ರಾಜಕೀಯವೇನು ವ್ಯಾಪಾರವಲ್ಲ: ಟ್ರಂಪ್-ಮಸ್ಕ್ ಬಾಂಧವ್ಯ ಹಳಸಲು ಕಾರಣ ಸರಳ
ಅಮೆರಿಕ ಮತ್ತು ಇತರ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಖಾಸಗಿ ಸಂಸ್ಥೆಗಳು ಎಷ್ಟು ಸುಲಭವಾಗಿ ನೇಮಕ ಮಾಡಿಕೊಳ್ಳುತ್ತಾವೋ ಅಷ್ಟೇ ಬೇಗ ಕಿತ್ತೂ ಹಾಕುತ್ತವೆ. ಆದರೆ ಸರ್ಕಾರ ಅಷ್ಟು ಸುಲಭವಾಗಿ ಆ ಕೆಲಸ ಮಾಡುವುದಿಲ್ಲ. ಯಾಕೆಂದರೆ ಸರ್ಕಾರವೆಂದರೆ ಜನಸೇವೆ. ಅದೊಂದು ವ್ಯಾಪಾರವಲ್ಲ...;
ಅಮೆರಿಕದ ಫೆಡರಲ್ ಸರ್ಕಾರದಲ್ಲಿ ಸುಧಾರಣೆಯನ್ನು ತರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲಾನ್ ಮಸ್ಕ್ ಅವರನ್ನು ಅವಲಂಬಿಸಿರುವ ಬಗ್ಗೆ ಕಳೆದ ಮಾರ್ಚ್ ತಿಂಗಳಲ್ಲಿ ಭಾರತದ ಪ್ರಮುಖ ನಿಯತಕಾಲಿಕಕ್ಕೆ ಲೇಖನ ಬರೆಯುತ್ತಿದ್ದೆ. ಆ ಲೇಖನವನ್ನು ನಾನು ಹೀಗೆ ಮುಕ್ತಾಯಗೊಳಿಸಿದ್ದೆ: “ಟ್ರಂಪ್-ಮಸ್ಕ್ ಟೀಮ್ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಮತ್ತು ನಿಜಕ್ಕೂ ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು, ಯಾಕೆಂದರೆ ಜಗತ್ತಿನಾದ್ಯಂತ ಎಂತಹುದೇ ಸವಾಲುಗಳನ್ನು ಹಿಮ್ಮೆಟ್ಟಿಸುವ ಸವಾಲುಗಳನ್ನು ಅಧಿಕಾರಶಾಹಿಗಳು ಹೊಂದಿದ್ದಾರೆ.”
ಲೇಖನವನ್ನು ಓದಿದ್ದ ನನ್ನ ಅಮೆರಿಕದ ಸ್ನೇಹಿತರೊಬ್ಬರು ಹೀಗೆ ಬರೆಯುತ್ತಾರೆ; “ಈ ಇಬ್ಬರು ಮಹಾನ್ ಅಹಂಕಾರಿಗಳು ಎಷ್ಟು ದಿನಗಳ ಕಾಲ ಒಂದು ತಂಡವಾಗಿ ಇರುತ್ತಾರೆ ಮತ್ತು ಯಾವಾಗ ಮುಖ ತಿರುವುತ್ತಾರೆ ಎಂಬುದನ್ನು ಕುತೂಹಲದಿಂದ ನೋಡುತ್ತಿದ್ದೇನೆ.”
ಈ ಟ್ರಂಪ್-ಮಸ್ಕ್ ಜೋಡಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ನನ್ನ ಅಮೆರಿಕ ಸ್ನೇಹಿತನ ಅಂದಾಜು ಸರಿ ಎಂದು ಸಾಬೀತಾಗಿದೆ. ಟ್ರಂಪ್ ಮತ್ತು ವಿಶ್ವದ ಕುಬೇರರಲ್ಲಿ ಒಬ್ಬರು ಹಾಗೂ ವಿಶ್ವದ ಅತ್ಯಂತ ಪ್ರಮುಖ ತಂತ್ರಜ್ಞಾನ ಕಂಪನಿಗಳ ಮುಖ್ಯಸ್ಥ ಮಸ್ಕ ಈಗ ಮುಖ ತಿರುವಿದ್ದಾರೆ.
