Union Budget 2025 | ʼಜನರ ಬಜೆಟ್ʼ ಎಂದ ಪ್ರಧಾನಿ; 'ಗಾಯಕ್ಕೆ ಸುತ್ತಿದ ಬ್ಯಾಂಡೇಜ್' ರಾಹುಲ್ ಲೇವಡಿ
Union Budget 2025: ವಿಕಸಿತ ಭಾರತದ ಬಡತನ ನಿರ್ಮೂಲನೆ, ಗುಣಮಟ್ಟದ ಶಿಕ್ಷಣ, ಕೈಗೆಟುಕುವ ಮತ್ತು ಸಮಗ್ರ ಆರೋಗ್ಯ ರಕ್ಷಣೆ ಒದಗಿಸುವ ಬಜೆಟ್ ಆಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.;
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ 2025-26ನೇ ಆಯವ್ಯಯದಲ್ಲಿ 12 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ, ತೆರಿಗೆ ಸ್ಲ್ಯಾಬ್ ಪರಿಷ್ಕರಿಸುವ ಮೂಲಕ ಮಧ್ಯಮ ವರ್ಗಗಳಿಗೆ ದೊಡ್ಡ ರಿಲೀಫ್ ನೀಡಿದ್ದಾರೆ.
ಸತತ ಎಂಟನೇ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, ವಿಮಾ ಕ್ಷೇತ್ರದಲ್ಲಿ ಶೇ 100 ರಷ್ಟು ಎಫ್‌ಡಿಐ ಮಿತಿ ಹೆಚ್ಚಳ, ತೆರಿಗೆ ಕಾನೂನುಗಳ ಸರಳೀಕರಣ, ಔಷಧಗಳ ಮೇಲಿನ ಸುಂಕ ಕಡಿತ ಹಾಗೂ ಕಲ್ಯಾಣ ಕಾಯಕ್ರಮಗಳಿಗೆ ಹಣಕಾಸಿನ ಬೆಂಬಲ ನೀಡುವ ಮೂಲಕ ಭವಿಷ್ಯದ ಪೀಳಿಗೆಯ ಸುಧಾರಣೆಗೆ ನೀಲನಕ್ಷೆ ರೂಪಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಸರ್ಕಾರದ ಅಭಿವೃದ್ಧಿ ಹಲವು ದಾಖಲೆ ಮತ್ತು ರಚನಾತ್ಮಕ ಸುಧಾರಣೆಗಳ ಮೂಲಕ ಜಾಗತಿಕವಾಗಿ ಗಮನ ಸೆಳೆದಿದೆ. ವಿಕಸಿತ ಭಾರತವು ಬಡತನ ನಿರ್ಮೂಲನೆ, ಗುಣಮಟ್ಟದ ಶಿಕ್ಷಣ, ಕೈಗೆಟುಕುವ ಮತ್ತು ಸಮಗ್ರ ಆರೋಗ್ಯ ರಕ್ಷಣೆ ಒದಗಿಸಿದೆ. ಈ ಬಜೆಟ್ ಸರ್ವರನ್ನೂ ಒಳಗೊಂಡು ಪ್ರಗತಿ ಹಾದಿಯತ್ತ ಕೊಂಡೊಯ್ಯಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಜನ ಸಾಮಾನ್ಯರ ಬಜೆಟ್: ಪ್ರಧಾನಿ ಶ್ಲಾಘನೆ
ಕೇಂದ್ರ ಬಜೆಟ್ ಅನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಜನರ ಕೈಗೆ ಹೆಚ್ಚಿನ ಹಣವನ್ನು ನೀಡುವ "ಜನರ ಬಜೆಟ್" ಎಂದು ಬಣ್ಣಿಸಿದ್ದಾರೆ.
