ಆರ್‌ಎಸ್‌ಎಸ್‌ ಹಾಡು: ಡಿಕೆಶಿ ವಿರುದ್ಧ ಪೆನ್‌ಡ್ರೈವ್‌ ರಣತಂತ್ರ ಸಿದ್ಧ; ಸದ್ಯದಲ್ಲೇ ಹೈಮಾಂಡ್‌ ಅಂಗಳಕ್ಕೆ

ಆರ್‌ಎಸ್‌ಎಸ್‌ ವಿರುದ್ಧ ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಟೀಕೆ ಮಾಡುತ್ತಲೇ ಇರುತ್ತಾರೆ. ಈಗ ವಿಧಾನಸಭೆಯಲ್ಲಿ ಆರ್‌ಎಸ್‌ಎಸ್‌ನ ಗೀತೆ ಹಾಡಿರುವುದು ಡಿಕೆಶಿ ಅವರಿಗೆ ಕಂಟಕ ತಂದಿದೆ.;

Update: 2025-08-26 07:15 GMT
ಸಾಂದರ್ಭಿಕ ಚಿತ್ರ

ಅತ್ತ ಸಂಸತ್ತಿನಲ್ಲಿ, ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಪ್ರಬಲ ಪ್ರಧಾನಿ ನರೇಂದ್ರ  ಮೋದಿ, ಗೃಹ ಸಚಿವ ಅಮಿತ್‌ ಶಾ ವಿರುದ್ಧ ತೊಡೆತಟ್ಟುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಆರ್‌ಎಸ್‌ಎಸ್‌ ಬಗ್ಗೆ ಟೀಕಾ ಪ್ರಹಾರ ನಡೆಸುತ್ತಲೇ ಇದ್ದಾರೆ. 

ಇತ್ತ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಆರ್‌ಎಸ್‌ಎಸ್‌ ಬಗ್ಗೆ ಅವಕಾಶ ಸಿಕ್ಕಾಗಲೆಲ್ಲಾ ಪ್ರಸ್ತಾಪಿಸಿ ಪ್ರಬಲ ಟೀಕಾಕಾರರಾಗಿದ್ದಾರೆ.  

ಆದರೆ,  ಕರ್ನಾಟಕ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಆರ್‌ಎಸ್‌ಎಸ್‌ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ ಎನ್ನುವ ಅರ್ಥ ಬರುವ ಮಾತಾಡಿದ್ದೇ ಅಲ್ಲದೆ, ವಿಧಾನಸಭೆಯಲ್ಲಿ ಆರ್‌ಎಸ್‌ಎಸ್‌ನ ʼನಮಸ್ತೇ ಸದಾ ವತ್ಸಲೇ ಮಾತೃಭೂಮೇ.." ಎಂದು ಹಾಡಿದ್ದರು.  ಬಳಿಕ ಮಾಧ್ಯಮದ ಜತೆ ಮಾತನಾಡುತ್ತಾ, ಆರ್‌ಎಸ್‌ಎಸ್‌ ಶಿಕ್ಷಣ ಕಾರ್ಯದ ಬಗ್ಗೆಯೂ ತಾವು ಅಭ್ಯಾಸ ಮಾಡುತ್ತಿರುವ ಅರ್ಥ ಬರುವಂತೆ ಮಾತನಾಡಿದ್ದರು.

