ವಿದ್ಯುತ್ ಬಿಲ್ ಪಾವತಿಸಲು ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ನೋಟಿಸ್: ಪ್ರತಿಪಕ್ಷಗಳ ಆಕ್ರೋಶ, ಸರ್ಕಾರ ಯೂ ಟರ್ನ್
ವಿದ್ಯುತ್ ಶುಲ್ಕ ಪಾವತಿಸುವಂತೆ ಕೆಐಎಡಿಬಿ ಸಿದ್ದಗಂಗಾ ಮಠಕ್ಕೆ ಬರೆದಿದ್ದ ಪತ್ರ ಈಗ ಬಹಿರಂಗವಾಗಿದೆ. ಕೆಐಎಡಿಬಿಯ ಈ ನಿಲುವಿಗೆ ಸಾರ್ವಜನಿಕರು, ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇದೀಗ ನೋಟಿಸ್ ಹಿಂಪಡೆದಿದೆ.
70 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸುವಂತೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ನೀಡಿರುವ ನೋಟಿಸ್‌ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿದ್ಯುತ್ ಶುಲ್ಕ ಪಾವತಿಸಲು ಸೂಚಿಸಿ ಕೆಐಎಡಿಬಿ ಸಿಇಒ ಆದೇಶದ ಹಿನ್ನೆಲೆಯಲ್ಲಿ ತುಮಕೂರು ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಸಿದ್ದಗಂಗಾ ಮಠದ ಕಾರ್ಯದರ್ಶಿಗೆ ಬರೆದಿರುವ ಪತ್ರ ಈಗ ಬಹಿರಂಗವಾಗಿದೆ. ಕೆಐಎಡಿಬಿಯ ಈ ನಿಲುವಿಗೆ ಸಾರ್ವಜನಿಕರು, ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಐಎಡಿಬಿ ಈಗ ನೋಟಿಸ್ ಹಿಂಪಡೆದಿದೆ.
ಕೆಐಎಡಿಬಿ ಬರೆದ ಪತ್ರದಲ್ಲಿ ಏನಿತ್ತು?
ಕಳೆದ ಏಪ್ರಿಲ್ 6ರಂದು ಕೈಗಾರಿಕಾ ಅಭಿವೃದ್ಧಿ ಮಂಡಳಿಯು ಸಿದ್ದಗಂಗಾ ಮಠದ ಕಾರ್ಯದರ್ಶಿಗಳಿಗೆ ಬರೆದಿದ್ದ ಪತ್ರದಲ್ಲಿ, ಮಂಡಳಿಯು ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಲ್ಲದಿರುವ ಕಾರಣ 70,31, 438 ರೂ ವಿದ್ಯುತ್ ಶುಲ್ಕವನ್ನು ತುಮಕೂರಿನ ಬೆಸ್ಕಾಂಗೆ ಪಾವತಿಸುವಂತೆ ಕೋರಲಾಗಿತ್ತು.
ತುಮಕೂರು ತಾಲೂಕಿನ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ಕೆಐಎಡಿಬಿ ಪೈಪ್‌ಲೈನ್ ಮೂಲಕ ನೀರು ಹರಿಸಲಾಗಿದೆ. ದೇವರಾಯಪಟ್ಟಣದ ಕೆರೆಯ ನೀರು ಸಿದ್ದಗಂಗಾ ಮಠ ಬಳಸಿಕೊಂಡಿದೆ. 2023 ಅ.31 ಹಾಗೂ 2024 ಮಾ.2 ರವರೆಗೆ ಒಟ್ಟು 70,31,438 ರೂ.ಗಳನ್ನು ತುಮಕೂರು ಬೆಸ್ಕಾಂ ಕಚೇರಿಗೆ ಪಾವತಿಸಲು ಅನುಮೋದನೆ ಕೋರಿ ಕಳೆದ ಮಾರ್ಚ್ 26 ರಂದು ಬೆಂಗಳೂರು ಕೆಐಎಡಿಬಿ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿತ್ತು. ಸಿದ್ದಗಂಗಾ ಮಠದಿಂದಲೇ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುವಂತೆ ಕೆಐಎಡಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೂಚಿಸಿದ್ದರು.
ಕೆಐಎಡಿಬಿಗೆ ಸ್ವಾಮೀಜಿ ಬರೆದ ಪತ್ರದಲ್ಲೇನಿತ್ತು?
