ಪಾಕ್‌ ಜಿಂದಾಬಾದ್ ವಿವಾದ | ಖಾಸಗಿ ಸಂಸ್ಥೆಯ ಎಫ್‌ ಎಸ್‌ ಎಲ್‌ ವರದಿ ಹಂಚಿ ಕಾಂಗ್ರೆಸ್‌ ಕಾಲೆಳೆದ ಬಿಜೆಪಿ

ಬಿಜೆಪಿ ಹಂಚಿಕೊಂಡಿರುವ ವರದಿಯ ಪ್ರತಿಯು ಅಧಿಕೃತ ಎಫ್‌ಎಸ್‌ಎಲ್‌ ವರದಿ ಅಲ್ಲ ಎಂದು ಧೃಢಪಟ್ಟಿದ್ದು, ಗೃಹ ಸಚಿವ ಜಿ ಪರಮೇಶ್ವರ್‌ ಅವರು ಕೂಡಾ ಅಧಿಕೃತ ಎಫ್‌ ಎಸ್‌ ಎಲ್ ವರದಿ ಬಂದಿಲ್ಲ ಎಂದು ತಿಳಿಸಿದ್ದಾರೆ.;

Update: 2024-03-04 14:22 GMT

ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಬೆಂಬಲಿಗರು ಪಾಕ್‌ ಪರ ಘೋಷಣೆ ಕೂಗಿದ್ದಾರೆ ಎಂದು ಖಾಸಗಿ ಸಂಸ್ಥೆಯೊಂದು ನಡೆಸಿದ ವರದಿಯನ್ನು ಆಧರಿಸಿ ಕಾಂಗ್ರೆಸ್‌ ಸರ್ಕಾರದ‌ ವಿರುದ್ಧ ಬಿಜೆಪಿ ಅಭಿಯಾನ ಆರಂಭಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ಖಾಸಗಿ ಸಂಸ್ಥೆಯಾದ clue4evidence ಎಂಬ ಸಂಸ್ಥೆಯು ಮಾಡಿರುವ ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಬಿಜೆಪಿ, “ಕಾಂಗ್ರೆಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು ʼನಾಸಿರ್ ಸಾಬ್ ಜಿಂದಾಬಾದ್ʼ ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ” ಎಂದು ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದೆ.

ವರದಿಯ ಪ್ರತಿಯನ್ನು ಹಂಚಿಕೊಂಡಿರುವ ಬಿಜೆಪಿ “ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಜೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ. ರಾಷ್ಟ್ರ ವಿರೋಧಿ ಧೋರಣೆಯ ಕಾಂಗ್ರೆಸ್‌ (@INCKarnataka) ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು” ಎಂದು ಟ್ವೀಟ್‌ ಮಾಡಿದೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮೊದಲಾದವರು ಇದೇ ವರದಿಯ ಆಧಾರದ ಮೇಲೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವರದಿಯ ಕುರಿತು ಹಿರಿಯ ಪತ್ರಕರ್ತೆ ಸೋನು ರವಿ ಸೂದ್‌ ಅವರು X (ಟ್ವಿಟರ್) ಜಾಲತಾಣದಲ್ಲಿ ಟ್ವೀಟ್‌ ಮಾಡಿದ್ದು, “ಪಾಕಿಸ್ತಾನದ ಪರ ಘೋಷಣೆಯನ್ನು ಕೂಗಲಾಗಿದೆ ಎಂದು ಸಂವಾದ ಫೌಂಡೇಶನ್‌ ಎಂಬ ಸಂಸ್ಥೆ ನಡೆಸಿದ ಎಫ್‌ಎಸ್‌ಎಲ್ ವರದಿಯನ್ನು ಆಧರಿಸಿ ಹಲವಾರು ಮಾಧ್ಯಮಗಳು ವರದಿ ಮಾಡಿದೆ. ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿರುವ “ದಟ್ಟ ಸಾಧ್ಯತೆ”ಯನ್ನು ವರದಿಯು ಹೇಳಿದ್ದು, ಅಂತಿಮ ತೀರ್ಮಾನಕ್ಕೆ ಹೇಗೆ ಬರಲಾಗಿದೆ ಅನ್ನುವುದು ಇಲ್ಲಿದೆ” ಎಂದು ಬರೆದಿದ್ದಾರೆ

“ಪರೀಕ್ಷೆಗೆ ಬಳಸಲಾದ ಆಡಿಯೋದಲ್ಲಿ ʼತಾನ್‌ʼ ಪದ ಬಳಸಿರುವುದು ಕೇಳಿ ಬಂದಿದೆ. ಹಾಗಾಗಿ ಪಾಕಿಸ್ತಾನ್‌ ಝಿಂದಾಬಾದ್‌ ಎಂದು ಕೂಗಿರುವ ದಟ್ಟವಾದ ಸಾಧ್ಯತೆ ಇದೆ” ಎಂದು ಖಾಸಗಿ ವರದಿಯು ಹೇಳಿದೆ.

ಖಾಸಗಿ ಸಂಸ್ಥೆ ಮಾಡಿದ ವರದಿಯನ್ನು ವೈಜ್ಞಾನಿಕ ಎಫ್‌ಎಸ್‌ಎಲ್‌ ವರದಿ ಎಂದು ಬಿಜೆಪಿ ಬಿಂಬಿಸಿರುವುದಕ್ಕೆ ಕಾಂಗ್ರೆಸ್‌ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ʼಬಿಜೆಪಿ ಮಾಡಿರುವುದು ರಾಷ್ಟ್ರದ್ರೋಹದ ಕೆಲಸʼ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಹೇಳಿದ್ದಾರೆ.

