ಪಾದಯಾತ್ರೆ ಸೈಡ್ ಎಫೆಕ್ಟ್ | ಸ್ವತಃ ಬಿಜೆಪಿಗೇ ತಿರುಗುಬಾಣವಾಯ್ತೆ ಮೈಸೂರು ಚಲೋ?
ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷವನ್ನು ಬಲಹೀನಗೊಳಿಸುವ ಮಹದುದ್ದೇಶದಿಂದ ಆರಂಭವಾಗಿದ್ದ ಮುಡಾ ಪಾದಯಾತ್ರೆ, ಇದೀಗ ರಾಜ್ಯ ಬಿಜೆಪಿಗೇ ತಿರುಗುಬಾಣವಾಗಿದ್ದು, ಸ್ವತಃ ಬಿಜೆಪಿಯನ್ನೇ ದುರ್ಬಲಗೊಳಿಸುತ್ತಿದೆ? ಎಂಬ ಮಾತುಗಳಿಗಂತೂ ಈ ಬೆಳವಣಿಗೆ ಇಂಬು ನೀಡಿದೆ.;
ಮುಡಾ ನಿವೇಶನ ಹಂಚಿಕೆ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಡೆಸಿದ ಮೈಸೂರು ಪಾದಯಾತ್ರೆ ಅದರ ಗುರಿಯಾದ ಆಡಳಿತ ಪಕ್ಷವನ್ನು ಎಷ್ಟರಮಟ್ಟಿಗೆ ಎದೆಗುಂದಿಸಿದೆ ಎಂಬುದನ್ನು ಹೇಳಲಾಗದು. ಆದರೆ, ಸ್ವತಃ ಆಯೋಜಕರ ಮೇಲೆಯೇ ಯಾತ್ರೆ ಗಂಭೀರ ಅಡ್ಡ ಪರಿಣಾಮ ಬೀರಿರುವ ಸೂಚನೆಯಂತೂ ಸ್ಪಷ್ಟವಾಗುತ್ತಿದೆ.
ಪಾದಯಾತ್ರೆ ಘೋಷಣೆಯಾದಂದಿನಿಂದಲೇ ಮೈತ್ರಿ ಪಕ್ಷಗಳ ನಡುವೆಯಷ್ಟೇ ಅಲ್ಲದೆ ಸ್ವತಃ ಬಿಜೆಪಿಯ ಒಳಗೂ ಅತೃಪ್ತಿಯ ದನಿ ಜೋರಾಗಿಯೇ ಮೊಳಗತೊಡಗಿತ್ತು. ಒಂದು ಕಡೆ ಮಿತ್ರಪಕ್ಷ ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರೇ "ಬಹಿರಂಗವಾಗಿ ಪಾದಯಾತ್ರೆ ಯಾರು ಮಾಡುತ್ತಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಮಂಡ್ಯ-ಮೈಸೂರು ಭಾಗದಲ್ಲಿ ಪ್ರಬಲವಾಗಿರುವುದು ನಮ್ಮ ಪಕ್ಷ, ನಮ್ಮ ಜೊತೆ ಮಾತುಕತೆಯನ್ನೇ ಮಾಡದೆ ಪಾದಯಾತ್ರೆ ಘೋಷಣೆ ಮಾಡಿದ್ದಾರೆ.. ಹಾಗಾಗಿ ಅದಕ್ಕೆ ನಮ್ಮ ಬೆಂಬಲವಿಲ್ಲ" ಎಂದು ಹೇಳುವ ಮೂಲಕ ಮೊದಲ ಪ್ರತಿರೋಧದ ದನಿ ಎತ್ತಿದ್ದರು.
ಅದರೊಂದಿಗೆ ಬಿಜೆಪಿಯ ಭಿನ್ನಮತೀಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ ಅವರುಗಳು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಬೆಂಗಳೂರು ನಿವಾಸದಲ್ಲಿ ಸಭೆ ನಡೆಸಿದ್ದರು. ಆ ಸಭೆಯ ಬೆನ್ನಲ್ಲೇ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಮುಡಾ ಪಾದಯಾತ್ರೆಗೆ ಪರ್ಯಾಯವಾಗಿ ಕೂಡಲಸಂಗಮದಿಂದ ಬಳ್ಳಾರಿವರೆಗೆ ವಾಲ್ಮೀಕಿ ನಿಗಮ ಹಗರಣವನ್ನು ಮುಖ್ಯವಾಗಿ ಇಟ್ಟುಕೊಂಡು ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದರು.
