ಪೀಣ್ಯದ ಎಚ್‌ಎಂಟಿ ಜಾಗ ಕೇಂದ್ರದ್ದಲ್ಲ; ಅರಣ್ಯ ಇಲಾಖೆಗೆ ಸೇರಿದ್ದು: ಈಶ್ವರ್‌ ಖಂಡ್ರೆ

ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಆಗದ ಹೊರತು ಅದು ಅರಣ್ಯವಾಗಿಯೇ ಉಳಿಯಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದ್ದರಿಂದ ಡಿನೋಟಿಫೈ ಆಗದ ಪೀಣ್ಯದ ಎಚ್ಎಂಟಿ ಭೂಮಿ ಇಂದಿಗೂ ಅರಣ್ಯ ಇಲಾಖೆಗೆ ಸೇರುತ್ತದೆ;

Update: 2024-10-02 14:18 GMT

ಪೀಣ್ಯ-ಜಾಲಹಳ್ಳಿ ಪ್ಲಾಂಟೇಷನ್‌ ಸರ್ವೇ ನಂ.1 ಮತ್ತು 2 ರಲ್ಲಿರುವ ಎಚ್‌ಎಂಟಿ ಜಾಗ ಅರಣ್ಯ ಇಲಾಖೆ ಸೇರಿದ್ದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

ಎಚ್ ಎಂಟಿ ಜಾಗ ಕೇಂದ್ರ ಸರ್ಕಾರಕ್ಕೆ ಸೇರಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಆಗದ ಹೊರತು ಅದು ಅರಣ್ಯವಾಗಿಯೇ ಉಳಿಯಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದ್ದರಿಂದ ಡಿನೋಟಿಫೈ ಆಗದ ಪೀಣ್ಯದ ಎಚ್ಎಂಟಿ ಭೂಮಿ ಇಂದಿಗೂ ಅರಣ್ಯ ಇಲಾಖೆಗೆ ಸೇರುತ್ತದೆ ಎಂದು ಸ್ಪಷ್ಟಪಡಿಸಿದರು.

ಡಿನೋಟಿಫೈ ಆಗದ ಕಾರಣಕ್ಕೆ ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ನೀಡಿದ್ದ ಭೂಮಿಗೆ ಹಕ್ಕು ನೀಡಲು ಸಾಧ್ಯವಾಗಲಿಲ್ಲ. ಅದೇ ರೀತಿ ಡಿನೋಟಿಫೈ ಆಗದ ಪೀಣ್ಯ -ಜಾಲಹಳ್ಳಿ ಪ್ಲಾಂಟೇಷನ್ ನಂ. 599 ಎಕರೆ ಭೂಮಿ ಹೇಗೆ ತಾನೇ ಎಚ್ಎಂಟಿಗೆ ಸೇರುತ್ತದೆ ಪ್ರಶ್ನಿಸಿದರು.

ಎಚ್ಎಂಟಿ ಈಗಾಗಲೇ ಸಾವಿರಾರು ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯನ್ನು ನೂರಾರು ಕೋಟಿಗೆ ಮಾರಾಟ ಮಾಡಿಕೊಂಡಿದೆ. ಇರುವ ಅತ್ಯಲ್ಪ ಭೂಮಿಯನ್ನು ಮಾರಿಕೊಳ್ಳಬೇಕೆಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಪರಿಸರ ಹಕ್ಕು ಇತರ ನಾಗರಿಕ ಹಕ್ಕಿಗಿಂತ ಮಿಗಿಲು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಿರುವಾಗ ಅರಣ್ಯ ಇಲಾಖೆಗೆ ಸೇರಿದ ಎಚ್‌ಎಂಟಿ ಭೂಮಿಯನ್ನು ಯಾವುದೇ ಕಾರಣಕ್ಕೂ ಕೇಂದ್ರಕ್ಕೆ ಬಿಟ್ಟುಕೊಡುವುದಿಲ್ಲ ಎಂದರು.

