Pakistan Citizens | ಜಿಗಣಿ ಪೊಲೀಸರ ಕಾರ್ಯಾಚರಣೆ: ಮತ್ತೆ 14 ಪಾಕಿಸ್ತಾನಿಯರು ಅರೆಸ್ಟ್
ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನದ ಪ್ರಜೆಗಳ ಬಂಧಿತರ ವಿಚಾರಣೆ ವೇಳೆ ಸಿಕ್ಕ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು ಇದೀಗ 14 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದಾರೆ.;
ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನದ ಪ್ರಜೆಗಳ ಬಂಧಿತರ ವಿಚಾರಣೆ ವೇಳೆ ತಿಳಿದುಬಂದ ಸ್ಫೋಟಕ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು ಇದೀಗ ದೇಶದಾದ್ಯಂತ ಸಕ್ರಿಯರಾಗಿದ್ದ 14 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದಾರೆ.
ಪಾಕಿಸ್ತಾನಿ ಪ್ರಜೆಗಳಿಗೆ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಅಕ್ರಮವಾಗಿ ನೆಲೆಸಲು ಸಹಾಯ ಮಾಡಿದ ಆರೋಪದ ಮೇಲೆ ಪರ್ವೇಜ್ ಎಂಬ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಈತ ಅವರ ಗುರುತನ್ನು ನಕಲು ಮಾಡಿ ಮತ್ತು ಹಿಂದೂ ಹೆಸರಿನಲ್ಲಿ ಅಧಿಕೃತ ದಾಖಲೆಗಳನ್ನು ಪಡೆಯಲು ಸಹಾಯ ಮಾಡಿದ್ದಾರೆ. ಈತನ ಬಂಧನದ ಬಳಿಕ ಇನ್ನಿತರರು ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಇದೀಗ ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆಗಳು ಅರೆಸ್ಟ್ ಆದ ಬೆನ್ನಲ್ಲೇ ಹೆಚ್ಚಿನ ತನಿಖೆಗಾಗಿ ಪೊಲೀಸರ 4 ತಂಡಗಳ ರಚನೆ ಮಾಡಿ ವಿವಿಧ ರಾಜ್ಯಗಳಿಗೆ ಕಳುಹಿಸಿಕೊಡಲಾಗಿತ್ತು. ಚೆನ್ನೈ, ದೆಹಲಿ, ಹೈದರಾಬಾದ್ಗೆ ತೆರಳಿದ್ದ ಪೊಲೀಸರ ತಂಡ ಮೆಹದಿ ಫೌಂಡೇಷನ್ ಸಂಪರ್ಕದಲ್ಲಿದ್ದ ಒಟ್ಟು 22 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಪಾಕ್ ಪ್ರಜೆಗಳೆಲ್ಲ ಧರ್ಮ ಪ್ರಚಾರಕ್ಕಾಗಿ ಭಾರತಕ್ಕೆ ನುಸುಳಿದ್ದಲ್ಲದೆ, ವಿವಿಧ ರಾಜ್ಯಗಳಲ್ಲಿ ಬೀಡುಬಿಟ್ಟಿದ್ದರು.
ಪಾಕಿಸ್ತಾನಿ ಪ್ರಜೆಗಳ ಬಂಧನ ವಿಚಾರ ರಾಜಕೀಯ ಆರೋಪಕ್ಕೂ ಕಾರಣವಾಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಪರಮೇಶ್ವರ್, ಪಾಕಿಸ್ತಾನ ಪ್ರಜೆಗಳ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿರುವ ವಿಷಯ ತಿಳಿದ ಕೂಡಲೇ ನಮ್ಮ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ, ಉಳಿದವರನ್ನು ಪತ್ತೆ ಹಚ್ಚುತ್ತೇವೆ. ಕೇಂದ್ರದ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದಿದ್ದರು.