ಟೆಕ್ಕಿ ಆತ್ಮಹತ್ಯೆ ಪ್ರಕರಣ | ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಅತುಲ್‌ ಪತ್ನಿ

ಬೆಂಗಳೂರಿನ ಮಾರತ್ತಹಳ್ಳಿ ಸಮೀಪದ ಮಂಜುನಾಥ ಲೇಔಟ್‌ನಲ್ಲಿರುವ ಡಾಲ್ಫಿನಿಯಂ ಅಪಾರ್ಟ್‌ಮೆಂಟ್‌ನಲ್ಲಿ ಅತುಲ್‌ ಸುಭಾಷ್‌ ಡಿ.9 ರಂದು ರಾತ್ರಿ ವೈವಾಹಿಕ ಕಿರುಕುಳದಿಂದ ಬೇಸತ್ತು 24 ಪುಟಗಳ ಡೆತ್‌ನೋಟ್‌ ಬರೆದಿಟ್ಟು, 81 ನಿಮಿಷದ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.;

Update: 2024-12-14 11:24 GMT
ಅಲಹಾಬಾದ್‌ ಹೈಕೋರ್ಟ್‌

ಟೆಕ್ಕಿ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬದವರಿಗಾಗಿ ಕರ್ನಾಟಕ ಹಾಗೂ ಉತ್ತರಪ್ರದೇಶ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿರುವ ಹೊತ್ತಿನಲ್ಲೇ ಆರೋಪಿಗಳು ಅಜ್ಞಾತ ಸ್ಥಳದಿಂದ ಅಲಹಾಬಾದ್ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಮಾರತ್ತಹಳ್ಳಿ ಸಮೀಪದ ಮಂಜುನಾಥ ಲೇಔಟ್‌ನಲ್ಲಿರುವ ಡಾಲ್ಫಿನಿಯಂ ಅಪಾರ್ಟ್‌ಮೆಂಟ್‌ನಲ್ಲಿ ಅತುಲ್‌ ಸುಭಾಷ್‌ ಡಿ. 9 ರಂದು ರಾತ್ರಿ ವೈವಾಹಿಕ ಕಿರುಕುಳದಿಂದ ಬೇಸತ್ತು 24 ಪುಟಗಳ ಡೆತ್‌ನೋಟ್‌ ಬರೆದಿಟ್ಟು, 81 ನಿಮಿಷದ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅತುಲ್‌ ಆತ್ಮಹತ್ಯೆಗೆ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬಸ್ಥರ ಪ್ರಚೋದನೆಯೇ ಕಾರಣ ಎಂದು ಆರೋಪಿಸಿ ಸಹೋದರ ಬಿಕಾಸ್‌ ಕುಮಾರ್‌ ಮಾರತ್ತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು ಎರಡು ತಂಡಗಳಾಗಿ ಉತ್ತರಪ್ರದೇಶದ ಜೌನಪುರಕ್ಕೆ ತೆರಳಿದ್ದರು. ಮೂರು ದಿನದಲ್ಲಿ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಶುಕ್ರವಾರ ನಿಖಿತಾ ಮನೆಗೆ ಬಾಗಿಲಿಗೆ ಸಮನ್ಸ್‌ ಅಂಟಿಸಿ ಗಡುವು ನೀಡಿದ್ದರು.

ಇದರಿಂದ ಎಚ್ಚೆತ್ತುಕೊಂಡ ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಸೋದರ ಅನುರಾಗ್‌ ಸಿಂಘಾನಿಯಾ ಹಾಗೂ ಚಿಕ್ಕಪ್ಪ ಸುಶೀಲ್‌ ಸಿಂಘಾನಿಯಾ ಶುಕ್ರವಾರವೇ ಅಜ್ಞಾತಸ್ಥಳದಿಂದ ಅಲಹಾಬಾದ್‌ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ವಾರಾಂತ್ಯದಲ್ಲಿ ಕೈಗೆತ್ತಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಮಾರತ್ತಹಳ್ಳಿ ಪೊಲೀಸರು ನೀಡಿರುವ ಸಮನ್ಸ್‌ ಅವಧಿ ಭಾನುವಾರಕ್ಕೆ ಮುಕ್ತಾಯವಾಗಲಿದ್ದು, ಆರೋಪಿಗಳು ವಿಚಾರಣೆಗೆ ಹಾಜರಾಗುವ ಅನಿವಾರ್ಯವಾಗಿದೆ. 

ಉತ್ತರಪ್ರದೇಶದ ಜೌನಪುರ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ, ಜೀವನಾಂಶ ಮತ್ತು ಮಕ್ಕಳ ಪಾಲನೆಗಾಗಿ ಪತ್ನಿ ನಿಖಿತಾ ಸಿಂಘಾನಿಯಾ ದಾಖಲಿಸಿದ್ದ ಹಲವು ಪ್ರಕರಣಗಳ ಕುರಿತು ಅತುಲ್‌ ಸುಭಾಷ್‌ ಕಾನೂನು ಹೋರಾಟ ನಡೆಸುತ್ತಿದ್ದರು.