ಟ್ರಂಪ್ ಮಂಡಿಸಿದ ಬಜೆಟ್ ನ್ನು ಮಸ್ಕ್ ತೀವ್ರವಾಗಿ ಟೀಕಿಸಿದ್ದೇ ಈ ಜೋಡಿ ಬೇರೆಯಾಗಲು ತಕ್ಷಣದ ಕಾರಣವೆಂದು ಅಂದಾಜು ಮಾಡಲಾಗ್ಗುತ್ತಿದೆ. ಬಜೆಟ್ ನ್ನು ಅಮೆರಿಕದ ಸಂಸತ್ತು ಈಗಾಗಲೇ ಅನುಮೋದಿಸಿದೆ.
“ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಷ್ಟೊಂದು ಅಗಾಧ ಪ್ರಮಾಣದ ಖರ್ಚನ್ನು ನೋಡಿ ನಿಜಕ್ಕೂ ನಿರಾಶೆಯಾಗಿದೆ. ಇದು ಕೊರತೆ ಬಜೆಟ್ ಗಾತ್ರವನ್ನು ಇನ್ನಷ್ಟು ಹೆಚ್ಚಿಸಲಿದೆ. ಅಷ್ಟು ಮಾತ್ರವಲ್ಲದೆ ಸರ್ಕಾರಿ ದಕ್ಷತಾ ಇಲಾಖೆ (DOGE) ಮಾಡುತ್ತಿರುವ ಕೆಲಸವನ್ನು ಕಡೆಗಣಿಸಿದಂತಾಗಿದೆ” ಎಂದು ಮಸ್ಕ್ ಯುಎಸ್ ಟಿವಿ ವಾಹಿನಿಗೆ ತಿಳಿಸಿದ್ದರು.
ಹೀಗೆ ಸಾರ್ವಜನಿಕವಾಗಿ ಟೀಕೆ ಮಾಡುವುದು ಟ್ರಂಪ್ ಮತ್ತವರ ಸಲಹೆಗಾರರಿಗೆ ಅಪಥ್ಯ. ಅದು ಸಹಜವೂ ಕೂಡ. ಸರ್ಕಾರದ ವೆಚ್ಚವನ್ನು ತಗ್ಗಿಸುವ ತಮ್ಮ ನಿರ್ಧಾರಗಳಿಗೆ ಇನ್ನು ಮುಂದೆ ಟ್ರಂಪ್ ಬೆಂಬಲವಿರುವುದಿಲ್ಲ ಎಂಬುದು ಮಸ್ಕ್ ಪಾಲಿಗೆ ಸ್ಪಷ್ಟವಾಗಿತ್ತು. ಅದು ಅವರ ಪಾಲಿಗೆ ಅಪಥ್ಯವಾಗಿತ್ತು.
ನನ್ನ ಅನೇಕ ಅಮೆರಿಕ ಮಿತ್ರರು ಗಮನಿಸಿದಂತೆ, ಟ್ರಂಪ್ ಮತ್ತು ಮಸ್ಕ್ ಅಸಾಧ್ಯ ಅಹಂಕಾರದ ಮನುಷ್ಯರು. ಅವರು ಜೊತೆ ಜೊತೆಯಲ್ಲಿ ಸಾಧ್ಯವೇ ಇರಲಿಲ್ಲ.
