ಪಾವಿನಕುರ್ವೆ ಬಂದರು ಯೋಜನೆ | ಕಂಪೆನಿಗಳ ನಿರಾಸಕ್ತಿ: ಮತ್ತೆ ಟೆಂಡರ್‌ ಕರೆದ ಜಲ ಸಾರಿಗೆ ಮಂಡಳಿ

ಹೊನ್ನಾವರ ಕಡಲತೀರಗಳಲ್ಲಿ ಕಾಣುವ ಅಳಿವಿನಂಚಿನ ಆಲಿವ್‌ ರಿಡ್ಲೇ ಆಮೆಗಳ ಸಂತತಿ ನಶಿಸಿಹೋಗುವ ಆತಂಕವಿದೆ. ಉದ್ದೇಶಿತ ಬಂದರು ಯೋಜನೆಗಳು ಪರಿಸರ ಸಮತೋಲನಕ್ಕೆ ಪೆಟ್ಟು ನೀಡಲಿದೆ ಎಂಬುದು ಪರಿಸರವಾದಿಗಳ ವಾದ.;

Update: 2024-11-21 09:15 GMT

ಅದಾನಿ ಸಮೂಹ ಸೇರಿದಂತೆ ಯಾವುದೇ ಕಂಪೆನಿಗಳು ಆಸಕ್ತಿ ವಹಿಸದೇ ಕಡತ ಸೇರಿದ್ದ ಹೊನ್ನಾವರ ಜಿಲ್ಲೆಯ ಪಾವಿನಕುರ್ವೆ ಪ್ರದೇಶದ ಸರ್ವಋತು ಬಂದರು ನಿರ್ಮಾಣ ಸಂಬಂಧ ಈಗ ನಾಲ್ಕನೆಯ ಬಾರಿಗೆ ಜಾಗತಿಕ ಟೆಂಡರ್‌ ಕರೆಯುವ ಮೂಲಕ ಚಾಲನೆ ನೀಡಲು ಕರ್ನಾಟಕ ಜಲ ಸಾರಿಗೆ  ಮಂಡಳಿ ನಿರ್ಧರಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪಾವಿನಕುರ್ವೆಯಲ್ಲಿ ಖಾಸಗಿ ಸಹಭಾಗಿತ್ವದಡಿಯಲ್ಲಿ 3,047.86 ಕೋಟಿ ರೂ. ವೆಚ್ಚದಲ್ಲಿ ಸರ್ವಋತು ಬಂದರು ನಿರ್ಮಿಸುವ ಸಂಬಂಧ ಈಗ ಜಾಗತಿಕ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ.

ಇದಕ್ಕೆ ಮುನ್ನ ಮೂರು ಬಾರಿ ಟೆಂಡರ್‌ ಕರೆಯಲಾಗಿದ್ದರೂ, ಯಾವುದೇ ಕಂಪೆನಿಗಳು ಆಸಕ್ತಿ ತೋರಿಸಿರಲಿಲ್ಲ. ಈ ಪ್ರದೇಶಕ್ಕೆ ರೈಲು ಸಂಪರ್ಕ ಇಲ್ಲದೇ ಇರುವುದೂ ಕಂಪೆನಿಗಳ ನಿರಾಸಕ್ತಿಗೆ ಕಾರಣವಿರಬಹುದು. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ವಿಳಂಬವಾಗುತ್ತಿರುವುದೂ ಕಾರಣಗಳಲ್ಲಿ ಒಂದು ಎಂದು ಹೇಳಲಾಗಿದೆ. ಮೂರನೇ ಬಾರಿಯೂ ಟೆಂಡರ್‌ನಲ್ಲಿ ಯಾವುದೇ ಕಂಪನಿ ಆಸಕ್ತಿ ತೋರದೇ ಟೆಂಡರ್ ಪ್ರಕ್ರಿಯೆ ರದ್ದುಗೊಂಡಿತ್ತು. ದೇಶದ ಖಾಸಗಿ ಬಂದರು ಕಂಪನಿಯಾಗಿರುವ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (ಎಪಿಎಸ್‌ಇಝೆಡ್) ಹಿಂದಿನ ಟೆಂಡರ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಹುಸಿಯಾಗಿತ್ತು. ಈಗ ಮತ್ತೆ ನಾಲ್ಕನೇ ಬಾರಿ ಜಾಗತಿಕ ಟೆಂಡರ್‌ ಮೂಲಕ ಈ ಯೋಜನೆಯಲ್ಲಿ ಕಂಪೆನಿಗಳು ಭಾಹವಹಿಸುವಂತೆ ಆಮಂತ್ರಿಸಲಾಗಿದೆ.

