ಕಳೆನಾಶಕ ಗ್ಲೈಫೋಸೇಟ್ ಬಳಕೆಗೆ ನಿರ್ಬಂಧ ಅಗತ್ಯ
ಜಗತ್ತಿನಾದ್ಯಂತ ಕೀಟನಾಶಕಗಳಿಂದ ವಾರ್ಷಿಕ 30 ಲಕ್ಷ ವಿಷಪ್ರಾಶನ ಮತ್ತು 2.2 ಲಕ್ಷ ಸಾವುಗಳು ಸಂಭವಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿ ಹೇಳಿದೆ. ಇಷ್ಟಲ್ಲದೆ, ಈ ರಾಸಾಯನಿಕಗಳು ಜೀವಿಗಳ ಮೇಲೆ ಪ್ರತಿಕೂಲ ಪರಿಣಾಮಗಳಿಂದ ಪರಿಸರ ವ್ಯವಸ್ಥೆ ಮೇಲೆ ವಿಪರಿಣಾಮ ಬೀರುತ್ತವೆ.
ಕಳೆನಾಶಕ ಗ್ಲೈಫೋಸೇಟ್ ಬಳಕೆಗೆ ನಿರ್ಬಂಧ ಅಗತ್ಯ
-ಡಾ. ಪಿ. ಇಂದಿರಾ ದೇವಿ
ಮನುಷ್ಯರು ಮತ್ತು ಪ್ರಾಣಿಗಳಿಗೆ ಹಾನಿಯನ್ನುಂಟು ಮಾಡುವ 27 ರಾಸಾಯನಿಕ ಕೀಟನಾಶಕಗಳನ್ನು ನಿಷೇಧಿಸುವ ಉದ್ದೇಶದಿಂದ ಕೇಂದ್ರ ಕೃಷಿ ಸಚಿವಾಲಯ ಅಧಿಸೂಚನೆಯೊಂದನ್ನು ಹೊರಡಿಸಿತು. ಜುಲೈ 8, 2020 ರಂದು ಹೊರಡಿಸಿದ ಆ ಅಧಿಸೂಚನೆಯಲ್ಲಿ ಜನಪ್ರಿಯ ಸಸ್ಯನಾಶಕ/ಕಳೆನಾಶಕ ಗ್ಲೈಫೋಸೈಟನ್ನು ನಿರ್ಬಂಧಿಸುವುದಾಗಿ ಹೇಳಿತು.
ಕೀಟನಾಶಕ ಉತ್ಪಾದಕರು ಈ ಕ್ರಮವನ್ನು ವಿರೋಧಿಸಿದರೆ, ಸಮಾಜದ ಇತರ ವರ್ಗಗಳಿಂದ ಬೆಂಬಲ ವ್ಯಕ್ತವಾಯಿತು. ಇಷ್ಟಲ್ಲದೆ, ಗ್ಲೈಫೋಸೈಟ್ ಮತ್ತು ಅದರ ಉತ್ಪನ್ನಗಳ ತಯಾರಕರು ಉತ್ಪನ್ನ ಕುರಿತ ಎಚ್ಚರಿಕೆಯನ್ನು ದಪ್ಪ ಅಕ್ಷರಗಳಲ್ಲಿ ಅಳವಡಿಸಲು ಕೇಂದ್ರ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ(ಸಿಐಆರ್‌ಬಿಸಿ)ಗೆ ಹಿಂತಿರುಗಿಸಬೇಕು ಎಂದು ಸೂಚಿಸಿದೆ.