ಅಷ್ಟೇ ಅಲ್ಲ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅವರ ತಂದೆ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಆರಂಭವಾಗಿದ್ದ ಮುಡಾ ಪಾದಯಾತ್ರೆಯನ್ನು “ಭ್ರಷ್ಟರೇ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಪಾದಯಾತ್ರೆ. ಇದು ಸಿದ್ದರಾಮಯ್ಯ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಲು ಡಿಕೆ ಶಿವಕುಮಾರ್ ಜೊತೆ ಕೈಜೋಡಿಸಿ ನಡೆಸುತ್ತಿರುವ ಡೋಂಗಿ ಹೋರಾಟ. ಹಾಗಾಗಿ ಅದಕ್ಕೆ ನಮ್ಮ ಬೆಂಬಲವಿಲ್ಲ” ಎಂದು ಯತ್ನಾಳ್ ಕಿಡಿ ಕಾರಿದ್ದರು. ಜೊತೆಗೆ, “ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಯಡಿಯೂರಪ್ಪ ಪಕ್ಷದ ವೇದಿಕೆಗಳಿಗೆ ಬರಲೇಬಾರದು. ಅವರು ಬರುವ ಕಡೆ ನಾವು ಹೋಗುವುದಿಲ್ಲ” ಎಂದೂ ಯತ್ನಾಳ್ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು.
ಪಾದಯಾತ್ರೆ ಹೈಜಾಕ್ ಮಾಡಿದ ವಾಗ್ಯುದ್ಧ
ಬೆಂಗಳೂರಿನಿಂದ ಆರಂಭವಾಗಿ ಮೈಸೂರು ತಲುಪುವವರೆಗೆ ಪಾದಯಾತ್ರೆಯ ಉದ್ದಕ್ಕೂ ಪ್ರಮುಖವಾಗಿ ಚರ್ಚೆಯಾಗಬೇಕಿದ್ದ ಮುಡಾ, ವಾಲ್ಮೀಕಿ ಹಗರಣಗಳಿಗಿಂತ ವಾಸ್ತವವಾಗಿ, ಬಿಜೆಪಿಯ ಈ ಒಳಬೇಗುದಿ, ಮತ್ತು ಎಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ನಡುವಿನ ವೈಯಕ್ತಿಕ ನಿಂದನೆ ಮತ್ತು ಕಾಲೆಳೆಯುವ ಆಟಗಳೇ ಹೆಚ್ಚು ಸದ್ದು ಮಾಡಿದವು. ಒಂದು ಹಂತದಲ್ಲಿ ಎಚ್‌ಡಿಕೆ ವರ್ಸಸ್ ಡಿಕೆಶಿ ಅವರ ನಡುವಿನ ವಾಗ್ಯುದ್ಧವೇ ಇಡೀ ಪಾದಯಾತ್ರೆಯನ್ನು ಹೈಜಾಕ್ ಮಾಡಿತು.
ಹಾಗೇ, ಯಾತ್ರೆಯ ಪ್ರಚಾರ ಹೋರ್ಡಿಂಗ್ಸ್, ಬ್ಯಾನರುಗಳಲ್ಲಿ, ಕಾರ್ಯಕರ್ತರ ಘೋಷಣೆಗಳಲ್ಲಿ ಆಡಳಿತರೂಢ ಕಾಂಗ್ರೆಸ್ಸಿನ ಅಕ್ರಮಗಳ ಬದಲಾಗಿ, ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವಿನ ವ್ಯಕ್ತಿಗತ ಪ್ರತಿಷ್ಠೆ ಪ್ರದರ್ಶನದ ಪೋಸ್ಟರ್ ವಾರ್ ಹೆಚ್ಚು ಗಮನ ಸೆಳೆಯಿತು. ಅದರಲ್ಲೂ ಮಂಡ್ಯ ಸೀಮೆಯಲ್ಲಿ ತಮ್ಮ ಹಿಡಿತ ಕೈತಪ್ಪಿಹೋಗಬಹುದು ಎಂಬ ಆತಂಕದಲ್ಲಿ ಜೆಡಿಎಸ್ ಈ ಯಾತ್ರೆಯನ್ನು ಪಕ್ಷದ ಮತ್ತು ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕಾಗಿಯೇ ಹೆಚ್ಚು ಬಳಸಿಕೊಂಡಿತು. ಅದೇ ಹೊತ್ತಿಗೆ ತಮ್ಮ ನೇತೃತ್ವದ ಮೊಟ್ಟಮೊದಲ ಪಾದಯಾತ್ರೆಯಾದ ಇದರ ಪೂರ್ಣ ಕ್ರೆಡಿಟ್ ಪಡೆಯುವ ಪ್ರಯತ್ನದಲ್ಲಿ ಬಿ ವೈ ವಿಜಯೇಂದ್ರ ಕೂಡ, ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ತಮ್ಮ ಪಕ್ಷದ ಹಿರಿಯ ನಾಯಕರನ್ನೆಲ್ಲಾ ಬದಿಗೊತ್ತಿ ವಿಜೃಂಭಿಸಿದರು.
