ಮೇಕೆದಾಟು ಯೋಜನೆಗೆ ರಾಜಕೀಯ ಬೇಡ: ಎಂ ಬಿ ಪಾಟೀಲ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಹೋರಾಟದ ಪ್ರಶ್ನೆಯೇನೂ ಇಲ್ಲ. ಕುಮಾರಸ್ವಾಮಿಯವರು ಈಗ ಕೇಂದ್ರ ಸಂಪುಟದಲ್ಲಿದ್ದಾರೆ. ಅವರು ರಾಜ್ಯಕ್ಕೆ ಸಹಾಯ ಮಾಡಲು ಅವಕಾಶವಿದೆ ಎಂದು ಎಂ ಬಿ ಪಾಟೀಲ ತಿಳಿಸಿದ್ದಾರೆ.;

Update: 2025-07-05 12:00 GMT

ಎಂ.ಬಿ ಪಾಟೀಲ್‌

ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಯಾದರೆ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೂ ಅನುಕೂಲವಾಗಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಈ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ರಾಜಕೀಯ ಮಾಡಿಕೊಂಡು ಕೂರಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕಿವಿಮಾತು ಹೇಳಿದ್ದಾರೆ. ಕುಮಾರಸ್ವಾಮಿ ಕೂಡ ಇದನ್ನು ಮನಗಂಡು, ರಚನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, "ಕುಮಾರಸ್ವಾಮಿಯವರು ಮೇಕೆದಾಟು ಯೋಜನೆ ತಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಸರಿಯಲ್ಲ. ಈ ಯೋಜನೆ ಜಾರಿಯಿಂದ ಸಂಕಷ್ಟದ ಸಮಯದಲ್ಲಿ ನೀರು ಸಿಗುತ್ತದೆ ಎಂಬುದು ತಮಿಳುನಾಡಿನ ರಾಜಕೀಯ ಪಕ್ಷಗಳಿಗೂ ಗೊತ್ತು. ಆದರೆ ಅವರು ಸಹ ರಾಜಕೀಯಕ್ಕೋಸ್ಕರ ಮೇಕೆದಾಟು ಯೋಜನೆಯನ್ನು ವೃಥಾ ವಿರೋಧಿಸುತ್ತಿದ್ದಾರೆ. ಇಂತಹ ಧೋರಣೆಗಳನ್ನು ಎಲ್ಲರೂ ಬಿಟ್ಟರೆ ಜನರಿಗೆ ಒಳ್ಳೆಯದಾಗುತ್ತದೆ" ಎಂದರು.

ಕಾವೇರಿ ವಿವಾದದ ಹಿಂದಿನ ಅನುಭವ ಹಂಚಿಕೊಂಡ ಪಾಟೀಲ್

ಹಿಂದೆ ಕಾವೇರಿ ವಿವಾದವು ಸುಪ್ರೀಂಕೋರ್ಟ್ ಮುಂದೆ ಬಂದಾಗ ತಾನು ನೀರಾವರಿ ಸಚಿವನಾಗಿದ್ದೆ ಎಂಬುದನ್ನು ನೆನಪಿಸಿಕೊಂಡ ಪಾಟೀಲ್, "ನಮ್ಮ ಪ್ರಯತ್ನದಿಂದ ರಾಜ್ಯಕ್ಕೆ 14 ಟಿಎಂಸಿ ಅಡಿ ನೀರು ಹೆಚ್ಚು ಸಿಕ್ಕಿತು. ಜೊತೆಗೆ, ಬೆಂಗಳೂರಿಗೂ ಕುಡಿಯುವ ನೀರು ಪೂರೈಸಲು ಕಾವೇರಿ ನೀರನ್ನು ಬಳಸಿಕೊಳ್ಳಲು ಅವಕಾಶ ಸಿಕ್ಕಿತು. ನಮ್ಮ ರಾಜಧಾನಿಯ ಮೂರನೇ ಎರಡರಷ್ಟು ಭಾಗ ಕಾವೇರಿ ಕೊಳ್ಳದಿಂದ ಹೊರಗಿದೆ ಎಂದು ತಮಿಳುನಾಡಿನವರು ತಕರಾರು ತೆಗೆದಿದ್ದರು" ಎಂದು ವಿವರಿಸಿದರು.

"ಆಗ ನಾವು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳು ಚೆನ್ನೈನ ಕುಡಿಯುವ ನೀರಿನ ಅಗತ್ಯಕ್ಕೆ ಕೃಷ್ಣಾ ಕೊಳ್ಳದಲ್ಲಿನ ತಮ್ಮ ಪಾಲಿನ ತಲಾ 5 ಟಿಎಂಸಿಯಂತೆ ಒಟ್ಟು 15 ಟಿಎಂಸಿ ನೀರನ್ನು ಬಿಟ್ಟುಕೊಟ್ಟಿದ್ದನ್ನು ನೆನಪಿಸಬೇಕಾಯಿತು. ಈ ವಿಚಾರದಲ್ಲಿ ನಮ್ಮ ಪರ ವಕೀಲ ಎಫ್.ಎಸ್. ನಾರಿಮನ್ ಪರಿಣಾಮಕಾರಿಯಾಗಿ ವಾದ ಮಂಡಿಸಿದರು" ಎಂದು ಅವರು ಮಾಹಿತಿ ನೀಡಿದರು.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಹೋರಾಟದ ಪ್ರಶ್ನೆಯೇನೂ ಇಲ್ಲ. ಕುಮಾರಸ್ವಾಮಿಯವರು ಈಗ ಕೇಂದ್ರ ಸಂಪುಟದಲ್ಲಿದ್ದಾರೆ. ಅವರು ರಾಜ್ಯಕ್ಕೆ ಸಹಾಯ ಮಾಡಲು ಅವಕಾಶವಿದೆ. ಇದರತ್ತ ನಮ್ಮ ಗಮನವಿರಬೇಕಷ್ಟೆ. ಕ್ಷುಲ್ಲಕ ರಾಜಕಾರಣ ಮಾಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಪಾಟೀಲ್ ಹೇಳಿದರು.

ದೇವನಹಳ್ಳಿ ಭೂಸ್ವಾಧೀನ ವಿವಾದ ಇತ್ಯರ್ಥಕ್ಕೆ ಭರವಸೆ

ದೇವನಹಳ್ಳಿ ಭೂಸ್ವಾಧೀನ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಂ.ಬಿ. ಪಾಟೀಲ್, "ಕೃಷಿ ಮತ್ತು ಕೈಗಾರಿಕೆ ಎರಡನ್ನೂ ನಾವು ಸರಿದೂಗಿಸಿಕೊಂಡು ಹೋಗಬೇಕಾಗಿದೆ. ಈ ಸಂಬಂಧ ಈಗಾಗಲೇ ನಾಲ್ಕೈದು ಮಹತ್ವದ ಸಭೆಗಳು ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶುಕ್ರವಾರ ಸಭೆ ನಡೆಸಿ, ಹತ್ತು ದಿನಗಳ ಕಾಲಾವಕಾಶ ಕೇಳಿದ್ದಾರೆ. ಇದರಲ್ಲಿ ಕಾನೂನು ತೊಡಕುಗಳಿದ್ದು, ಅವುಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಜೊತೆಗೆ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಕೊಡುವ ಅಗತ್ಯವಿದೆ. ಮುಂದಿನ ಕೆಲವೇ ದಿನಗಳಲ್ಲಿ ಇದೆಲ್ಲ ಇತ್ಯರ್ಥಗೊಳ್ಳಲಿದೆ" ಎಂದು ಭರವಸೆ ನೀಡಿದರು. 

Tags:    

Similar News