ಧರ್ಮಸ್ಥಳ ಪ್ರಕರಣದ ಎಸ್ಐಟಿ ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್
ದೂರುದಾರ ವ್ಯಕ್ತಿ ತೋರಿಸಿದ ಸ್ಥಳಗಳಲ್ಲಿ ಎಸ್ಐಟಿ ಶೋಧ ಕಾರ್ಯ ನಡೆಸುತ್ತಿದೆ. ಎಲ್ಲಿ ಗುರುತಿಸಬೇಕು, ಹೇಗೆ ತನಿಖೆ ನಡೆಸಬೇಕು ಎಂದು ಸರ್ಕಾರ ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ಸಚಿವ ಜಿ. ಪರಮೇಶ್ವರ್ ತಿಳಿಸಿದರು.;
ಗೃಹ ಸಚಿವ ಡಾ.ಜಿ. ಪರಮೇಶ್ವರ್
ಧರ್ಮಸ್ಥಳದಲ್ಲಿ ಅಸ್ತಿಪಂಜರಗಳು ಪತ್ತೆಯಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಸರ್ಕಾರವು ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ, ಹಲವು ವಿಷಯಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ದೂರುದಾರ ವ್ಯಕ್ತಿ ತೋರಿಸಿದ ಸ್ಥಳಗಳಲ್ಲಿ ಎಸ್ಐಟಿ ಶೋಧ ಕಾರ್ಯ ನಡೆಸುತ್ತಿದೆ. ಎಲ್ಲಿ ಗುರುತಿಸಬೇಕು, ಹೇಗೆ ತನಿಖೆ ನಡೆಸಬೇಕು ಎಂದು ಸರ್ಕಾರ ಯಾವುದೇ ನಿರ್ದೇಶನ ನೀಡುವುದಿಲ್ಲ. ತನಿಖೆಯು ಒಂದು ಹಂತಕ್ಕೆ ಬಂದ ನಂತರ ಎಸ್ಐಟಿಯೇ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ," ಎಂದು ತಿಳಿಸಿದರು.
ಎಸ್ಐಟಿ ಮುಖ್ಯಸ್ಥರ ಭೇಟಿ ಕುರಿತು ಸ್ಪಷ್ಟನೆ
ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರ ಭೇಟಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಅವರು ನನ್ನನ್ನು ಭೇಟಿ ಮಾಡಿದ್ದು ನಿಜ. ಆದರೆ, ಆ ಭೇಟಿಯಲ್ಲಿ ಧರ್ಮಸ್ಥಳ ಪ್ರಕರಣದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸೇವಾ ಹಿರಿತನದ ಆಧಾರದ ಮೇಲೆ ಅವರಿಗೆ ಕೇಂದ್ರಸೇವೆಗೆ ಹೋಗುವ ಸಾಧ್ಯತೆಯಿದ್ದು, ಆ ವಿಷಯವಾಗಿ ಮಾತ್ರ ಚರ್ಚಿಸಲಾಯಿತು. ಅವರು ಕೇಂದ್ರಕ್ಕೆ ಹೋಗುತ್ತಾರೆಯೇ, ಇಲ್ಲವೇ ಎಂಬುದು ಇನ್ನೂ ಅಂತಿಮವಾಗಿಲ್ಲ," ಎಂದು ಸ್ಪಷ್ಟನೆ ನೀಡಿದರು.
ಸಾರಿಗೆ ಮುಷ್ಕರ
ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದ ಕುರಿತು ಮಾತನಾಡಿದ ಅವರು, "ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಕೆಲವು ಕಡೆ ಬಸ್ಸುಗಳು ಸಂಚರಿಸುತ್ತಿರುವುದರಿಂದ ಸಂಪೂರ್ಣ ಬಂದ್ನ ಪರಿಣಾಮ ಉಂಟಾಗಿಲ್ಲ. ಎಲ್ಲಾ ಕಡೆಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಒಂದು ವೇಳೆ ಸಣ್ಣಪುಟ್ಟ ಗಲಾಟೆಗಳು ನಡೆದರೆ, ಸ್ಥಳೀಯ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆ," ಎಂದು ಹೇಳಿದರು.
ಒಳಮೀಸಲಾತಿ ವರದಿ ಕ್ಯಾಬಿನೆಟ್ನಲ್ಲಿ ಚರ್ಚೆ
ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ ಪರಮೇಶ್ವರ್, "ವರದಿಯಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ. ಅದನ್ನು ಸಚಿವ ಸಂಪುಟ ಸಭೆಯಲ್ಲಿ (ಕ್ಯಾಬಿನೆಟ್) ಚರ್ಚಿಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು," ಎಂದರು.