ಮುಗಿಯದ ಎನ್‌ಎಚ್‌ಎಂ ನೌಕರರ ಬವಣೆ | ಅತಂತ್ರದಲ್ಲೇ ಉದ್ಯೋಗ, ಬದುಕು

ಅನಿರ್ದಿಷ್ಟಾವಧಿ ಧರಣಿ ಆರಂಭಿಸುವ ಸಂಬಂಧ ನೋಟಿಸ್‌ ಜೊತೆಗೆ 15 ದಿನಗಳ ಗಡುವು ನೀಡಲಾಗಿದೆ. ಅಷ್ಟರಲ್ಲಿ ಬೇಡಿಕೆ ಈಡೇರಿಸದಿದ್ದರೆ ಸೇವೆ ಸ್ಥಗಿತಗೊಳಿಸಿ ಧರಣಿ ನಡೆಸುವ ಎಚ್ಚರಿಕೆ ನೀಡಲಾಗಿದೆ.

Update: 2024-11-18 04:21 GMT

ರಾಷ್ಟ್ರೀಯ ಆರೋಗ್ಯ ಮಿಷನ್‌ (NHM) ಯೋಜನೆಯಡಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯು, ಆರೋಗ್ಯ ಸೇವೆ ಒದಗಿಸುವ ಜೊತೆಗೆ ಹೋರಾಟದ ಮೂಲಕವೇ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ವೇತನ ಹೆಚ್ಚಳ, ಸಮಾನ ಕೆಲಸಕ್ಕೆ ಸಮಾನ ವೇತನ, ಕೃಪಾಂಕ ಹೆಚ್ಚಳ, ಸೇವಾ ಕಾಯಮಾತಿ, ಅಂತರ್‌ ಜಿಲ್ಲಾ ವರ್ಗಾವಣೆ, ಶ್ರೀನಿವಾಸಚಾರಿ ವರದಿ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ.

ಮುಖ್ಯಮಂತ್ರಿ, ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌,ಆರೋಗ್ಯಸಚಿವ ದಿನೇಶ್‌ ಗುಂಡೂರಾವ್‌, ಎನ್‌ಎಚ್‌ಎಂ ಮುಖ್ಯ ಆಡಳಿತಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಮುಖ್ಯ ಕಾಯದರ್ಶಿಗೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸುವ ಸಂಬಂಧ ನೋಟಿಸ್‌ ಜೊತೆಗೆ 15 ದಿನಗಳ ಗಡುವು ನೀಡಲಾಗಿದೆ. ಅಷ್ಟರಲ್ಲಿ ಬೇಡಿಕೆ ಈಡೇರಿಸದಿದ್ದರೆ ಸೇವೆ ಸ್ಥಗಿತಗೊಳಿಸಿ ಧರಣಿ ನಡೆಸುವ ಎಚ್ಚರಿಕೆ ನೀಡಲಾಗಿದೆ.

ಸಮಸ್ಯೆ ಸುಳಿಯಲ್ಲಿ ಸಿಬ್ಬಂದಿ

ರಾಜ್ಯಾದ್ಯಂತ ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ 27 ಸಾವಿರ ಸಿಬ್ಬಂದಿ, ಹೊರಗುತ್ತಿಗೆ ಆಧಾರದಲ್ಲಿ 3500 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ (KSHCOEA), ಭಾರತೀಯ ಮಜ್ದೂರ್‌ ಸಂಘದ ಹೋರಾಟದ ಫಲವಾಗಿ ನೌಕರರಿಗೆ ಕನಿಷ್ಠ ವೇತನ ಕಾಯ್ದೆಯಂತೆ ವೇತನ ನೀಡಲಾಗುತ್ತಿದೆ. ಆದರೆ, 184 ಸ್ತರದ ಹುದೆಗಳಲ್ಲಿ ನೀಡುತ್ತಿರುವ ವೇತನ ತಾರತಮ್ಯದಿಂದ ಕೂಡಿದೆ ಎಂಬುದು ಸಿಬ್ಬಂದಿ ಆರೋಪ. 16 ವರ್ಷ ಸೇವೆ ಸಲ್ಲಿಸಿರುವವರು ಕೂಡ ಇಂದಿಗೂ 16-18 ಸಾವಿರಕ್ಕಾಗಿ ದುಡಿಯುತ್ತಿದ್ದಾರೆ. ಸೇವಾ ಪರಿಣತಿ ಆಧರಿಸಿ ಕಾಲಕಾಲಕ್ಕೆ ವೇತನ ಹೆಚ್ಚಿಸಬೇಕೆಂಬುದು ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಯ ಆಗ್ರಹವಾಗಿದೆ.

