Caste Census | ಜಾತಿಗಣತಿ ಜಾರಿಗೆ ಪ್ರಬಲ ಸಮುದಾಯದ ವಿರೋಧ; ಪ್ರತಿಹೋರಾಟಕ್ಕೆ ಶೋಷಿತ ಸಮುದಾಯಗಳ ಸಿದ್ಧತೆ
ಜಾತಿ ಗಣತಿ ವರದಿ ಮಂಡನೆ ಬೆನ್ನಲ್ಲೇ ಪ್ರಭಲ ಸಮುದಾಯಗಳ ವಿರೋಧ ವ್ಯಕ್ತವಾಗಿದ್ದು, ಪ್ರಬಲ ಸಮುದಾಯದವರು ಪ್ರತಿಭಟನೆ ನಡೆಸಿದರೆ, ತಾವು ಪ್ರತಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂಬಂದ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಸಭೆ ನಡೆಸಿದೆ.;
ಜಾತಿ ಗಣತಿ ವರದಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿ ನಾಳೆ ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಒಳಗಾಗುವ ನಡುವೆಯೇ ಒಕ್ಕಲಿಗ ಮತ್ತು ಲಿಂಗಾಯತ ಸಂಘಟನೆಗಳು ಅದನ್ನು ವಿರೋಧಿಸಿ ಸಭೆ ನಡೆಸಿ ಹೋರಾಟ ನಡೆಸುವ ಎಚ್ಚರಿಕೆ ನೀಡಿವೆ. ಆದರೆ, ವರದಿ ಜಾರಿಯಾಗಬೇಕೆಂದು ಒತ್ತಾಯಿಸಿ ಹಿಂದುಳಿದ ವರ್ಗಗಳ ನಾಯಕರು ಮತ್ತು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಭೆ ಪದಾಧಿಕಾರಿಗಳು ಪ್ರತ್ಯೇಕ ಸಭೆಗಳನ್ನು ನಡೆಸಿ ಪ್ರತಿಹೋರಾಟದ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಕುರುಬರ ಸಂಘದ ಕಚೇರಿಯಲ್ಲಿ ಸಭೆ ನಡೆಸಿದ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಇತರ ಸಮುದಾಯದ ಮುಖಂಡರ ಜತೆ ಸೇರಿ ಜಾತಿಗಣತಿ ವರದಿ ಜಾರಿ ಸಂಬಂಧ ಚರ್ಚಿಸಿತು. ಜಾತಿ ಗಣತಿ ವರದಿ ಮಂಡನೆ ಬೆನ್ನಲ್ಲೇ ಪ್ರಭಲ ಸಮುದಾಯಗಳ ವಿರೋಧ ವ್ಯಕ್ತವಾಗಿದ್ದು, ಪ್ರಬಲ ಸಮುದಾಯದವರು ಪ್ರತಿಭಟನೆ ನಡೆಸಿದರೆ, ತಾವು ಪ್ರತಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಎಸ್‌ಸಿ, ಎಸ್‌ಟಿ, ಕುರುಬರು, ವಾಲ್ಮೀಕಿ, ಈಡಿಗ, ನಾಯಕರು, ಲಂಬಾಣಿ ಸೇರಿ 50ಕ್ಕೂ ಹೆಚ್ಚು ಸಮುದಾಯಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಅನಂತ್ ನಾಯಕ್, ಹಿಂದೂದರ ಹೊನ್ನಾಪುರ, ಎಂ ಸೋಮಶೇಖರ್, ಮಾಜಿ ಮೇಯರ್ ರಾಮಚಂದ್ರಪ್ಪ, ಮಹಾಂತೇಶ್ ಕೌಲಗಿ ಸೇರಿದಂತೆ ಹಲವರು ಭಾಗಿಯಾಗಿದ್ದರು
ಒಕ್ಕೂಟ ಮಹಾ ಸಂಚಾಲಕ ರಾಮಚಂದ್ರ ಹೇಳಿಕೆ ನೀಡಿ, "ಜಾತಿವಾರು ಸಮೀಕ್ಷೆ ಕಿಚ್ಚು ರಾಜ್ಯದಲ್ಲಿ ಪ್ರಬಲವಾಗಿ ಹರಡುತ್ತಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನ ವಿರೋಧ ಮಾಡುತ್ತಿದ್ದಾರೆ. ವಿರೋಧ ಮಾಡುತ್ತಿರುವವರು ಯಾವುದೇ ಆಯೋಗದ ವರದಿಯನ್ನ ನೀವು ಬೆಂಬಲಿಸಿಲ್ಲ.ಅದನ್ನು ವಿರೋಧಿಸುವ ಶಕ್ತಿ ನಮ್ಮ ಸಮುದಾಯಗಳಿಗೆ ಆಗ ಇರಲಿಲ್ಲ. ಆ ಶಕ್ತಿ ಇಲ್ಲದ ಹಿನ್ನೆಲೆಯಲ್ಲಿ ನಾವು ನೀವು ಹೇಳಿದಂತೆ ಕೇಳಿದ್ದೇವೆ. ಆದರೆ, ಈಗ ಹಾಗಲ್ಲ. ನಾವು ಸಂಘಟಿತರಾಗಿದ್ದೇವೆ. ವರದಿ ಜಾರಿ ಸಂಬಂಧ ನಾವೂ ಹೋರಾಟ ಮಡುತ್ತೇವೆ," ಎಂದು ಹೇಳಿದರು.
