ಕರುಳ ಬಳ್ಳಿ ಕಳಚುವ ಮುನ್ನವೇ ಹೆತ್ತ ಕಂದಮ್ಮನನ್ನು ಬೀದಿ ಬದಿ ಎಸೆದು ಹೋದರು..

ಚಾಮರಾಜನಗರ ತಾಲ್ಲೂಕಿನ ಸಾಗಡೆ ಗ್ರಾಮದ ಬಳಿ ಹೆತ್ತ ಮಗುವನ್ನೇ ಪೋಷಕರು ರಸ್ತೆ ಬದಿ, ಬೇಲಿಯ ಮರೆಯಲ್ಲಿ ಮಲಗಿಸಿ ಹೋಗಿರುವ ಕರುಣಾಹೀನ ಘಟನೆ ನಡೆದಿದೆ.;

Update: 2025-07-21 12:56 GMT

ಇನ್ನೂ ಅರ್ಧ ಗಂಟೆ ತಡವಾಗಿದ್ದರೆ ಆ ಒಂದು ವಾರದ ಹಸುಗೂಸು ನಾಯಿ-ನರಿಗಳ ಪಾಲಾಗುತ್ತಿತ್ತು. ಇರುವೆ, ಹುಳಗಳಿಗೆ ಆಹಾರವಾಗುತ್ತಿತ್ತು. ಆದರೆ ಆ ಮುದ್ದಾದ ಹೆಣ್ಣುಮಗುವಿನ ಆಯುಷ್ಯ ಗಟ್ಟಿಯಿತ್ತು. ಮಹಾಲಕ್ಷ್ಮಿಯಂತಹ ಪುಟ್ಟ ಕಂದ ಜನರ ಕಣ್ಣಿಗೆ ಬಿದ್ದು ಸಾವಿನ ದವಡೆಯಿಂದ ಪಾರಾಗಿದೆ. ಹೆತ್ತವರು ಬೇಡವೆಂದು ದಾರಿಯಲ್ಲಿ ಬಿಸಾಡಿ ಹೋದ ಮಗು ಇಂದು ಚಾಮರಾಜನಗರ ಜಿಲ್ಲಾಸ್ಪತ್ರೆಯ ಐಸಿಯು ಘಟಕದಲ್ಲಿ ಬೆಚ್ಚಗೆ ಮಲಗಿದೆ.

ಹೌದು, ಮಕ್ಕಳಿಲ್ಲದೆ ಪರಿತಪಿಸುತ್ತಾ ಆಸ್ಪತ್ರೆ, ದೇವಸ್ಥಾನಗಳಿಗೆ ಅಲೆಯುತ್ತಿರುವವರು ಒಂದು ಕಡೆಯಾದರೆ, ತಾನೇ ಹೆತ್ತ ಮಗುವನ್ನು ರಸ್ತೆ ಬದಿ ಎಸೆದು ಹೋದ ತಾಯಿಯದ್ದು ಮತ್ತೊಂದು ಕತೆ. ಚಾಮರಾಜನಗರ ಜಿಲ್ಲೆ ಚಾಮರಾಜನಗರ  ತಾಲ್ಲೂಕಿನ ಸಾಗಡೆ ಗ್ರಾಮದ ಬಳಿ ಹೆತ್ತ ಮಗುವನ್ನೇ ಪೋಷಕರು ರಸ್ತೆ ಬದಿ, ಬೇಲಿಯ ಮರೆಯಲ್ಲಿ ಮಲಗಿಸಿ ಹೋಗಿರುವ ಕರುಣಾಹೀನ ಘಟನೆ ನಡೆದಿದೆ.