ಬೆಳೆ/ಗಿಡಗಳ ರಕ್ಷಣೆಗೆ ಕೀಟಕೀಟನಾಶಕ(ಸಸ್ಯವನ್ನು ಆಕ್ರಮಿಸುವಂಥವು), ಶಿಲೀಂಧ್ರನಾಶಕ ಮತ್ತು ಬ್ಯಾಕ್ಟೀರಿಯಾ ನಾಶಕ(ರೋಗಗಳ ವಿರುದ್ಧ ಬಳಸುವಂಥವು), ಕಳೆನಾಶಕ(ಕಳೆಗಳ ವಿರುದ್ಧ ಬಳಕೆ) ಮತ್ತು ದಂಶಕ ನಾಶಕಗಳನ್ನು ಬಳಸಲಾಗುತ್ತದೆ. ಕೀಟನಾಶಕಗಳ ಬಳಕೆ ಕಡಿಮೆಯಾಗುತ್ತಿದ್ದರೂ, ಕಳೆನಾಶಕಗಳ ಬಳಕೆ ಹೆಚ್ಚುತ್ತಿದೆ. ಕೇರಳದಂತಹ ರಾಜ್ಯಗಳಲ್ಲಿ ಕಳೆ ನಿಯಂತ್ರಣಕ್ಕೆ ಹೆಚ್ಚು ಕೂಲಿ ನೀಡಬೇಕಿರುವಲ್ಲಿ ಹಾಗೂ ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ಸಸ್ಯನಾಶಕಸಹಿಷ್ಣು ಹತ್ತಿ ಪ್ರಭೇದಗಳ ಹೆಚ್ಚಳದಿಂದ ಹರಡುವಿಕೆ ಹೆಚ್ಳಳಕ್ಕೆ ಕಾರಣ. ದೇಶದಲ್ಲಿ ಕಳೆನಾಶಕಗಳ ಬಳಕೆ ಒಟ್ಟು ಕೀಟನಾಶಕ ಬಳಕೆಯ ಶೇ.10 ರಷ್ಟಿದೆ.
ಕೀಟನಾಶಕಗಳನ್ನು ನೋಂದಾಯಿಸುವ ಮೊದಲು ಅದರ ಬಳಕೆಯಿಂದ ಯಾವುದೇ ವಿಪರಿಣಾಮ ಉಂಟಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹಲವು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿಷತ್ವ ಅಥವಾ ಜೈವಿಕ ಸುರಕ್ಷತೆಯನ್ನು ಪತ್ತೆ ಹಚ್ಚಲು ಹಲವು ನಿಯತಾಂಕಗಳನ್ನು ಬಳಸಲಾಗುತ್ತದೆ; ಅವೆಂದರೆ, ಚರ್ಮದ ಮೇಲೆ ಪರಿಣಾಮ, ಮೌಖಿಕ ಪರಿಣಾಮ, ಉಸಿರಿನ ಮೂಲಕ ಒಳಸೇರುವಿಕೆ, ಸ್ವೀಕಾರಾರ್ಹ ದೈನಂದಿನ ಸೇವನೆ, ವಂಶವಾಹಿ ಮೇಲೆ ಪರಿಣಾಮ, ಕ್ಯಾನ್ಸರ್ ಸಾಧ್ಯತೆ.
ಕೀಟನಾಶಕದ ಗುರಿಯಲ್ಲದ ಜೀವಿಗಳ ಮೇಲಿನ ಪರಿಣಾಮವನ್ನೂ ಅಧ್ಯಯನ ಮಾಡಲಾಗುತ್ತದೆ. ಜೈವಿಕ ಸುರಕ್ಷತೆ ಕುರಿತ ದತ್ತಾಂಶವನ್ನು ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ(ಸಿಐಬಿಆರ್‌ಸಿ)ಗೆ ಸಲ್ಲಿಸಬೇಕು; ರಾಸಾಯನಿಕದ ದಕ್ಷತೆ ಮತ್ತು ಸುರಕ್ಷತೆ ಬಗ್ಗೆ ಖಾತ್ರಿಯಾದರೆ ಅದಕ್ಕೆ ಅನುಮತಿ ನೀಡಲಾಗುತ್ತದೆ. ಆದರೆ, ಅನುಮತಿ, ನಿಯಂತ್ರಣ ಮತ್ತು ಮೇಲುಸ್ತುವಾರಿ ವ್ಯವಸ್ಥೆಯಲ್ಲಿನ ಲೋಪದಿಂದಾಗಿ, ಅವು ಹಲವು ಆರೋಗ್ಯ ಮತ್ತು ಪರಿಸರ ಸಮಸ್ಯೆಗಳಿಗೆ ಕಾರಣವಾಗಿವೆ.
ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ಕೀಟನಾಶಕಗಳಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಸುಮಾರು 3 ದಶಲಕ್ಷ ವಿಷಪ್ರಾಶನ ಪ್ರಕರಣಗಳು ಮತ್ತು 2,20,000 ಸಾವು ಸಂಭವಿಸುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಮತ್ತು ಸಮಸ್ಯೆ ಉಲ್ಬಣಗೊಳ್ಳುತ್ತಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಹಳ್ಳಿಯೊಂದರಲ್ಲಿ ಎಂಡೋಸಲ್ಫಾನ್ ರಾಸಾಯನಿಕವನ್ನು ಗೋಡಂಬಿ ಮರದ ತೋಟಗಳಿಗೆ ಸಿಂಪಡಿಸಿದ್ದರಿಂದ ಜನರು ಆರೋಗ್ಯ ಸಮಸ್ಯೆಗಳಿಂದ ಬಳಲಿದರು. ಪ್ಲಾಚಿಮಾಡ ಪ್ರದೇಶದಲ್ಲಿ ಕೀಟನಾಶಕಗಳಿಂದ ಅಂತರ್ಜಲ ಕಲುಷಿತಗೊಂಡಿದ್ದರಿಂದ, ನೀರಿನಿಂದ ತಯಾರಿಸಿದ ತಂಪು ಪಾನೀಯದಲ್ಲಿ ವಿಷದ ಶೇಷಾಂಶ ಕಂಡುಬಂದಿದೆ. ಕೇರಳದ ಹಣ್ಣು ಮತ್ತು ತರಕಾರಿಗಳಲ್ಲಿ ಶಿಫಾರಸು ಮಾಡದ ಅನೇಕ ರಾಸಾಯನಿಕಗಳು ಇರುವುದನ್ನು ಮೇಲ್ವಿಚಾರಣೆ ಸಮಿತಿ ಪತ್ತೆ ಹಚ್ಚಿದೆ. ಕೆಲವು ಉತ್ಪನ್ನಗಳಲ್ಲಿ ಶೇಷಾಂಶ ಅನುಮತಿಸಿದ ಗರಿಷ್ಠ ಮಿತಿಯನ್ನು ಮೀರಿರುತ್ತದೆ. ಕೀಟನಾಶಕಗಳಿಗೆ ಒಡ್ಡಿಕೊಳ್ಳುವುದು ತಕ್ಷಣದ ಅಥವಾ ದೀರ್ಘಕಾಲೀನ ಪರಿಣಾಮ ಉಂಟುಮಾಡಬಹುದು; ಅನಾರೋಗ್ಯ ಅಥವಾ ಸಾವಿಗೆ ಕಾರಣವಾಗಬಹುದು.
ಕೀಟನಾಶಕಗಳ ವ್ಯಾಪಕ ಲಭ್ಯತೆಯಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿವೆ. ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಾಗುವ ಆತ್ಮಹತ್ಯೆ ಪ್ರಕರಣಗಳಿಗೆ ಪ್ರಮುಖ ಕಾರಣ-ಆರ್ಗ್ಯಾನೊಫಾಸ್ಫೇಟ್ ಎಂಬ ಕೀಟನಾಶಕ. ಮಾನವನ ಆರೋಗ್ಯದ ಮೇಲೆ ವಿಪರಿಣಾ ಮವಲ್ಲದೆ, ಸಸ್ಯಗಳು ಮತ್ತು ಪ್ರಾಣಿಗಳಿಗೆ ಹಾನಿ ಮಾಡುತ್ತವೆ.
ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯಲ್ಲಿ ನಡೆಸಿದ ಸಂಶೋಧನೆ ಪ್ರಕಾರ, ಕೃಷಿಯಲ್ಲಿ ಕೀಟನಾಶಕಗಳ ಬಳಕೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಭತ್ತದ ಗದ್ದೆಗಳಲ್ಲಿ ಕೀಟನಾಶಕಗಳನ್ನು ಬಳಸದೆ ಇರುವುದಕ್ಕಿಂತ ಹೆಚ್ಚಿನ ನಷ್ಟವನ್ನು ಎಚ್ಚರಿಕೆಯಿಲ್ಲದೆ ಬಳಸುವುದರಿಂದ ಆಗುತ್ತದೆ. ಕೀಟನಾಶಕಗಳ ಬಳಕೆಯು ರೈತರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ರೈತರ ಆರೋಗ್ಯ ಸರಿಯಿಲ್ಲದಿದ್ದಾಗ ಅವರ ಉತ್ಪಾದಕತೆ ಕಡಿಮೆಯಾಗುತ್ತದೆ. ಕೀಟನಾಶಕಗಳ ದುಷ್ಪರಿಣಾಮಗಳ ಬಗ್ಗೆ ಹೊಸ ಮಾಹಿತಿಯನ್ನು ಸೇರಿಸಲಾಗುತ್ತಿದೆ. ಆದರೆ, ಇದು ನಿರಕ್ಷರಿ ರೈತರಿಗೆ ಅರ್ಥವಾಗುತ್ತದೆಯೇ ಎಂಬುದೇ ಪ್ರಶ್ನೆ.
ಗ್ಲೈಫೋಸೇಟ್ ಕಳೆ ನಿವಾರಕದಿಂದ ಕಳೆಗಳು ಸಾಯುತ್ತವೆ. ಕಳೆಗಳು ಸಂಪೂರ್ಣವಾಗಿ ಒಣಗಲು ಸಾಮಾನ್ಯವಾಗಿ ನಾಲ್ಕರಿಂದ 20 ದಿನ ತೆಗೆದುಕೊಳ್ಳುತ್ತವೆ. ಕೀಟನಾಶಕ ಮಿಶ್ರಣದಲ್ಲಿ ಜಡ ವಸ್ತು ಅಥವಾ ಸೇರ್ಪಡೆಗಳು ಎಂದು ಕರೆಯಲ್ಪಡುವ ಹೆಚ್ಚುವರಿ ಪದಾರ್ಥ ಗಳನ್ನು ಸೇರಿಸಲಾಗುತ್ತದೆ. ಇಂಥ ಒಂದು ವಸ್ತುವಾದ ಪಾಲಿಆಕ್ಸಿಎಥಿಲೀನ್ ಅಮೈನ್ (ಪಿಒಇಎ), ಕೀಟನಾಶಕವು ಸಸ್ಯಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ.
ಸಸ್ಯನಾಶಕಗಳನ್ನು ವಿರೋಧಿಸುವ ಬಿ.ಟಿ.ಹತ್ತಿಯನ್ನು ಪರಿಚಯಿಸಿದ ಮತ್ತು ಕೃಷಿಯಲ್ಲಿ ಕಾರ್ಮಿಕರ ಕೊರತೆಯಿಂದ ಗ್ಲೈಫೋಸೇಟ್ ಬಳಕೆ ಹೆಚ್ಚಿತು. ಇಂಡಿಯ 2018-19ರಲ್ಲಿ 670 ಟನ್ ಗ್ಲೈಫೋಸೇಟ್ ಬಳಸಿದೆ. ಕೀಟನಾಶಕದ ಬಾಟಲಿ ಮೇಲಿನ ಲೇಬಲ್ ʻಚಹಾ ಮತ್ತು ಯಾವುದೇ ಬೆಳೆಗಳಿಲ್ಲದ ಸ್ಥಳಗಳಲ್ಲಿ ಬಳಸಬಹುದುʼ ಎಂದು ಹೇಳುತ್ತದೆ.
ಆರೋಗ್ಯ ಮತ್ತು ಪರಿಸರದ ಮೇಲೆ ಗ್ಲೈಫೋಸೈಟ್‌ನ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ವೈಜ್ಞಾನಿಕ ವರದಿಗಳು ಒಂದಕ್ಕೊಂದು ವಿರುದ್ಧವಾಗಿವೆ. 2015 ರಲ್ಲಿ ಅಮೆರಿಕದ ಪರಿಸರ ಸಂರಕ್ಷಣಾ ಏಜೆನ್ಸಿ(ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ, ಇಪಿಎ)ಯ ವರದಿ ಪ್ರಕಾರ, ಈ ರಸಾಯನಿಕವು ಕ್ಯಾನ್ಸರ್, ಹಾರ್ಮೋನ್ ಅಸಮತೋಲನ ಮತ್ತು ಜನನ ದೋಷಗಳನ್ನು ಉಂಟುಮಾಡುವ ಕಡಿಮೆ ಅಪಾಯ ಹೊಂದಿದೆ.