ಈಗೇನೋ ಬಜೆಟ್ಟನ್ನೇ ಮುಖ್ಯ ವಿವಾದವಾಗಿ ಕಾಣಿಸಿಕೊಂಡಿರಬಹುದು. ಆದರೆ ಮಸ್ಕ್ ಕಾರ್ಯನಿರ್ವಹಣೆಯ ರೀತಿ ಕಳೆದ ಕೆಲವು ತಿಂಗಳುಗಳಿಂದ ಟ್ರಂಪ್ ಅವರ ಹಿರಿಯ ಸಲಹೆಗಾರರು ಮತ್ತು ಸಂಪುಟದ ಪ್ರಮುಖ ಸದಸ್ಯರಿಗೆ ನುಂಗಲಾರದ ತುತ್ತಾಗಿತ್ತು. ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು. ಇವರಲ್ಲಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೊ ಕೂಡ ಸೇರಿದ್ದಾರೆ.
ವಿದೇಶಾಂಗ ನೀತಿಗೆ ಬಿದ್ದ ಪೆಟ್ಟು
ಹೊಸದಾಗಿ ಸೃಷ್ಟಿಸಲಾದ DOGEನಲ್ಲಿ ಎಲಾನ್ ಮಸ್ಕ್ ಮಾಡುತ್ತಿರುವ ರಂಪಾಟಗಳು, ಅಲ್ಲಿನ ಬಜೆಟ್ ಗೆ ಕತ್ತರಿಹಾಕುತ್ತಿರುವುದು ಹಾಗೂ ನೌಕರರನ್ನು ಕಿತ್ತುಹಾಕುತ್ತಿರುವುದನ್ನು ಟ್ರಂಪ್ ಸಂಪುಟದಲ್ಲಿರುವ ಹಿರಿಯ ರಾಜಕೀಯ ನಾಯಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿರುವ ಅಮೆರಿಕ ಸಂಸ್ಥೆ (USAID)ಗೆ ಸಂಬಂಧಿಸಿದ ಬೆಳವಣಿಗೆಗಳು ಇದಕ್ಕೆ ಇನ್ನೊಂದು ಉದಾಹರಣೆಯಾಗಿತ್ತು.
USAID ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹಣಕಾಸು ಮತ್ತು ಯೋಜನಾ ನೆರವು ನೀಡುವ ಅಮೆರಿಕ ಸರ್ಕಾರದ ಮುಖ್ಯ ಸಂಸ್ಥೆಯಾಗಿದೆ. ಇಂತಹ ಮಹತ್ವದ ಸಂಸ್ಥೆಯನ್ನು DOGE ಬಹುತೇಕ ಮುಗಿಸಿಯೇ ಬಿಟ್ಟಿತ್ತು. ನೆರವಿನ ಹರಿವು ನಿಂತುಹೋಗಿತ್ತು. ಇದರಿಂದ ಅಮೆರಿಕದ ನೆರವು ಸಿಗುತ್ತಿಲ್ಲ ಎಂದು ಬಡರಾಷ್ಟ್ರಗಳು ಕೂಗೆಬ್ಬಿಸಿದ್ದವು. ಒಂದು ರೀತಿಯಲ್ಲಿ ಅರಾಜಕತೆಯೇ ಸೃಷ್ಟಿಯಾಗಿತ್ತು. ಸಾರ್ವಜನಿಕವಾಗಿ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಗಳು ಅಥವಾ ಕಾರ್ಯದರ್ಶಿ ರುಬಿಯೊ ಅವರು ಪ್ರತಿಭಟನೆಯನ್ನೇನೂ ಮಾಡಲಿಲ್ಲ. ಆದರೆ ಅವರೆಲ್ಲರೂ ತೀವ್ರ ಚಿಂತಿತರಾಗಿದ್ದರು. ಯಾಕೆಂದರೆ ಅದು ಅಮೆರಿಕದ ವಿದೇಶಾಂಗ ನೀತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿತ್ತು.
