅಚಾನಕ್ ಆಗಿ ಸಭಾಪತಿಗಳಾಗಿರಬಹುದು. ಆದರೆ , ಅಚಾನಕ್ ಆಗಿ ಶಾಸಕನಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯರು ಕೈ ಎತ್ತಿದರೆ ಸಾಕು ಸಭಾಪತಿಯನ್ನು ಆಯ್ಕೆ ಮಾಡಬಹುದು. ಆದರೆಮ ಒಬ್ಬ ಶಾಸಕನಾಗಿ ಆಯ್ಕೆಯಾಗಲು ಒಂದು ಲಕ್ಷ ಮತಗಳಾದರೂ ಬೇಕು. ಈಗ ನಾನು ಹೇಳುತ್ತಿರುವುದು ಸಭಾಪತಿ ಆಯ್ಕೆ ಆಗುವ ವಿಚಾರಕ್ಕೆ ಮಾತ್ರ, ಸಭಾಪತಿಯವರ ಬಗ್ಗೆ ಅಲ್ಲ ಎಂದಿದ್ದಾರೆ.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಅವರ ಮೇಲೆ ಬಿಜೆಪಿ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದು, ಮುಸ್ಲಿಂ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸಚಿವ ಸಂಪುಟ ಪುನಾರಚನೆ ಬಳಿಕ ಖಾದರ್ ಅವರು ಸಚಿವರಾಗುತ್ತಾರೆ ಎಂಬ ಕಾರಣದಿಂದ ಭ್ರಷ್ಟಾಚಾರ ಆರೋಪ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಏನಿದು ವೈಯಕ್ತಿಕ ಜಟಾಪಟಿ ?
ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಇತ್ತೀಚೆಗೆ ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡಿದ್ದರು. ಪ್ರತಾಪ್ ಸಿಂಹ ಅವರು ಪ್ರದೀಪ್ ಈಶ್ವರ್ ಅವರನ್ನು 'ಕಾಮಿಡಿ ಪೀಸ್' ಮತ್ತು 'ಮುಳ್ಳುಹಂದಿ ಮುಖದವನು' ಎಂದು ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಪ್ರದೀಪ್ ಈಶ್ವರ್ ಅವರು, ಪ್ರತಾಪ್ ಸಿಂಹ ವಿರುದ್ಧವೂ ಅದೇ ರೀತಿಯ ತೀರಾ ವೈಯಕ್ತಿಕ ಟೀಕೆ ಮಾಡಿದ್ದರು.
ಇಬ್ಬರೂ ನಾಯಕರು ಪರಸ್ಪರರ ತಂದೆ ಮತ್ತು ತಾಯಿಯ ಬಗ್ಗೆಯೂ ನಿಂದನಾತ್ಮಕವಾಗಿ ಬೈದಾಡಿಕೊಂಡಿದ್ದರು.