ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ, ಈಗ ಸಿದ್ದರಾಮಯ್ಯ ಸಿಎಂ: ಜಮೀರ್ ಅಹ್ಮದ್

Update: 2024-07-01 06:19 GMT

ʻʻಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ಈಗ ಸಿದ್ದರಾಮಯ್ಯ ಸಿಎಂ. ಹೀಗಾಗಿ, ಸಿಎಂ ಖುರ್ಚಿ ಖಾಲಿ ಎಲ್ಲಿದೆ? ಖಾಲಿ ಇರುವಾಗ ಚರ್ಚೆ ಮಾಡಬೇಕು. ಖಾಲಿ ಇಲ್ಲದಿರುವಾಗ ಚರ್ಚೆ ಅಗತ್ಯವಿಲ್ಲʼʼ ಎಂದು ಸಿಎಂ ಬದಲಾವಣೆ ವಿಚಾರಕ್ಕೆ ಸಚಿವ ಜಮೀರ್​ ಅಹಮದ್ ಖಾನ್​ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯ ವಿಚಾರವಾಗಿ ಭಾನುವಾರ ಮಂಡ್ಯದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʻʻಸ್ವಾಮೀಜಿಯವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅವರ ಅಭಿಪ್ರಾಯ ತಪ್ಪು ಅನ್ನೋಕೆ ಆಗಲ್ಲ. ಈಗಾಗಲೇ ಹೈಕಮಾಂಡ್ ಸಿದ್ದರಾಮಯ್ಯ ಸಿಎಂ ಎಂದು ತೀರ್ಮಾನಿಸಿ ಆಗಿದೆʼʼ ಎಂದು ಹೇಳಿದರು.

ʻʻಒಕ್ಕಲಿಗರು, ಲಿಂಗಾಯತರು, ದಲಿತರು ಸ್ಥಾನಮಾನ ಕೇಳುವುದರಲ್ಲಿ ತಪ್ಪೇನಿದೆ? ಆದರೆ ಈ ವಿಚಾರದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಹೈಕಮಾಂಡ್ ಹಾಕಿದ ಗೆರೆಯನ್ನು ನಾವ್ಯಾರೂ ದಾಟುವುದಿಲ್ಲ. ಇದು ನಮ್ಮ ಪಕ್ಷದ ನಿಯಮʼʼ ಎಂದರು.

ಸಿಎಂ ಬದಲಾವಣೆ ವಿಚಾರವಾಗಿ ಮಾತಾಡದಂತೆ ಸಚಿವ, ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರ ಸೂಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ʻʻಯಾರಿಗೂ ನೀವೇನೂ ಹೇಳಬೇಡಿ ಎಂದು ಪ್ರಜಾಪ್ರಭುತ್ವದಲ್ಲಿ ಹೇಳಲು ಆಗಲ್ಲ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದನ್ನು ತೀರ್ಮಾನಿಸಲು ನಮ್ಮ ಪಕ್ಷದಲ್ಲಿ ನಾಯಕರಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡಲಿದೆʼʼ ಎಂದು ಹೇಳಿದ್ದಾರೆ.

ʻʻಒಬ್ಬ ಮಗ ಹೆಚ್ಚು ಮಾತನಾಡುತ್ತಾನೆಂದು ಮನೆಯಿಂದ ಓಡಿಸಲು ಆಗಲ್ಲ‌‌. ಹಾಗೆಯೇ ಕೆಲ ಸಚಿವರು ಕೂಡ ಮಗನ ರೀತಿ ಮಾತನಾಡುತ್ತಿದ್ದಾರೆ. ಕೆಲ ಸನ್ನಿವೇಶಗಳಲ್ಲಿ ಹೀಗೆ ಆಗುವುದು ಸಾಮಾನ್ಯ. ಇನ್ನು ಸ್ವಾಮೀಜಿಯಿಂದ ಡಿಕೆಶಿ ಹೇಳಿಸಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ವಿಡಿಯೋ ನೋಡಿಕೊಂಡು ಮಾತನಾಡಕ್ಕಾಗುತ್ತಾ?, ಸಿಎಂ ಈ ಬಗ್ಗೆ ಹೇಳಿರುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಸಿಎಂ ನಮ್ಮ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದರೆ ಹೇಳಬಹುದಿತ್ತು. ಈಗ ಸುಖಾಸುಮ್ಮನೆ ಹೇಳಲು ಆಗಲ್ಲ. ಪರಮೇಶ್ವರ್ ಅವರ ಜೊತೆ ಮಾತನಾಡಿರುವುದು ನನಗೆ ಹೇಗೆ ಗೊತ್ತಾಗುತ್ತದೆ? ರೈತರ ಸಮಸ್ಯೆ ಆಲಿಸುತ್ತಾ ರಾಜ್ಯ ಸುತ್ತುತ್ತಿದ್ದೇನೆ. ರಾಜಕಾರಣಕ್ಕಿಂತ ರೈತರ ಸಮಸ್ಯೆ ಬಗೆಹರಿಸುವುದು ನನಗೆ ಮುಖ್ಯʼʼ ಎಂದರು.

Tags:    

Similar News