'ಕಾನೂನು ಮೀರಿ ಒಂದೇ ಒಂದು ಬಗರ್ ಹುಕುಂ ಅರ್ಜಿ ವಿಲೇವಾರಿ ಮಾಡಿಲ್ಲ': ಸಚಿವ ಕೃಷ್ಣ ಬೈರೇಗೌಡ

ವಿಧಾನಸೌಧದಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಎಂ.ಟಿ. ಕೃಷ್ಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು ತಮ್ಮ ಸ್ಪಷ್ಟನೆ ನೀಡಿದರು.;

Update: 2025-08-18 10:56 GMT

"ಬಗರ್ ಹುಕುಂ ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಸರ್ಕಾರ ಅಥವಾ ಅಧಿಕಾರಿಗಳು ಕಾನೂನು ಮೀರಿ ಒಂದೇ ಒಂದು ಹೆಜ್ಜೆ ಇಟ್ಟಿಲ್ಲ. ಒಂದು ವೇಳೆ ಕಣ್ತಪ್ಪಿನಿಂದ ರೈತರಿಗೆ ಅನ್ಯಾಯವಾಗಿದ್ದರೆ, ಶಾಸಕರು ಅದನ್ನು ನನ್ನ ಗಮನಕ್ಕೆ ತನ್ನಿ, ನಾನೇ ಖುದ್ದಾಗಿ ಸಮಸ್ಯೆಯನ್ನು ಬಗೆಹರಿಸುತ್ತೇನೆ," ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಸಭೆಯಲ್ಲಿ ಭರವಸೆ ನೀಡಿದರು.

ವಿಧಾನಸೌಧದಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಎಂ.ಟಿ. ಕೃಷ್ಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, "ಕಾನೂನು ಪ್ರಕಾರ, ಅರ್ಹ ಅರ್ಜಿಗಳನ್ನು ಮಾತ್ರ ಬಗರ್ ಹುಕುಂ ಸಮಿತಿಯ ಮುಂದೆ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅನರ್ಹ ಅರ್ಜಿಗಳನ್ನು ಆರಂಭಿಕ ಹಂತದಲ್ಲೇ ತಿರಸ್ಕರಿಸುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳು ಕಾನೂನಿನ ಚೌಕಟ್ಟಿನಲ್ಲೇ ನಡೆಯುತ್ತಿವೆ," ಎಂದು ಸ್ಪಷ್ಟಪಡಿಸಿದರು.

ಲಕ್ಷಾಂತರ ಅನರ್ಹ ಅರ್ಜಿಗಳ ಸಲ್ಲಿಕೆ

ಬಗರ್ ಹುಕುಂ ಹೆಸರಿನಲ್ಲಿ ಭೂಮಿ ಪಡೆಯಲು ಯಾವ ರೀತಿಯ ಅನರ್ಹ ಅರ್ಜಿಗಳು ಸಲ್ಲಿಕೆಯಾಗುತ್ತವೆ ಎಂಬುದರ ಕುರಿತು ಸದನಕ್ಕೆ ಮಾಹಿತಿ ನೀಡಿದ ಸಚಿವರು, "5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ 7,564 ಜನರು, ರಸ್ತೆ, ಗುಂಡು ತೋಪು ಒತ್ತುವರಿ ಮಾಡಿರುವ 33,632 ಜನರು, ಅರಣ್ಯ ಭೂಮಿ ಮಂಜೂರಾತಿ ಕೋರಿ 1,00,565 ಜನರು, ನಗರ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಭೂಮಿಗಾಗಿ 69,850 ಜನರು, ಆ ತಾಲೂಕಿನ ನಿವಾಸಿಗಳಲ್ಲದ 1,620 ಜನರು, ಕೃಷಿಕರೇ ಅಲ್ಲದ 13,488 ಜನರು, ಜಮೀನಿನ ಸ್ವಾಧೀನದಲ್ಲೇ ಇಲ್ಲದ 44,517 ಜನರು, ಅಮೃತ್ ಮಹಲ್ ಕಾವಲ್ ಭೂಮಿಗಾಗಿ 13,488 ಮತ್ತು ಕೆರೆ ಮಂಜೂರಾತಿಗಾಗಿಯೇ 3,040 ಅರ್ಜಿಗಳು ಬಂದಿವೆ. ಇವೆಲ್ಲವೂ ಅನರ್ಹ ಅರ್ಜಿಗಳು," ಎಂದು ವಿವರಿಸಿದರು.