ಡೆತ್‌ನೋಟ್‌, ಕಂಪ್ಯೂಟರ್ ಎಫ್ಎಸ್ಎಲ್‌ಗೆ ರವಾನೆ

ಅತುಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ತೀವ್ರಗೊಳಿಸಿರುವ ಪೊಲೀಸರು ಒಂದೆಡೆ ಉತ್ತರಪ್ರದೇಶದಲ್ಲಿ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದರೆ, ಬೆಂಗಳೂರಿನಲ್ಲಿ ಮತ್ತೊಂದು ತಂಡ ಡೆತ್‌ನೋಟ್‌, ಕಂಪ್ಯೂಟರ್ ಹಾಗೂ ಅಪಾರ್ಟ್‌ಮೆಂಟ್‌ನಲ್ಲಿ ದೊರೆತ ಇತರೆ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಶೀಲನೆಗೆ ಕಳುಹಿಸಿಕೊಟ್ಟಿದ್ದಾರೆ. ಡೆತ್ ನೋಟನ್ನು ಟೈಪ್ ಮಾಡಿರುವ ಕಾರಣ ಪೊಲೀಸರು ಕಂಪ್ಯೂಟರ್ ವಶಕ್ಕೆ ಪಡೆದಿದ್ದು, ಸೈಬರ್ ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ಮಹಿಳಾ ಪರ ಕಾನೂನು ದುರುಪಯೋಗಕ್ಕೆ ಕಳವಳ

ಅತುಲ್ ಸುಭಾಷ್ ವಾಸವಿದ್ದ ಅಪಾರ್ಟ್ಮೆಂಟ್ ಸಮೀಪದ ಸ್ಥಳೀಯರು ಘಟನೆ ಕುರಿತು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಸರ್ಕಾರಗಳು ಹಲವು ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ, ಇತ್ತೀಚೆಗೆ ಆ ಕಾನೂನುಗಳನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಕಾನೂನಿಗೆ ಪರಿಷ್ಕರಣೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ಮಂಜುನಾಥ ಲೇಔಟ್ ನಿವಾಸಿ ಜಿ.ಎಂ. ಹಂಚಿನಾಳ, ಹೆಣ್ಣು ಮಕ್ಕಳನ್ನು ನೂರೆಂಟು ಬಾರಿ ಆಲೋಚಿಸಿ ಮಾತನಾಡಿಸುವ ಪರಿಸ್ಥಿತಿ ಬಂದಿದೆ. ನಮ್ಮಲ್ಲಿರುವ ಬಹುತೇಕ ಕಾನೂನುಗಳು ಹೆಣ್ಣು ಮಕ್ಕಳ ಪರವಾಗಿವೆ. ಪುರುಷರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುವ ಕಾನೂನುಗಳು ಇಲ್ಲ. ಎಲ್ಲ ರಂಗಗಳಲ್ಲಿ ಸಮಪಾಲು ಕೇಳುವ ಹೆಣ್ಣುಮಕ್ಕಳ ಪರವಾಗಿಯೇ ಪೋಕ್ಸೋ, ಕೌಟುಂಬಿಕ ದೌರ್ಜನ್ಯ ಕಾನೂನುಗಳಿವೆ. ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಮತ್ತೊಬ್ಬ ನಿವಾಸಿ ಜಗದೀಶ ಮಾತನಾಡಿ, ಮಹಿಳೆಯರ ರಕ್ಷಣೆಗಾಗಿ ಜಾರಿ ತಂದಿರುವ ಕಾನೂನುಗಳನ್ನೇ ಪುರುಷರ ಮೇಲಿನ ಅಸ್ತ್ರದಂತೆ ಬಳಸಲಾಗುತ್ತಿದೆ. ಬಹಳಷ್ಟು ಪ್ರಕರಣಗಳಲ್ಲಿ ಈ ಕಾನೂನುಗಳು ದುರುಪಯೋಗ ಆಗುತ್ತಿವೆ. ಕೌಟುಂಬಿಕ ದೌರ್ಜನ್ಯ ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಅತುಲ್ ಕುರಿತು ಮಾಹಿತಿ ನೀಡಲು ವಿಳಂಬ

ಇನ್ನು ಅತುಲ್ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಆಡಳಿತ ಮಂಡಳಿಯು ತನಿಖೆಗೆ ಅಗತ್ಯವಾದ ಮಾಹಿತಿ ನೀಡಲು ವಿಳಂಬ ಮಾಡುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಅತುಲ್ ಕೆಲಸ ಮಾಡುತ್ತಿದ್ದ ಕಾಡುಗೋಡಿಯ ಕಂಪನಿಯಿಂದ ಕೆಲವು ಮಾಹಿತಿಗಳನ್ನು ಕೇಳಿದ್ದರು. ಮಂಗಳವಾರದಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದರೂ ಕಂಪನಿಯವರು ಈಗ, ನಾಳೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ತಿಳಿಸಿವೆ. ಉದ್ಯೋಗದಲ್ಲಿ ಒತ್ತಡವಿತ್ತೇ, ಖಿನ್ನತೆಯಿಂದ ಅತುಲ್ ಆತ್ಮಹತ್ಯೆ ಮಾಡಿಕೊಂಡರೆ ಎಂಬ ವಿಚಾರಗಳ ಕುರಿತು ಕಂಪನಿಯ ಮಾಹಿತಿ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Tags:    

Similar News