ಕೇಂದ್ರ ಸಚಿವ ಎಚ್‌ಡಿಕೆ ವಿರುದ್ಧ ಬಲವಂತದ ಕ್ರಮ ಬೇಡ; ಹೈಕೋರ್ಟ್‌ ತಾಕೀತು

ಅರ್ಜಿದಾರರಾದ ಕುಮಾರಸ್ವಾಮಿ ಹಾಗೂ ಇತರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್‌ ಆದೇಶಿಸಿದೆ.

Update: 2024-11-07 08:12 GMT

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಅವರು ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಎಫ್ಐಆರ್ ಪ್ರಶ್ನಿಸಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಹಷ್ಮತ್ ಪಾಷಾ ಅವರು, ಎಡಿಜಿಪಿ ಚಂದ್ರಶೇಖರ್ ಅವರು ದಾಖಲಿಸಿರುವ ಎಫ್ಐಆರ್‌ನಲ್ಲಿ ಸುಳ್ಳು ಹಾಗೂ ಕಪೋಲಕಲ್ಪಿತ ಆರೋಪಗಳಿವೆ. ತಮ್ಮ ಕಕ್ಷಿದಾರರನ್ನು ಅವಮಾನಿಸುವ ಏಕೈಕ ಉದ್ದೇಶದಿಂದ ಎಫ್ಐಆರ್ ದಾಖಲಿಸಿದ್ದಾರೆ. ಚಂದ್ರಶೇಖರ್ ದಾಖಲಿಸಿರುವ ದೂರಿನ ಹಿಂದೆ ಕೆಲ ರಾಜಕೀಯ ವಿರೋಧಿಗಳ ಕೈವಾಡವಿದೆ. ಇದೇ ಪ್ರಕರಣವನ್ನು ನೆಪವಾಗಿರಿಸಿಕೊಂಡು ಹಳೆಯ ಪ್ರಕರಣಗಳಲ್ಲಿ ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾಸಿಕ್ಯೂಷನ್ ತಯಾರಿ ನಡೆಸಿದೆ ಎಂದು ನ್ಯಾಯಪೀಠದ ಗಮನ ಸೆಳೆದರು.

ಅರ್ಜಿದಾರರ ಪರ ವಾದ ಮಾನ್ಯ ಮಾಡಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ರಾಜ್ಯ ಅಭಿಯೋಜನಾ ಇಲಾಖೆಗೆ ಆದೇಶಿಸಿದರು. ಜೊತೆಗೆ ಪ್ರತಿವಾದಿ ಎಂ.ಚಂದ್ರಶೇಖರ್ ಅವರಿಗೆ ತುರ್ತು ನೋಟಿಸ್ ನೀಡಲು ಸೂಚಿಸಿ, ವಿಚಾರಣೆಯನ್ನು ಡಿ.5ಕ್ಕೆ ಮುಂದೂಡಿದರು.

ತಮ್ಮ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಇತರರು ಸುಳ್ಳು ಆರೋಪಗಳನ್ನು ಹೊರಿಸಿ, ಬೆದರಿಕೆ ಹಾಕಿದ್ದರು ಎಂದು ದೂರಿ ಎಡಿಜಿಪಿ ಎಂ.ಚಂದ್ರಶೇಖರ್ ಅವರು ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಕೇಂದ್ರ ಸಚಿವ ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ವಿರುದ್ಧ ಎಫ್ಐಆರ್ ದಾಖಲಾಗಿತ್ತು.

Tags:    

Similar News