ದೇವರಂತೆ ಬಂದ ಪರಮೇಶ್

ಸಾಗಡೆ ಗ್ರಾಮಪಂಚಾಯಿತಿ ಸದಸ್ಯ ಪರಮೇಶ್ ಅವರು ಚಾಮರಾಜನಗರಕ್ಕೆ ಹೋಗುವಾಗ ಸಾಗಡೆ-ತಮ್ಮಡಹಳ್ಳಿ ಮಾರ್ಗ ಮಧ್ಯದಲ್ಲಿ ದಂಪತಿಗಳಿಬ್ಬರು ಬೈಕ್ ನಿಲ್ಲಿಸಿ ಏನನ್ನೋ ನೋಡುತ್ತಿರುತ್ತಾರೆ. ಈ ವೇಳೆ ಪರಮೇಶ್ ಅವರನ್ನು ವಿಚಾರಿಸಿದಾಗ, "ಬೇಲಿಯ ಮರೆಯಲ್ಲಿ ಯಾವುದೋ ಮಗು ಇದ್ದಂತೆ ಕಾಣುತ್ತಿದೆ ನೋಡಿ" ಎನ್ನುತ್ತಾರೆ ಆ ದಂಪತಿ. ಕೂಡಲೇ ಅಲ್ಲಿಗೆ ಹೋದ ಪರಮೇಶ್ ಮಗುವನ್ನು ಎತ್ತುಕೊಂಡು ತಕ್ಷಣವೇ ಅಂಗನವಾಡಿ ಕೇಂದ್ರಕ್ಕೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿಷಯ ಮುಟ್ಟಿಸಿದ್ದಾರೆ. ಇದು ನಡೆದಿದ್ದು ಶನಿವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ. ಅಲ್ಲಿಂದ ಒಂದು ಗಂಟೆ ಅವಧಿಯಲ್ಲಿ ಇಡೀ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಅಂಗನವಾಡಿ ಸಿಬ್ಬಂದಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಗ್ರಾಮಸ್ಥರು ಯೋಧರಂತೆ ನಡೆದುಕೊಂಡು, ಅರೆಕ್ಷಣವನ್ನೂ ವ್ಯರ್ಥ ಮಾಡದಂತೆ ಮಗುವಿನ ಪ್ರಾಣ ಉಳಿಸಲು ಹೋರಾಡಿದ್ದಾರೆ. ಕಡೆಗೆ ಹೋರಾಟದಲ್ಲಿ ಗೆದ್ದಿದ್ದಾರೆ.

ಈ ಬಗ್ಗೆ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್, "ನಾನು ಚಾಮರಾಜನಗರದ ಕಡೆಗೆ ಹೋಗುವಾಗ ಈ ಮಗು ಅಲ್ಲಿ ಇರುವುದು ಗೊತ್ತಾಯಿತು. ತಕ್ಷಣ ಮಗುವನ್ನು ಎತ್ತಿಕೊಂಡು ಅಂಗನವಾಡಿ ಕೇಂದ್ರದವರಿಗೆ ಫೋನ್ ಮಾಡಿ ಹೇಳಿದೆ. ಅವರೂ ಅಲ್ಲಿಗೆ ಹೋಗುವಷ್ಟರಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಒಂದು ಹಂತದಲ್ಲಿ ಮಗು ಕೈಕಾಲೂ ಆಡಿಸದೆ ಸುಮ್ಮನೇ ಮಲಗಿತ್ತು. ನಮಗೆ ನಿಜವಾಗಿಯೂ ಮಗುವಿಗೆ ಏನೋ ಆಗಿದೆ ಎನ್ನುವ ಭಯ ಉಂಟಾಯಿತು. ತಕ್ಷಣ ಕೈ, ಕಾಲುಗಳನ್ನು ಉಜ್ಜಿ ಬಿಸಿ ಮಾಡಿದೆವು. ಆಗ ಮಗು ಸ್ವಲ್ಪ ಎಚ್ಚರಗೊಂಡಂತೆ ಕೈ ಕಾಲು ಆಡಿಸಿತು" ಎಂದು ಅಲ್ಲಿ ನಡೆದ ಘಟನೆ, ತಮಗೆ ಆದ ಅನುಭವದ ಬಗ್ಗೆ ಹೇಳಿದರು.