ಪಾವಿನಕುರ್ವೆ ಬಂದರು

ಪಾವಿನಕುರ್ವೆ ಬಂದರಿನ ಅಭಿವೃದ್ಧಿಗೆ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪಾವಿನಕುರ್ವೆ ಗ್ರಾಮದ ಸಮೀಪದ ಶರಾವತಿ ಮತ್ತು ಬಡಗಣಿ ನದಿ ಮುಖಜ ಭಾಗದಲ್ಲಿದೆ.

ಈ ಬಂದರಿನ ಮೂಲಕ ಕಬ್ಬಿಣದ ಅದಿರು, ಕಲ್ಲಿದ್ದಲು ಮತ್ತು ಕೋಕಿಂಗ್ ಕಲ್ಲಿದ್ದಲು, ಸುಣ್ಣದ ಕಲ್ಲು ಮತ್ತು ಡಾಲಮೈಟ್, ಹಸಿರು ಹೈಡ್ರೋಜನ್, ಹಸಿರು ಅಮೋನಿಯಾ, ದ್ರವೀಕೃತ ನೈಸರ್ಗಿಕ ಅನಿಲ ಮತ್ತು ಸಿದ್ಧಪಡಿಸಿದ ಉಕ್ಕಿನ ಉತ್ಪನ್ನಗಳು ಮುಂತಾದ ಸರಕು ಸಾಮಗ್ರಿಗಳನ್ನು ನಿರ್ವಹಿಸಲು ಉದ್ದೇಶಿಸಲಾಗಿದೆ ಎಂದು ಜಲ ಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯ್‌ಪುರ ತಿಳಿಸಿದ್ದಾರೆ.

ಆರಂಭದಲ್ಲಿ 14 MTPA (ಮಿಲಿಯನ್ ಟನ್ ಪ್ರತಿ ವರ್ಷ) ಸಾಮರ್ಥ್ಯದ ಕಾರ್ಗೊ ನಿರ್ವಹಣೆಗೆ ಯೋಜಿಸಲಾಗಿದ್ದು, ಭವಿಷ್ಯದಲ್ಲಿ ಸುಮಾರು  40 MTPA ಗೆ ವಿಸ್ತರಿಸುವ ಸಾಧ್ಯತೆಯನ್ನು ಹೊಂದಿದೆ. ಬಂದರು 1,80,000 DWT (deadweight tonnage-ಹಡಗಿನ ಸರಕು ಸಾಗಣೆ ಸಾಮರ್ಥ್ಯ)ದ ಬೃಹತ್‌ ಗಾತ್ರದ ಹಡಗುಗಳನ್ನು ನಿರ್ವಹಿಸಲು ಆಧುನಿಕ, ಪರಿಸರ ಸ್ನೇಹಿ ಮತ್ತು ಹೆಚ್ಚಿನ ಸಾಮರ್ಥ್ಯದ ಉಪಕರಣಗಳೊಂದಿಗೆ ಆಳವಾದ ವಾಣಿಜ್ಯ ಹಡಗುಗಳು ತಂಗಲು ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಅಳವಡಿಸಲು ಈ ಬಂದರಿನಲ್ಲಿ ಅವಕಾಶವಿರುತ್ತದೆ.

ಬಂದರಿನ ಸುಗಮ ನಿರ್ವಹಣೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸುಮಾರು 214 ಹೆಕ್ಟರ್‌ ಬಂದರು ಪ್ರದೇಶ ಲಭ್ಯವಾಗುವ ಸಾಧ್ಯತೆಯಿದೆ. ಉದ್ದೇಶಿತ ಬಂದರು ಪ್ರದೇಶವನ್ನು ಹೂಳೆತ್ತುವಿಕೆಯ ಮಣ್ಣಿನಿಂದ ಭರ್ತಿ ಮಾಡಲು ಉದ್ದೇಶಿಸಲಾಗಿದೆ.

