ಜಾತಿ ಸಮೀಕ್ಷೆಯಲ್ಲಿ 'ಕ್ರಿಶ್ಚಿಯನ್' ಸೇರ್ಪಡೆಗೆ ವಿರೋಧ; ದಲಿತ ಸಂಘಟನೆಗಳಿಂದ ಹಲವು ನಿರ್ಣಯಗಳು

ಬೆಂಗಳೂರಿನ ಶಾಸಕರ ಭವನದಲ್ಲಿ ಗುರುವಾರ, ಪರಿಶಿಷ್ಟ ಜಾತಿಗಳ ಮೀಸಲಾತಿ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆದ ದಲಿತ ಮುಖಂಡರು ಮತ್ತು ಚಿಂತಕರ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆಸಲಾಯಿತು.;

Update: 2025-09-18 11:18 GMT

ರಾಜ್ಯ ಸರ್ಕಾರವು ನಡೆಸಲು ಉದ್ದೇಶಿಸಿರುವ "ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 2025" ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 'ಕ್ರಿಶ್ಚಿಯನ್' ಧರ್ಮವನ್ನು ಸೇರಿಸಿರುವುದನ್ನು ತೀವ್ರವಾಗಿ ವಿರೋಧಿಸಿರುವ ದಲಿತ ಸಂಘಟನೆಗಳು ಗುರುವಾರ ಬೆಂಗಳೂರಿನಲ್ಲಿ ದುಂಡುಮೇಜಿನ ಸಭೆಯನ್ನು ನಡೆಸಿತು. ಬಳಿಕ ಸರ್ಕಾರದ ವಿರುದ್ಧ ಹೋರಾಟಕ್ಕೆ ಹಲವು ನಿರ್ಣಯಗಳನ್ನು ಕೈಗೊಂಡಿತು.

ಬೆಂಗಳೂರಿನ ಶಾಸಕರ ಭವನದಲ್ಲಿ ಗುರುವಾರ, ಪರಿಶಿಷ್ಟ ಜಾತಿಗಳ ಮೀಸಲಾತಿ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆದ ದಲಿತ ಮುಖಂಡರು ಮತ್ತು ಚಿಂತಕರ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆಸಲಾಯಿತು. ಸರ್ಕಾರದ ನಿಲುವಿನ ವಿರುದ್ಧ ಸಂಘಟಿತ ಹೋರಾಟಕ್ಕೆ ಮುಂದಾಗಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು

1.ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು : ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯೊಂದಿಗೆ ಕ್ರಿಶ್ಚಿಯನ್ ಧರ್ಮವನ್ನು ಸೇರಿಸುವ ಮೂಲಕ, ದಲಿತರಿಗೆ ಸಂವಿಧಾನಬದ್ಧವಾಗಿ ಸಿಕ್ಕಿರುವ ಮೀಸಲಾತಿಯನ್ನು ಕಸಿಯುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ ಮುಖಂಡರು, ಇದನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆ, ಸಭೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಲು ಸರ್ವಾನುಮತದಿಂದ ನಿರ್ಧರಿಸಿದರು.

2. ರಾಜ್ಯಪಾಲರಿಗೆ ದೂರು: ಈ ಅಸಾಂವಿಧಾನಿಕ ಕ್ರಮದ ಬಗ್ಗೆ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರ ಗಮನ ಸೆಳೆಯಲು ನಿರ್ಧರಿಸಲಾಯಿತು. ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿಯಾಗಿ, ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಪರಿಶಿಷ್ಟ ಜಾತಿಗಳ ಹಿತಾಸಕ್ತಿ ಕಾಪಾಡುವಂತೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

3. ಕಾನೂನು ಹೋರಾಟದ ಹಾದಿ: ಸರ್ಕಾರದ ಈ ಕ್ರಮವು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟ ಸಭೆಯು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿತು. ಈ ಸಂಬಂಧ ಹಿರಿಯ ವಕೀಲರೊಂದಿಗೆ ಚರ್ಚಿಸಿ, ಶೀಘ್ರದಲ್ಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸುವ ಮೂಲಕ ಕಾನೂನಾತ್ಮಕ ಹೋರಾಟಕ್ಕೆ ಚಾಲನೆ ನೀಡಲು ಒಮ್ಮತ ಸೂಚಿಸಲಾಯಿತು.

4. ಜಾಗೃತಿ ಅಭಿಯಾನ: "ಈ ಕ್ರಮವು ಕೇವಲ ಮೀಸಲಾತಿ ಹಂಚಿಕೆಯ ವಿಷಯವಲ್ಲ, ಬದಲಾಗಿ ಇದು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿರುವ ದಲಿತ ಸಮುದಾಯವನ್ನು ಒಡೆಯುವ ವ್ಯವಸ್ಥಿತ ಪ್ರಯತ್ನ," ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಈ ಹುನ್ನಾರದ ಬಗ್ಗೆ ಸಾರ್ವಜನಿಕರಲ್ಲಿ, ವಿಶೇಷವಾಗಿ ದಲಿತ ಸಮುದಾಯದಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು. 

Tags:    

Similar News