ಗೋಮಾಳ ಜಮೀನನ್ನು ಬಗರ್ ಹುಕುಂ ಅಡಿಯಲ್ಲಿ ಮಂಜೂರು ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಬಿಡಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, "ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನನ್ನು ಯಥಾವತ್ತಾಗಿ ಪಾಲಿಸುತ್ತಿದೆ. ನಾವು ಕಾನೂನಿನಲ್ಲಿ ಒಂದು ಅಕ್ಷರವನ್ನು ಬದಲಿಸಿಲ್ಲ. ನಾವು ಕಾನೂನು ಬದಲಿಸಿದ್ದರೆ ಸದಸ್ಯರು ತಿಳಿಸಲಿ, ತಿದ್ದಿಕೊಳ್ಳುತ್ತೇವೆ," ಎಂದರು.

ಇದೇ ವೇಳೆ, ಪಡಾ ಮತ್ತು ಬೀಳು ಜಮೀನುಗಳ ಕುರಿತು ಮಾತನಾಡಿದ ಅವರು, ಈ ಜಮೀನುಗಳು ಈ ಹಿಂದೆಯೇ ಸಾರ್ವಜನಿಕ ಉದ್ದೇಶಗಳಿಗೆ (ಅರಣ್ಯ, ಸರ್ಕಾರಿ ಕಚೇರಿ, ಸ್ಮಶಾನ) ಮಂಜೂರಾಗಿರುವುದರಿಂದ, ಮೊದಲು ಅಧ್ಯಯನ ನಡೆಸಿ, ನಂತರ ಯಾರು ನಿಜವಾಗಿ ಕೃಷಿಯಲ್ಲಿ ತೊಡಗಿದ್ದಾರೋ ಅವರಿಗೆ ಮಂಜೂರು ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಂಗಲ್ ಖರಾಬು-ಬಿ ಖರಾಬು ಜಮೀನು ಮಂಜೂರಾತಿ ಸಾಧ್ಯವಿಲ್ಲ

ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಜಂಗಲ್ ಅಥವಾ ಬಿ-ಖರಾಬು ಜಮೀನನ್ನು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ. ಹಿಂದಿನ ಸರ್ಕಾರಗಳ ಕಾಲದಲ್ಲಿ ಈ ವಿಚಾರದಲ್ಲಿ ತಪ್ಪುಗಳಾಗಿದ್ದು, ಅದನ್ನು ಸರಿಪಡಿಸುವ ಕೆಲಸಕ್ಕೆ ನಾವು ಮುಂದಾಗಿದ್ದೇವೆ," ಎಂದು ಹೇಳಿದರು.

"ಈಗಾಗಲೇ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಈ ಹಿಂದೆ ನಡೆದ ಮಂಜೂರಾತಿಗಳ ನೈಜತೆಯನ್ನು ಪರಿಶೀಲಿಸುವ ಜವಾಬ್ದಾರಿ ನೀಡಲಾಗಿದೆ. ತನಿಖೆ ಆರಂಭವಾಗಿದ್ದರೂ, ಪ್ರಗತಿ ನಿಧಾನವಾಗಿದೆ. ತನಿಖೆಯನ್ನು ಶೀಘ್ರದಲ್ಲಿ ಮುಗಿಸಲು ಸೂಚನೆ ನೀಡಿದ್ದೇನೆ," ಎಂದು ತಿಳಿಸಿದರು.

"ಈಗಾಗಲೇ ಮಂಜೂರಾತಿ ಪಡೆದವರ ಹಕ್ಕುಗಳನ್ನು ಸರ್ಕಾರ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಆಯುಕ್ತರು ಕಾನೂನಾತ್ಮಕವಾಗಿ ಲಿಖಿತ ಸೂಚನೆ ನೀಡಿದ್ದಾರೆ. ಆದರೆ, ಒಂದೇ ಕುಟುಂಬಕ್ಕೆ 119 ಎಕರೆ ಜಂಗಲ್ ಖರಾಬು ಜಮೀನು ಮಂಜೂರು ಮಾಡಿದಂತಹ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಶೀಘ್ರವಾಗಿ ಮುಗಿದರೆ, ಅದರ ರದ್ದತಿ ಬಗ್ಗೆ ತೀರ್ಮಾನ ಕೈಗೊಳ್ಳಬಹುದು," ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

Tags:    

Similar News