ಸರ್ಕಾರದಲ್ಲಿನ ಸುಧಾರಣೆ ಎಂದರೆ ವ್ಯಾಪಾರ ಮತ್ತು ಉದ್ಯಮದಲ್ಲಿ ಸುಧಾರಣೆ ತಂದಂತೆ ಅಲ್ಲ ಎಂಬುದು 2017ರಿಂದ 2021ರ ವರಗೆ ಅಧಿಕಾರ ನಡೆಸಿದ ಅಧ್ಯಕ್ಷ ಟ್ರಂಪ್ ಅವರಿಗೆ ಗೊತ್ತಿರಬೇಕಾಗಿತ್ತು. ಅಮೆರಿಕ ಮತ್ತು ಇತರ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಖಾಸಗಿ ಸಂಸ್ಥೆಗಳು ಎಷ್ಟು ಸುಲಭವಾಗಿ ನೇಮಕ ಮಾಡಿಕೊಳ್ಳುತ್ತಾವೋ ಅಷ್ಟೇ ಬೇಗ ಕಿತ್ತೂ ಹಾಕುತ್ತವೆ. ಆದರೆ ಸರ್ಕಾರ ಅಷ್ಟು ಸುಲಭವಾಗಿ ಆ ಕೆಲಸ ಮಾಡುವುದಿಲ್ಲ.
ಖಾಸಗಿ ಸಂಸ್ಥೆಗಳು ‘ನಷ್ಟ ಅನುಭವಿಸುತ್ತಿದೆ’ ಎಂದು ಸಬೂಬು ಕೊಟ್ಟು ತಮ್ಮ ಕಂಪನಿಗಳನ್ನು ಮುಚ್ಚಿಬಿಡಬಹುದು. ಹಾಗಂತ ಸರ್ಕಾರ ಏಕಾಏಕಿ ಇಲಾಖೆಗಳನ್ನು ಬಂದ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಒಂದು ಇಲಾಖೆ ಇನ್ನೊಂದರ ಜೊತೆ ನಂಟುಹೊಂದಿರುತ್ತದೆ. ಆ ಇಲಾಖೆಯನ್ನು ನಿಲ್ಲಿಸಿಬಿಟ್ಟರೆ ಇಡೀ ಸರ್ಕಾರದಲ್ಲಿ ಏರುಪೇರು ಉಂಟಾಗುತ್ತದೆ. ಹಾಗಾಗಿ ಇಲಾಖೆಗಳನ್ನು ಮುಚ್ಚುವುದನ್ನ ತುಂಬಾ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.
ಸರ್ಕಾರಕ್ಕೂ ಉದ್ಯಮಕ್ಕೂ ಇರುವ ವ್ಯತ್ಯಾಸ
ವ್ಯಾಪಾರ ಮತ್ತು ಉದ್ಯಮದಲ್ಲಿನ ಉದ್ದೇಶಗಳಿಗೂ ಸರ್ಕಾರದ ಉದ್ದೇಶಗಳಿಗೂ ಮೂಲಭೂತ ವ್ಯತ್ಯಾಸಗಳಿರುತ್ತವೆ. ಒಂದು ಉದ್ಯಮವನ್ನು ಲಾಭಕ್ಕಾಗಿ ನಡೆಸಲಾಗುತ್ತದೆ. ಆದರೆ ಸರ್ಕಾರ ಹಾಗಲ್ಲ, ಅದರ ಉದ್ದೇಶವೇನಿದ್ದರೂ ಜನರ ಸೇವೆ ಮಾಡುವುದು. ಹಾಗಾಗಿ ವ್ಯಾಪಾರ ಮತ್ತು ಸರ್ಕಾರಗಳಲ್ಲಿ ದಕ್ಷತೆಯನ್ನು ತರುವ ಮತ್ತು ಉಳಿತಾಯವನ್ನು ಮಾಡುವ ಪ್ರಕ್ರಿಯೆ ನಿರಂತರವಾದುದು. ಆದರೆ ಎರಡೂ ಕಡೆ ಅಳವಡಿಸಿಕೊಳ್ಳುವ ವಿಧಾನಕ್ರಮಗಳು ಮಾತ್ರ ಸಂಪೂರ್ಣ ಭಿನ್ನ.