ಅದು ಮಗುವಷ್ಟೇ ಅಲ್ಲ ಸಾರ್, ಮಹಾಲಕ್ಷ್ಮೀ

ರಸ್ತೆಯ ಪಕ್ಕದಲ್ಲಿ, ಬೇಲಿಯ ಒಳಗೆ ಮಲಗಿಸಿ ಹೋದ ಮಗುವನ್ನು ಯಾವುದೇ ಜಂತುಗಳು ಮುಟ್ಟಿಲ್ಲ, ನಾಯಿಗಳು ಹತ್ತಿರ ಬಂದಿಲ್ಲ, ಇರುವೆಗಳು ಕಚ್ಚಿಲ್ಲ. ಇದೆಲ್ಲವನ್ನೂ ನೋಡಿದಾಗ ಅದು ಮಗುವಷ್ಟೇ ಅಲ್ಲ, ಮಹಾಲಕ್ಷ್ಮಿ ಎನ್ನಿಸುತ್ತದೆ. ಹೀಗೆ ತಮ್ಮ ಭಾವನೆಯನ್ನು ಹೇಳಿಕೊಂಡಿದ್ದಾರೆ ಸಾಗಡೆ ಗ್ರಾಮದ ಅಂಗನವಾಡಿ ಶಿಕ್ಷಕಿ ಎ.ನಾಗಮಣಿ.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, "ಮಗು ಹನ್ನೊಂದು ಗಂಟೆ ಸುಮಾರಿಗೆ ಪರಮೇಶ್ ಅವರಿಗೆ ಸಿಕ್ಕಿದೆ. ನಮ್ಮ ಪ್ರಕಾರ ಸುಮಾರು 9-10 ಗಂಟೆ ಸುಮಾರಿಗೆ ಮಗುವನ್ನು ಅಲ್ಲಿ ಮಲಗಿಸಿ ಹೋಗಿರಬೇಕು. ಇನ್ನೊಂದು ಸ್ವಲ್ಪ ಸಮಯ ಆಗಿದ್ದರೆ ಮಗುವನ್ನು ನಾಯಿಯೋ ಮತ್ತೊಂದು ಪ್ರಾಣಿಯೋ ಕೊಂದು ತಿನ್ನುತ್ತಿತ್ತು. ಆದರೆ ಆ ಮಗುವಿನ ಅದೃಷ್ಟ ಚೆನ್ನಾಗಿದೆ, ಹಾಗೆ ಆಗಿಲ್ಲ. ಹೆತ್ತವರಿಗೆ ಆ ಮಗು ಬೇಡವಾಗಿರಬಹುದು. ಆದರೆ ಈಗಾಗಲೇ ನಮಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಾಕಷ್ಟು ಮಂದಿ ಕರೆ ಮಾಡಿ 'ಆ ಮಗುವನ್ನು ನಮಗೆ ಕೊಡಿ, ನಾವು ಸಾಕಿಕೊಳ್ಳುತ್ತೇವೆ, ನಾವು ದತ್ತು ತೆಗೆದುಕೊಳ್ಳುತ್ತೇವೆ' ಎಂದು ಮುಂದೆ ಬಂದಿದ್ದಾರೆ. ಇದಕ್ಕೆ ಕಾನೂನಿನ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡಿಕೊಂಡು ಮಗುವನ್ನು ಅರ್ಹರು ತೆಗೆದುಕೊಳ್ಳಲಿ. ಆದರೆ ಹೆತ್ತ ಮಗುವನ್ನು ಹೀಗೆ ಬೀದಿಯಲ್ಲಿ ಬಿಟ್ಟು ಹೋಗುವ ಮನಸ್ಥಿತಿ ಇರುವ ಜನರಿಗೆ ಏನು ಹೇಳುವುದು? ಆ ಕಂದನ್ನು ಎತ್ತುಕೊಂಡಾಗ ನಮಗೇ ಎಷ್ಟೊಂದು ಸಂತೋಷ ಆಗುತ್ತದೆ. ಆದರೆ ಆ ಹೆತ್ತ ಕರುಳುಗಳಿಗೆ ನಿಜವಾಗಿಯೂ ಕರುಣೆ ಇಲ್ಲ ಎನ್ನಿಸುತ್ತದೆ" ಎಂದು ವಿಷಾದ ವ್ಯಕ್ತಪಡಿಸುತ್ತಾರೆ ನಾಗಮಣಿ.

ತಂಡವಾಗಿ ಕೆಲಸ ಮಾಡಿದ ಮಾನವೀಯ ಹೃದಯಗಳು

ಪರಮೇಶ್ ಹೀಗೊಂದು ಮಗು ಸಿಕ್ಕಿದೆ ಎಂದು ಮಾಹಿತಿ ನೀಡುತ್ತಿದ್ದಂತೆ ಗ್ರಾಪಂ ಅಧ್ಯಕ್ಷರಾದ ಶಿವಕುಮಾರ್, ಅಂಗನವಾಡಿ ಶಿಕ್ಷಕಿ ನಾಗಮಣಿ, ಎಎನ್‌ಎಂ ಶಿಲ್ಪಾ, ಆಶಾಕಾರ್ಯಕರ್ತೆ ಆಶಾ ಎಲ್ಲರೂ ಸಂಬಂಧಪಟ್ಟವರಿಗೆ ಮಾಹಿತಿ ನೀಡುತ್ತಾ, ಜಿಲ್ಲಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಿಚಾರ ಮುಟ್ಟಿಸಿ, ಮಗುವಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಅವರು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿ, "ಸಾಗಡೆ-ತಮ್ಮಡಹಳ್ಳಿ ಮಾರ್ಗದಲ್ಲಿ ಬಸ್ ಸಂಚಾರ ಇದೆ. ಸಾಕಷ್ಟು ಜನರೂ ಸಂಚಾರ ಮಾಡುತ್ತಾರೆ. ಆದರೆ ಮಗು ಬೇಲಿಯ ಮಧ್ಯದಲ್ಲಿ ಅಳದೆ ಮಲಗಿದ್ದರಿಂದ ಗಮನಕ್ಕೆ ಬಂದಿರಲಿಲ್ಲ. ಆದರೆ ಪುಣ್ಯಕ್ಕೆ ಯಾರೋ ದಂಪತಿಗಳು ಆ ಮಗುವನ್ನು ಗುರುತಿಸಿ, ಹತ್ತಿರ ಹೋಗಲು ಹೆದರಿ ಅಲ್ಲಿಯೇ ನಿಂತಿದ್ದಾರೆ. ಈ ವೇಳೆಗೆ ಪರಮೇಶ್ ಅಲ್ಲಿಗೆ ಹೋಗಿ ಮಗುವನ್ನು ರಕ್ಷಿಸಿದ್ದಾನೆ" ಎಂದು ಮಾಹಿತಿ ನೀಡಿದರು.