ಎನ್‌ಎಚ್‌ಎಂ ವೇತನ ಅತ್ಯಲ್ಪ

ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನೆಯು 60x40 ಅನುಪಾತದಡಿ ಕಾರ್ಯ ನಿರ್ವಹಿಸುತ್ತಿದೆ. ಅಂದರೆ ಯೋಜನೆಗೆ ಕೇಂದ್ರ ಸರ್ಕಾರ ಶೇ 60 ರಷ್ಟು ಮಾನವ ಸಂಪನ್ಮೂಲ ಒದಗಿಸಿದರೆ, ರಾಜ್ಯ ಸರ್ಕಾರ ಶೇ 40 ರಷ್ಟು ಸಂಪನ್ಮೂಲ ನೀಡುತ್ತದೆ. 2008 ರಲ್ಲಿ ಆರಂಭವಾದ ಯೋಜನೆಗೆ 2017-18 ರಲ್ಲಿ ಮಾತ್ರ ಮೂಲವೇತನ (ಬೇಸಿಕ್‌ )ಪರಿಷ್ಕರಿಸಲಾಗಿದೆ. ಹಾಗಾಗಿ ಸಿಬ್ಬಂದಿಗೆ ಅತ್ಯಲ್ಪ ವೇತನ ಸಿಗುತ್ತಿದೆ.

ರಾಜ್ಯ ಸರ್ಕಾರ ವಾರ್ಷಿಕ ವೇತನ ಹೆಚ್ಚಳ, ಬೋನಸ್‌ ನಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. 2018 ರಿಂದ ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. 3 ವರ್ಷ, 5, 10 ವರ್ಷದ ಸೇವೆ ಆಧರಿಸಿ ವೇತನ ಹೆಚ್ಚಿಸಲಾಗುತ್ತಿದೆ. ಇದರಿಂದ 15-20 ವರ್ಷ ಸೇವೆ ಸಲ್ಲಿಸಿದವರಿಗೆ ಅನ್ಯಾಯವಾಗುತ್ತಿದೆ. ಅವರಿಗೂ ವೇತನ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಸಂಘದ ಪ್ರಧಾನ ಕಾಯದರ್ಶಿ ಗವಿಸಿದ್ಧಪ್ಪ ಡಿ ಉಪ್ಪಾರ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಎನ್‌ಎಚ್‌ಎಂ ಅಡಿ ಸೇವಾ ನಿರತ ವೈದ್ಯರಿಗೆ 1.20 ಲಕ್ಷ ವೇತನವಿದ್ದರೆ ಆಯುಷ್‌ ವೈದ್ಯರಿಗೆ 48,600 ಇದೆ. ಪ್ಯಾರಾ ಮೆಡಿಕಲ್‌ ಸೇವೆಗಳಾದ ಲ್ಯಾಬ್‌ ಟೆಕ್ನೀಶಿಯನ್‌, ಸ್ಟಾಪ್‌ ನರ್ಸ್‌, ಆರೋಗ್ಯ ಸಹಾಯಕಿಯರು ಸೇರಿದಂತೆ ವಿವಿಧ ಹುದ್ದೆಗಳಿಗೆ ಕೇವಲ 12 ರಿಂದ 20 ಸಾವಿರದಷ್ಟು ವೇತನವಿದೆ. ಅತ್ಯಲ್ಪ ವೇತನದಲ್ಲಿ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಕೃಪಾಂಕದಲ್ಲೂ ತಾರತಮ್ಯ?

ಎನ್‌ಎಚ್‌ಎಂ ಅಡಿಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್‌ ಸಿಬ್ಬಂದಿಗೆ ಸರ್ಕಾರ ನೀಡುವ ಕೃಪಾಂಕ ಕೂಡ ತಾರತಮ್ಯದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರ ನಡೆಸುವ ವಿಶೇಷ ನೇಮಕಾತಿಗಳಲ್ಲಿ ವೈದ್ಯರು, ಆಯುಷ್‌ ವೈದ್ಯರು ಹಾಗೂ ಅತಿಥಿ ಉಪನ್ಯಾಸಕರಿಗೆ ಶೇ 5 ಕೃಪಾಂಕ ನೀಡಲಾಗುತ್ತದೆ. ಆದರೆ, ಎನ್ಎಚ್ಎಂ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ವಾರ್ಷಿಕ ಕೇವಲ ಶೇ 2 ಕೃಪಾಂಕ ನೀಡಲಾಗುತ್ತಿದೆ. ಇದರಿಂದ ಬಹಳಷ್ಟು ಸಿಬ್ಬಂದಿಗೆ ಸೇವಾ ಕಾಯಮಾತಿ ಅವಕಾಶ ಕೈ ತಪ್ಪುತ್ತಿದೆ. ಎಲ್ಲ ಸಿಬ್ಬಂದಿಗೂ ಶೇ 5 ಕೃಪಾಂಕ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಬೇರೆ ರಾಜ್ಯಗಳಲ್ಲಿ ಕೃಪಾಂಕ, ಸೇವಾ ಕಾಯಮಾತಿ, ಅಂತರ್‌ ಜಿಲ್ಲಾ ವರ್ಗಾವಣೆಯನ್ನು ಸಮರ್ಪಕವಾಗಿ ಜಾರಿ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ಈ ವ್ಯವಸ್ಥೆ ಸರಿ ಹೋಗಿಲ್ಲ ಎಂದು ಗವಿಸಿದ್ದಪ್ಪ ಡಿ ಉಪ್ಪಾರ್‌ ಹೇಳಿದರು.