ಅಧಿಕಾರಶಾಹಿ ಸಂಪ್ರದಾಯಗಳನ್ನು ಹೊಸಕಿಹಾಕಲು ಹಾಗೂ ಆಕ್ರಮಣಕಾರಿ ದಾರಿಯಲ್ಲಿ ಸಾಗಲು ಮಸ್ಕ್ ಗೆ ಅವಕಾಶ ಮಾಡಿಕೊಟ್ಟಾಗ ಟ್ರಂಪ್ ಇಂತಹ ವ್ಯತ್ಯಾಸಗಳನ್ನೇನೂ ಮುಚ್ಚಿಟ್ಟಿರಲಿಲ್ಲ. ಅವರದ್ದೇನಿದ್ದರೂ ಅಮೆರಿಕದ ವ್ಯಾಪಾರಿ ಸಂಪ್ರದಾಯದ ಭಾಗವಾಗಿತ್ತು. ಅಮೆರಿಕ ಸರ್ಕಾರ ಮತ್ತು ರಾಜಕೀಯ ವ್ಯವಸ್ಥೆಯ ಸಂಪ್ರದಾಯಗಳಿಗೆ ತಕ್ಕುನಾದುದಲ್ಲ ಎಂಬುದು ಮಾತ್ರ ಸ್ಪಷ್ಟ.
ಕೆಲವು ಕಾಲ ಮಸ್ಕ್ ಮಾಡುತ್ತಿದ್ದ ಕೆಲಸಗಳು ಟ್ರಂಪ್ ಕೂಟದಲ್ಲಿ ಜನಪ್ರಿಯವಾಗಿದ್ದವು. ಇದಕ್ಕೆ ಕಾರಣವೇನೆಂದರೆ ಟ್ರಂಪ್ ಗೆ ಬೆಂಬಲ ನೀಡುವ ಸಾಮಾಜಿಕ ಗುಂಪುಗಳ ದೊಡ್ಡ ಪಡೆ ಯಾವತ್ತೂ ಸರ್ಕಾರ ಮತ್ತು ಅಧಿಕಾರಶಾಹಿಗಳನ್ನು ಅನುಮಾನದ ಕಣ್ಣಿನಿಂದಲೇ ನೋಡುತ್ತಿರುತ್ತದೆ. ಹಾಗಾಗಿ ಅವರಿಗೆಲ್ಲ ಖುಷಿಯಾದದ್ದು ಯಾಕೆಂದರೆ DOGEನಲ್ಲಿರುವ ಮಸ್ಕ್ ಪಡೆ ಸರ್ಕಾರಿ ಇಲಾಖೆಗಳಿಗೆ ಅಕ್ಷರಶಃ ನುಗ್ಗಿ ಕಾರ್ಯಕ್ರಮಗಳನ್ನು ರದ್ದುಮಾಡುತ್ತಿರುವುದು ಹಾಗೂ ಜನರನ್ನು ಕಿತ್ತೊಗೆಯುತ್ತಿದ್ದರು.
DOGE ಕೈಗೊಂಡಿರುವ ಇಂತಹ ನಿರ್ಧಾರಗಳು ಸರ್ಕಾರದ ವೆಚ್ಚಗಳನ್ನು ತಗ್ಗಿಸಿ ಭಾರೀ ಉಳಿತಾಯಕ್ಕೆ ದಾರಿಮಾಡಿಕೊಡಲಿದೆ ಮತ್ತು ಅದು ಸರ್ಕಾರದ ಅವಶ್ಯಕ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನೇನೂ ಬೀರುವುದಿಲ್ಲ ಎಂದು ಅವರೆಲ್ಲರೂ ಅಂತಹ ಪ್ರಕಟಣೆಗಳ ಬೆನ್ನು ತಟ್ಟಿದ್ದರು.