"ನಾವೂ ಹೋರಾಟ ಮಾಡುತ್ತೇವೆ. ನೀವು ವಿರೋಧ ಮಾಡುವ ಎರಡು ಪಟ್ಟು ಶಕ್ರಿಯುತರಾಗಿದ್ದೇವೆ. ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆಮಾಡಬೇಕು. ಅದರ ಸಾಧಕ-ಬಾಧಕ ಚರ್ಚೆಯಾಗಬೇಕು," ಎಂದರಲ್ಲದೆ, "ವರದಿಗೆ ಹತ್ತು ವರ್ಷ ಆಗಿದೆ ಅನ್ನುತ್ತಾರೆ. ಹೌದು ಹತ್ತು ವರ್ಷವಾಗಿದೆ, ಅದಕ್ಕೆ ನಮ್ಮ ತೆರಿಗೆ ಹಣ ಬಳಕೆ ಮಾಡಿದ್ದಾರೆ. ಅದು ಜಾರಿಗೆ ತರಬೇಕು," ಎಂದು ಒತ್ತಾಯಿಸಿದರು. "ನಾವು ಆರ್‌ಟಿಐ ಮೂಲಕ ಮಾಹಿತಿ ಪಡೆದಿದ್ದೇವೆ. ಈ ವರದಿ ಈಗ ಸಿದ್ದವಾಗಿ ನಾಲ್ಕೈದು ವರ್ಷಗಳಾಗಿದೆ ಎಂದರಲ್ಲದೆ, ಮೀಸಲಾತಿ ನೀಡಲೇ ಬೇಕು,"ಎಂದರು.
"ಶೋಷಿತರನ್ನು ವಿರೋಧ ಮಾಡೋದೇ ನಿಮಗೆ ಚಟವಾಗಿದೆ. ನಿಮ್ಮ ಬಂಡವಾಳ ಹೊರಗೆ ಬರಲಿದೆ ಅಂತ ಭಯಾನಾ.? ಸರ್ಕಾರದಲ್ಲಿರೋ ಯಾವುದೇ ಶಾಸಕ, ಸಚಿವರ ಮನೆಗೆ ತೆರಳಿ ಮನವರಿಕೆ ಮಾಡ್ತೀವಿ. ಒಂದು ವೇಳೆ ಒಪ್ಪದಿದ್ದರೆ, ಘೇರಾವ್ ಹಾಕುತ್ತೇವೆ, ವಿರೋಧಿಸಿದ್ರೆ ಮುಂದಿನ ಚುನಾವಣೆಯಲ್ಲಿ ಯಾವ ರೀತಿ ಗೆದ್ದು ಬರುತ್ತೀರಿ?"ಎಂದು ರಾಮಚಂದ್ರ ಪ್ರಶ್ನಿಸಿದರು.
ದಲಿತ ಮುಖಂಡ, ಇಂದೂದರ ಹೊನ್ನಾಪುರ ಮಾತನಾಡಿ, ಸಮುದಾಯಗಳಿಗೆ ಆಗಿರೋ ಅನ್ಯಾಯ ಸರಿಪಡಿಸಲು, ಕಾಂತರಾಜ ಆಯೋಗ ಮಾಡಲಾಯ್ತು. ನಿರಂತರವಾಗಿ ನಾವೇ ಆಡಳಿತ ಮಾಡಬೇಕು ಅಂತ ಕೆಲವರು ಅಂದುಕೊಂಡಿದ್ದಾರೆ. ಕೆಲವರು ವಿರೋಧ ಮಾಡ್ತಿದ್ದಾರೆ. ಅಂತಹವರಿಗೆ ಎಚ್ಚರಿಕೆ ನೀಡುತ್ತೇವೆ," ಎಂದರು.
