ಹಳೆ ತೆರಿಗೆ ಸಂಪೂರ್ಣ ಮನ್ನಾ; ಜಿಎಸ್‌ಟಿ ನೋಟಿಸ್‌ಗೆ ಬೆದರಿದ್ದ ಸಣ್ಣ ವ್ಯಾಪಾರಿಗಳಿಗೆ ಸಿಎಂ ಅಭಯ
ವಾಣಿಜ್ಯ ತೆರಿಗೆ ಇಲಾಖೆಯು ನೀಡಿದ್ದ ಜಿಎಸ್‌ಟಿ ನೋಟಿಸ್‌ಗಳ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿವಿಧ ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.;
ಯುಪಿಐ ವಹಿವಾಟು ಆಧರಿಸಿ ರಾಜ್ಯದ ಸಾವಿರಾರು ಸಣ್ಣ ವ್ಯಾಪಾರಿಗಳಿಗೆ ನೀಡಲಾಗಿದ್ದ ಜಿಎಸ್‌ಟಿ ನೋಟಿಸ್‌ಗಳಿಂದ ಉಂಟಾಗಿದ್ದ ಗೊಂದಲ ಮತ್ತು ಆತಂಕಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ನೋಟಿಸ್ ನೀಡಲಾಗಿರುವ ಹಳೆಯ ತೆರಿಗೆ ಬಾಕಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು, ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದ ಹಿನ್ನೆಲೆಯಲ್ಲಿ, ವ್ಯಾಪಾರಿ ಸಂಘಟನೆಗಳು ತಮ್ಮ ಎಲ್ಲಾ ಪ್ರತಿಭಟನೆಗಳನ್ನು ಹಿಂಪಡೆದಿವೆ.
ವಾಣಿಜ್ಯ ತೆರಿಗೆ ಇಲಾಖೆಯು ನೀಡಿದ್ದ ಜಿಎಸ್‌ಟಿ ನೋಟಿಸ್‌ಗಳ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿವಿಧ ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ವ್ಯಾಪಾರಿಗಳ ಅಹವಾಲು ಮತ್ತು ಸರ್ಕಾರದ ಸ್ಪಂದನೆ
ಸಭೆಯಲ್ಲಿ ಮಾತನಾಡಿದ ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳು, "ಸಣ್ಣ ವ್ಯಾಪಾರಿಗಳಲ್ಲಿ ಜಿಎಸ್‌ಟಿ ನೋಟಿಸ್ ಕುರಿತು ತೀವ್ರ ಗೊಂದಲವಿದೆ. ವೈಯಕ್ತಿಕ ಮತ್ತು ಸಾಲದ ವಹಿವಾಟುಗಳನ್ನು ಸಹ ವ್ಯಾಪಾರ ವಹಿವಾಟು ಎಂದು ಪರಿಗಣಿಸಲಾಗಿದೆ. ಜಿಎಸ್‌ಟಿ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಈ ಸಮಸ್ಯೆ ಉಂಟಾಗಿದೆ. ಆದ್ದರಿಂದ, ಒಂದು ಬಾರಿಗೆ ಹಳೆಯ ಬಾಕಿಯನ್ನು ಮನ್ನಾ ಮಾಡಿ, ಸಹಾಯವಾಣಿ ಆರಂಭಿಸಬೇಕು," ಎಂದು ಮನವಿ ಮಾಡಿದರು.
ವ್ಯಾಪಾರಿಗಳ ಅಹವಾಲಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ವ್ಯಾಪಾರಿಗಳಿಗೆ ತೊಂದರೆ ನೀಡುವುದು ಸರ್ಕಾರದ ಉದ್ದೇಶವಲ್ಲ. ಸರ್ಕಾರ ಸಣ್ಣ ವ್ಯಾಪಾರಿಗಳ ಪರವಾಗಿದೆ. ಹಾಲು, ತರಕಾರಿ, ಹಣ್ಣು, ಮಾಂಸದಂತಹ ಅಗತ್ಯ ವಸ್ತುಗಳ ವ್ಯಾಪಾರಿಗಳಿಗೆ ತೆರಿಗೆ ವಿನಾಯಿತಿ ಇದ್ದು, ಅವರಿಗೆ ನೋಟಿಸ್ ನೀಡಿದ್ದರೂ ತೆರಿಗೆ ವಸೂಲಿ ಮಾಡುವುದಿಲ್ಲ. ಆದರೆ, ಕಾನೂನುಬದ್ಧವಾಗಿ ತೆರಿಗೆ ಪಾವತಿಸಬೇಕಾದವರು ಪಾವತಿಸಬೇಕು," ಎಂದು ಸ್ಪಷ್ಟಪಡಿಸಿದರು.
ಬಾಕಿ ಮನ್ನಾ, ನೋಂದಣಿ ಕಡ್ಡಾಯ
"ನೋಟಿಸ್ ನೀಡಲಾಗಿರುವ ಹಳೆಯ ತೆರಿಗೆ ಬಾಕಿಯನ್ನು ಸರ್ಕಾರ ವಸೂಲು ಮಾಡುವುದಿಲ್ಲ, ಅದನ್ನು ಮನ್ನಾ ಮಾಡಲಾಗುವುದು. ಆದರೆ, ಅವರೆಲ್ಲರೂ ಕಡ್ಡಾಯವಾಗಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕು. ನಿಮ್ಮ ವ್ಯಾಪಾರ ವಹಿವಾಟನ್ನು ಕಾನೂನುಬದ್ಧವಾಗಿ ನಡೆಸಲು ಸರ್ಕಾರ ಎಲ್ಲಾ ನೆರವು ನೀಡಲಿದೆ," ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ರಾಜ್ಯದಲ್ಲಿ ಕಳೆದ 2-3 ವರ್ಷಗಳಲ್ಲಿ ಯುಪಿಐ ಅಡಿ 40 ಲಕ್ಷಕ್ಕೂ ಅಧಿಕ ವಹಿವಾಟು ನಡೆಸಿದ ಕೇವಲ 9 ಸಾವಿರ ವ್ಯಾಪಾರಿಗಳಿಗೆ 18 ಸಾವಿರ ನೋಟಿಸ್ ನೀಡಲಾಗಿದೆ. ದೇಶದಲ್ಲೇ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಪಾರದರ್ಶಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಸಿಎಂ ತಿಳಿಸಿದರು.
ಸಭೆಯ ತೀರ್ಮಾನದಿಂದ ಸಂತುಷ್ಟರಾದ ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳು, ಬಂದ್ ಸೇರಿದಂತೆ ಎಲ್ಲಾ ರೀತಿಯ ಪ್ರತಿಭಟನೆಗಳನ್ನು ಕೈಬಿಡುವುದಾಗಿ ಸ್ಪಷ್ಟಪಡಿಸಿದರು.