ಚಂದನವನದಲ್ಲಿ ʼಹೇಮಾ ಮಾದರಿʼ ಸಮಿತಿ | ಸ್ಪಷ್ಟ ತೀರ್ಮಾನವಿಲ್ಲದೆ ಮುಗಿದ ವಾಣಿಜ್ಯ ಮಂಡಳಿ ಸಭೆ

ಸಭೆಯಲ್ಲಿ ಪರ-ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಲೈಂಗಿಕ ದೌರ್ಜನ್ಯ ಕುರಿತಂತೆ Prevention of Sexual Harassment (PoSH) ಕಾನೂನಿನಡಿ ಪ್ರಕರಣ ದಾಖಲಿಸುವ ಸಂಬಂಧ ದೂರು ನೀಡಲು ಪ್ರತ್ಯೇಕ ಸಂಘಟನೆ ಅಥವಾ ಹೇಮಾ ಮಾದರಿ ಸಮಿತಿ ಬೇಕೆಂದು ಒಂದು ಬಣ ಒತ್ತಾಯಿಸಿದರೆ, ಪೊಲೀಸರಿಗೆ ದೂರು ನೀಡಬಹುದು, ಆದರೆ ಅದಕ್ಕೆ ಪತ್ಯೇಕ ಸಮಿತಿ ಅಥವಾ ಸಂಘಟನೆ ಅವಶ್ಯವಿಲ್ಲ ಎಂದು ಇನ್ನೊಂದು ಬಣ ವಾದಿಸಿದೆ;

Update: 2024-09-16 11:45 GMT

ಚಂದನವನದಲ್ಲಿ ಲೈಂಗಿಕ ಕಿರುಕುಳ ಮತ್ತು ಇತರ ದೌರ್ಜನ್ಯಗಳ ಕುರಿತು ಸೋಮವಾರ ನಡೆದ ಮಹಿಳಾ ಕಲಾವಿದರ ಸಭೆಯಲ್ಲಿ ವಾದ ವಿವಾದಗಳು ನಡೆದಿದ್ದು, ಕೇರಳದ ಹೇಮಾ ಸಮಿತಿ ಮಾದರಿಯಲ್ಲಿ ಸಮಿತಿಯೊಂದನ್ನು ರಚಿಸುವ ಸಂಬಂಧ ತಾರ್ಕಿಕ ಅಂತ್ಯಕ್ಕೆ ಬರಲು ಸಭೆ ವಿಫಲವಾಗಿದೆ. ಆದರೆ  ಮಹಿಳಾ ಕಲಾವಿದರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಸಂಬಂಧ ಸಮೀಕ್ಷೆ ನಡೆಸಿ ಮುಂದಿನ ಕ್ರಮಕ್ಕೆ ಮುಂದಾಗುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ನಿರ್ಧರಿಸಿದೆ. 

ಕರ್ನಾಟಕ ರಾಜ್ಯ ಮಹಿಳಾ ಆಯೋಗ ಸೂಚನೆ ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಈ ಸಭೆ ಕರೆದಿದ್ದು, ಸಭೆಯಲ್ಲಿ ಮಂಡಳಿ ಅಧ್ಯಕ್ಷ ಎನ್‌.ಎಂ. ಸುರೇಶ್‌, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಭಾಗಿಯಾಗಿದ್ದರು. ಉಳಿದಂತೆ ಹಿರಿಯ ಕಲಾವಿದರಾದ ನಟಿ ಭಾವನಾ, ನಿರ್ದೇಶಕಿ ಕವಿತಾ ಲಂಕೇಶ್‌, ಸೇರಿದಂತೆ ಹಲವರು ಭಾಗಿಯಾಗಿದ್ದರು. ಕೇರಳದ ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟಕದಲ್ಲೂ ಮಹಿಳಾ ಸಿನಿಮಾ ಕಲಾವಿದರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಮತ್ತು ಆ ಸಂಬಂಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿದ್ದು, ವಾದ ವಿವಾದ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಸಭೆಯಲ್ಲಿ ಪರ-ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಲೈಂಗಿಕ ದೌರ್ಜನ್ಯಗಳ ಕುರಿತಂತೆ Prevention of Sexual Harassment (PoSH) ಕಾನೂನಿನಡಿ ಪ್ರಕರಣ ದಾಖಲಿಸುವ ಸಂಬಂಧ ದೂರು ನೀಡಲು ಪ್ರತ್ಯೇಕ ಸಂಘಟನೆ ಅಥವಾ ಹೇಮಾ ಮಾದರಿ ಸಮಿತಿ ಬೇಕೆಂದು ಒಂದು ಬಣ ಒತ್ತಾಯಿಸಿದರೆ, ಪೊಲೀಸರಿಗೆ ದೂರು ನೀಡಬಹುದು, ಆದರೆ ಅದಕ್ಕೆ ಪತ್ಯೇಕ ಸಮಿತಿ ಅಥವಾ ಸಂಘಟನೆ ಅವಶ್ಯವಿಲ್ಲ ಎಂದು ಇನ್ನೊಂದು ಬಣ ವಾದಿಸಿತು ಎಂದು ಮೂಲಗಳು ತಿಳಿಸಿವೆ. 

