ʼಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆʼ: ಎಫ್ಎಸ್ಎಲ್ ವರದಿಯಲ್ಲಿ ದೃಢ

Update: 2024-03-05 09:51 GMT

ರಾಜ್ಯಸಭೆ ಚುನಾವಣೆ ಫಲಿತಾಂಶದ ದಿನ ಫೆ.27ರಂದು ಕಾಂಗ್ರೆಸ್ಸಿನ ಡಾ ನಾಸಿರ್ ಹುಸೇನ್ ಅವರು ಗೆಲುವು ಸಾಧಿಸಿದ್ದರು. ಆ ಗೆಲುವಿನ ಸಂಭ್ರಮಾಚರಣೆಯಲ್ಲಿ ಅಭಿಮಾನಿಗಳು ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಎಫ್ಎಸ್ ಎಲ್ ವರದಿಯಲ್ಲಿ ಘೋಷಣೆ ಕೂಗಿದ್ದು ದೃಢಪಟ್ಟಿದ್ದು, ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮಂಗಳವಾರ (ಮಾ.5 ) ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ʼʼನಾವು ಎಫ್‌ಎಸ್‌ಎಲ್ ವರದಿ ಬರಲಿ ಎಂದು ಹೇಳುತ್ತಿದ್ದೆವು. ಇದೀಗ ವರದಿ ಆಧರಿಸಿ ಕ್ರಮ ಕೈಗೊಂಡಿದ್ದೇವೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ದೃಢಪಟ್ಟಿದೆ. ಹೀಗಾಗಿ ಎಫ್‌ಎಸ್‌ಎಲ್ ವರದಿ ಆಧರಿಸಿ ಮೂವರನ್ನು ಬಂಧಿಸಲಾಗಿದೆ. ವರದಿಯಲ್ಲಿ ಯಾರು ಘೋಷಣೆ ಕೂಗಿದ್ದಾರೆಂದು ಹೇಳಿಲ್ಲ. ಯಾಕೆ ಕೂಗಿದ್ದಾರೆಂದು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು" ಎಂದರು.

ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆ ಉತ್ತರಿಸಿದ ಅವರು, ಸರ್ಕಾರಕ್ಕೆ ಮುಜುಗರ ಆಗುವ ಪ್ರಶ್ನೆಯೇ ಇಲ್ಲ, ತಪ್ಪಿತಸ್ಥರನ್ನು ರಕ್ಷಿಸುವುದಿಲ್ಲ, ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದೇವೆ. ಪೊಲೀಸ್ ಅಧಿಕಾರಿಗಳ ಲೋಪ ಇದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ವರದಿ ಬರುವ ಮುನ್ನವೇ ವಿರೋಧ ಪಕ್ಷದವರು ಸುಮ್ಮನೆ ಆರೋಪ ಮಾಡುತ್ತಿದ್ದರು. ಅವರು ಹೇಳುತ್ತಾರೆ ಎಂದು ಯಾರ್ಯಾರನ್ನೋ ಬಂಧನ ಮಾಡೋಕೆ ಆಗುತ್ತಾ? ನಾವು ಎಫ್‌ಎಸ್‌ಎಲ್ ವರದಿ ಬರಲಿ ಅಂತಾ ಕಾಯುತ್ತಿದ್ದವು. ಈಗ ಬಂದಿದೆ. ಕ್ರಮ ಕೈಗೊಂಡಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಈ ಪ್ರಕರಣದ ಬೆಳವಣಿಗೆ

ರಾಜ್ಯ ಸರ್ಕಾರ ಆರಂಭದಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿರಲಿಲ್ಲ, ಇದು ಎಡಿಟೆಡ್‌ ವಿಡಿಯೋ, ಅಲ್ಲಿ ಕೂಗಿರುವುದು ನಾಸೀರ್‌ ಸಾಬ್ ಜಿಂದಾಬ್‌, ಅದನ್ನು ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ತಿರುಚಲಾಗಿದೆ ಎನ್ನುತ್ತಾ ಈ ವಿಚಾರವನ್ನು ಮುಗಿಸಲು ಸರ್ಕಾರದ ಭಾಗವಾಗಿರುವ ಹಲವು ಸಚಿವರು ಪ್ರಯತ್ನಿಸಿದ್ದರು. ಸೋಮವಾರದವರೆಗೂ ಈ ಪ್ರಕರಣವನ್ನು ಬೇರೆ ಕಡೆಗೆ ತಿರುಗಿಸುವ ಪ್ರಯತ್ನದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಇತ್ತು ಎನ್ನುವುದು ಬಿಜೆಪಿ ನಾಯಕರ ಆರೋಪವಾಗಿದೆ.

ಜಿಂದಾಬಾದ್‌ ಎಂದು ಕೂಗಿರುವ ವಿಡಿಯೋವನ್ನು ಬಿಜೆಪಿಯವರು ಖಾಸಗಿಯಾಗಿ ಪರೀಕ್ಷೆ ಮಾಡಿಸಿ ವರದಿ ಪಡೆದುಕೊಂಡರು. ಆ ವರದಿಯಲ್ಲಿ, ಘೋಷಣೆ ಕೂಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಅದೇ ವರದಿಯನ್ನು ಆಧರಿಸಿ ಬಿಜೆಪಿ ನಾಯಕರು ಘೋಷಣೆ ಕೂಗಿರುವುದು ದೃಢಪಟ್ಟಿದೆ ಎಂದು ಹೇಳಲಾರಂಭಿಸಿದರು.