ಅನನುಭವಿ ಮಾಡಿದ ತಪ್ಪು
ಅಮೆರಿಕ ಸರ್ಕಾರವು ಕೊಬ್ಬಿಹೋಗಿದೆ ಎಂಬುದಕ್ಕೆ DOGE ಸಂಕೇತವಾಗಿತ್ತು. DOGEನ್ನು ಮಸ್ಕ್ ಮುನ್ನಡೆಸುತ್ತಿಲ್ಲವಾದರೂ ಅದರ ಹಿಂದಿನ ಮುಖ್ಯ ಮಾರ್ಗದರ್ಶಕರಾಗಿದ್ದರು. ಇಂತಹ DOGE ಅಮೆರಿಕ ಸರ್ಕಾರದ ‘ಕೊಬ್ಬನ್ನು’ ಕರಗಿಸುತ್ತಿದೆ ಎಂದೇ ಎಲ್ಲರ ಭಾವನೆಯಾಗಿತ್ತು. ಹಿಂದೆಂದೂ ಸರ್ಕಾರದೊಳಗೆ ಕೆಲಸ ಮಾಡಿದ ಅನುಭವವಿಲ್ಲದ ಮಸ್ಕ್ ತಮಗೆ ಯಾವತ್ತೂ ಟ್ರಂಪ್ ಬೆಂಬಲವಿರುತ್ತದೆ ಎಂದು ಭಾವಿಸಿದ್ದರು.
ಟ್ರಂಪ್ ಒಳಗೊಬ್ಬ ಉದ್ಯಮಿ ಯಾವತ್ತೂ ಕೆಲಸಮಾಡುತ್ತಿದ್ದರೂ ಅವರಿಗೆ ತಮ್ಮ ನೀತಿಗಳನ್ನು ಜಾರಿಗೆ ತರಲು ಸರ್ಕಾರಿ ವ್ಯವಸ್ಥೆಯನ್ನು ಅವಲಂಬಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇಂತಹ ಸಂಗತಿಯನ್ನು ಮಸ್ಕ್ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ.
ವ್ಯವಸ್ಥೆ ಹೀಗಿರುವಾಗ ಟ್ರಂಪ್ ಅಧಿಕಾರಶಾಹಿಯನ್ನು ದೂರವಿಟ್ಟು ಯಶಸ್ವಿಯಾಗಲು ಸಾಧ್ಯವಿಲ್ಲ. ಅವರು ಅಧಿಕಾರಿಗಳ ಸ್ನೇಹ ಮಾಡಿಕೊಂಡೇ ಎಲ್ಲವನ್ನೂ ಸಾಧಿಸುತ್ತಿದ್ದರು. ಮಸ್ಕ್ ಮಾಡುತ್ತಿರುವ ರಂಪಾಟಗಳು ಸರ್ಕಾರಿ ಯಂತ್ರದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುತ್ತಿವೆ ಎಂದು ಟ್ರಂಪ್ ರಾಜಕೀಯ ಸಲಹೆಗಾರರು ಅವರಿಗೆ ತಿಳಿಸುತ್ತಿದ್ದರು. ನಿಸ್ಸಂಶಯವಾಗಿ ಅದು ಟ್ರಂಪ್ ಗೆ ರಾಜಕೀಯವಾಗಿ ನಷ್ಟವೇ. ಹಾಗಾಗಿ ಮಸ್ಕ್ DOGEನ್ನು ಮುನ್ನಡೆಸುವ ಕಾರ್ಯವಿಧಾನಗಳಿಂದ ತಮ್ಮ ರಾಜಕೀಯ ಸ್ಥಾನಕ್ಕೆ ಕುತ್ತುಂಟಾಗುವುದು ಟ್ರಂಪ್ ಗೆ ಸುತಾರಾಂ ಇಷ್ಟವಿಲ್ಲದ ಸಂಗತಿ.
