Pahalgam Terror Attack| ಪಹಲ್ಗಾಮ್ ಉಗ್ರರ ದಾಳಿ; ದೇಶದ ಸಮಗ್ರತೆ ಮೇಲಿನ ದಾಳಿ- ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು , "ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು. ಇದು ಭಾರತದ ಮೇಲಿನ ನೇರ ದಾಳಿಯಾಗಿದೆ. ಇದರಿಂದಾಗಿ ಇಡೀ ರಾಷ್ಟ್ರವು ಆಘಾತದಲ್ಲಿದೆ ಎಂದಿದ್ದಾರೆ.;

Update: 2025-04-23 09:30 GMT

ಮಲ್ಲಿಕಾರ್ಜುನ ಖರ್ಗೆ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯು ಭಾರತದ ಮೇಲಿನ ನೇರ ದಾಳಿಯಾಗಿದ್ದು, ಈ ಹೇಡಿತನದ ದಾಳಿಯನ್ನು ಎದುರಿಸಲು ಎಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಎಐಸಿಸಿ  ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, "ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಎಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು. ಇದು ಭಾರತದ ರಾಜ್ಯವೊಂದರ ಮೇಲಿನ ನೇರ ದಾಳಿಯಾಗಿದೆ. ಇದರಿಂದಾಗಿ ಇಡೀ ರಾಷ್ಟ್ರವು ಆಘಾತದಲ್ಲಿದೆ. ಇದಕ್ಕೆ ನಾವು ಸೂಕ್ತ ಪ್ರತಿಕ್ರಿಯೆ ನೀಡಬೇಕು. ಈ ಪ್ರತಿಕ್ರಿಯೆಯಲ್ಲಿ ನಾವೆಲ್ಲರೂ ಒಂದೇ ಎಂದು ತಿಳಿಸಿದ್ದಾರೆ.

ಪ್ರಸ್ತುತ ಕಾಶ್ಮೀರದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಇತರ ನಾಯಕರೊಂದಿಗೆ ಮಾತನಾಡಿದ್ದೇನೆ. ಆದರೆ ಈ ಕ್ಷಣದಲ್ಲಿ ಅದನ್ನೆಲ್ಲ ಬಹಿರಂಗಪಡಿಸಲಾಗದು.  ನನ್ನ ಆಳವಾದ ಸಂತಾಪ ವ್ಯಕ್ತಪಡಿಸಲು ಮತ್ತು ಈ ಹೇಡಿತನದ ಭಯೋತ್ಪಾದನಾ ಕೃತ್ಯವನ್ನು ಖಂಡಿಸಲು ನಾನು ಇಲ್ಲಿದ್ದೇನೆ. ಉಗ್ರರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆಯನ್ನು ಗೃಹ ಸಚಿವರು ನೀಡಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಾಳೆ

ಪಹಲ್ಗಾಮ್‌ ದುರಂತದ ಕುರಿತು ಚರ್ಚಿಸಲು ನಾಳೆ(ಗುರುವಾರ) ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಡೆಸಲಾಗುವುದು.  ಬೆಳಿಗ್ಗೆ 11ಕ್ಕೆ ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ. 

‘ಪ್ರವಾಸಿಗರನ್ನು ರಕ್ಷಿಸುವ ಅಗತ್ಯ’

ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಖರ್ಗೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರವಾಸೋದ್ಯಮವು ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಯ ಬೆನ್ನೆಲುಬು. ಅಲ್ಲಿನ ಜನರು ಪ್ರವಾಸೋದ್ಯಮದಿಂದ ಬರುವ ಆದಾಯದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಘಟನೆಯಿಂದಾಗಿ ಜೀವನೋಪಾಯ ಕುಸಿಯಬಹುದು ಎಂದು ಒಮರ್ ಅಬ್ದುಲ್ಲಾ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಅಮರನಾಥ ಯಾತ್ರೆ ಸಮೀಪಿಸುತ್ತಿರುವುದರಿಂದ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.  ಯಾತ್ರಿಕರ ರಕ್ಷಣೆ ಜೊತೆಗೆ ಭದ್ರತೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ. 

Tags:    

Similar News