ಇನ್ನೂ ಕರುಳ ಬಳ್ಳಿಯೇ ಬೀಳದ ಕಂದ

ಮಗುವಿನ ಆರೋಗ್ಯ, ಸದ್ಯದ ಸ್ಥಿತಿಯ ಬಗ್ಗೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ವೈದ್ಯರೊಬ್ಬರು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿ, "ಆ ಮಗುವಿನ ಕರುಳಬಳ್ಳಿಯೇ ಇನ್ನೂ ಬಿದ್ದಿಲ್ಲ. ಹುಟ್ಟಿದ ಮಗುವಿನ ಕರುಳಬಳ್ಳಿ ಒಂಬತ್ತು-ಹತ್ತು ದಿನಗಳ ವರೆಗೂ ಬೀಳುವುದಿಲ್ಲ. ಹೀಗಾಗಿ ಈ ಮಗು ಹುಟ್ಟಿ ಒಂದು ವಾರ ಆಗಿರಬೇಕು. ಆಸ್ಪತ್ರೆಗೆ ಕರೆತಂದಾಗ ಮಗು ಅರೆಪ್ರಜ್ಞಾವಸ್ಥೆಯಲ್ಲಿತ್ತು. ಈಗ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಈಗಾಗಲೇ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವಿನ ರಕ್ಷಣೆ, ಪೋಷಣೆ ಸಂಬಂಧ ಕ್ರಮ ಕೈಗೊಂಡಿದ್ದಾರೆ. ಚಿಕಿತ್ಸೆ ನಂತರ ಮಗುವನ್ನು ಕೊಳ್ಳೇಗಾಲದಲ್ಲಿ ಇರುವ ಜೀವನ್ ಜ್ಯೋತಿ ಮಕ್ಕಳ ಆರೈಕೆ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು" ಎಂದು ತಿಳಿಸಿದರು.

ಸದ್ಯ ಮಗು ಆರೋಗ್ಯವಾಗಿದ್ದು, ಪೊಲೀಸರು ಪೋಷಕರಿಗಾಗಿ ಮತ್ತು ಮಗುವಿನ ಹಿನ್ನೆಲೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಈಗಾಗಲೇ ಆರೈಕೆ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ. ಒಂದು ಕಡೆ ಹೆತ್ತವರಿಗೆ ಬೇಡವಾಗಿ ಬೀದಿ ಬದಿಯಲ್ಲಿ ಬಿದ್ದ ಮಗು ಗ್ರಾಮಸ್ಥರ ಕೈಗೆ ಸಿಕ್ಕಿ ಬದುಕುಳಿದಿದೆ. ಹೆತ್ತ ಮಗುವನ್ನೇ ಬಿಸಾಡಿ ಹೋದ ಕ್ರೌರ್ಯ, ಹೃದಯಹೀನ ಮನಸ್ಥಿತಿ ಒಂದು ಕಡೆಯಾದರೆ, ಆ ಸಣ್ಣ ಕಂದಮ್ಮನ ಉಸಿರು ಉಳಿಸಿಕೊಳ್ಳಲು ಇಡೀ ಗ್ರಾಮವೇ ಒಂದಾಗಿ ಹೋರಾಡಿದ, ಆ ಮಗುವಿನ ನಗುವಿನಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡ ಜೀವಗಳು ಮತ್ತೊಂದು ಕಡೆ.

Tags:    

Similar News