ಆರ್‌ಬಿಎಸ್‌ಕೆಯಲ್ಲಿ ಉದ್ಯೋಗಕ್ಕೆ ಕತ್ತರಿ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಸೇವೆ ಸಲ್ಲಿಸುತ್ತಿದ್ದ 96 ನೌಕರರನ್ನು ಸೇವೆಯಿಂದ ಮುಕ್ತಗೊಳಿಸಲಾಗಿದೆ. ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗಿರುವ ಕಾರಣ ನೀಡಿ ಸೇವೆಯಿಂದ ಮುಕ್ತಗೊಳಿಸಿರುವುದು ಸರಿಯಲ್ಲ, ಇದರಿಂದ ಈ ಸಿಬ್ಬಂದಿ ಅತಂತ್ರರಾಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಕೆಲಸವೂ ಇಲ್ಲ, ವೇತನವೂ ಇಲ್ಲದೇ ಪರಿತಪಿಸುವಂತಾಗಿದೆ.

ಸರ್ಕಾರ ಕೂಡಲೇ ಈ ಸಿಬ್ಬಂದಿಗೆ ಪರ್ಯಾಯ ವ್ಯವಸ್ಥೆ ಮಾಡಿ, ಸಮೀಪದ ಜಿಲ್ಲೆಗಳಲ್ಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂಬುದು ಮತ್ತೊಂದು ಬೇಡಿಕೆಯಾಗಿದೆ.

ಅಧಿಕಾರಿಗಳ ಒಳಜಗಳದಿಂದ ನೇಮಕಾತಿ ರದ್ದು

ಬಾಗಲಕೋಟೆ ಜಿಲ್ಲೆಯಲ್ಲಿ 116 ಸಿಬ್ಬಂದಿಯನ್ನು ಎನ್‌ಎಚ್‌ಎಂ ಅಡಿ ನೇರ ನೇಮಕ ಮಾಡಿಕೊಳ್ಳಲು 2022 ರಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅಂದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ(ಡಿಎಚ್‌ಒ) ಜಾಹೀರಾತು ನೀಡಿ ನೇಮಕಾತಿ ಆದೇಶ ಹೊರಡಿಸಿದರು. ನಂತರ ಅವರ ವರ್ಗಾವಣೆಯಾಯಿತು. ಹೊಸ ಡಿಎಚ್‌ಒ ಅವರು ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಿ, ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದರು. ಮತ್ತೆ ಹಳೆಯ ಡಿಎಚ್‌ಒ ಅವರೇ ಅಧಿಕಾರ ವಹಿಸಿಕೊಂಡು ತಾವೇ ಆರಂಭಿಸಿದ್ದ ನೇಮಕಾತಿ ಆದೇಶವನ್ನು ರದ್ದುಗೊಳಿಸಿದರು. ಹಾಗಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ.

ನೇಮಕಾತಿಗೆ ಆದೇಶ ಹೊರಡಿಸಿದ ಅಧಿಕಾರಿಯೇ ನೇಮಕಾತಿ ಪ್ರಕ್ರಿಯೆ ಸರಿಯಿಲ್ಲ ಎಂಬ ಕಾರಣ ನೀಡಿದ್ದು ಸರಿಯಲ್ಲ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಗವಿಸಿದ್ದಪ್ಪ ತಿಳಿಸಿದರು.

