ನಾಲ್ಕು ವರ್ಷಗಳಿಂದ ನಡೆದಿಲ್ಲ ತಾ.ಪಂ/ಜಿ.ಪಂ ಚುನಾವಣೆ| ಆಡಳಿತಾಧಿಕಾರಿಗಳದೇ ರಾಜ್ಯಭಾರ!

ರಾಜ್ಯ ಚುನಾವಣಾ ಆಯೋಗ ಚುನಾವಣೆ ಪ್ರಕ್ರಿಯೆಯನ್ನು ಯಾವ ಹಂತದಲ್ಲಿ ನಿಲ್ಲಿಸಲಾಯಿತೋ ಅದೇ ಹಂತದಿಂದ ಚುನಾವಣೆ ನಡೆಸಲು ಅವಕಾಶ ಕೊಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ರಾಜ್ಯ ಸರ್ಕಾರಗಳು ಮೇಲಿಂದ ಮೇಲೆ ಚುನಾವಣೆ ಮುಂದೂಡುತ್ತಿರುವುದಕ್ಕೆ ಹೈಕೋರ್ಟ್ ಕೂಡ ಗರಂ ಆಗಿದ್ದು, ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ದಂಡ ಕೂಡ ವಿಧಿಸಿದೆ;

Update: 2024-09-04 01:30 GMT

ಜಿಲ್ಲಾ ಹಾಗೂ ತಾಲೂಕು ಪಂಚಾಯತಿಗಳ ಚುನಾವಣೆಯನ್ನು ರಾಜ್ಯ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ವರ್ಗೀಕರಣ ಗೊಂದಲ ಸರಿಪಡಿಸುವ ನೆಪ ಹೇಳಿ ನಿರಂತರ ಮುಂದೂಡುತ್ತ ಬರುತ್ತಿರುವುದು ವಿಕೇಂದ್ರೀಕರಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡಿ, ಎಲ್ಲವನ್ನೂ ಅಧಿಕಾರಸ್ಥರ ಹಿಡಿತದಲ್ಲಿಟ್ಟುಕೊಳ್ಳುವ ಸಂಚಿನಂತೆ ಕಾಣಿಸುತ್ತಿದೆ.

ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಬುನಾದಿ ಹಾಕಿರುವ ಕರ್ನಾಟಕದಲ್ಲಿಯೇ ರಾಜಕೀಯ ಪಕ್ಷಗಳು ಪ್ರಜಾಪಭುತ್ವದ ಜಪ ಮಾಡುತ್ತಲೇ ವಿಕೇಂದ್ರಿಕರಣ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಂತ್ರಣದಲ್ಲಿಟ್ಟುಕೊಳ್ಳಲು ಎಲ್ಲ ಪಕ್ಷಗಳು ಅಪವಿತ್ರ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ!

ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮೊದಲು ಜಾರಿಗೆ ತಂದ ರಾಜ್ಯ ಕರ್ನಾಟಕ. 1993 ರಲ್ಲಿ ಸಂವಿಧಾನಕ್ಕೆ 73ನೇ ತಿದ್ದುಪಡಿ ತರುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಹೇಗೆ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸಿ ಹೊಸ ಸರ್ಕಾರ ರಚನೆಯಾಗುತ್ತದೆಯೋ ಅದೇ ರೀತಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ರಾಜ್ಯಗಳಿಗೆ ಸಂವಿಧಾನ ಬದ್ಧವಾಗಿಯೇ ರಚನೆಯಾಗಿರುವ ರಾಜ್ಯ ಚುನಾವಣಾ ಆಯೋಗ ಕಾರ್ಯ ನಿರ್ವಹಿಸುತ್ತದೆ.

ಮೀಸಲಾತಿ ಗೊಂದಲ

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಚುನಾಯಿತ ಪ್ರತಿನಿಧಿಗಳಿಲ್ಲದೇ ಆಡಳಿತಾಧಿಕಾರಿಗಳ ಮೂಲಕವೇ ಸರ್ಕಾರ ಅಧಿಕಾರ ನಡೆಸುತ್ತಿದೆ. ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ವಿಚಾರದಲ್ಲಿ ಪ್ರಾತಿನಿಧ್ಯ ದೊರೆಯದ ಸಣ್ಣ ಮತ್ತು ಅತಿ ಸಣ್ಣ ಸಮುದಾಯಗಳಿಗೆ ಜನಸಂಖ್ಯೆಗನುಗುಣವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲು ಹಿಂದುಳಿದ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಸುಪ್ರೀಂ ಕೋರ್ಟ್ ಆದೇಶ ನೀಡಿತು. ಆ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಇದ್ದಾಗ ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾ. ಭಕ್ತ ವತ್ಸಲ ಅವರ ನೇತೃತ್ವದ ಆಯೋಗ ರಚನೆ ಮಾಡಿದ್ದರು. ಆ ಆಯೋಗ ಈಗಾಗಲೇ ವರದಿ ಕೊಟ್ಟಿದ್ದಾರೆ.