ಆದರೆ, ಐದು ವರ್ಷಗಳ ನಂತರ ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆ, ಫ್ರಾನ್ಸ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ( ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್, ಐಆರ್‌ಎಸಿ)ಯು ಗ್ಲೈಫೋಸೈಟ್ ʻಬಹುಶಃ ಮಾನವರಲ್ಲಿ ಕ್ಯಾನ್ಸರ್ ಉಂಟುಮಾಡಬಹುದುʼ ಎಂದು ಹೇಳಿದೆ. ಆದರೆ, ಯುರೋಪಿಯನ್ ಆಹಾರ ಸುರಕ್ಷೆ ಏಜೆನ್ಸಿ ʻಗ್ಲೈಫೋಸೈಟ್ ಮಾನವರಲ್ಲಿ ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆಯಿಲ್ಲʼ ಎಂದು ಹೇಳಿದೆ. ಯುರೋಪಿಯನ್ ಕೆಮಿಕಲ್ಸ್ ಏಜೆನ್ಸಿಯ ಅಪಾಯಗಳ ಮೌಲ್ಯಮಾಪನ ಸಮಿತಿ ಸಹ ಇದನ್ನು ಬೆಂಬಲಿಸಿದೆ.
ʻಗ್ಲೈಫೋಸೈಟ್ ಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ನಾನ್ ಹಾಡ್ಗ್ಕಿನ್ಸ್ ಲಿಂಪೋಮಾ ಎಂಬ ನಿರ್ದಿಷ್ಟ ಕ್ಯಾನ್ಸರ್ ಬರಬಹುದುʼ ಎಂದು ಕ್ಯಾಲಿಫೋರ್ನಿಯಾದ ನ್ಯಾಯಾಲಯ ನಿರ್ಧರಿಸಿದೆ. ಮಾನವರು ಮತ್ತು ಪ್ರಾಣಿಗಳ ಮೇಲಿನ ಅಧ್ಯಯನ ಹಾಗೂ ತಾಂತ್ರಿಕ ದತ್ತಾಂಶದ ಪರಿಶೀಲನೆ ಮತ್ತು 13 ವಿಜ್ಞಾನಿಗಳ ಅಬಿಪ್ರಾಯವನ್ನು ಆಲಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ತಯಾರಕರು 90 ದಶಲಕ್ಷ ಡಾಲರ್ ಪರಿಹಾರ ಪಾವತಿಸಲು ಹೇಳಿತು. ಜೂನ್ 2020 ರಲ್ಲಿ ಕಂಪನಿ ಅಮೆರಿಕದಲ್ಲಿ 95,000 ಮೊಕದ್ದಮೆಗಳನ್ನು 10 ಶತಕೋಟಿ ಡಾಲರ್ ಪಾವತಿಸುವ ಮೂಲಕ ಕೊನೆಗೊಳಿಸಲು ನಿರ್ಧರಿಸಿತು. 45 ವರ್ಷಗಳಿಂದ ಬಳಸುತ್ತಿದ್ದ ಮತ್ತು ಸುರಕ್ಷಿತ ಎಂದು ಭಾವಿಸಲಾದ ರಾಸಾಯನಿಕ ಈಗ ಕ್ಯಾನ್ಸರ್‌ಗೆ ಕಾರಣವೆಂದು ಸಾಬೀತಾಗಿದೆ.
