ಬೀದಿ ನಾಯಿಗಳಿಗೆ ಭಕ್ಷ್ಯ ಭೋಜನ ಇಲ್ಲ; ಕೋಳಿ ತ್ಯಾಜ್ಯ ಬಳಸಿ ತಯಾರಿಸಿದ ಊಟವಷ್ಟೇ- ಬಿಬಿಎಂಪಿ ಸ್ಪಷ್ಟನೆ
ನಾಯಿಗಳಿಗೆ ವಲಯವಾರು ಆಹಾರ ನೀಡುವುದರಿಂದ ಜನನ ನಿಯಂತ್ರಣ ಮತ್ತು ರೇಬೀಸ್ ವಿರೋಧಿ ಲಸಿಕಾಕರಣ ಪ್ರಮಾಣವನ್ನೂ ಹೆಚ್ಚಿಸಬಹುದಾಗಿದೆ.;
ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಕ್ರಮವು ಪರ-ವಿರೋಧದ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಬಿಬಿಎಂಪಿ ಭಾನುವಾರ ಯೋಜನೆ ಕುರಿತು ಸ್ಪಷ್ಟನೆ ನೀಡಿದೆ.
ಬೀದಿ ನಾಯಿಗಳಿಗೆ ಆಹಾರ ನೀಡುವುದು ಹೊಸ ಕಾರ್ಯಕ್ರಮವಲ್ಲ, ಕೋವಿಡ್ ಸಮಯದಲ್ಲಿ ಪಾಲಿಕೆಯು ಆಹಾರ ನೀಡುತ್ತಿತ್ತು. ಇದೇ ಕಾರ್ಯಕ್ರಮವನ್ನು ಈಗ ಮುಂದುವರಿಸಲಾಗುತ್ತಿದೆ. ಕಳೆದ ವರ್ಷದ ಕಾರ್ಯಕ್ರಮದಿಂದ ಕಲಿತ ಪಾಠಗಳ ಆಧಾರದ ಮೇಲೆ ಯೋಜನೆಯಲ್ಲಿ ಸುಧಾರಣೆ ತರಲಾಗುತ್ತಿದೆ. ಕೇಂದ್ರ ಸರ್ಕಾರವು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮೂಲಕ ವ್ಯಾಖ್ಯಾನಿಸಿದ ಪ್ರಾಣಿ ಜನನ ನಿಯಂತ್ರಣ ನಿಯಮಗಳ ಪ್ರಕಾರ ಆಹಾರ ನೀಡುವುದು ಕಾನೂನಾತ್ಮಕ ಅವಶ್ಯಕತೆಯಾಗಿದೆ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ವಿಕಾಸ್ ಸುರಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಬಿಬಿಎಂಪಿ ಈಗ ಪ್ರತಿ ವಲಯದಲ್ಲಿ ಆಹಾರ ತಯಾರಕರನ್ನು ಆಯಾ ವಲಯ ಸಹಾಯಕ ನಿರ್ದೇಶಕರು ಗುರುತಿಸಿದ ಮತ್ತು ಮೇಲ್ವಿಚಾರಣೆ ಮಾಡುವ ಸ್ಥಳಗಳಲ್ಲಿ ಪೌಷ್ಠಿಕ ಆಹಾರ ಒದಗಿಸಲು ಟೆಂಡರ್ ಕರೆದಿದೆ.
ಯೋಜನೆಯಿಂದ ನಾಯಿಗಳನ್ನು ಹಿಡಿದು ಸಂತಾಹರಣ ಚಿಕಿತ್ಸೆಗೆ ಒಳಪಡಿಸಬಹುದಾಗಿದೆ. ಒಂದು ನಿರ್ದಿಷ್ಟ ಸ್ಥಳದಲ್ಲಿ ಆಹಾರ ಲಭ್ಯತೆವಾದರೆ ನಾಯಿಗಳು ಗುಂಪುಗಾರಿಕೆ ಹಾಗೂ ಕ್ರೌರ್ಯದ ಪ್ರವೃತ್ತಿ ಕಡಿಮೆಯಾಗಲಿದೆ. ನಾಯಿ ಕಡಿತಗಳ ಪ್ರಮಾಣವೂ ತಗ್ಗಲಿದೆ ಎಂದು ಹೇಳಿದ್ದಾರೆ.