ಮುಖ್ಯಮಂತ್ರಿ ತಾವಾಗಬೇಕೆಂದು ತೆರೆಯ ಮರೆಯ ಕಸರತ್ತುಗಳನ್ನು ನಡೆಸುತ್ತಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಆರ್‌ಎಸ್‌ಎಸ್‌ ಗೀತೆ ತಿರುಗುಬಾಣವಾಗಿ ಪರಿಣಮಿಸಿದೆ. ಸಹಕಾರ ಸಚಿವ ಕೆ.ಎನ್.‌ ರಾಜಣ್ಣ ಅವರನ್ನು ಸಂಪುಟದಿಂದ ಕಿತ್ತುಹಾಕುವಂತೆ ಮಾಡಿದ್ದು ಡಿ.ಕೆ.ಶಿ. ಎಂಬ ಅರೋಪ ಇರುವ ಹೊತ್ತಿಗೇ ಅವರಾಡಿದ ಹಾಡು, ಸಮಸ್ಯೆಯಾಗುತ್ತಿರುವ ಲಕ್ಷಣ ಕಂಡುಬಂದಿದೆ.  ಅದು ಪೆನ್‌ ಡ್ರೈವ್‌ ಮೂಲಕ ಹೈಕಮಾಂಡ್‌ ಅಂಗಳಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ.

ಸಿದ್ದರಾಮಯ್ಯ ವಿರುದ್ಧ ಡಿ.ಕೆ. ಶಿವಕುಮಾರ್‌ ತಂತ್ರಗಾರಿಕೆ

ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ವಿಷಯ ಕಾಂಗ್ರೆಸ್‌ನಲ್ಲಿ ಚರ್ಚೆಗೆ ಬರುವಂತೆ ಹಾಗೂ ಆ ಬಗ್ಗೆ ಸ್ವತಃ ಹೈಕಮಾಂಡ್‌ನಿಂದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರೇ ಬಂದು ಶಾಸಕರ ಅಭಿಪ್ರಾಯ ಪಡೆಯುವಂತಾಗಿದ್ದ ಘಟನೆ ಹಿಂದೆ ಡಿ.ಕೆ. ಶಿವಕುಮಾರ್‌ ಅವರೇ ಇದ್ದಾರೆ ಎಂಬ ಮಾತೂ ಕೇಳಿಬಂದಿತ್ತು.

ಸಿದ್ದರಾಮಯ್ಯ ಅವರ ಆಪ್ತಬಳಗದ ಮಂತ್ರಿ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಪ್ರಬಲ ಟೀಕಾಕಾರರಾಗಿದ್ದ ಕೆ.ಎನ್‌. ರಾಜಣ್ಣ ಅವರನ್ನೇ ಸಚಿವ ಸಂಪುಟದಿಂದ ನೇರವಾಗಿ ಹೈಕಮಾಂಡ್‌ ಆಣತಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿತ್ತುಹಾಕುವಂತೆ ಮಾಡುವ ಘಟನೆಯ ಹಿಂದಿನ ಸೂತ್ರಧಾರಿ ಡಿ.ಕೆ. ಶಿವಕುಮಾರ್‌ ಅವರೇ ಎಂಬ ಮಾತು ಕಾಂಗ್ರೆಸ್‌ ನಾಯಕರಿಂದ ಕೇಳಿಬರುತ್ತಿದೆ.

ಮತಗಳವು ಸಂಬಂಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆರೋಪದ ಸಂಬಂದ ಪ್ರತಿಕ್ರಿಯಿಸುವ ವೇಳೆಯಲ್ಲಿ ʼನಮ್ಮ ಪಕ್ಷದಿಂದಲೂ ಸಮಸ್ಯೆ ಆಗಿದೆ. ಚುನಾವಣೆ ಸಂದರ್ಭದಲ್ಲೇ ಈ ಬಗ್ಗೆ ದೂರು ನೀಡಬೇಕಿತ್ತು," ಎಂಬ ಅರ್ಥ ಬರುವ ಹೇಳಿಕೆಯನ್ನು ರಾಜಣ್ಣ ನೀಡಿದ್ದು, ಡಿ.ಕೆ. ಶಿ ಅವರ ಪಾಲಿಗೆ ಸಿದ್ದರಾಮಯ್ಯ ವಿರುದ್ಧ ಅಸ್ತ್ರವಾಗಿ ಪರಿಣಮಿಸಿತ್ತು. 

