ಮೈಸೂರಿನಲ್ಲಿ ಪೊಲೀಸರ ಕಾರ್ಯಾಚರಣೆ: 1.5 ಕೆ.ಜಿ ಗಾಂಜಾ ಗಿಡ ವಶ, ಇಬ್ಬರ ಬಂಧನ
ಮೂರು ತಿಂಗಳ ಹಿಂದೆ ಕೆಡವಲಾಗಿದ್ದ ಮನೆಯ ಜಾಗ ಇದಾಗಿದ್ದು, ಇಲ್ಲಿಗೆ ಗಾಂಜಾ ಸೇದಲು ಬರುತ್ತಿದ್ದ ವ್ಯಕ್ತಿಗಳು ಬಿಸಾಡಿದ ಬೀಜಗಳಿಂದ ಗಿಡ ಮೊಳಕೆಯೊಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.;
ಸಾಂದರ್ಭಿಕ ಚಿತ್ರ
ನಗರದಲ್ಲಿ ಮಾದಕ ವಸ್ತುಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ಪೊಲೀಸರು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 1.5 ಕೆ.ಜಿ ತೂಕದ ಗಾಂಜಾ ಗಿಡ ಹಾಗೂ 83 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಆರ್. ಮೊಹಲ್ಲಾದಲ್ಲಿನ ಖಾಲಿ ನಿವೇಶನವೊಂದರಲ್ಲಿ 1.5 ಕೆ.ಜಿ ತೂಕದ ಗಾಂಜಾ ಗಿಡ ಬೆಳೆದಿರುವುದನ್ನು ಪೊಲೀಸರು ಪತ್ತೆಹಚ್ಚಿ, ಅದನ್ನು ವಶಕ್ಕೆ ಪಡೆದಿದ್ದಾರೆ. ಮೂರು ತಿಂಗಳ ಹಿಂದೆ ಕೆಡವಲಾಗಿದ್ದ ಮನೆಯ ಜಾಗ ಇದಾಗಿದ್ದು, ಇಲ್ಲಿಗೆ ಗಾಂಜಾ ಸೇದಲು ಬರುತ್ತಿದ್ದ ವ್ಯಕ್ತಿಗಳು ಬಿಸಾಡಿದ ಬೀಜಗಳಿಂದ ಗಿಡ ಮೊಳಕೆಯೊಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. "ನಿವೇಶನದ ವಾರಸುದಾರರ ಮಾಹಿತಿ ಪಡೆದು, ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಮಾದಕ ವ್ಯಸನಿಗಳನ್ನು ಪತ್ತೆಹಚ್ಚಲು ಗುರುವಾರ ತಡರಾತ್ರಿ ನಗರದಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 83 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯ ಭಾಗವಾಗಿ, 129 ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ವಿವಿಧೆಡೆ ನಿಲ್ಲಿಸಿದ್ದ ಆಟೊ ಮತ್ತು ಲಾರಿಗಳನ್ನೂ ಪರಿಶೀಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.