ನಾಯಿಗಳಿಗೆ ವಲಯವಾರು ಆಹಾರ ನೀಡುವುದರಿಂದ ಜನನ ನಿಯಂತ್ರಣ ಮತ್ತು ರೇಬೀಸ್ ವಿರೋಧಿ ಲಸಿಕಾಕರಣ ಪ್ರಮಾಣವನ್ನೂ ಹೆಚ್ಚಿಸಬಹುದಾಗಿದೆ. ಆಕ್ರಮಣಕಾರಿ ಧೋರಣೆಯೂ ಕಡಿಮೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಯೋಜಿತ ಕೋರ್ ವ್ಯಾಕ್ಸಿನೇಷನ್ ಜತೆಗೆ ಉತ್ತಮ ಆಹಾರ ಪಡೆದ ನಾಯಿಗಳಲ್ಲಿ ರೋಗ ಹರಡುವಿಕೆ ಪ್ರಮಾಣ ತಗ್ಗಲಿದೆ. ರೇಬೀಸ್ ನಿಯಂತ್ರಿಸುವ ಒಟ್ಟಾರೆ ಉದ್ದೇಶದಿಂದ ಬೀದಿ ನಾಯಿಗಳಿಗೆ ಪ್ರಾಣಿ ಆರೋಗ್ಯ ಕಾರ್ಯಕ್ರಮದ ಮೂಲಕ ಊಟ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು 2.7 ಲಕ್ಷ ಬೀದಿ ನಾಯಿಗಳಿವೆ. ಇವುಗಳಲ್ಲಿ ಹಸಿವಿನಿಂದ ಬಳಲುವ ಆಯ್ದ 5000 ನಾಯಿಗಳಿಗೆ ಮಾತ್ರ ಆಹಾರ ನೀಡಲಾಗುತ್ತದೆ. ಈಗಾಗಲೇ ಶೇ 70 ರಷ್ಟು ಸಂತಾನಹರಣ ಶಸ್ತ್ರ ಚಿಕಿತ್ಸೆಯ ಗುರಿ ತಲುಪಲಾಗಿದೆ. ಆದರೆ ಕೆಲವು ವಲಯಗಳು ಮತ್ತು ಕೆಲವು ವಾರ್ಡ್‌ಗಳಲ್ಲಿ ನಾಯಿಗಳನ್ನು ಹಿಡಿಯುವುದು ಅಥವಾ ಕಡಿತ ತಪ್ಪಿಸುವುದು ದೊಡ್ಡ ಸವಾಲಾಗಿದೆ. ಇಂತಹ ಪ್ರದೇಶಗಳಲ್ಲಿ ಬದಲಾವಣೆ ತರಲು ಆಹಾರ ನೀಡುವುದನ್ನು ಕೇಂದ್ರೀಕರಿಸಲಾಗಿದೆ ಎಂದು ಸ್ಪಷ್ಟಿಕರಣ ನೀಡಿದ್ದಾರೆ.
ನಾಯಿಗಳಿಗೆ ಕೋಳಿ ಮಾಂಸದ ತ್ಯಾಜ್ಯವನ್ನು ಬಳಸಿ ಆಹಾರ ಸಿದ್ಧಪಡಿಸಿ ನೀಡಲಾಗುವುದು. ಚಿಕನ್ ರೈಸ್, ಚಿಕನ್ ಬಿರಿಯಾನಿ ಎಂದು ಟೆಂಡರ್ ನಲ್ಲಿ ನಮೂದಿಸಿಲ್ಲ. ಸಸ್ಯಾಹಾರವನ್ನು ಬೀದಿ ನಾಯಿಗಳು ತಿನ್ನುವುದಿಲ್ಲ ಎಂಬ ಕಾರಣ ಮಾಂಸಾಹಾರ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರತಿ ಒಂದು ನಾಯಿಗೆ ದಿನದ ಆಹಾರಕ್ಕೆ 11 ರೂ. ವೆಚ್ಚ ಮಾಡಲಾಗುತ್ತಿದೆ. ಆಹಾರ ಸಾಗಾಣಿಕೆ ವೆಚ್ಚ, ಸ್ವಚ್ಛತೆ, ಜಿಎಸ್‌ಟಿ ಸೇರಿದಂತೆ ಒಟ್ಟು ವೆಚ್ಚ 22.42 ರೂ. ಆಗಲಿದೆ. ಭಾರತ ಪ್ರಾಣಿ ಕಲ್ಯಾಣ ಮಂಡಳಿಯ ಕೈಪಿಡಿ, ಸಂಶೋಧನೆಯ ಶಿಫಾರಸ್ಸು ಆಧರಿಸಿ ಆಹಾರ ವಿತರಣೆ ಯೋಜನೆ ರೂಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.