ಪರಿಸರದ ಮೇಲೆ ಮಾಡಿರುವ ಹಾನಿಯನ್ನು ಸರಿಪಡಿಸಲು ಇಲ್ಲವೇ ರದ್ದು ಮಾಡಲು ಸಾಧ್ಯವಿಲ್ಲ. ಗ್ಲೈಫೋಸೈಟ್ ಎರೆಹುಳುಗಳು ಮತ್ತು ಜೇನುಹುಳುಗಳಿಗೆ ಹಾನಿಯುಂಟು ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಸಸ್ಯಗಳ ಒಳಗಿನ ಸೂಕ್ಷ್ಮಜೀವಿಗಳ ಬದಲಾವಣೆಯಲ್ಲದೆ, ಜಮೀನಿನ ಹತ್ತಿರವಿರುವ ಪ್ರಾಣಿಗಳ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಸೂಕ್ಷ್ಮಜೀವಿಗಳಿಗೆ ತೊಂದರೆ ಕೊಡಬಹುದು.
ಗ್ಲೈಫೋಸೈಟ್ ಮತ್ತು ಪಾಲಿಆಕ್ಸಿಎಥಿಲೀನ್ ಅಮೈನ್ ಇರುವ ಉತ್ಪನ್ನಗಳು ಮೀನು ಮತ್ತು ಜಲಚರಗಳಿಗೆ ಹಾನಿಕರ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೀಟನಾಶಕಗಳನ್ನು ಅವೈಜ್ಞಾನಿಕವಾಗಿ ಬಳಸುತ್ತಾರೆ; ವಿವಿಧ ರೀತಿಯ ಕೃಷಿಯಿದ್ದು, ಭೂಮಿ ಅನನ್ಯವಾಗಿದೆ ಮತ್ತು ವಿಭಿನ್ನ ಆರ್ಥಿಕ ಪರಿಸ್ಥಿತಿಗಳಿವೆ.
ಕೇರಳದಲ್ಲಿ ನೀರಿನ ವ್ಯವಸ್ಥೆಗಳು ಪರಸ್ಪರ ಸಂಪರ್ಕ ಹೊಂದಿವೆ; ಜತೆಯಲ್ಲೇ ಕೃಷಿ ಭೂಮಿ ಮತ್ತು ಪಟ್ಟಣಗಳು ಹೊಂದಿಕೊಂಡಂತೆ ಇವೆ. ಕೇರಳ ಸರ್ಕಾರ ಹಾನಿಕರ ರಾಸಾಯನಿಕಗಳ ಬಳಕೆ ಮೇಲೆ ಮಿತಿ ಹೇರಿದೆ. ದೇಶದ ಪರಿಸರ ನೀತಿ ಮುನ್ನೆಚ್ಚರಿಕೆ ತತ್ವವನ್ನು ಅನುಸರಿಸುತ್ತದೆ. ರಾಸಾಯನಿಕದ ಬಳಕೆ ನಕಾರಾತ್ಮಕ, ಅಸ್ಪಷ್ಟ ಮತ್ತು ಶಾಶ್ವತ ಪರಿಣಾಮ ಬೀರುತ್ತದೆ ಎಂದು ಸಾಬೀತಾದಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.
ಕೃಷಿಯಲ್ಲಿ ಕೀಟ ನಿಯಂತ್ರಣಗಾರರನ್ನು ಬಳಸಬಹುದಾದರೂ, ಪ್ರಸ್ತುತ ಅಂಥವರು ಲಭ್ಯವಿಲ್ಲ. ಕೃಷಿ ಇಲಾಖೆ ಬೆಂಬಲದಿಂದ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ತರಬೇತಿ ಪಡೆದ ಮತ್ತು ಪರವಾನಗಿ ಇರುವ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬಹುದು. ಇವರು ವೈಜ್ಞಾನಿಕ ಉಪಕರಣ, ತಂತ್ರಜ್ಞಾನ ಮತ್ತು ಕೀಟನಾಶಕಗಳ ಬಳಕೆ ಬಗ್ಗೆ ಜ್ಞಾನ ಹೊಂದಿರುತ್ತಾರೆ. ನಾಗರಿಕರಿಗೆ ಆರೋಗ್ಯಕರ ಆಹಾರ ಮತ್ತು ಶುದ್ಧ ಪರಿಸರವನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.
................
(ಪ್ರೊ.ಪಿ. ಇಂದಿರಾ ದೇವಿ ಅವರು ಕೇರಳ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕಿ)
(ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು ಫೆಡರಲ್‌ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ).