Old Pension Scheme-OPS | ಮರುಜಾರಿಗೆ ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು ನಿರ್ಧಾರ
2006ರ ಬಳಿಕ ಸರ್ಕಾರಿ ನೌಕರಿಗೆ ನೇಮಕವಾದ ಅನುದಾನಿತ ಶಿಕ್ಷಣ ಸಂಸ್ಥೆಗಳ ಎಲ್ಲ ನೌಕರರಿಗೂ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಹಳೆಯ ಪಿಂಚಣಿ ವಂಚಿತ ನೌಕರರ ವೇದಿಕೆಯ ಅಧ್ಯಕ್ಷರ ನೇತೃತ್ವದಲ್ಲಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು;
ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೆ ಒತ್ತಾಯಿಸಿ ಹೋರಾಟ ನಡೆಸಲು ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.
ಒಕ್ಕೂಟದ ಅಧ್ಯಕ್ಷ ಎಂ.ಪಿ.ಕರಿಬಸಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಅನುದಾನಿತ ಶಾಲಾ- ಕಾಲೇಜು ನೌಕರರ ಸಭೆಯಲ್ಲಿ ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ಹೋರಾಟ ಆರಂಭಿಸಲು ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ.
2006ರ ಬಳಿಕ ಸರ್ಕಾರಿ ನೌಕರಿಗೆ ನೇಮಕವಾದ ಅನುದಾನಿತ ಶಿಕ್ಷಣ ಸಂಸ್ಥೆಗಳ ಎಲ್ಲ ನೌಕರರಿಗೂ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಹಳೆಯ ಪಿಂಚಣಿ ವಂಚಿತ ನೌಕರರ ವೇದಿಕೆಯ ಅಧ್ಯಕ್ಷ ಹೆಬ್ಬಾರ ನೇತೃತ್ವದಲ್ಲಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಮುಖಂಡರಾದ ಗೋವಿಂದೇಗೌಡ, ಚಂದ್ರೇಗೌಡ, ಶ್ರೀಕಂಠಯ್ಯ, ರೇವಣ್ಣ, ಮಾಲಿ ಪಾಟೀಲ, ಹರೀಶ್ ಉಪಸ್ಥಿತರಿದ್ದರು.
ಹೊಸ ಪಿಂಚಣಿ ನೀತಿ(ಎನ್‌ಪಿಎಸ್)ಗೆ ವಿರೋಧ
2004 ಜ.1ರಿಂದ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್)ಯಡಿ ನೌಕರರ ಮೂಲ ವೇತನದಲ್ಲಿ ಶೇ 10 ರಷ್ಟು ಕಡಿತ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಶೇ 14 ರಷ್ಟು ಪಾಲು ನೀಡಲಿದೆ. ಪಿಂಚಣಿ ಹಣವನ್ನು ಸಾರ್ವಜನಿಕ ಉದ್ದಿಮೆಯಲ್ಲಿ ತೊಡಗಿಸಲು ಸರ್ಕಾರ ನಿರ್ಧರಿಸಿತ್ತು. ನಿವೃತ್ತಿ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹಣದ ಏರಿಳಿತ ನೋಡಿಕೊಂಡು ಪಿಂಚಣಿ ಮೊತ್ತ ನಿರ್ಧರಿಸುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ಇದಕ್ಕೆ ಸರ್ಕಾರಿ ನೌಕರರ ವಲಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಯುಪಿಎಸ್ ಘೋಷಣೆ
ಸರ್ಕಾರಿ ನೌಕರರ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2023 ಏಪ್ರಿಲ್ ತಿಂಗಳಲ್ಲಿ ಎನ್‌ಪಿಎಸ್ ಸಾಧಕ-ಭಾದಕಗಳ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಿತ್ತು. ಆ ಸಮಿತಿ ನೀಡಿದ ವರದಿ ಆಧರಿಸಿ ಈಗ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ(ಯುಪಿಎಸ್) ಜಾರಿಗೆ ತಂದಿದೆ. ಎನ್ಪಿಎಸ್ ವಿಸ್ತರಣೆಯೇ ಯುಪಿಎಸ್. ಇದರಲ್ಲಿ ಬೇರೆ ವಿಶೇಷವಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.