ಸ್ಥಾನ ಭದ್ರ ಎಂಬ ನಂಬಿಕೆ
ಒಂದು ವಿಚಾರ ಮಾತ್ರ ಮಸ್ಕ್ ತಲೆಯಲ್ಲಿ ಪಟ್ಟಾಗಿ ಕುಳಿತುಬಿಟ್ಟಿತ್ತು. ಅದೇನೆಂದರೆ ಟ್ರಂಪ್ ಜೊತೆಗಿನ ತಮ್ಮ ಸ್ಥಾನ ಭದ್ರ ಎಂಬುದು. ಯಾಕೆಂದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಸುರಿದಿರುವ ದುಡ್ಡು. ಅಮೇರಿಕದ ಅನೇಕ ಉದ್ಯಮಗಳು ಟ್ರಂಪ್ ಗೆ ಬೆಂಬಲ ನೀಡುವಂತೆ ಮಾಡುವಲ್ಲಿ ಮಸ್ಕ್ ಕೈವಾಡವಿತ್ತು.
ಟ್ರಂಪ್ ಅವರ ಪ್ರಚಾರಕ್ಕೆ ಮಸ್ಕ್ ಕೊಟ್ಟ ಆರ್ಥಿಕ ಬೆಂಬಲವನ್ನು ಕಡೆಗಣಿಸುವಂತಿಲ್ಲವಾದರೂ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಭರ್ಜರಿ ಗೆಲುವಿಗೆ ಖಂಡಿತವಾಗಿ ಅದು ಕಾರಣವಾಗಿರಲಿಲ್ಲ. ಡೆಮಾಕ್ರಟಿಕ್ ಪಕ್ಷದ ಪ್ರಚಾರದಲ್ಲಿನ ದೌರ್ಬಲ್ಯಗಳು, ಕಮಲಾ ಹ್ಯಾರಿಸ್ ಗೆ ಸಿಗದ ಕಾಲಾವಕಾಶ ಸೇರಿದಂತೆ ಅನೇಕ ಕಾರಣಗಳಿದ್ದವು.
ಇದಲ್ಲದೆ ಟ್ರಂಪ್ ಅವರ ನಿಷ್ಠಾವಂತ ಬೆಂಬಲಿಗರು 2020ರ ಚುನಾವಣೆಯಲ್ಲಿ ಅವರ ಸೋಲಿನ ಹೊರತಾಗಿಯೂ ಅವರಿಗೆ ತಮ್ಮ ಬೆಂಬಲವನ್ನು ಮುಂದುವರಿಸಿದ್ದರು. ಹೀಗಾಗಿ ಟ್ರಂಪ್ ಅವರ ವಿಜಯದ ಹಿಂದೆ ತಮ್ಮ ಕೊಡುಗೆಯೇ ದೊಡ್ಡದು ಎಂದು ಮಸ್ಕ್ ಅತಿಯಾಗಿ ಅಂದಾಜಿಸಿದ್ದರು. ಈ ಕೃತಜ್ಞತೆಗೆ ಸಿಲುಕಿರುವ ಟ್ರಂಪ್ ತಮ್ಮ ನಡುವೆ ಎಂದಿಗೂ ಬಿರುಕು ಬೆಳೆದು ದೊಡ್ಡಗಾಗಲು ಬಿಡುವುದಿಲ್ಲ ಎಂದು ನಂಬಿಕೊಂಡಿದ್ದರು. ಅದು ತಪ್ಪು ಲೆಕ್ಕಾಚಾರವಾಗಿತ್ತು. ಯಾವುದೇ ದೇಶದ ರಾಜಕೀಯ ವ್ಯವಸ್ಥೆ ಹಾಗೆ ಕಾರ್ಯನಿರ್ವಹಿಸುವುದಿಲ್ಲ.