ಆ ವರದಿಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ. ಈ ವರದಿ ಆಧಾರದಲ್ಲಿ ರಾಜ್ಯ ಚುನಾವಣಾ ಆಯೋಗದವರು ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಚುನಾವಣೆ ಮಾಡಲು ಮುಂದಾದಾಗ ರಾಜ್ಯ ಸರ್ಕಾರ ಕ್ಷೇತ್ರ ಮರು ವಿಂಗಡನೆಯಲ್ಲಿ ಗೊಂದಲಗಳುಂಟಾಗಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಕ್ಷೇತ್ರ ಮರು ವಿಂಗಡಣೆ ಮಾಡಲು ಮುಂದಾದರು. ಹೀಗಾಗಿ ಮತ್ತೆ ಚುನಾವಣೆ ಮುಂದೂಡಲಾಯಿತು.

ಆದರೆ, ರಾಜ್ಯ ಚುನಾವಣಾ ಆಯೋಗ ಚುನಾವಣೆ ಪ್ರಕ್ರಿಯೆಯನ್ನು ಯಾವ ಹಂತದಲ್ಲಿ ನಿಲ್ಲಿಸಲಾಯಿತೋ ಅದೇ ಹಂತದಿಂದ ಚುನಾವಣೆ ನಡೆಸಲು ಅವಕಾಶ ಕೊಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ರಾಜ್ಯ ಸರ್ಕಾರ ಮೇಲಿಂದ ಮೇಲೆ ಚುನಾವಣೆ ಮುಂದೂಡುತ್ತಿರುವುದಕ್ಕೆ ಹೈಕೋರ್ಟ್ ಕೂಡ ಗರಂ ಆಗಿದ್ದು, ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ದಂಡ ಕೂಡ ವಿಧಿಸಿದೆ.

ಹಿನ್ನಡೆ ಆತಂಕ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆಲ್ಲುವ ಮೂಲಕ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿತ್ತು. ಆದರೆ, ಒಂದು ವರ್ಷದ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿಸಿದಷ್ಟು ಸ್ಥಾನಗಳು ಬರದಿರುವುದು ಆಡಳಿತ ಪಕ್ಷವನ್ನು ಚಿಂತೆಗೀಡು ಮಾಡಿದಂತಿದೆ. ಲೋಕಸಭೆಯ ಚುನಾವಣೆಯ ಫಲಿತಾಂಶದ ಆಧಾರಲ್ಲಿ ಆಡಳಿತ ಪಕ್ಷಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಪ್ರಮುಖವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರೆಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನವಾಗುತ್ತಿವೆ ಎಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದ್ದರೂ, ವಾಸ್ತವವಾಗಿ ನಿಜವಾದ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುವಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ರಾಜ್ಯ ಸರ್ಕಾರದ ವಿರುದ್ಧ ಸಾಮಾನ್ಯ ಜನರು ಅಸಮಾಧಾನಗೊಳ್ಳುವಂತೆ ಮಾಡಿದೆ. ಅಲ್ಲದೇ, ಕಳೆದ ಒಂದೂವರೆ ವರ್ಷದಿಂದ ಕೇವಲ ಗ್ಯಾರೆಂಟಿ ಹೆಸರಿನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಇರುವುದರಿಂದ ಸ್ವತಃ ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನಗೊಳ್ಳುವಂತಾಗಿದ್ದು, ಗ್ಯಾರೆಂಟಿ ಯೋಜನೆಗಳನ್ನು ಮುಂದುವರೆಸುವ ಕುರಿತು ಪುನರ್ ಪರಿಶೀಲನೆ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಪಯತ್ನ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ನಡೆಸಲು ಮೀನಮೇಷ ಎಣಿಸುತ್ತಿದೆ ಎಂಬ ಮಾತುಗಳು ಆಡಳಿತ ಪಕ್ಷದ ವಲಯದಿಂದಲೇ ಕೇಳಿ ಬರುತ್ತಿವೆ.