ಬೆಂಗಳೂರಿನ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ರಾಹುಲ್‌ ಅಥವಾ ಸಿದ್ದರಾಮಯ್ಯ ಅವರಂತೆ ನೇರವಾಗಿ ಹೇಳಿಕೆ ನೀಡಲು ಅಥವಾ ಟೀಕಿಸಲು ಮುಂದಾಗದ ಡಿಕೆಶಿ, ಕೇವಲ ಮತಗಳವು ವಿಚಾರ ಪ್ರಸ್ತಾಪ ಮಾಡಿ ತಮ್ಮ ಭಾಷಣಕ್ಕೆ ಕಡಿವಾಣ ಹಾಕಿಕೊಂಡಿದ್ದರು. ಆದರೆ, ರಾಜಣ್ಣ ನೇರವಾಗಿ ಮೋದಿ ಅವರ ಮೇಲೂ ಟೀಕಾ ಪ್ರಹಾರ ನಡೆಸಿದ್ದರು. ಇದು ಪಕ್ಷದೊಳಗೆ ಡಿ.ಕೆ. ಶಿವಕುಮಾರ್‌ ವಿರುದ್ಧ ಅಪಸ್ವರಕ್ಕೆ ಕಾರಣವಾಗಿತ್ತು.

ಆದರೆ ರಾಜಣ್ಣ ಅವರ ಹೇಳಿಕೆಯನ್ನು ನೇರವಾಗಿ ಹೈಕಮಾಂಡ್‌ಗೆ ಕಳುಹಿಸಿ ಅವರನ್ನು ಸಂಪುಟದಿಂದ ಕಿತ್ತುಹಾಕಲು ಅನುವು ಮಾಡಿದ್ದು ಡಿ.ಕೆ. ಶಿವಕುಮಾರ್‌ ಅವರೇ ಎಂಬ ನೇರ ಆರೋಪ ರಾಜಣ್ಣ ಅವರದು. ಆದರೆ ಡಿ.ಕೆ. ಶಿವಕುಮಾರ್‌ ಅವರು ಆರ್‌ಎಸ್‌ಎಸ್‌ ಹಾಡು ಹೇಳುವ ಮೂಲಕ ತಾವಾಗಿ ವಿವಾದವನ್ನು ಮೈಮೇಲೆ ಎಳೆದುಕೊಂಡಂತಾಗಿದೆ. ಸಿದ್ದರಾಮಯ್ಯ ಬಣದ ಮುಖಂಡರಿಗೆ ಸುಲಭವಾಗಿ ʼಬ್ರಹ್ಮಾಸ್ತ್ರʼವೊಂದು ಸಿಕ್ಕಿದಂತಾಗಿದೆ.

ಸ್ವತಃ ಸಚಿವ ಸತೀಶ್‌ ಜಾರಕಿಹೊಳಿ ಅವರು ಆರ್‌ಎಸ್‌ಎಸ್‌ ಗೀತೆ ಹಾಡಿ ಮುಖ್ಯಮಂತ್ರಿ ಅಗುವುದಿದ್ದರೆ ತಾವೂ ಸಿದ್ಧ ಎಂದು ವ್ಯಂಗ್ಯವಾಡಿದ್ದರು. ʼನಮ್ಮ ಚಿಕ್ಕ ಹೇಳಿಕೆಯನ್ನು ನೆಪ ಮಾಡಿ ಸಚಿವ ಸ್ಥಾನ ಕಳೆದುಕೊಳ್ಳುವುದಾದರೆ, ಡಿ.ಕೆ. ಶಿವಕುಮಾರ್‌ ತಪ್ಪಿಗೂ ಶಿಕ್ಷೆಯಾಗಬೇಕು," ಎಂದು ರಾಜಣ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಅಷ್ಟೇಕೆ, ಕಾಂಗ್ರೆಸ್‌ನ ನಿಷ್ಠಾವಂತ ನಾಯಕರಲ್ಲಿ ಒಬ್ಬರಾದ ಬಿ.ಕೆ. ಹರಿಪ್ರಸಾದ್‌ ಅವರು ಡಿ.ಕೆ. ಶಿವಕುಮಾರ್‌ ಅವರು ಕ್ಷಮೆ ಕೇಳಬೇಕೆಂದು ಹೇಳಿಕೆ ನೀಡಿದ್ದರು. ಈ ಬಾರಿ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್‌ ಅವರಿಗೆ ʼಬಿಸಿʼ ತಟ್ಟಿದೆ.

