ಬೆಳಗಾವಿ ಅಧಿವೇಶನ | ಚರ್ಚೆಯಾಗದ ಉತ್ತರ ಕರ್ನಾಟಕದ ಸಮಸ್ಯೆ: ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಆರೋಪ
ಉತ್ತರ ಕರ್ನಾಟಕದ ಸಮಸ್ಯೆ ಹೊರತುಪಡಿಸಿ ಬೇರೆ ವಿಷಯಗಳ ಚರ್ಚೆಯಿಂದ ಕಲಾಪ ಹಾಳು ಮಾಡಿದರೆ ʼಪ್ರತ್ಯೇಕ ರಾಜ್ಯʼದ ಕೂಗು ಎಬ್ಬಿಸುವ ಎಚ್ಚರಿಕೆ ಕೊಟ್ಟರೂ ಯಾವುದೇ ಸಕಾರಾತ್ಮಕ ಚರ್ಚೆಗಳು ನಡೆದಿಲ್ಲ. ಬದಲಾಗಿ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕಷ್ಟೇ ಕಲಾಪ ಸೀಮಿತವಾಗಿದೆ.
ಉತ್ತರ ಕರ್ನಾಟಕದ ನೀರಾವರಿ ಯೋಜನೆ, ಕಬ್ಬು ಬೆಳೆಗಾರರ ಸಂಕಷ್ಟ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ಕುರಿತ ಚರ್ಚೆಗೆ ಮೀಸಲಾಗಿದ್ದ ಬೆಳಗಾವಿ ಅಧಿವೇಶನ ಇಲ್ಲಿಯವರೆಗೆ ಪಂಚಮಸಾಲಿ ಮೀಸಲಾತಿ ಹೋರಾಟ, ವಕ್ಫ್ ವಿವಾದದ ಕೆಸರೆರಚಾಟಕ್ಕೆ ಮಾತ್ರ ಸೀಮಿತವಾಗಿದೆ.
ಉತ್ತರ ಕರ್ನಾಟಕದ ಸಮಸ್ಯೆ ಹೊರತುಪಡಿಸಿ ಬೇರೆ ವಿಷಯಗಳ ಚರ್ಚೆಯಿಂದ ಕಲಾಪ ಹಾಳು ಮಾಡಿದರೆ ʼಪ್ರತ್ಯೇಕ ರಾಜ್ಯʼದ ಕೂಗು ಎಬ್ಬಿಸುವ ಎಚ್ಚರಿಕೆ ಕೊಟ್ಟರೂ ಯಾವುದೇ ಸಕಾರಾತ್ಮಕ ಚರ್ಚೆಗಳು ನಡೆದಿಲ್ಲ. ಬದಲಾಗಿ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕಷ್ಟೇ ಕಲಾಪ ಸೀಮಿತವಾಗಿದೆ.
ಹುಬ್ಬಳ್ಳಿಯಲ್ಲಿ ಭಾನುವಾರ ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಲು ಸರ್ಕಾರ ಸಿದ್ದವಿದೆ. ಆದರೆ, ಬಿಜೆಪಿ ತಯಾರಿಲ್ಲ. ಅನ್ಯ ವಿಚಾರಗಳ ಬಗ್ಗೆ ರಾಜಕಾರಣ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ದಶಕಗಳಿಂದ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಇವುಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಬಿಜೆಪಿಯ ಬಣಗಳು ಉತ್ತರಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚಿಸದೇ ಬೇರೆ ಬೇರೆ ವಿಚಾರ ಪ್ರಸ್ತಾಪ ಮಾಡಿ ಕಲಾಪ ಹಾಳು ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹದಾಯಿ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಕಾಮಗಾರಿ ಟೆಂಡರ್ ಕರೆಯಲು ಸಿದ್ಧತೆ ನಡೆದಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಮಹದಾಯಿ ಯೋಜನೆ ಅನುಷ್ಟಾನ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ ಶೆಟ್ಟರ್ ಗಮನ ಹರಿಸಬೇಕು. ಯೋಜನೆಯ ಪೂರ್ಣ ಮಾಹಿತಿ ಅವರಿಗಿದೆ. ನಾವೂ ಕೂಡ ಅವರನ್ನು ಭೇಟಿ ಮಾಡಿ ಶೀಘ್ರ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಕೋವಿಡ್ ಹಗರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಾಗಿರುವ ಅವ್ಯವಹಾರದ ಕುರಿತು ಮೈಕೆಲ್ ಡಿ ಕುನ್ಹಾ ಆಯೋಗದ ವರದಿ ಆಧರಿಸಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.