ಸರ್ಕಾರವೆಂದರೆ ವ್ಯಾಪಾರವಲ್ಲ
ಎಲಾನ್ ಮಸ್ಕ್ ಈಗ ತಮ್ಮ ವ್ಯಾಪಾರಕ್ಕೆ ಮರಳಿದ್ದಾರೆ. ವಾಷಿಂಗ್ಟನ್ ನಲ್ಲಿ ನೀವು ಸಾಧಿಸಿದ್ದಾದರೂ ಏನು ಎಂಬ ಪ್ರಶ್ನೆಯನ್ನು ಅವರನ್ನೀಗ ಕೇಳಬೇಕಾಗಿದೆ. ಸುದ್ದಿ ಸಂಸ್ಥೆ ರಾಯಿರ್ಟ್ಸ್ ಹೀಗೆ ಅಂದಾಜು ಮಾಡಿದೆ; “ಟ್ರಂಪ್ ಮತ್ತು DOGE ತಮ್ಮ ವಜಾಗೊಳಿಸುವ ಬೆದರಿಕೆ, ಅವಧಿಗೂ ಮೊದಲೇ ನಿವೃತ್ತಿ ಆಫರ್ ನಂತಹ ಕ್ರಮಗಳ ಮೂಲಕ ಸುಮಾರು ಶೇ.12ರಷ್ಟು ಅಥವಾ 2,60,000 ಮಂದಿಯನ್ನು ಕಿತ್ತುಹಾಕುವಲ್ಲಿ ಯಶಸ್ವಿಯಾಗಿದೆ.”
ಇಂತಹ ಉದ್ಯೋಗ ಕಡಿತಗಳು ಮುಂದುವರಿಯುತ್ತವೆಯೇ ಅಥವಾ ಅಮೆರಿಕದ ಅಧಿಕಾರಶಾಹಿ ಮಸ್ಕ್ ಪೂರ್ವದ ದಿನಗಳಿಗೆ ಮರಳುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಮಸ್ಕ್ ಪ್ರಸಂಗದಿಂದ ಒಂದು ಪಾಠವನ್ನಂತೂ ಕಲಿಯಬೇಕಿದೆ. ಸರ್ಕಾರಿ ಮತ್ತು ಆಡಳಿತಾತ್ಮಕ ಸುಧಾರಣೆ ಕಸರತ್ತುಗಳು ನಿರಂತರ ಪ್ರಕ್ರಿಯೆ. ಆದರೆ ಅದನ್ನು ಯಾವತ್ತೂ ಸಾಂಪ್ರದಾಯಿಕ ವಿಧಾನಗಳಲ್ಲಿ ಕೈಗೊಳ್ಳಬೇಕಾಗುತ್ತದೆ. ಸರ್ಕಾರಿ ವ್ಯವಸ್ಥೆಯನ್ನು ಸರಿಯಾದ ಗಾತ್ರಕ್ಕೆ ತರುವ ಮತ್ತು ಸಾರ್ವಜನಿಕ ಹಣವನ್ನು ವಿವೇಚನೆಯಿಂದ ಖರ್ಚುಮಾಡುವುದನ್ನು ಖಚಿತಪಡಿಸುವ ಸುಧಾರಣೆಯು ಅಂತಿಮವಾಗಿ ಅವಲಂಬಿಸಿರುವುದು ಎಲ್ಲಾ ದೇಶಗಳ ರಾಜಕೀಯ ಇಚ್ಛಾಶಕ್ತಿಯನ್ನು. ಕಟ್ಟಕಡೆಯಲ್ಲಿ ಹೇಳುವ ಮಾತು; ವ್ಯಾಪಾರ ವ್ಯಾಪಾರವೇ, ಸರ್ಕಾರ ಸರ್ಕಾರವೇ.
(ಮೂಲ ಲೇಖನ The Federalನಲ್ಲಿ ಪ್ರಕಟವಾಗಿದೆ. ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು ‘ದ ಫೆಡರಲ್ ಕರ್ನಾಟಕ’ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕಾಗಿಲ್ಲ)