ಅನುದಾನಕ್ಕಾಗಿ ಚುನಾವಣೆ ಅನಿವಾರ್ಯ

ರಾಜ್ಯ ಚುನಾವಣಾ ಆಯೋಗ ಯಾವುದೇ ಸಂದರ್ಭದಲ್ಲಿ ತಾ.ಪಂ/ಜಿ.ಪಂ ಚುನಾವಣೆ ನಡೆಸಲು ಸಿದ್ದವಾಗಿದ್ದು, ರಾಜ್ಯ ಸರ್ಕಾರ ಚುನಾವಣೆ ಮಾಡಲು ಮೀಸಲಾತಿ ಘೋಷಣೆ ಮಾಡಿದರೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಣೆ ಮಾಡಲಿದೆ. ಈಗಿರುವ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ತಾಂತ್ರಿಕ ಕಾರಣಗಳಿಗಾಗಿಯಾದರೂ ಚುನಾವಣೆಯನ್ನು ನಡೆಸುವ ಅನಿವಾರ್ಯತೆ ನಿರ್ಮಾಣವಾದಂತಿದೆ.

ಕೇಂದ್ರದ 15 ನೇ ಕೇಂದ್ರ ಹಣಕಾಸು ಆಯೋಗದ ಷರತ್ತುಗಳ ಪ್ರಕಾರ ಯಾವ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳು ಇರುವುದಿಲ್ಲವೋ ಅಂತಹ ರಾಜ್ಯಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ನೀಡಿದ ಅನುದಾನ ಬಳಕೆಗೆ ಅವಕಾಶ ಇಲ್ಲ. ರಾಜ್ಯಗಳಿಗೆ ನೀಡಿದ ಅಂತಹ ಅನುದಾನವನ್ನು ತಡೆ ಹಿಡಿಯುವ ಷರತ್ತು ವಿಧಿಸಲಾಗಿದೆ. ಹೀಗಾಗಿ ಕೇಂದ್ರದಿಂದ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಮೀಸಲಿಟ್ಟಿರುವ 2100 ಕೋಟಿ ರೂ. ಬಳಕೆಯಾಗದೇ ವಾಪಸ್ ಹೋಗುವ ಆತಂಕ ಎದುರಾಗಿದೆ. ಹೀಗಾಗಿ 15ನೇ ಹಣಕಾಸು ಆಯೋಗದ ಅವಧಿ ಮುಗಿಯುವುದರೊಳಗೆ ಚುನಾವಣೆ ನಡೆಸಿದರೆ ರಾಜ್ಯ ಸರ್ಕಾರ 2100 ಕೋಟಿ ರೂ. ಬಿಡುಗಡೆ ಮಾಡಿಸಿಕೊಳ್ಳಬಹುದು. ಕೇಂದ್ರದ ಹಣ ವಾಪಸ್ ಹೋಗದಂತೆ ನೋಡಿಕೊಳ್ಳುವಂತೆ ರಾಜ್ಯದ ಹಣಕಾಸು ಆಯೋಗವೂ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರ ಕೇವಲ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ನೋಡದೇ ರಾಜ್ಯದ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ತಾ.ಪಂ/ಜಿ.ಪಂ. ಗಳಿಗೆ ಚುನಾವಣೆ ನಡೆಸುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕಿದೆ.

ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ. ನಾರಾಯಣಸ್ವಾಮಿ ಏನಂತಾರೆ?

"ಲೋಕಸಭೆ ಹಾಗೂ ವಿಧಾನಸಭೆ ರೀತಿಯಲ್ಲಿ ಚುನಾವಣೆ ನಡೆದಂತೆ ಅದೇ ರೀತಿ ಐದು ವರ್ಷ ಮುಗಿಯುವ ಮುಂಚೆಯೇ ಚುನಾವಣೆ ನಡೆಸಬೇಕೆಂದು ಸಂವಿಧಾನದಲ್ಲಿ ಕಡ್ಡಾಯ ಮಾಡಲಾಗಿದೆ. ಆದರೆ, ಕಾರಣಾಂತರಗಳಿಂದ ಚುನಾವಣೆ ಮುಂದೂಡಲಾಗಿದೆ. ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರದಿಂದ ಬರುವ ಅನುದಾನ, ರಾಜ್ಯದ ಒಟ್ಟುವಳಿ ನೂರು ರೂಪಾಯಿಯಲ್ಲಿ 49 ರೂಪಾಯಿಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡುವಂತೆ ಶಿಫಾರಸ್ಸು ಮಾಡಲಾಗಿದೆ. ಆದರೆ, ಶೇ 52% ರಾಜ್ಯ ಸರ್ಕಾರ ಬಳಸಿಕೊಂಡು ಶೇ 48% ರಷ್ಟು ಸ್ಥಳೀಯ ಸಂಸ್ಥೆಗಳಿಗೆ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ."

Tags:    

Similar News