ವಿದ್ಯುತ್ ಬಿಲ್ ಪಾವತಿಸಲು ಸೂಚಿಸಿದ್ದ ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಪತ್ರ ಬರೆದಿದ್ದಾರೆ. ದೇವರಾಯನಪಟ್ಟಣ ಕೆರೆಯಿಂದ ಸಿದ್ದಗಂಗಾ ಮಠಕ್ಕೆ ಕುಡಿಯುವ ನೀರು ಪೂರೈಸಲು ಸ್ಥಾಪಿಸಿರುವ ಶುದ್ದೀಕರಣ ಘಟಕ ಇನ್ನೂ ಆರಂಭವಾಗಿಲ್ಲ. ಪ್ರಾಯೋಗಿಕವಾಗಿ ಕೆರೆ ನೀರನ್ನು ಭರ್ತಿ ಮಾಡಲಾಗಿದೆ. ಪ್ರಸ್ತುತ ಶುದ್ದೀಕರಣ ಘಟಕದಿಂದ ಸಿದ್ದಗಂಗಾ ಮಠದ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮಠಕ್ಕೆ ಬರುವ ಭಕ್ತರು ಹಾಗೂ ನೆರೆ ಹೊರೆಯ ಗ್ರಾಮಗಳಾದ ದೇವರಾಯಪಟ್ಟಣ, ಮಾರನಾಯ್ಕನಪಾಳ್ಯ, ಬಸವಾಪಟ್ಟಣ, ಬಂಡೇಪಾಳ್ಯ ಸೇರಿದಂತೆ ಹಲವು ಗ್ರಾಮಗಳಿಗೆ ನೀರು ಸರಬರಾಜು ಆಗುತ್ತದೆ. ಇದೆಲ್ಲದರ ಶುಲ್ಕವನ್ನು ಪಾವತಿಸಲು ಸಿದ್ದಗಂಗಾ ಮಠದಿಂದ ಸಾಧ್ಯವಿಲ್ಲ. ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಸರ್ಕಾರದ ಕರ್ತವ್ಯ. ಅದರ ಶುಲ್ಕವನ್ನು ಸರ್ಕಾರ ಪಾವತಿ ಮಾಡಬೇಕೇ ಹೊರತು ಸಂಘ- ಸಂಸ್ಥೆಗಳಲ್ಲ. ದೇವರಾಯಪಟ್ಟಣ ಕೆರೆಯ ನೀರನ್ನು ಸಿದ್ದಗಂಗಾ ಮಠ ದೈನಂದಿನ ಕೆಲಸ ಕಾರ್ಯಗಳಿಗೆ ಬಳಕೆ ಮಾಡುತ್ತಿದೆ ಎಂದು ಕೆಐಎಡಿಬಿ ಅಧಿಕಾರಿಗಳು ನೀಡಿರುವ ವರದಿಯನ್ನು ಪುನರ್ ಪರಿಶೀಲಿಸಬೇಕು ಎಂದು ಸ್ವಾಮೀಜಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನೋಟಿಸ್ ಹಿಂಪಡೆಯುತ್ತೇವೆ ಎಂದ ಎಂಬಿ ಪಾಟೀಲ್
ವಿದ್ಯುತ್ ಶುಲ್ಕ ಪಾವತಿಸುವಂತೆ ಸಿದ್ದಗಂಗಾ ಮಠಕ್ಕೆ ನೋಟಿಸ್ ನೀಡಿದ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಸಿದ್ದಗಂಗಾ ಮಠಕ್ಕೆ ನೀಡಿರುವ ನೋಟಿಸನ್ನು ಸರ್ಕಾರ ಹಿಂಪಡೆಯಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸಿದ್ದಗಂಗಾ ಮಠದ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಕೆಐಎಡಿಬಿ ವ್ಯಾಪ್ತಿಗೆ ಬರುವ ಕೆರೆ ನೀರನ್ನು ಬಳಸಿಕೊಂಡರೂ ಯಾವುದೇ ಶುಲ್ಕ ವಿಧಿಸದಂತೆ ಕೆಐಎಡಿಬಿ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದ್ದೇನೆ. ನೋಟಿಸ್ ನೀಡಿದ ಕುರಿತು ಸಿದ್ದಗಂಗಾ ಮಠದ ಸ್ವಾಮೀಜಿ ಅವರೊಂದಿಗೂ ಮಾತನಾಡುತ್ತೇನೆ. ನೋಟಿಸ್ ನೀಡಿದ ವಿಚಾರದಲ್ಲಿ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರದ ವಿರುದ್ಧ ಸಿಟಿ ರವಿ ವಾಗ್ದಾಳಿ
ಸಿದ್ದಗಂಗಾ ಮಠಕ್ಕೆ ವಿದ್ಯುತ್ ಬಿಲ್ ಕಟ್ಟುವಂತೆ ನೋಟಿಸ್ ವಿಚಾರವಾಗಿ ಪರಿಷತ್ ಸದಸ್ಯ ಸಿ.ಟಿ. ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಮಠಗಳಿಗೆ ನೀರು, ಇನ್ನಿತರೆ ಸೌಲಭ್ಯ ಕಲ್ಪಿಸಿಕೊಡುವ ಪರಂಪರೆ ಇದೆ. ಆದರೆ, ಮಠದಿಂದ ಕಿತ್ತುಕೊಳ್ಳುವುದು ಇದ್ಯಾವ ಸೀಮೆಯ ಪರಂಪರೆ ಎಂದು ಅವರು ವಿಧಾನ ಪರಿಷತ್ ಕಲಾಪದಲ್ಲಿ ಪ್ರಶ್ನಿಸಿದ್ದಾರೆ.