ಆದರೆ, ಸದಾ ಸಿದ್ದರಾಮಯ್ಯ ಅವರ ವಿರುದ್ಧ ರಣತಂತ್ರ ಹೆಣೆಯುತ್ತಿರುವ ಹಾಗೂ ಪಕ್ಷಕ್ಕೆ ಮುಜುಗರ ಸೃಷ್ಟಿಸುತ್ತಿರುವ ಡಿ.ಕೆ. ಶಿವಕುಮಾರ್‌ ಅವರ ʼಹಿಂದೂಪರ ನಿಲುವು,ʼ ಕ್ರಮೇಣವಾಗಿ ತಿರುಗುಬಾಣವಾಗುವ ಲಕ್ಷಣಗಳು ಕಾಣುತ್ತಿವೆ. 

ಡಿ.ಕೆ. ಶಿವಕುಮಾರ್‌ ವಿರುದ್ಧ ಪೆನ್‌ಡ್ರೈವ್ ಸಮರ

ಈ ಹಿನ್ನೆಲೆಯಲ್ಲಿ ಜಾಗೃತರಾಗಿರುವ ಸಿದ್ದರಾಮಯ್ಯ ಬಣದ ನಾಯಕರು ಡಿ.ಕೆ. ಶಿವಕುಮಾರ್‌ ಅವರ ಹಿಂದೂಪರ ಹಾಗೂ ಆರ್‌ಎಸ್‌ಎಸ್‌ ಪರ ನಿಲುವುಗಳ ಬಗ್ಗೆ ಇರುವ ಅವರ ಹೇಳಿಕೆಗಳನ್ನು, ಘಟನೆಗಳನ್ನು ಪಟ್ಟಿ ಮಾಡಿ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರಿಗೆ ಕಳುಹಿಸಲು ಸಿದ್ಧರಾಗಿದ್ದಾರೆ.

ಬಿಜೆಪಿ  ಮತ್ತು ಆರ್‌ಎಸ್‌ಎಸ್‌ ಪರ ಡಿಕೆಶಿ ಸಾಪ್ಟ್ ಕಾರ್ನರ್ ಆಗಿರುವ ಬಗ್ಗೆ ಹೈಕಮಾಂಡ್ ಗೆ ವಿಡಿಯೋ ಮತ್ತು ಇತರ ದಾಖಲೆಗಳ ಸಮೇತ ದೂರು ನೀಡಲು  ಯೋಜನೆ ನಡೆಸಿದ್ದಾರೆ.

Full View

ಯಾವ್ಯಾವ ಘಟನೆಗಳು?

