ಧರ್ಮಸ್ಥಳ ಪ್ರಕರಣ |ಬಂಗ್ಲಗುಡ್ಡದಲ್ಲಿ ರಾಶಿ ರಾಶಿ ಕಳೇಬರ; ಸೌಜನ್ಯ ಮಾವ ವಿಠಲ ಗೌಡ ಸ್ಫೋಟಕ ಹೇಳಿಕೆ
ಮೊದಲ ಬಾರಿಯ ಸ್ಥಳ ಮಹಜರು ವೇಳೆ ಮೂರು ಕಳೇಬರು ದೊರೆತವು. ಎರಡನೇ ಬಾರಿಯ ಮಹಜರು ಅವಧಿಯಲ್ಲಿ ಐದು ಕಳೇಬರಗಳು ಪತ್ತೆಯಾಗಿವೆ ಎಂದು ಸೌಜನ್ಯ ಮಾವ ವಿಠಲ ಗೌಡ ಹೇಳಿದ್ದಾರೆ.;
ಧರ್ಮಸ್ಥಳ ಸಮೀಪದ ಬಂಗ್ಲಗುಡ್ಡೆಯಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಇದೀಗ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಅತ್ಯಾಚಾರ ಹಾಗೂ ಕೊಲೆಯಾದ ಸೌಜನ್ಯ ಅವರ ಮಾವ ವಿಠಲ ಗೌಡ ಅವರು ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸ್ಥಳ ಮಹಜರಿನ ವೇಳೆ ತಾವು ಕಂಡ ಭಯಾನಕ ದೃಶ್ಯಗಳನ್ನು ಬಿಚ್ಚಿಟ್ಟಿದ್ದಾರೆ. "ಕಣ್ಣಾರೆ ಐದು ಹೆಣಗಳನ್ನು ನೋಡಿದ್ದೇನೆ, ಅಲ್ಲಿ ಸಣ್ಣ ಮಗುವಿನ ಎಲುಬುಗಳೂ ಇದ್ದವು," ಎಂದು ಅವರು ನೀಡಿರುವ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದೆ.
ವಿಡಿಯೋದಲ್ಲಿ ಮಾತನಾಡಿರುವ ವಿಠಲ ಗೌಡ, ತನಿಖಾ ತಂಡವು ತಮ್ಮನ್ನು ಎರಡು ಬಾರಿ ಸ್ಥಳ ಮಹಜರಿಗಾಗಿ ಬಂಗ್ಲಗುಡ್ಡೆಗೆ ಕರೆದೊಯ್ದಿತ್ತು ಎಂದು ತಿಳಿಸಿದ್ದಾರೆ.
"ಮೊದಲ ಬಾರಿಗೆ ಸ್ಥಳ ಮಹಜರಿಗೆ ಹೋದಾಗ, ಹತ್ತಿರ ಹತ್ತಿರ ಹತ್ತು ಅಡಿಗಳ ಅಂತರದಲ್ಲಿ ಮೂರು ಮನುಷ್ಯರ ಕಳೇಬರಗಳು ಪತ್ತೆಯಾದವು," ಎಂದು ವಿಠಲ ಗೌಡರು ವಿವರಿಸಿದ್ದಾರೆ. "ಎರಡನೇ ಬಾರಿ ಸ್ಥಳಕ್ಕೆ ಹೋದಾಗ ಕಂಡ ದೃಶ್ಯ ಇನ್ನೂ ಆಘಾತಕಾರಿಯಾಗಿತ್ತು. ಅಲ್ಲಿ ಹೆಣಗಳ ರಾಶಿಯೇ ಸಿಕ್ಕಿತು. ನನ್ನ ಕಣ್ಣಿಗೆ ಸ್ಪಷ್ಟವಾಗಿ ಐದು ಹೆಣಗಳು ಕಾಣಿಸಿದವು. ಅದರಲ್ಲೊಂದು ಸಣ್ಣ ಮಗುವಿನ ಎಲುಬಿನಂತೆ ಗೋಚರಿಸುತ್ತಿತ್ತು," ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಶವಗಳಿದ್ದ ಸ್ಥಳದಲ್ಲಿ ವಾಮಾಚಾರಕ್ಕೆ ಬಳಸುವಂತಹ ವಸ್ತುಗಳು ಕೂಡ ಪತ್ತೆಯಾಗಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಹೂತಿಟ್ಟ ಶವಗಳು ಕಾಣದಂತೆ ಮಣ್ಣು ತೆಗೆದು ಮುಚ್ಚುವ ಪ್ರಯತ್ನ ನಡೆದಂತೆ ಕಾಣುತ್ತಿತ್ತು ಎಂದಿದ್ದಾರೆ. "ಅಂದಾಜು ಐದಾರು ಅಡಿ ಆಳದಲ್ಲಿ ಬುರುಡೆಗಳ ರಾಶಿಯೇ ಇತ್ತು. ಎಲುಬುಗಳು ಅಲ್ಲಲ್ಲಿ ಚದುರಿಹೋಗಿದ್ದವು. ಮಣ್ಣಿನಿಂದ ಮೇಲೆದ್ದಂತೆ ಕಾಣುತ್ತಿದ್ದ ಬುರುಡೆಗಳನ್ನು ನಾವು ಮುಟ್ಟಿಲ್ಲ, ಅವು ಹಾಗೆಯೇ ಇವೆ," ಎಂದು ಅವರು ದೃಶ್ಯವನ್ನು ವಿವರಿಸಿದ್ದಾರೆ.
ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ
ಪ್ರಕರಣದ ಪ್ರಮುಖ ಸಾಕ್ಷಿ ಚಿನ್ನಯ್ಯ ಅವರ ಹೇಳಿಕೆಯನ್ನು ವಿಠಲ ಗೌಡ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. "ಚಿನ್ನಯ್ಯ, ತಾನಾಸಿ, ರಂಗ, ಸುಬ್ರಹ್ಮಣ್ಯ ಅವರು ನೀಡಿದ ಮಾಹಿತಿ ಸತ್ಯ. ಅವರ ಮಾಹಿತಿ ಪ್ರಕಾರ ಸ್ಥಳಗಳನ್ನು ತೋರಿಸಲು ನಾನು ಸಿದ್ಧನಿದ್ದೇನೆ. ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಅದರಲ್ಲಿ ಯಾವುದೇ ಸಂಶಯವಿಲ್ಲ. ಒಂದೇ ಊರಿನಲ್ಲಿ ಒಂದೇ ಕಡೆ ಇಷ್ಟೊಂದು ಹೆಣಗಳನ್ನು ರಾಶಿ ಹಾಕಿರುವುದನ್ನು ನೋಡಿ ಆಘಾತವಾಗಿದೆ," ಎಂದಿದ್ದಾರೆ.
ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿರುವ ವಿಠಲ ಗೌಡ, "ಯಾವಾಗ ಕರೆದರೂ ಬರಲು ಸಿದ್ಧ" ಎಂದು ಹೇಳಿದ್ದಾರೆ.