ತುಮಕೂರಿನಲ್ಲಿ ಪಾಕಿಸ್ತಾನ ಮೂಲದ ಸಂಘಟನೆ ಸಕ್ರಿಯ? ಮುಸ್ಲಿಂ ಮುಖಂಡರಿಂದ ದೂರು

ಮುಸ್ಲಿಂ ಸಮುದಾಯದ ಮುಖಂಡರ ದೂರು ಮತ್ತು ಆತಂಕವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಅಧಿಕಾರಿಗಳು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.;

Update: 2025-08-26 05:01 GMT

ತುಮಕೂರು ಜಿಲ್ಲಾ ಎಸ್‌ಪಿ ಕಚೇರಿ

ಕಲ್ಪತರು ನಾಡು ತುಮಕೂರಿನಲ್ಲಿ ಪಾಕಿಸ್ತಾನ ಮೂಲದ ವಿವಾದಿತ ಧಾರ್ಮಿಕ ಸಂಘಟನೆಯೊಂದು ಸದ್ದಿಲ್ಲದೆ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿದ್ದು, ಮುಸ್ಲಿಂ ಯುವಕರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಸ್ವತಃ ಮುಸ್ಲಿಂ ಸಮುದಾಯದ ಮುಖಂಡರೇ ಆರೋಪಿಸಿ, ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈ ಸಂಘಟನೆಯ ಕಾರ್ಯಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

'ರಿಯಾಜ್ ಅಹ್ಮದ್ ಗೋಹಲ್ ಶಾಹಿ ಗುಂಪು (MFI)' ಎಂಬ ಪಾಕಿಸ್ತಾನ ಮೂಲದ ಸಂಘಟನೆಯು ತುಮಕೂರು ನಗರದಲ್ಲಿ ಸಕ್ರಿಯವಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಘಟನೆಯು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾದ ನಂಬಿಕೆಗಳನ್ನು ಬೋಧಿಸುತ್ತಿದ್ದು, ಮುಗ್ಧ ಜನರನ್ನು, ವಿಶೇಷವಾಗಿ ಯುವಕರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಮುಸ್ಲಿಂ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ನೂರಾರು ಮಸೀದಿಗಳ ಅಧ್ಯಕ್ಷರು ಹಾಗೂ ಮರ್ಕಝಿ ಮಸ್ಜಿದ್-ಎ-ಅಂಜುಮನ್ ನೇತೃತ್ವದಲ್ಲಿ ನೂರಾರು ಮುಸ್ಲಿಂ ಮುಖಂಡರು ಮತ್ತು ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ, ಹೆಚ್ಚುವರಿ ಎಸ್‌ಪಿಗಳಾದ ಸಿ. ಗೋಪಾಲ್ ಹಾಗೂ ಎಂ.ಎಲ್. ಪುರುಷೋತ್ತಮ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಮುಖಂಡರ ಆರೋಪಗಳೇನು?

ದೂರು ನೀಡಿದ ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮ್ಮದ್, "ಈ ಸಂಘಟನೆಯ ಸ್ಥಾಪಕ ರಿಯಾಜ್ ಅಹ್ಮದ್ ಗೋಹರ್ ಶಾಹಿ ಎಂಬಾತನನ್ನು ಭಾರತದ ಬಹುತೇಕ ಎಲ್ಲಾ ಪ್ರಖ್ಯಾತ ಉಲೇಮಾಗಳು (ಇಸ್ಲಾಮಿಕ್ ವಿದ್ವಾಂಸರು) ಇಸ್ಲಾಂ ಧರ್ಮದಿಂದಲೇ ಹೊರಗಿಟ್ಟಿದ್ದಾರೆ" ಎಂದು ಸ್ಪಷ್ಟಪಡಿಸಿದರು.

"ಈ ಸಂಘಟನೆಯ ತತ್ವಗಳು ಇಸ್ಲಾಮನ ಮೂಲಭೂತ ನಂಬಿಕೆಗಳಿಗೆ ವಿರುದ್ಧವಾಗಿವೆ. ಇಂತಹ ಪಾಕಿಸ್ತಾನ ಮೂಲದ ಸಂಘಟನೆಗಳು ಭಾರತೀಯ ಮುಸ್ಲಿಮರಿಗೆ ಅನಗತ್ಯವಾಗಿದ್ದು, ಸಮುದಾಯದಲ್ಲಿನ ಶಾಂತಿ, ಏಕತೆ ಮತ್ತು ಸಾಮರಸ್ಯಕ್ಕೆ ಅಪಾಯವನ್ನುಂಟು ಮಾಡುತ್ತವೆ," ಎಂದು ಅವರು ಹೇಳಿದರು.

ತುಮಕೂರಿನಲ್ಲಿ 'ಇಶ್ರತ್' ಎಂಬ ಮಹಿಳೆ ಈ ಸಂಘಟನೆಯ ಸಕ್ರಿಯ ಸದಸ್ಯೆಯಾಗಿದ್ದು, ಸ್ಥಳೀಯ ಮುಸ್ಲಿಂ ಸಮುದಾಯದಲ್ಲಿ ಈ ಸಂಘಟನೆಯ ತತ್ವಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಸಂಘಟನೆಯ ಇತರ ಸದಸ್ಯರು ಇವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಗರದ ಶೈಖ್ ಅಹಮದ್ ಎಂಬುವರ ಕುಟುಂಬವನ್ನು ಗುರಿಯಾಗಿಸಿಕೊಂಡು ಪದೇ ಪದೇ ಭೇಟಿ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮುಸ್ಲಿಂ ಸಮುದಾಯದ ಮುಖಂಡರ ದೂರು ಮತ್ತು ಆತಂಕವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಅಧಿಕಾರಿಗಳು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Tags:    

Similar News