ಬಿಜೆಪಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದ್ದರಿಂದ ಗುಂಡಿಗಳು ಬಿದ್ದಿವೆ: ಪ್ರದೀಪ್‌ ಈಶ್ವರ್‌

ಹಿಂದಿನ ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿ ರಸ್ತೆ ಮಾಡಿದ್ದಕ್ಕೆ ಇಂದು ಗುಂಡಿಗಳು ನಿರ್ಮಾಣವಾಗಿವೆ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ.

Update: 2025-09-24 11:55 GMT

ಪ್ರದೀಪ್ ಈಶ್ವರ್

Click the Play button to listen to article

ಹಿಂದಿನ ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿ ರಸ್ತೆ ಮಾಡಿದ್ದಕ್ಕೆ ಇಂದು ಗುಂಡಿಗಳು ನಿರ್ಮಾಣವಾಗಿವೆ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ. 

ರಸ್ತೆ ಗುಂಡಿಗಳ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿರುವ ವಿಚಾರ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ 17 ಶಾಸಕರನ್ನು ಅಕ್ರಮವಾಗಿ ಸೆಳೆದುಕೊಂಡು ಸರ್ಕಾರವನ್ನು ರಚಿಸಿ 4 ವರ್ಷ ಆಡಳಿತ ನಡೆಸಿದ್ದು ಬಿಜೆಪಿಯವರೇ. ಹಾಗಾದರೆ ನಾಲ್ಕು ವರ್ಷಗಳ ಕಾಲ ಅವರು ಕಡೆದು ಕಟ್ಟೆ ಹಾಕಿದ್ದೇನು? ಎಂದು ಪ್ರಶ್ನಿಸಿದ್ದಾರೆ.

"ಬೆಂಗಳೂರು ಬಿಜೆಪಿ ನಿಯಂತ್ರಣದಲ್ಲೇ ಇತ್ತಲ್ಲವೇ? ವಿಜಯೇಂದ್ರ ಅವರೇ, ನಿಮ್ಮ ತಂದೆಯವರೇ ಮುಖ್ಯಮಂತ್ರಿ ಆಗಿದ್ದರು. ಆಗ ನಿಮಗೆ ರಸ್ತೆ ಗುಂಡಿಗಳ ಮೇಲೆ ಪ್ರೀತಿ ಇರಲಿಲ್ಲವೇ? ಅಶೋಕ್‌ ಅವರೇ, ನೀವು ಬಹುಶಃ ಎಲ್ಲಾ ಖಾತೆಗಳನ್ನು ನಿರ್ವಹಿಸಿದ್ದೀರಿ. ಬಿಜೆಪಿ ಮನೆಯಲ್ಲೇ ಗುಂಡಿ ಬಿದ್ದಿದೆ. ಆ ಗುಂಡಿಗಳನ್ನು ನಾವು ಎಲ್ಲಿ ಓಪನ್ ಮಾಡುತ್ತೇವೋ ಎಂಬ ಭಯದಿಂದ ರಸ್ತೆ ಗುಂಡಿಗಳನ್ನು ನೋಡುತ್ತಿದ್ದೀರಾ? ರಸ್ತೆಗಳು ಗುಣಮಟ್ಟದಿಂದ ಕೂಡಿಲ್ಲ ಎಂದಾದರೆ ಗುಂಡಿಗಳು ಬಿದ್ದೇ ಬೀಳುತ್ತವೆ. ನಾವು ಅಭಿಯಾನ‌ ಶುರು ಮಾಡಿದ್ದೇ ಇತ್ತೀಚೆಗೆ. ನಾವು ಬಿಜೆಪಿಯವರ ರೀತಿ ಗುಂಡಿ ತೆಗೆದು ಮುಚ್ಚುತ್ತಿಲ್ಲ, ಬದಲಾಗಿ ಗುಂಡಿ ಬಿದ್ದ ಮೇಲೆ ಮುಚ್ಚುತ್ತಿದ್ದೇವೆ," ಎಂದು ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಕ್ರಾಂತಿಯಾಗಲಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, "ನಮ್ಮಲ್ಲಿ‌ ಅಭಿವೃದ್ಧಿ ಕ್ರಾಂತಿ ಆಗಲಿದೆ. ಅದು ಬಡವರನ್ನು ಶ್ರೀಮಂತರನ್ನಾಗಿ ಮಾಡುವ ಕ್ರಾಂತಿ. ಶೈಕ್ಷಣಿಕ ಕ್ರಾಂತಿಯಂತಹ ಕ್ರಾಂತಿಗಳಲ್ಲಿ ನಾವು ತೊಡಗಿಕೊಂಡಿದ್ದೇವೆ. ಬಿಜೆಪಿಯವರಿಗೆ ಕ್ರಾಂತಿ‌ ಎಂದರೇನು ಎಂದೇ ಗೊತ್ತಿಲ್ಲ. ಅಶೋಕ್‌ ಅವರೇ, ದೆಹಲಿಯಲ್ಲಿ 3 ಸಾವಿರಕ್ಕೂ ಹೆಚ್ಚು ಗುಂಡಿಗಳಿವೆ ಎಂದು ಲೋಕೋಪಯೋಗಿ ಸಚಿವರೇ ಹೆಳಿದ್ದಾರೆ. ನಿಮ್ಮ ಜಾತಕದಲ್ಲಿ ಅದು ಕಾಣಿಸಲಿಲ್ಲವೇ? ಡಿಸಿಎಂ ಡಿಕೆಶಿ ಅವರು ಪ್ರಧಾನಿ ನಿವಾಸದ ಬಳಿಯೇ ಸಾಕಷ್ಟು ರಸ್ತೆ ಗುಂಡಿಗಳಿವೆ ಎಂದಿದ್ದಾರೆ. ನಾವು ಬೆಂಗಳೂರಿನಲ್ಲಿ ದಿನಕ್ಕೆ 1000 ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಆದರೆ ಕಳೆದ 4 ವರ್ಷದಲ್ಲಿ ನೀವು ಎಷ್ಟು ಗುಂಡಿಗಳನ್ನು ಮುಚ್ಚಿದ್ದೀರಿ?" ಎಂದರು.