"ಸಂವಿಧಾನವೇ ನಮ್ಮ ಆಶಯ ಅನ್ನೋ ಕಾಂಗ್ರೆಸ್ ನಾಯಕರೂ ವಿರೋಧ ಮಾಡುತ್ತಾರೆ. ರಾಹುಲ್ ಗಾಂಧಿ ಅವರು ಸಂವಿಧಾನ ಅಂತಾರೆ, ಅವರದೇ ಪಕ್ಷದ ಕೆಲ ನಾಯಕರು ವಿರೋಧ ಮಾಡ್ತಾರೆ," ಎಂದು ಟೀಕಿಸಿದರು. "ಜಾತಿ ಸಮೀಕ್ಷೆ ಮಾಡಿ ಎಂದು ಸುಪ್ರೀಂ ಕೋರ್ಟೇ ಹೇಳಿದೆ . ಆದರೆ ಕೆಲವರು ಅದನ್ನು ವಿರೋಧಿಸುತ್ತಾರೆ. ಅಹಿಂದ ಸಂಘಟನೆ ಬಗ್ಗೆ ಎಚ್ಚರಿಕೆ ಇರಲಿ. ನಾವೇ ನಿಮ್ಮನ್ನು ಅಧಿಕಾರಕ್ಕೆ ತಂದಿರೋದು. ಹಾಗಾಗಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ," ಎಂದು ಇಂದೂಧರ ಹೊನ್ನಾಪುರ ಒತ್ತಾಯಿಸಿದರು.
ಇನ್ನೊಬ್ಬರು ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ "ಕಾಂತರಾಜ ಆಯೋಗ ವರದಿ ಮಂಡನೆ ಮಾಡುವಂತೆ ನಿರಂತರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಲಕ್ಷಾಂತರ ಜನರನ್ನ ಸೇರಿಸಿ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮ ಶೋಷಿತ ಸಮುದಾಯದ ಆಗ್ರಹದ ಮೇರೆಗೆ ವರದಿ ಸಚಿವ ಸಂಪುಟಕ್ಕೆ ತಂದಿದ್ದಾರೆ. ವರದಿ ಚರ್ಚೆಗೆ ಬರುವ ಮೊದಲೇ ಅನೇಕರು ಸಭೆ ಮಾಡುತ್ತಿದ್ದಾರೆ. ಬಿಜೆಪಿ ಜೊತೆ ಸೇರಿಕೊಂಡು, ಕಾಂಗ್ರೆಸ್ ನ ಕೆಲವರು ವರದಿಯನ್ನ ವಿರೋಧಿಸ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ," ಎಂದು ಟೀಕಿಸಿದರು.
ಈ ವರದಿಯಗೆ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ವೈಜ್ಞಾನಿಕವಾಗಿದೆ ಅಂತ ಸರ್ಟಿಫಿಕೇಟ್ ನೀಡಿದೆ. ಒಂದುವೇಳೆ ತಪ್ಪಿದ್ದಲ್ಲಿ ಸರಿಪಡಿಸುವ ಕೆಲಸ ಮಾಡಬೇಕು. ಆದರೆ ವಿರೋಧ ನೀತಿ ಸರಿಯಲ್ಲ. ಸಚಿವ ಸಂಪುಟ ಸಭೆಯ ವಿವರಗಳನ್ನು ನಾವೂ ಗಮನಿಸುತ್ತಿದ್ದೇವೆ. ಅಲ್ಲಿ ಶೋಷಿತ ಸಮುದಾಯದ ಪರವಾಗಿ ನಿರ್ಣಯ ಬರಲಿದೆ ಅಂತ ಭಾವಿಸಿದ್ದೇವೆ ಎಂದರು.
"ಇದು ನೂರಾರು ಜಾತಿ, ಸಮುದಾಯಗಳ ಮಾಹಿತಿಯ ವರದಿ. ಪ್ರತಿಯೊಬ್ಬರ ಔದ್ಯೋಗಿಕ, ಶೈಕ್ಷಣಿಕ ವಿಚಾರ ಗೊತ್ತಾಗಲಿದೆ. ಮೀಸಲಾತಿ ಹೇಗೆ ಕೊಡಬೇಕು ಅನ್ನೋದು ಸ್ಪಷ್ಟವಾಗಲಿದೆ. ಶೋಷಿತ ಸಮುದಾಯ ತುಂಬಾ ಸಮಾಧಾನದಿಂದ ನೊಡ್ತಿದ್ದೇವೆ. ನಾಳೆಯ ಸಚಿವ ಸಂಪುಟ ಸಭೆಯ ನಿರ್ಣಯ ನೋಡಿ, ನಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ," ಎಂದು ಮಾವಳ್ಳಿ ಶಂಕರ್ ಹೇಳಿದ್ದಾರೆ. "ನಾವು ಅಧಿಕಾರಕ್ಕೆ ಬಂದ್ರೆ ಕಾಂತರಾಜ ಆಯೋಗ ವರದಿ ಜಾರಿಗೆ ತರ್ತೀವಿ ಅಂತ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದೆ. ಈಗ ಏಕೆ ವಿರೋಧ ಕೂಡ ಮಾಡ್ತಿದ್ದೀರಿ. ಇಂತಹ ಎಡೆಬಿಡಂಗಿ ನೀತಿಯನ್ನು ಬಿಟ್ಟುಬಿಡಿ. ಸನಾಜದ ಪರವಾಗಿ ನಿಲ್ಲಿ ಎಂದು ಕಿವಿಮಾತು ಹೇಳಿದ್ದಾರೆ.