ಬಜೆಟ್‌ನಲ್ಲಿ ಉಳಿತಾಯ, ಹೂಡಿಕೆ, ಬಳಕೆ ಮತ್ತು ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ಸಿಗುವಂತಹ ಅಂಶಗಳಿವೆ. ಗಿಗ್ ಕಾರ್ಮಿಕರ ಕಲ್ಯಾಣ ಕ್ರಮಗಳು ಕಾರ್ಮಿಕರ ಘನತೆಗೆ ಸರ್ಕಾರದ ಬದ್ಧತೆ ಪ್ರತಿಪಾದಿಸಿದೆ ಎಂದು ಹೇಳಿದ್ದಾರೆ.ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಸಾಮಾನ್ಯ ಪ್ರಜೆಯ ಜೇಬು ತುಂಬಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. 'ವಿಕಸಿತ ಭಾರತ'ದ ಧೈಯವನ್ನು ಸಾಮಾನ್ಯ ಜನರು ಕೊಂಡೊಯ್ಯಲಿದ್ದಾರೆ ಎಂಬುದಕ್ಕೆ ಬಜೆಟ್ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಗುಂಡೇಟಿನ ಗಾಯಕ್ಕೆ ಬ್ಯಾಂಡೇಜ್
ಇನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಜೆಟ್ ಅನ್ನು ಟೀಕಿಸಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್, ಗುಂಡೇಟಿನ ಗಾಯಗಳಿಗೆ ಸಣ್ಣ ಬ್ಯಾಂಡೇಜ್ ಹಾಕಿದಂತಿದೆ. ಜಾಗತಿಕ ಅನಿಶ್ಚಿತತೆಯ ನಡುವೆ ದೇಶದ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಒಂದು ಮಾದರಿ ಬದಲಾವಣೆ ತರಬೇಕಾದ ಅನಿವಾರ್ಯತೆ ಇತ್ತು. ಆದರೆ, ಬಿಜೆಪಿ ಸರ್ಕಾರದ ಪರಿಕಲ್ಪನೆಗಳು ದಿವಾಳಿಯಾಗಿವೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ರೈತಪರ ಆಲೋಚನೆಯ ಕೈಗನ್ನಡಿ
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ರೈತಪರ ಆಲೋಚನೆಗಳಿಗೆ 2025ನೇ ಸಾಲಿನ ಬಜೆಟ್ ಕೈಗನ್ನಡಿ ಆಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶ್ಲಾಘಿಸಿದ್ದಾರೆ.
ತಮ್ಮ ʼಎಕ್ಸ್ʼ ಖಾತೆಯಲ್ಲಿ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ಸಾವಯವ ಕೃಷಿಗೆ ಉತ್ತೇಜನ, ಕೃಷಿಯಲ್ಲಿ ಸುಸ್ಥಿರತೆಗೆ ಒತ್ತು, ಬೆಳೆ ತೆಗೆಯಲು ರೈತ ಮಾಡುತ್ತಿರುವ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಉಪಕ್ರಮಗಳು ಶ್ಲಾಘನೀಯವಾಗಿವೆ.
ರೈತರು ಸಶಕ್ತಗೊಂಡು ಉತ್ತಮ ಆದಾಯ ಗಳಿಸುವ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಭವಿಷ್ಯದ ಸವಾಲುಗಳಿಗೆ ಭಾರತೀಯ ಕೃಷಿಯನ್ನು ಸಜ್ಜುಗೊಳಿಸುವ ಆಯವ್ಯಯ ಇದಾಗಿದೆ ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ಮೋದಿ ಅವರ ಕನಸಿನ ʼವಿಕಸಿತ ಭಾರತ-2047ʼ ಸಾಕಾರಕ್ಕೆ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಆಯವ್ಯಯ ಮಹತ್ವದ ಕೊಡುಗೆ ನೀಡಲಿದೆ. ಭವಿಷ್ಯದಲ್ಲಿ ಭಾರತೀಯ ಕೃಷಿ ಕ್ಷೇತ್ರ ಮತ್ತಷ್ಟು ಸಮೃದ್ಧಿಯಾಗಲಿದೆ ಎಂದು ಹೇಳಿದ್ದಾರೆ.