ಉದ್ಯಮಿ ಕಿರಣ್ ಮಜುಮ್ದಾರ್‌ ಕುರಿತು ಮಾತನಾಡಿದ ಪ್ರದೀಪ್, "ನಿನ್ನೆ ಮುಖ್ಯಮಂತ್ರಿಗಳು ಟ್ರಾಫಿಕ್‌ ನಿಯಂತ್ರಣ ಮಾಡಲು ಸಹಕಾರ ಕೊಡಿ ಎಂದು ಅಜೀಂ ಪ್ರೇಮ್ ಜಿ ಅವರಿಗೆ ಪತ್ರ ಬರೆದಿದ್ದಾರೆ. ಐಟಿಬಿಟಿಗೆ ನಾವು ಬೆಂಬಲ ನೀಡದಿದ್ದರೆ ಬೆಂಗಳೂರು ಐಟಿಬಿಟಿ ಹಬ್‌ ಆಗಿ ಬೆಳೆಯುತ್ತಿರಲಿಲ್ಲ. ಕಂಪನಿಗಳು, ವಲಸಿಗರು ಹೆಚ್ಚಾಗಿ ಬಂದಂತೆಲ್ಲ ಬೆಂಗಳೂರಿನ ಮೇಲೆ ಒತ್ತಡವೂ ಜಾಸ್ತಿಯಾಗುತ್ತಿದೆ. ಸದ್ಯ ಇದೊಂದು ದೊಡ್ಡ ಸವಾಲಾಗಿದೆ," ಎಂದರು.

ಕ್ರಿಶ್ಚಿಯನ್‌ ಮತಾಂತರ

"ಕ್ರಿಶ್ಚಿಯನ್ ಎಂಬ ಪದ ಚರ್ಚೆಗೆ ಬಂದಿರುವ ಕಾರಣ ಮಾತನಾಡುತ್ತಿದ್ದೇನೆ. ಛಲವಾದಿ ನಾರಾಯಣಸ್ವಾಮಿಯವರೇ, ನೀವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದೀರೆಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ ಆ ಬಗ್ಗೆ ನನಗೆ ಗೊತ್ತಿಲ್ಲ, ನನಗೂ ಸಂದೇಹ ಕಾಡುತ್ತಿದೆ. ನಾರಾಯಣಸ್ವಾಮಿ ಅವರೇ, ತಾವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದು ನಿಜವೇ? ಈ ಬಗ್ಗೆ ನಾನು ಆರೋಪ ಮಾಡುತ್ತಿಲ್ಲ. ನಿಜವಾಗಿದ್ದರೆ ಮತಾಂತರ ಏಕೆ ಆದಿರಿ? ಆಗಿಲ್ಲ ಎಂದಾದರೆ ದಯವಿಟ್ಟು ಸ್ಪಷ್ಟಪಡಿಸಿ. ನೀವು ಚರ್ಚ್‌ಗೆ ಹೋಗಿದ್ದನ್ನು ಹಲವರು ನೋಡಿದ್ದಾರೆ. ಆ ಬಗ್ಗೆ ಈಗಲೂ ದೇವನಹಳ್ಳಿ ಭಾಗದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಉತ್ತರ ಕೊಡಿ," ಎಂದು ಪ್ರದೀಪ್‌ ಈಶ್ವರ್‌ ಆಗ್ರಹಿಸಿದರು.


Tags:    

Similar News