ನಮಸ್ತೇ ಸದಾ ವತ್ಸಲೇ ಮಾತೃಭೂಮೇ  ..ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್  ಎಂದು ಡಿ.ಕೆ. ಶಿವಕುಮಾರ್‌ ವಿಧಾನಸಭೆ ಅಧಿವೇಶನದಲ್ಲೇ ಹಾಡಿದ ಗೀತೆ,  ಕುಂಭಮೇಳದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದು,  ಪ್ರಧಾನಿ ಮೋದಿ ಅವರ ಆಪ್ತರಾಗಿರುವ ಹಾಗೂ ರಾಹುಲ್‌ ಗಾಂಧಿ ಮಾತುಗಳನ್ನು ಟೀಕಿಸಿದ್ದ  ಸದ್ಗುರು ಜಗ್ಗಿ ವಾಸುದೇವ್‌ ಹಾಗೂ ಕೇಂದ್ರ ಮಂತ್ರಿ ಅಮಿತ್‌ ಶಾ ಅವರ ಜತೆ ವೇದಿಕೆ ಹಂಚಿಕೊಂಡಿದ್ದು ಹಾಗೂ ಹೊಗಳಿಕೆ ಮಾತುಗಳನ್ನಾಡಿದ್ದು,  ರಾಹುಲ್‌ ಗಾಂಧಿ ಅವರು ನಡೆಸಿದ "ವೋಟ್ ಚೋರಿ" ಅಭಿಯಾನದ ಕಾರ್ಯಕ್ರಮದ ಭಾಷಣದಲ್ಲಿ ಎಲ್ಲಿಯೂ ಮೋದಿಯ ವಿರುದ್ಧ ಕಟುವಾಗಿ ಮಾತನಾಡದೇ ಇರುವುದು..  ಹೀಗೆ ಹಲವು ಘಟನೆಗಳನ್ನು  ವಿಡಿಯೋ ಸಮೇತ ಪೆನ್ ಡ್ರೈವ್‌ನಲ್ಲಿ ಸಂಗ್ರಹಿಸಿ   ರಾಹುಲ್ ಗಾಂಧಿ , ಪ್ರಿಯಾಂಕ್ ಗಾಂಧಿ, ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ., ವೇಣುಗೋಪಾಲ್  ಹಾಗೂ ಕರ್ನಾಟಕದ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಗೆ ನೀಡಲು ರಾಜಣ್ಣ ಮತ್ತಿತರರ ತಂಡ ಸಜ್ಜಾಗಿದೆ.

ಡಿ.ಕೆ. ಶಿವಕುಮಾರ್‌ ಅವರು ಮಾತನಾಡಿರುವುದನ್ನು ಕನ್ನಡದಿಂದ  ಇಂಗ್ಲಿಷ್‌ಗೆ ಭಾಷಾಂತರವನ್ನೂ ಮಾಡಲು ಹಾಗೂ ಎಲ್ಲರಿಗೂ ಆರ್ಥವಾಗುವ ರೀತಿಯಲ್ಲಿ ಅನುವಾದ ಮಾಡಿ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಕೆ.ಎನ್‌. ರಾಜಣ್ಣ ಅವರನ್ನು ಸಂಪುಟದಿಂದ ಕಿತ್ತು ಹಾಕಿದಂತೆ, ಡಿ.ಕೆ. ಶಿವಕುಮಾರ್‌ ಅವರನ್ನೂ ಹುದ್ದೆಯಿಂದ ಕೆಳಗಿಳಿಸುತ್ತೀರಾ ಎಂದು ಹೈಕಮಾಂಡನ್ನು ಪ್ರಶ್ನಿಸಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಅಂತೂ ಡಿ.ಕೆ. ಶಿವಕುಮಾರ್‌ ಅವರ ರಣತಂತ್ರ ಈಗ ಅವರಿಗೆ ತಿರುಗುಬಾಣವಾಗುವ ಸಾಧ್ಯತೆಯಿದೆ. ʼಬಿಸಿ ತಟ್ಟಿರುವʼ ಕಾರಣಕ್ಕಾಗಿಯೇ ಡಿ.ಕೆ. ಶಿವಕುಮಾರ್‌ ಅವರು ಮನಸ್ಸಿಲ್ಲದ ಮನಸ್ಸಿನಿಂದ ʼಕ್ಷಮೆ ಕೇಳಲು ಸಿದ್ಧʼ ಎಂಬ ಹೇಳಿಕೆ ನೀಡಿದ್ದಾರೆ ಎಂಬ ಮಾತೂ ಕೇಳಿಬಂದಿದೆ.

ವಿವಾದದ ಬಗ್ಗೆ ಡಿ.ಕೆ. ಶಿವಕುಮಾರ್‌ ವಿವರಣೆ ಇಲ್ಲಿದೆ. ಕ್ಲಿಕ್‌ ಮಾಡಿ...


Full View


Tags:    

Similar News