ಲಾಲ್ ಬಾಗ್ ರೀತಿ ಅಭಿವೃದ್ಧಿ

ಎಚ್‌ಎಂಟಿ ಭೂಮಿಯಲ್ಲಿ ಸುಮಾರು 285 ಎಕರೆ ವಿಸ್ತೀರ್ಣದಲ್ಲಿ ದಟ್ಟ ಅರಣ್ಯವಿದೆ. ಅದರಲ್ಲಿ ಪ್ರಾಣಿ ಸಂಕುಲವೂ ಇದೆ. ದಟ್ಟ ಕಾಡಿನಂತಿರುವ ಈ ಭೂಮಿಯನ್ನು ಮರಳಿ ಅರಣ್ಯ ಇಲಾಖೆ ಪಡೆದು ಲಾಲ್ ಬಾಗ್ ರೀತಿ ಸಸ್ಯೋದ್ಯಾನ ಅಭಿವೃದ್ಧಿಪಡಿಸಲಾಗುವುದು ಎಂದರು.

ಇದು ಉತ್ತರ ಬೆಂಗಳೂರಿಗರ ಶ್ವಾಸ ತಾಣವೇ ಹೊರತು ಕೇಂದ್ರ ಸರ್ಕಾರದ ಸ್ವತ್ತಲ್ಲ. ಇದಕ್ಕೆ ಉತ್ತರ ಬೆಂಗಳೂರಿನ ಜನರೇ ಉತ್ತರ ನೀಡುತ್ತಾರೆ. ಎಚ್‌ಎಂಟಿಗೆ ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಯಾವುದೇ ಗೆಜೆಟ್ ಅಧಿಸೂಚನೆ, ಸಚಿವ ಸಂಪುಟದ ಅನುಮೋದನೆ, ಡಿನೋಟಿಫಿಕೇಷನ್ ಮಾಡದೆ ಕ್ರಯ ಮತ್ತು ಗುತ್ತಿಗೆ ನೀಡಿರುವುದೇ ಕಾನೂನು ಬಾಹಿರ. ಇದನ್ನು ಬಿಜೆಪಿಯವರು ಮೊದಲು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಅಮೂಲ್ಯ ಸಂಪತ್ತು ರಿಯಲ್ ಎಸ್ಟೇಟ್ ನವರ ಪಾಲಾಗಲು ಬಿಡಬಾರದು ಎಂದು ಹೇಳಿದರು.

ಎಚ್ಎಂಟಿಯವರು ಈಗಾಗಲೇ 165 ಎಕರೆ ಭೂಮಿಯನ್ನು 300 ಕೋಟಿ ರೂ.ಗೆ ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. 2015ರಲ್ಲಿ ಅರಣ್ಯ ಅಧಿಕಾರಿಯೊಬ್ಬರು ಕರ್ನಾಟಕ ಅರಣ್ಯ ಕಾಯಿದೆ 1963ರಡಿ 64 ಎ ಪ್ರಕ್ರಿಯೆ ನಡೆಸಿದ್ದಾರೆ. ಇದು ಅರಣ್ಯವಲ್ಲದೆ ಮತ್ತೇನು' ಎಂದು ಪ್ರಶ್ನಿಸಿದರು.

ಎಚ್‌ಎಂಟಿ ಜಾಗವನ್ನು ಡಿನೋಟಿಫೈ ಮಾಡುವಂತೆ ಅರ್ಜಿ ಹಾಕಲಾಗಿದೆ. ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಸೂಚಿಸಿದ್ದೇನೆ. ಇದು ಅರಣ್ಯ ಅಲ್ಲದಿದ್ದರೆ ಐ.ಎ ಹಾಕುವ ಅಗತ್ಯ ಏಕೆ ಬರುತ್ತಿತ್ತು, ಎನ್.ಆರ್. ರಮೇಶ್ ಅವರು ಅರಣ್ಯ ಕಾಯ್ದೆಯನ್ನು ಚೆನ್ನಾಗಿ ಓದಿ ನಂತರ ಮಾತನಾಡಬೇಕು ಎಂದು ತಿರುಗೇಟು ನೀಡಿದರು.

ಎಚ್ ಎಂಟಿ ಕಾರ್ಖಾನೆಯ ಜಾಗ ಕೇಂದ್ರ ಸರ್ಕಾರದ ಸ್ವತ್ತು. ಅರಣ್ಯ ಸಚಿವರು ಹೇಳಿಕೆ ನೀಡುವ ಮೊದಲು ದಾಖಲೆ ಅಧ್ಯಯನ ಮಾಡಿ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಹೇಳಿದ್ದರು.

Tags:    

Similar News