ಈ ಪ್ರಚಾರ ಪೈಪೋಟಿ ಕೂಡ ಪಾದಯಾತ್ರೆಯ ಉದ್ದಕ್ಕೂ ಆಂತರಿಕವಾಗಿ ಪಕ್ಷದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಯಿತು.
ಇಂತಹ ಹಲವು ಅಸಮಾಧಾನ, ಪ್ರತಿರೋಧದ ಪರಿಣಾಮವಾಗಿ ಬಿಜೆಪಿಯ ಹಲವು ಹಿರಿಯ ನಾಯಕರು ಯಾತ್ರೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿತ್ತು. ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲವು ನಾಯಕರು ಅದನ್ನು ಬಹಿರಂಗವಾಗಿಯೇ ಘೋಷಿಸಿದ್ದರು ಕೂಡ.
ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಯತ್ನಾಳ್ ಮತ್ತು ಜಾರಕಿಹೊಳಿ ಬಣ, ಬೆಳಗಾವಿ ಜಿಲ್ಲೆಯ ಖಾಸಗಿ ರೆಸಾರ್ಟ್ ಒಂದರಲ್ಲಿ ಭಾನುವಾರ ರಹಸ್ಯ ಸಭೆ ನಡೆಸಿದೆ.
12 ಅತೃಪ್ತರ ರಹಸ್ಯ ಸಭೆ
ಬಸನಗೌಡ ಪಾಟೀಳ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅಣ್ಣಾ ಸಾಹೇಬ್ ಜೊಲ್ಲೆ, ಜಿ ಎಂ ಸಿದ್ದೇಶ್ವರ, ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಬಿ ಪಿ ಹರೀಶ್ ಮತ್ತಿತರ 12 ಮಂದಿ ಪ್ರಮುಖರು ಈ ಸಭೆಯಲ್ಲಿದ್ದರು. ಅಲ್ಲದೆ ಅವರೊಂದಿಗೆ ಒಂದು ಕಾಲದ ಯಡಿಯೂರಪ್ಪ ಕುಟುಂಬದ ಪರಮಾಪ್ತ, ಅವರ ಮಾಜಿ ಆಪ್ತ ಸಹಾಯಕರಾಗಿದ್ದ, ಸದ್ಯ ಜೆಡಿಎಸ್ ನೊಂದಿಗೆ ಗುರುತಿಸಿಕೊಂಡಿರುವ ಎನ್ ಆರ್ ಸಂತೋಷ್ ಕೂಡ ಭಾಗಿಯಾಗಿದ್ದರು.
ʼಸಭೆಯಲ್ಲಿ ಪ್ರಮುಖವಾಗಿ ಬಿ ವೈ ವಿಜಯೇಂದ್ರ ಮತ್ತು ಬಿ ಎಸ್ ಯಡಿಯೂರಪ್ಪ ಅವರ ಸರ್ವಾಧಿಕಾರಿ ಧೋರಣೆ ಮತ್ತು ಹೊಂದಾಣಿಕೆ ರಾಜಕಾರಣದಿಂದಾಗಿ ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತಿರುವುದನ್ನು ಪಕ್ಷದ ದೆಹಲಿ ವರಿಷ್ಠರ ಗಮನಕ್ಕೆ ತರಲು ಮುಖಂಡರು ನಿರ್ಧರಿಸಿದ್ದಾರೆʼ ಎನ್ನಲಾಗಿದೆ. "ಮುಡಾ ಪಾದಯಾತ್ರೆಯುದ್ದಕ್ಕೂ ಕಾಂಗ್ರೆಸ್ ಸರ್ಕಾರದ ಹಗರಣಗಳ ಚರ್ಚೆಯ ಬದಲಾಗಿ ವಿಜಯೇಂದ್ರ ಅವರನ್ನು ವಿಜೃಂಭಿಸಲಾಗಿದೆ. ದೆಹಲಿ ವರಿಷ್ಠರ ಒತ್ತಾಯಕ್ಕೆ ಮಣಿದು ಆ ಯಾತ್ರೆ ನಡೆಸಲಾಗಿದೆ. ಆದರೆ, ಒಳ ಒಪ್ಪಂದ ಮಾಡಿಕೊಂಡು ಅತ್ತ ದೆಹಲಿ ವರಿಷ್ಠರಿಗೂ, ಇತ್ತ ರಾಜ್ಯದ ಜನತೆಗೂ ಕಣ್ಣಿಗೆ ಮಣ್ಣೆರಚಲಾಗಿದೆʼ ಎಂಬ ಅಂಶವನ್ನು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗಿದೆ" ಎಂದು ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸಂಸದರೊಬ್ಬರು ʼದ ಫೆಡರಲ್ ಕರ್ನಾಟಕʼ ವಿವರ ನೀಡಿದರು.
ಭಿನ್ನಮತೀಯರ ಸಭೆಯಲ್ಲ!
ಆದರೆ, ಮತ್ತೊಂದು ಕಡೆ ಭಿನ್ನಮತೀಯರ ಸಭೆ ಎಂಬ ಹೇಳಿಕೆಗಳಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರತಿಕ್ರಿಯಿಸಿ, "ಇದು ಅತೃಪ್ತರ ಅಥವಾ ಭಿನ್ನಮತೀಯರ ಸಭೆ ಅಲ್ಲ. ರಾಜ್ಯದಲ್ಲಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾವು ಸಭೆ ನಡೆಸಿದ್ದೇವೆ. ನಮ್ಮಲ್ಲಿನ ದೋಷ ಸರಿಪಡಿಸಿಕೊಂಡು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚಿಸಲು 12 ಮಂದಿ ನಾಯಕರು ಸೇರಿ ಚರ್ಚಿಸಿದ್ದೇವೆ. ಇದು ಬಿಜೆಪಿ ಬಲವರ್ಧನೆಗಾಗಿಯೇ ನಡೆದ ಸಭೆ, ಪರಿಶಿಷ್ಟರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದು, ವರಿಷ್ಠರ ಸೂಚನೆಯಂತೆ ಪಾದಯಾತ್ರೆ ಘೋಷಿಸುತ್ತೇವೆ” ಎಂದು ಸಮಜಾಯಿಷಿ ನೀಡಿದ್ದಾರೆ.
ಆದರೆ, ಪಕ್ಷದ ಬಲವರ್ಧನೆಯೇ ಚರ್ಚೆಯ ವಿಷಯವಾಗಿದ್ದರೆ ಪಕ್ಷದ ಅಧಿಕೃತ ರಾಜ್ಯಾಧ್ಯಕ್ಷರು, ಪ್ರತಿಪಕ್ಷ ನಾಯಕರು, ಕಾರ್ಯಕಾರಿಣಿ ಸದಸ್ಯರು, ಮಾಜಿ ಮುಖ್ಯಮಂತ್ರಿಗಳನ್ನೆಲ್ಲಾ ಹೊರಗಿಟ್ಟು ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರ ರೆಸಾರ್ಟ್ನಲ್ಲಿ ಬೇರೆ ಬೇರೆ ಸಂದರ್ಭದಲ್ಲಿ, ಬೇರೆ ಬೇರೆ ಕಾರಣಕ್ಕೆ ರಾಜ್ಯ ಬಿಜೆಪಿಯಲ್ಲಿ ಅವಕಾಶವಂಚಿತರಾಗಿರುವ ಈ ಹನ್ನೆರಡು ಮಂದಿ ನಾಯಕರು ಯಾಕೆ ಚರ್ಚಿಸಿದರು ? ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಅಲ್ಲದೆ, ಈ ನಾಯಕರಲ್ಲಿ ಬಹುತೇಕರು ವಿಜಯೇಂದ್ರ ನೇತೃತ್ವದ ಮುಡಾ ಪಾದಯಾತೆಯಿಂದ ಅಂತರ ಕಾಯ್ದುಕೊಂಡವರೇ ಎಂಬುದು ಗಮನಾರ್ಹ.
ಒಟ್ಟಾರೆ, ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷವನ್ನು ಬಲಹೀನಗೊಳಿಸುವ ಮಹದುದ್ದೇಶದಿಂದ ಆರಂಭವಾಗಿದ್ದ ಮುಡಾ ಪಾದಯಾತ್ರೆ, ಇದೀಗ ರಾಜ್ಯ ಬಿಜೆಪಿಗೇ ತಿರುಗುಬಾಣವಾಗಿದ್ದು, ಸ್ವತಃ ಬಿಜೆಪಿಯನ್ನೇ ದುರ್ಬಲಗೊಳಿಸುತ್ತಿದೆ? ಎಂಬ ಮಾತುಗಳಿಗಂತೂ ಈ ಬೆಳವಣಿಗೆ ಇಂಬು ನೀಡಿದೆ.