ಆ ಬಳಿಕ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಗೃಹಸಚಿವ ಡಾ. ಜಿ ಪರಮೇಶ್ವರ್ ಅವರು ಉನ್ನತಮಟ್ಟದ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಆ ಸಭೆ ಹೊತ್ತಿಗಾಗಲೇ ಪೊಲೀಸರು ಘೋಷಣೆ ಕೂಗಿದ ಮೂವರನ್ನು ಬಂಧಿಸಿದ್ದರು.

ಆ ಬಳಿಕ ಸರ್ಕಾರ ಕೂಡ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿರುವುದು ನಿಜ, ಎಫ್‌ಎಸ್‌ಎಲ್‌ ವರದಿ ಪ್ರಕಾರ ಮೂವರನ್ನು ಬಂಧನ ಕೂಡ ಮಾಡಲಾಗಿದೆ ಎಂದು ಹೇಳಿತು.

ಈವರೆಗೂ ರಾಜ್ಯ ಸರ್ಕಾರ ಹೇಳಿದ್ದೇನು?

ಎಫ್ಎಸ್ಎಲ್ ವರದಿ ಸರ್ಕಾರದ ಕೈ ಸೇರಿಲ್ಲ, ಇನ್ನೂ ವರದಿ ಬರುವುದು ಬಾಕಿ ಇದೆ. ಒಂದು ಚಾನಲ್‌ನಲ್ಲಿ ಪ್ರಸಾರವಾದ ದೃಶ್ಯ ಅಥವಾ ಒಂದು ಕ್ಲಿಪ್ಪಿಂಗ್ಗೆ ಸಂಬಂಧಿಸಿದಂತೆ ತನಿಖೆ ಸೀಮಿತವಾಗುವುದಿಲ್ಲ. ಇರುವ ಎಲ್ಲಾ ದೃಶ್ಯಗಳನ್ನೂ ಪಡೆದುಕೊಂಡು ಎಫ್ಎಿಸ್ಎವಲ್ಗೆ ಕಳುಹಿಸಿದ್ದೇವೆ. ಆದಷ್ಟು ಬೇಗ ವರದಿ ನೀಡುವಂತೆ ಪ್ರಯೋಗಾಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಅದರ ಪ್ರಕಾರ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಹೇಳಿದ್ದರು.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ದೇಶ ದ್ರೋಹಿಗಳನ್ನು ಮಟ್ಟಹಾಕಬೇಕಿದೆ ಎಂದು ಹೇಳಿದ್ದರು.

ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಯೇ ಎಂಬ ಬಗ್ಗೆ ಮೊದಲು ತನಿಖೆಯಾಗಬೇಕಿದೆ. ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಅದಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಯಕ್ಕೆ ತನಿಖೆಗೆ ಕಳುಹಿಸಿಕೊಟ್ಟಿದ್ದೇವೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ, ಅಂಥವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.

ಪ್ರಕರಣದಲ್ಲಿ ಸರ್ಕಾರ ಎಡವಿದ್ದೆಲ್ಲಿ?

ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿರುವುದು ನಿಜವೇ? ಅಲ್ಲವೇ ? ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದಂತೆಯೇ ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಜರುಗಿಸದೇ ಕಾಲಾಹರಣ ಮಾಡಿದ್ದು ಸರ್ಕಾರದ ಲೋಪ. ತನಿಖೆಯ ಭಾಗವಾಗಿ ಕೂಡಲೇ ಅವರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರೆ, ಬಹುಶಃ ಪ್ರತಿಪಕ್ಷಗಳಿಗೆ ಪ್ರಕರಣ ಆಹಾರವಾಗುವುದನ್ನು ತಪ್ಪಿಸಬಹುದಿತ್ತು ಜೊತೆಗೆ ಇದೀಗ ಸರ್ಕಾರ ಮುಜುಗರಕ್ಕೆ ಈಡಾಗುವ ಸಂದರ್ಭ ಬರುತ್ತಿರಲಿಲ್ಲ.

ಜೊತೆಗೆ ವಿಧಾನಸೌಧದ ಒಳಗೆ, ಸಚಿವರ ಕಚೇರಿಗಳ ಬಳಿ ನಾಸಿರ್‌ ಖಾನ್‌ ಅಭಿಮಾನಿಗಳು ಘೋಷಣೆ ಕೂಗಿ, ಗದ್ದಲ ಸೃಷ್ಟಿಸಲು ಅವಕಾಶ ಮಾಡಿಕೊಟ್ಟದ್ದು ಮತ್ತೊಂದು ಎಡವಟ್ಟು. ಆ ಬಗ್ಗೆ ಕೂಡ ತನಿಖೆಗೆ ಆದೇಶಿಸಿ ಭದ್ರತಾ ಲೋಪಕ್ಕೆ ಕಾರಣವಾದವರ ಮೇಲೆ ಕೂಡಲೇ ಕ್ರಮ ಜರುಗಿಸಿದ್ದರೆ ಸರ್ಕಾರ ಪ್ರಕರಣವನ್ನು ಮುಚ್ಚಿಹಾಕುವ ಯತ್ನದಲ್ಲಿದೆ ಎಂಬ ಟೀಕೆಗಳಿಗೆ ಅವಕಾಶವೇ ಇರುತ್ತಿರಲಿಲ್ಲ. 

Tags:    

Similar News