ಟೆಂಡರ್‌ ಆಹ್ವಾನ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ ನಲ್ಲಿ ಜಾಗತಿಕ ಟೆಂಡರ್ ನ್ನು ಆಹ್ವಾನಿಸಲಾಗಿದ್ದು ಯೋಜನೆಯ ದಾಖಲೆಗಳನ್ನು KPP ಪೋರ್ಟಲ್‌ನಿಂದ ಪಡೆಯಬಹುದು. ಟೆಂಡರ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಛೇರಿ, ಕರ್ನಾಟಕ ಜಲಸಾರಿಗೆ ಮಂಡಳಿ, ಬೆಂಗಳೂರಿಗೆ (ceokmb2019@gmail.com) ಗೆ ಇಮೇಲ್ ಮೂಲಕ ಸಂಪರ್ಕಿಸಬಹುದು.ಕರ್ನಾಟಕ ಜಲಸಾರಿಗೆ ಮಂಡಳಿಯು ಉದ್ದೇಶಿತ ಪಾವಿನಕುರ್ವೆ ಬಂದರಿನ ಅಭಿವೃದ್ಧಿಗಾಗಿ ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಅರ್ಹ ಉದ್ದಿಮೆದಾರರಿಂದ ಜಾಗತಿಕ ಬಿಡ್‌ನ್ನು ಆಹ್ವಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪರಿಸರವಾದಿಗಳ ವಿರೋಧ

ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಕಡಲತೀರಗಳಲ್ಲಿ ಆಲಿವ್ ರಿಡ್ಲೇ ಪ್ರಭೇದ ಕಡಲಾಮೆ ತನ್ನ ಸಂತಾನೋತ್ಪತ್ತಿ ಮಾಡುತ್ತವೆ. ಕಡಲ ಜೀವ ಸರಪಳಿಯಲ್ಲಿ ಆಮೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಮೀನುಗಳನ್ನೇ ಆಹಾರವಾಗಿ ಸೇವಿಸುವ ಜೆಲ್ಲಿ ಫಿಶ್‌ಗಳನ್ನು ನಿಯಂತ್ರಿಸುವಲ್ಲಿ ಆಮೆಗಳು ಬಹುಮುಖ್ಯ ಪಾಲುದಾರರಾಗಿದ್ದು, ಜೆಲ್ಲಿಫಿಶ್‌ಗಳ ಸಂಖ್ಯೆ ನಿಯಂತ್ರಣ ಮೀರಿದರೆ ಮತ್ಸ್ಯಕ್ಷಾಮ ಬರುವ ಸಾಧ್ಯತೆ ಇದೆ. ಇದು ಮೀನುಗಾರರ ಮೇಲೆ ನೇರ ಪರಿಣಾಮ ಬೀರಲಿದೆ. ಈಗಾಗಲೇ ಈ ಪ್ರಭೇಧಕ್ಕೆ ಮಾನವನ ಹಸ್ತಕ್ಷೇಪಗಳು ಮಾರಕವಾಗಿ ಪರಿಣಮಿಸಿದೆ. ಈ ನಡುವೆ, ಈ ಪ್ರದೇಶದಲ್ಲಿ ನಡೆಯುತ್ತಿರುವ ಬಂದರು ಕಾಮಗಾರಿಯು ಇನ್ನಷ್ಟು ಮಾರಣಾಂತಿಕವಾಗಿದೆ. ಈ ಕಾರಣಕ್ಕಾಗಿ ಬಂದರುಗಳ ಅಭಿವೃದ್ಧಿ ಸಂಬಂಧ ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಮಾನವ ಹಸ್ತಕ್ಷೇಪದಿಂದ ಅಳಿವಿನಂಚಿನಲ್ಲಿರುವ ಆಮೆಗಳ ಸಂತತಿ ನಶಿಸಿಹೋಗುವ  ಆತಂಕ ಎದುರಾಗಿದೆ. ಹೊನ್ನಾವರ ಕಡಲ ಕಿನಾರೆಯಲ್ಲಿ ಉದ್ದೇಶಿತ ಎಚ್‌ಪಿಪಿಎಲ್‌ ಖಾಸಗಿ ಬಂದರು ಯೋಜನೆ,  ಪಾವಿನಕುರ್ವೆ  ಬಂದರು ಯೋಜನೆ ಹಾಗೂ ಅಂಕೋಲಾದ ಬೇಲೇಕೇರಿ-ಕೇಣಿ ಬಂದರು ಯೋಜನೆಗಳು ಸ್ಥಳೀಯ ಮೀನುಗಾರರ ಬದುಕು-ನಂಬಿಕೆಗಳನ್ನು ಮಾತ್ರವಲ್ಲದೇ ಪರಿಸರ ಸಮತೋಲನಕ್ಕೂ ಭಾರೀ ಪೆಟ್ಟು ನೀಡುತ್ತಿವೆ ಎಂಬುದು ಪರಿಸರವಾದಿಗಳ ಆತಂಕವಾಗಿದೆ.

Tags:    

Similar News