ಗೃಹಸಚಿವ ಜಿ ಪರಮೇಶ್ವರ್‌ ಪ್ರತಿಕ್ರಿಯಿಸಿ, “ಈ ಬಗ್ಗೆ ಖಾಸಗಿ ವರದಿಗಳನ್ನು ಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ನಮ್ಮ ಇಲಾಖೆಯ ವರದಿ ಬಂದ ಬಳಿಕ ನಾನು ಮಾತಾಡುತ್ತೇನೆ, ಖಾಸಗಿಯಾಗಿ ವರದಿ ಮಾಡಲು ಅನುಮತಿ ಇದೆಯಾ? ಅವರಿಗೆ ಅನುಮತಿ ನೀಡಿದವರು ಯಾರು ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇನೆ” ಎಂದಿದ್ದಾರೆ.

“ಬಿಜೆಪಿಯವರು ಮಾಡಿದ್ದು ನಿಜವಾದ ದೇಶದ್ರೋಹ. ಸಮಾಜದಲ್ಲಿ ಆತಂಕ ಇರಬೇಕು ಅಂತ ಇವರು ಹೀಗೆ ಮಾಡುತ್ತಿದ್ದಾರೆ. ಪ್ರಕರಣದ ಬಗ್ಗೆ ಖಾಸಗಿ ಎಫ್‌ಎಸ್‌ಎಲ್‌ ವರದಿ ನನ್ನ ಬಳಿಯೂ ಇದೆ, ಆದರೆ ನಾನು ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಆಗುವುದಿಲ್ಲ. ಗೃಹ ಇಲಾಖೆ ಇದರ ಬಗ್ಗೆ ವರದಿ ಕೊಡಬೇಕೇ ಹೊರತು ಸಂವಾದ ಫೌಂಡೇಶನ್ ಅಲ್ಲ” ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಎಫ್‌ಎಸ್‌ಎಲ್‌ ವರದಿ ಎಂದು ಖಾಸಗಿ ಸಂಸ್ಥೆಯ ವರದಿಯನ್ನು ಹಂಚಿಕೊಂಡ ಬಿಜೆಪಿ ವಿರುದ್ಧ ಕಾಂಗ್ರೆಸ್‌ (INC Karnataka) ಕಿಡಿ ಕಾರಿದ್ದು, “ಯಾವುದೊ ನಕಲಿ ವರದಿಯನ್ನು ಸೃಷ್ಟಿ ಮಾಡಿದ ಬಿಜೆಪಿ ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ. ಸುಳ್ಳುಗಳ ಮೂಲಕ ಸಮಾಜದ ಶಾಂತಿ ಕೆಡಿಸುತ್ತಿದೆ” ಎಂದು ಟ್ವೀಟ್‌ ಮಾಡಿದೆ.

ವರದಿ ತಯಾರಿಸಿದ clue4evidence ಸಂಸ್ಥೆಯ ಸಿಇಒ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದು, “ನಮ್ಮ ಲ್ಯಾಬ್‌ನಲ್ಲಿ ಎಲ್ಲಾ ರೀತಿಯಲ್ಲಿ ಪರೀಕ್ಷೆ ಮಾಡಲಾಗಿದೆ. 46 ಗಂಟೆಗಳ ಕಾಲ ಪರೀಕ್ಷೆ ನಡೆಸಿದ್ದೇವೆ. ಒಂದು ಬಾರಿ ನಾಸಿರ್‌ ಸಾಬ್‌ ಝಿಂದಾಬಾದ್‌, ಮತ್ತೊಂದು ಬಾರಿ ಪಾಕಿಸ್ತಾನ್‌ ಝಿಂದಾಬಾದ್‌ ಎಂದು ಕೂಲಾಗಿದೆ. ಖಾಸಗಿ ವಾಹಿನಿಯ ಆಡಿಯೋ ಕ್ಲಿಪಿಂಗ್‌ ಬಳಸಿ ಈ ವರದಿ ನೀಡಿದ್ದೇವೆ. ಈ ಬಗ್ಗೆ ಸರ್ಕಾರ ಮಾಹಿತಿ ಕೇಳಿದರೆ ಉತ್ತರಿಸಲು ಸಿದ್ಧ” ಎಂದು ತಿಳಿಸಿದ್ದಾರೆ.

ಖಾಸಗಿ ಸಂಸ್ಥೆ ನೀಡಿದ ವರದಿಯನ್ನು ಆಧರಿಸಿ ಬಿಜೆಪಿ ನಡೆಸುತ್ತಿರುವ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದ್ದು, “ವರದಿ ತಯಾರಿಸಿದ ಸಂಸ್ಥೆಯ ಹಿನ್ನಲೆ ಯಾವುದು? ತನಿಖೆಯಲ್ಲಿರುವ ಪ್ರಕರಣದ ವರದಿ ತಯಾರಿಸಿ ಸಾರ್ವಜನಿಕವಾಗಿ ಬಿಡುಗಡೆಗೊಳಿಸಲು ಅನುಮತಿ ನೀಡಿದ್ದು ಯಾರು” ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

Tags:    

Similar News