ಅದೇ ರೀತಿ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿ ಹೊರ ಗುತ್ತಿಗೆ ಆಧಾರದ ಮೇಲೆ ಸುಮಾರು 1300 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಕೆಲಸದಿಂದ ವಜಾ ಮಾಡುವ ಉದ್ದೇಶಿಸಿದೆ. ಈ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ವೇತನ ಹೆಚ್ಚಳಕ್ಕೆ ನಿರಾಸಕ್ತಿ

ಎನ್‌ಎಚ್‌ಎಂ ನೌಕರರ ವೇತನ ಪರಿಷ್ಕರಣೆಗೆ ನಡೆದ ಹೋರಾಟದ ಫಲವಾಗಿ 2023 ಏಪ್ರಿಲ್‌ ತಿಂಗಳಲ್ಲಿ ಶೇ 15 ರಷ್ಟು ವೇತನ ಹೆಚ್ಚಿಸಲಾಗಿತ್ತು. ಪರಿಣಾಮ 2022 ಏಪ್ರಿಲ್‌ ನಿಂದ 2023 ಏಪ್ರಿಲ್‌ ವರೆಗೆ ಹೆಚ್ಚುವರಿ ವೇತನ ನೀಡಲಾಯಿತು. ಈ ವರ್ಷ ವೇತನ ಹೆಚ್ಚಳಕ್ಕೆ ಅಧಿಕಾರಿಗಳು ನಿರಾಸಕ್ತಿ ತೋರಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ಸಭೆ ನಡೆಸಿದು, ವೇತನ ಹೆಚ್ಚಳದ ಭರವಸೆ ನೀಡಿದ್ದಾರೆ. ಒಂದೊಮ್ಮೆ ವೇತನ ಹೆಚ್ಚಿಸದಿದ್ದರೆ ಮತ್ತೆ ಸೇವೆ ಸ್ಥಗಿತಗೊಳಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಇಲ್ಲವೇ ಆಯಾ ಜಿಲ್ಲಾ ಕೇಂದ್ರಗಳಲ್ಲೇ ಅನಿರ್ದಿಷ್ಟಾವಧಿ ಧರಣಿ ಕೂರಲಿದ್ದೇವೆ ಎಂದು ಗವಿಸಿದ್ದಪ್ಪ ಡಿ ಉಪ್ಪಾರ್‌ ‘ದ ಫೆಡರಲ್‌ ಕರ್ನಾಟಕ’ಕ್ಕೆ ತಿಳಿಸಿದರು.

ಪ್ಯಾರಾ ಮೆಡಿಕಲ್‌ ವಿಶೇಷ ನೇಮಕಾತಿಗೆ ಆಗ್ರಹ

ಮೂರು ವರ್ಷದಿಂದ ಪ್ಯಾರಮೆಡಿಕಲ್ ಸಿಬ್ಬಂದಿಯ ನೇಮಕಾತಿ ನಡೆಸಿಲ್ಲ. ರಾಜ್ಯಾದ್ಯಂತ 149 ಕರ್ನಾಟಕಕೇತರರು ಹಾಗೂ 49 ಹೈದರಬಾದ್‌ ಕರ್ನಾಟಕದ ಸಿಬ್ಬಂದಿ ಕೃಪಾಂಕ ಪಡೆದಿದಾರೆ. ಆದರೆ ಅವರಿಗಾಗಿ ಯಾವುದೇ ವಿಶೇಷ ನೇಮಕಾತಿ ಆರಂಭಿಸಿಲ್ಲ,

ಯಾವುದೇ ನೇಮಕಾತಿ ಪ್ರಕ್ರಿಯೆ ನಿಲ್ಲಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದ್ದರೂ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಆಯೋಗ ನೇಮಕಾತಿಗೆ ಅನುಮತಿ ನೀಡಿಲ್ಲ, ಇದರಿಂದ ಕೃಪಾಂಕ ಪಡೆದಿರುವ 198 ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಭ್ರಮನಿರಶನಗೊಂಡಿದ್ದಾರೆ ಎಂದು ಗವಿಸಿದ್ದಪ್ಪ ಹೇಳಿದರು.

ಜಾರಿಯಾಗದ ಟರ್ಮ್‌ ವಿಮೆ

ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಈವರೆಗೂ ಆರೋಗ್ಯ ವಿಮೆ ಜಾರಿ ಮಾಡಿಲ್ಲ. ಹಲವಾರು ಸಿಬ್ಬಂದಿ ಮೃತ ಪಟ್ಟಿದ್ದಾರೆ. ವಿಮೆ ನೀಡುವ ಕುರಿತು ಬ್ಯಾಂಕರ್ಸ್ ಜೊತೆ ಸಭೆಗಳನ್ನು ಮಾಡಲಾಗಿದೆ. ಆದರೂ ಟರ್ಮ್ ವಿಮೆ ಜಾರಿ ಆಗದ ಕಾರಣ ಅವಲಂಬಿತರು ಪರಿತಪಿಸುವಂತಾಗಿದೆ.ರಾಜ್ಯ ಸರ್ಕಾರ ಕೂಡಲೇ ಟರ್ಮ್‌ ವಿಮೆ ಜಾರಿಗೆ ಆದೇಶ ಹೊರಡಿಸಬೇಕು ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.

Tags:    

Similar News