ಮುಖಂಡರ ಬೆಂಬಲ
ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಕಾಂಗ್ರೆಸ್ ನಾಯಕರಾದ ಎಂ.ಆರ್. ಸೀತಾರಾಂ, ಎಚ್.ಎಂ. ರೇವಣ್ನ, ವಿ.ಆರ್. ಸುದರ್ಶನ್, ನಾಗರಾಜ್ ಯಾದವ್ , ಮಾಜಿ ಸಚಿವೆ ಉಮಾಶ್ರೀ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಜಾತಿ ಗಣತಿ ವರದಿಯನ್ನು ಸಂಪುಟಸಭೆಯಲ್ಲಿ ಮಂಡನೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಅಭಿನಂದಿಸಿದ್ದಾರೆ.
"165 ಕೋಟಿ ಖರ್ಚಿನಲ್ಲಿ ನಡೆಸಲಾದ ಜಾತಿಜನಗಣತಿ ವರದಿ ಉಪಯೋಗ ರಾಜ್ಯದ ಜನತೆಗೆ ಆಗಬೇಕು. 1 ಲಕ್ಷದ 66 ಸಾವಿರ ನೌಕರರು ಸಮೀಕ್ಷೆ ಮಾಡಿ ವರದಿ ತಯಾರಿಸಿದ್ದು ಇವರು ಯಾವುದೇ ಒಂದು ಜಾತಿಗೆ ಧರ್ಮಕ್ಕೆ ಸೇರಿದವರಲ್ಲ. ಈ ವರದಿಯನ್ನು ಸಚಿವ ಸಂಪುಟ ಮೂಲಕ ಅಧಿಕೃತವಾಗಿ ಬಿಡುಗಡೆಯಾಗಬೇಕು. ವರದಿ ಬಗ್ಗೆ ಭಾವನಾತ್ಮಕವಾಗಿ ಕೂಗಾಡುವುದರಿಂದ ಏನು ಪ್ರಯೋಜನವಿಲ್ಲ, ಬದಲಿಗೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿ," ಎಂದುಈ ನಾಯಕರು ಒತ್ತಾಯಿಸಿದ್ದಾರೆ.
ಜಾತಿಜನಗಣತಿ ವರದಿ ಚರ್ಚೆಗೆ ಅಧಿವೇಶನ ಕರೆಯಬೇಕು ಎಂದು ಒತ್ತಾಯಸಿರುವ ಮುಖಂಡರು, ಹೆಚ್ಚಿನ ಚರ್ಚೆಗೆ ಸಚಿವ ಸಂಪುಟ ಉಪಸಮಿತಿ ರಚನೆಮಾಡುವ ಅವಕಾಶವೂ ಇದೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.
" ಜಾತಿ ಜನಗಣತಿ ವರದಿಗೆ ಚಾಲನೆ ನೀಡಿರುವ ಸಿದ್ದರಾಮಯ್ಯಗೆ ಅಭಿನಂದಿಸಬೇಕು. ಈ ವರದಿಯನ್ನು ವೈಜ್ಞಾನಿಕವಾಗಿ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿ ತಯಾರಿಸಲಾಗಿದೆ. ಈ ವರದಿಐನ್ನು ಯಾವುದೇ ಒಂದು ಜನಾಂಗಕ್ಕೆ ಮಾಡಿದ್ದಲ್ಲ," ಎಂದು ಹೇಳಿದ್ದಾರೆ.
ಎಂ.ಆರ್. ಸೀತಾರಾಮ್ ಮಾತನಾಡಿ, "ವೈಜ್ಞಾನಿಕವಾಗಿ ಜಾತಿ ಜನಗಣತಿ ವರದಿ ತಯಾರಿಸಲಾಗಿದೆ. ವರದಿ ಬಗ್ಗೆ ಅವೈಜ್ಞಾನಿಕ ಎಂದು ಕೆಲವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ತಾವು ಖಂಡಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿ,
ಜಾತಿಜನಗಣತಿ ವರದಿ ಜಾರಿ ಅಗತ್ಯ ಇದೆ ಹಾಗೂ ಈ ವರದಿಯನ್ನು ಅಧಿಕೃತವಾಗಿ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.