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ, ಇದೊಂದು ಪೂರ್ವಭಾವಿ ಸಭೆಯಾಗಿದ್ದು, ಸಮೀಕ್ಷೆ ನಡೆಸಿ ಅವರ ಹೆಸರುಗಳನ್ನು ಅನಾಮಧೇಯವಾಗಿಟ್ಟು ಅಭಿಪ್ರಾಯ ಸಂಗ್ರಹಿಸುವುದಾಗಿ ಹಾಗೂ ಆ ಬಳಿಕ ನಿರ್ದಿಷ್ಟ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಫೈರ್‌ ಸಂಘಟನೆ ಒತ್ತಾಯ

ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಸೇರಿದಂತೆ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯ ಕುರಿತು ಅಧ್ಯಯನಕ್ಕೆ ಕೇರಳದ ನ್ಯಾಯಮೂರ್ತಿ ಹೇಮಾ ಸಮಿತಿಯ ಮಾದರಿಯಲ್ಲಿ ರಾಜ್ಯಲ್ಲಿಯೂ ಸಮಿತಿ ನೇಮಕ ಮಾಡುವಂತೆ ʼಫೈರ್ʼ ಸಂಸ್ಥೆಯ ಪ್ರಮುಖರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದರು.

ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದ ಹಿರಿಯ ಲೇಖಕಿ, ಪತ್ರಕರ್ತೆ ವಿಜಯಮ್ಮ, ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್, ನಟಿಯರಾದ ಶೃತಿ ಹರಿಹರನ್, ನೀತೂ ಶೆಟ್ಟಿ ಅವರನ್ನೊಳಗೊಂಡ ಫೈರ್(Film Industry for Rights and Equality (FIRE) ತಂಡ, ಕನ್ನಡ ಚಿತ್ರರಂಗದಲ್ಲಿಯೂ ಸ್ತ್ರೀ ಶೋಷಣೆ ಮುಂದುವರಿದಿದೆ. ರಂಗದಲ್ಲಿ ಮಹಿಳಾ ಸುರಕ್ಷೆ ಮತ್ತು ಘನತೆ ಖಾತರಿಪಡಿಸಲು ನ್ಯಾ. ಹೇಮಾ ಕಮಿಟಿಯ ಮಾದರಿಯಲ್ಲಿ ಕಮಿಟಿಯೊಂದನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿತ್ತು.ಕನ್ನಡ ಚಿತ್ರರಂಗದಲ್ಲಿ ಕಲಾವಿದೆಯರು ಎದುರಿಸುತ್ತಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ಅಥವಾ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣಾ ಸಮಿತಿಯೊಂದನ್ನು ರಚಿಸಬೇಕೆಂಬ ಒತ್ತಾಯ ಅವರದಾಗಿತ್ತು.

ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ʼಫೈರ್ʼ ಸಂಘಟನೆ ತಾನೇ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಬರೆದಿತ್ತು. ಆ ಪತ್ರಕ್ಕೆ ನಿರ್ದೇಶಕಿ ಕವಿತಾ ಲಂಕೇಶ್, ನಟ ಚೇತನ್, ನಟಿ ಶೃತಿ ಹರಿಹರನ್ ಸೇರಿದಂತೆ 130ಕ್ಕೂ ಹೆಚ್ಚು ಮಂದಿ ಸಿನಿಮಾ ರಂಗದ ಕಲಾವಿದರು, ತಂತ್ರಜ್ಞರು ಸಹಿ ಮಾಡಿದ್ದರು.

ಕನ್ನಡ ಚಿತ್ರರಂಗದಲ್ಲಿ ಕೂಡ ನಟಿಯರು, ಕಲಾವಿದರ ಲೈಂಗಿಕ ಶೋಷಣೆ, ಕಿರುಕುಳ, ದಬ್ಬಾಳಿಕೆಯಂತಹ ಅನಿಷ್ಟಗಳು ಚಾಲ್ತಿಯಲ್ಲಿವೆ. ಮಹಿಳೆಯರಿಗೆ ಸರಿಯಾದ ಸೌಕರ್ಯ ಮತ್ತು ಸೌಲಭ್ಯಗಳೂ ಇಲ್ಲ. ಮಹಿಳಾ ಸುರಕ್ಷೆ ಮತ್ತು ಘನತೆಯನ್ನು ಖಾತರಿಪಡಿಸಲು ಸರ್ಕಾರ ಕೂಡಲೇ ಆ ಕುರಿತ ಅಧ್ಯಯನಕ್ಕೆ ಸಮಿತಿ ನೇಮಕ ಮಾಡಬೇಕು ಎಂದು ʼಫೈರ್ʼ ಒತ್ತಾಯಿಸಿತ್ತು.

ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಇತರ ಸಮಸ್ಯೆಗಳು ಎದುರಾದರೆ, ಅದರ ವಿರುದ್ಧ ಹೋರಾಡುವ ಒಂದು ಸಂಘಟನೆಯೇ ʼಫೈರ್‌ʼ. ಇದನ್ನು 2017ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಮಲಯಾಳಂ ಚಿತ್ರರಂಗದಲ್ಲಿ ನ್ಯಾ. ಹೇಮಾ ಕಮಿಟಿ ವರದಿ ಸಂಚಲನ ಸೃಷ್ಟಿಸಿದ ಬಳಿಕ ಸಮಿತಿ ಇದೀಗ ಹೆಚ್ಚು ಸಕ್ರಿಯವಾಗಿದೆ.

Tags:    

Similar News