ಹಾರೋಹಳ್ಳಿ ಖಾಸಗಿ ಆಸ್ಪತ್ರೆ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ

ಶೌಚಾಲಯದ ಕಮೋಡ್‌ನಲ್ಲಿ ನವಜಾತ ಶಿಶುವಿನ ಕಳೇಬರ ಪತ್ತೆಯಾಗಿದೆ. ನವಜಾತ ಶಿಶು ಜನಿಸಿ ಒಂದೆರಡು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಾಗಿದೆ.;

Update: 2024-11-28 15:01 GMT

ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ(ಕಮೋಡ್‌) ನವಜಾತ ಶಿಶುವಿನ ಮೃತದೇಹ ಹಾಕಿ ಫ್ಲಶ್ ಮಾಡಿರುವ ಅಮಾನವೀಯ ಘಟನೆ ಬುಧವಾರ ರಾತ್ರಿ ಬೆಳಕಿಗೆ ಬಂದಿದೆ.

ಹಾರೋಹಳ್ಳಿ ತಾಲೂಕಿಮ ದೇವರಕಗ್ಗಲಹಳ್ಳಿಯಲ್ಲಿರುವ ದಯಾನಂದ ಸಾಗರ್‌ ಆಸ್ಪತ್ರೆಯ ರೆಡಿಯೋಲಜಿ ಬ್ಲಾಕ್‌ನಲ್ಲಿ ರಾತ್ರಿ 10.30.ರ ಸುಮಾರಿಗೆ ಮಹಿಳಾ ಸಿಬ್ಬಂದಿ ಶೌಚಾಗೃಹಕ್ಕೆ ಹೋದಾಗ ನೀರು ತುಂಬಿಕೊಂಡಿತ್ತು. ಕಮೋಡ್ ಫ್ಲಶ್‌ ಮಾಡಿದರೂ ನೀರು ಹೋಗುತ್ತಿರಲಿಲ್ಲ. ಹೌಸ್‌ ಕೀಪಿಂಗ್‌ ಸಿಬ್ಬಂದಿಯನ್ನು ಕರೆದು, ವ್ಯಾಕ್ಯೂಮ್‌ನಿಂದ ಕಮೋಡ್‌ ಸ್ವಚ್ಛಗೊಳಿಸಿದಾಗ ಬಟ್ಟೆಯಿಂದ ಸುತ್ತಿಟ್ಟಿದ್ದ ನವಜಾತ ಶಿಶುವಿನ ಕಳೇಬರ ಪತ್ತೆಯಾಗಿದೆ. ಶೌಚಗುಂಡಿಯಲ್ಲಿ ಒಂದೆರಡು ದಿನದಲ್ಲಿ ಜನಿಸಿರುವ ಶಿಶುವಿನ ಮೃತದೇಹ ಕಂಡು ಆಸ್ಪತ್ರೆ ಸಿಬ್ಬಂದಿ ದಂಗಾಗಿದ್ದಾರೆ. ಮೇಲ್ನೋಟಕ್ಕೆ ಶಿಶುವಿನ ಜನನ ಮರೆಮಾಚಲು ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.


ಏನಿದು ಘಟನೆ?

ದಯಾನಂದ ಸಾಗರ್‌ ವಿಶ್ವವಿದ್ಯಾಲಯ ಅಧೀನದ ಡಾ.ಚಂದ್ರಮ್ಮ ದಯಾನಂದ ಸಾಗರ್ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಎಜುಕೇಶನ್‌ ಹಾಗೂ ರೀಸರ್ಚ್‌ ಆಸ್ಪತ್ರೆಯಲ್ಲಿ ನ.27ರಂದು ಎಫ್ ಬ್ಲಾಕ್‌ನ ನೆಲಮಹಡಿಯಲ್ಲಿರುವ ರೇಡಿಯಾಲಜಿ ವಿಭಾಗದ ಮಹಿಳೆಯರ ಶೌಚಾಲಯದಲ್ಲಿ ಕಮೋಡ್‌ ಕಟ್ಟಿಕೊಂಡಿತ್ತು. ಮಹಿಳಾ ಸಿಬ್ಬಂದಿ ಗಮನಿಸಿ ಹೌಸ್‌ಕೀಪಿಂಗ್‌ ನವರಿಗೆ ಹೇಳಿದ್ದರು. ಶೌಚಾಲಯದ ಹಿಂಭಾಗದ ಪಿಟ್ ಕಡೆ ಹೋಗಿ ನೋಡಿದಾಗ ನವಜಾತ ಶಿಶುವಿನ ದೇಹ ಇರುವುದು ಕಂಡು ಬಂದಿದೆ. ತಕ್ಷಣವೇ ಸಿಬ್ಬಂದಿ, ಆಡಳಿತ ಮಂಡಳಿಗೆ ವಿಷಯ ಮುಟ್ಟಿಸಿದರು. ಆಡಳಿತ ಮಂಡಳಿಯವರು ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.

ಹೆತ್ತಾಕೆಯಿಂದಲೇ ಕೃತ್ಯ ನಡೆದಿರುವ ಶಂಕೆ?

ನವಜಾತ ಶಿಶುವಿಗೆ ಜನ್ಮ ನೀಡಿದ ತಾಯಿಯಿಂದಲೇ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಮಗುವಿನ ಜನನ ಮರೆಮಾಚಲು ರಹಸ್ಯವಾಗಿ ಶೌಚಾಲಯಕ್ಕೆ ಬಂದು ಕಮೋಡ್‌ನಲ್ಲಿ ಹಾಕಿ ಫ್ಲಶ್‌ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.  ಆಸ್ಪತ್ರೆಗ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೊತೆಗೆ ಡಿಎನ್‌ಎ ಪರೀಕ್ಷೆ ಮೂಲಕ ಮೃತ ಮಗುವ ಪೋಷಕರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

Tags:    

Similar News