ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ: ಬಿಸಿಯೂಟ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಶಾಲೆಯ ಪಕ್ಕದಲ್ಲಿರುವ ಮರವನ್ನೇರಿ ಕಿಡಿಗೇಡಿಗಳು ಶಾಲೆಯ ಚಾವಣಿ ತಲುಪಿ, ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ಕೀಟನಾಶಕವನ್ನು ಟ್ಯಾಂಕ್‌ಗೆ ಸುರಿದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ವಿಷ ಬೆರೆಸಲು ಬಳಸಿದ ಖಾಲಿ ಬಾಟಲಿಯೊಂದು ಸ್ಥಳದಲ್ಲಿ ಪತ್ತೆಯಾಗಿದೆ.;
ಹೊಸನಗರ ತಾಲೂಕಿನ ಹೂವಿನಕೋಣೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ಕಿಡಿಗೇಡಿಗಳು ವಿಷ ಬೆರೆಸಿರುವ ಆತಂಕಕಾರಿ ಘಟನೆ ಗುರುವಾರ ನಡೆದಿದೆ. ಮಕ್ಕಳ ಬಿಸಿಯೂಟ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ, ಮಕ್ಕಳಿಗೆ ಹಾಲು ವಿತರಿಸುವ ಮುನ್ನವೇ ಈ ವಿಷಯ ಬೆಳಕಿಗೆ ಬಂದಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಎಂದಿನಂತೆ ಶಾಲೆ ಆರಂಭವಾದ ನಂತರ, ಬಿಸಿಯೂಟ ತಯಾರಿಸುವ ಸಿಬ್ಬಂದಿ ಮಕ್ಕಳಿಗೆ ಹಾಲು ತಯಾರಿಸಲು ನೀರಿನ ಟ್ಯಾಂಕ್‌ನ ನೀರನ್ನು ಬಳಸಲು ಮುಂದಾದರು. ಈ ವೇಳೆ, ನೀರಿನ ಬಣ್ಣದಲ್ಲಿ ವ್ಯತ್ಯಾಸ ಮತ್ತು ಕೀಟನಾಶಕದ ವಾಸನೆ ಬಂದಿದ್ದರಿಂದ ಅನುಮಾನಗೊಂಡು ತಕ್ಷಣ ಶಾಲೆಯ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದರು. ಶಾಲಾಡಳಿತವು ಪಂಚಾಯಿತಿ ಮತ್ತು ಇತರ ಅಧಿಕಾರಿಗಳಿಗೆ ವಿಷಯ ತಿಳಿಸಿದ ನಂತರ, ನಡೆಸಿದ ಪರೀಕ್ಷೆಯಲ್ಲಿ ನೀರಿಗೆ ಕೀಟನಾಶಕ ಬೆರೆಸಿರುವುದು ದೃಢಪಟ್ಟಿದೆ.
ಶಾಲೆಯ ಚಾವಣಿಯ ಮೇಲಿದ್ದ ಎರಡು ನೀರಿನ ಟ್ಯಾಂಕ್‌ಗಳ ಪೈಕಿ ಒಂದಕ್ಕೆ ವಿಷ ಬೆರೆಸಲಾಗಿತ್ತು. ಇದೇ ನೀರಿನಿಂದ ಹಾಲಿನ ಪುಡಿ ಮಿಶ್ರಣ ಮಾಡಿ ಮಕ್ಕಳಿಗೆ ನೀಡಲು ಸಿದ್ಧತೆ ನಡೆಸಲಾಗುತ್ತಿತ್ತು. ಘಟನೆ ತಿಳಿದ ತಕ್ಷಣವೇ, ಮುಂಜಾಗ್ರತಾ ಕ್ರಮವಾಗಿ ಶಾಲೆಯಲ್ಲಿದ್ದ ಒಟ್ಟು 18 ಮಕ್ಕಳನ್ನು ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಗಿದೆ. ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕಿಡಿಗೇಡಿಗಳ ಕೃತ್ಯ
ಶಾಲೆಯ ಪಕ್ಕದಲ್ಲಿರುವ ಮರವನ್ನೇರಿ ಕಿಡಿಗೇಡಿಗಳು ಶಾಲೆಯ ಚಾವಣಿ ತಲುಪಿ, ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ಕೀಟನಾಶಕವನ್ನು ಟ್ಯಾಂಕ್‌ಗೆ ಸುರಿದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ವಿಷ ಬೆರೆಸಲು ಬಳಸಿದ ಖಾಲಿ ಬಾಟಲಿಯೊಂದು ಸ್ಥಳದಲ್ಲಿ ಪತ್ತೆಯಾಗಿದೆ.
ಈ ಹೇಯ ಕೃತ್ಯವನ್ನು ಖಂಡಿಸಿರುವ ಮಾರುತಿಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್. ಇಂದ್ರೇಶ್, "ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು" ಎಂದು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಎಚ್.ಜೆ. ರಶ್ಮಿ ಮತ್ತು ತಾಲೂಕು ಪಂಚಾಯಿತಿ ಇಒ ನರೇಂದ್ರಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.