New Year Celebrations | ರಾತ್ರಿ 1ರವರೆಗೆ ಅವಕಾಶ; ಹದ್ದುಮೀರಿದರೆ ಜೈಲು: ಕಮಿಷನರ್ ದಯಾನಂದ
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಘೋಷಿಸಿರುವ ಬೆಂಗಳೂರು ಪೊಲೀಸರು, ಡಿಸೆಂಬರ್ 31ರ ರಾತ್ರಿ ರಾತ್ರಿ 1 ಗಂಟೆಯವರೆಗೆ ಹೊಸ ವರ್ಷ ಆಚರಣೆಗೆ ಸಮಯ ನಿಗದಿ ಮಾಡಿದ್ದಾರೆ.
ಹೊಸ ವರ್ಷಾಚರಣೆ ವೇಳೆ ಯಾವುದೇ ಅವಘಡ ನಡೆಯದಂತೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸ್ ಕೈಗೊಂಡಿರುವ ಕ್ರಮಗಳ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು, ರಾತ್ರಿ ಒಂದು ಗಂಟೆಯವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶವಿದೆ. ಜೊತೆಗೆ ನಗರದ ಎಲ್ಲಾ ಫೈ ಓವರ್ಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ, ನಗರದ ಹೊರವಲಯದ ರೇವ್ ಪಾರ್ಟಿಗಳ ಮೇಲೆ ನಿಗಾ ಇಡಲಾಗುವುದು. ಜೊತೆಗೆ ಅನಧಿಕೃತವಾಗಿ ಪಾರ್ಟಿ ಆಯೋಜನೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೆ ಬಿಬಿಎಂಪಿ, ಅಗ್ನಿಶಾಮಕ ದಳ, ಬೆಸ್ಕಾಂ, ಬಿಎಂಟಿಸಿ, ನಮ್ಮ ಮೆಟ್ರೋ ಜೊತೆ ಚರ್ಚೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಅತಿ ಹೆಚ್ಚಿನ ಜನ ಸೇರುವ ನಗರದ ಎಂ ಜಿ ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ಹೆಚ್ಚಿನ ಭದ್ರತೆಗೆ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಇಂದಿರಾನಗರ, ಕೋರಮಂಗಲ ಪ್ರದೇಶಗಳಲ್ಲಿ ಕೂಡ ಹೆಚ್ಚಿನ ಭದ್ರತೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸುರಕ್ಷತೆಗಾಗಿ ಅನೇಕ ಕ್ರಮ
ಆಚರಣೆ ವೇಳೆ ಮತ್ತು ಸಂಚಾರದ ವೇಳೆ ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಅದಕ್ಕಾಗಿ ಹೈಲ್ಯಾಂಡ್ ಸ್ಥಾಪನೆ, ವಾಚ್ ಟವರ್, ಶ್ವಾನ ದಳ ವ್ಯವಸ್ಥೆ, ಡ್ರೋನ್ ಕ್ಯಾಮರಾ ಮೂಲಕ ಹೆಚ್ಚಿನ ನಿಗಾ, ಸಿಸಿಟಿವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಕೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ವಿವರಿಸಿದ್ದಾರೆ.
ಮೆಟ್ರೊ ಸ್ಟೇಷನ್ ಕ್ಲೋಸ್, ಮಾಸ್ಕ್ ನಿಷೇಧ
ನೂಕುನುಗ್ಗಲು ತಡೆಯುವ ಉದ್ದೇಶದಿಂದ ಡಿಸೆಂಬರ್ 31ರ ರಾತ್ರಿ 11 ಗಂಟೆ ನಂತರ ಎಂಜಿ ರಸ್ತೆ ಮೆಟ್ರೊ ಸ್ಟೇಷನ್ ಕ್ಲೋಸ್ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಿನ್ನಲೆಯಲ್ಲಿ ನಿಲ್ದಾಣದಲ್ಲಿ ಕೇವಲ ಇಳಿಯಲು ಮಾತ್ರ ಅವಕಾಶ ನೀಡಲಾಗುವುದು. ಆದರೆ, ವಾಪಸ್ ಹೋಗಲು ಟ್ರಿನಿಟಿ ಸರ್ಕಲ್ ಅಥವಾ ಕಬ್ಬನ್ ಪಾರ್ಕ್ ಮೆಟ್ರೊ ಸ್ಟೇಷನ್ ಬಳಸಬಹುದು ಎಂದು ಮಾಹಿತಿ ಕಮಿಷನರ್ ಸೂಚನೆ ನೀಡಿದ್ದಾರೆ.
ಅಲ್ಲದೆ, ಹೊಸ ವರ್ಷಾಚರಣೆ ವೇಳೆ ಜನ ದಟ್ಟಣೆ ಪ್ರದೇಶಗಳಲ್ಲಿ ಫೇಸ್ ಮಾಸ್ಕ್ ಬಳಕೆಯನ್ನು ನಿಷೇಧಿಸಲಾಗಿದೆ ಎಂಬ ಸಂಗತಿಯನ್ನೂ ಅವರು ಬಹಿರಂಗಪಡಿಸಿದ್ದಾರೆ. ನಗರದ ಜನದಟ್ಟಣೆಯ ಎಂಜಿ ರಸ್ತೆ, ಬಿಗ್ರೇಡ್ ರಸ್ತೆ, ಕ್ಲಬ್, ಪಬ್ಗಳು, ರೆಸ್ಟೋರೆಂಟ್ಗಳಲ್ಲಿ ಅಂದು ಫೇಸ್ ಮಾಸ್ಕ್ ನಿಷೇಧ ಮಾಡಲಾಗಿದ್ದು, ಯಾರು ಕೂಡ ಫೇಸ್ ಮಾಸ್ಕ್ ಧರಿಸುವಂತಿಲ್ಲ ಎಂದು ಎಚ್ಚರಿಸಿದ್ದಾರೆ.
ಕುಡಿದು ವಾಹನ ಚಲಾಯಿಸಿದರೆ ಜೈಲು
ಹೊಸ ವರ್ಷಾಚರಣೆ ಜೋಷ್ನಲ್ಲಿ ಯಾರೇ ಆಗಲೀ ಕುಡಿದು ವಾಹನ ಚಲಾಯಿಸುವುದು, ವೀಲಿಂಗ್ ಮಾಡುವುದು, ಪೀಪಿ ಊದುವುದು, ಹಾರನ್ ಬಾರಿಸುವುದು, ಸಿಗ್ನಲ್ ಜಂಪ್, ಸಂಚಾರ ನಿಯಮ ಉಲ್ಲಂಘನೆ, ಹೆಣ್ಣುಮಕ್ಕಳಿಗೆ ತೊಂದರೆ ಕೊಡುವುದು ಮುಂತಾದ ಯಾವುದೇ ಕಾನೂನು ಬಾಹಿರ ಚಟುವಟಿಕೆ ಮಾಡಿದರೆ, ಅಂತಹವರ ಡ್ರೈವಿಂಗ್ ಲೈಸೆನ್ಸ್ ರದ್ದು ಜೊತೆಗೆ ಕೂಡಲೇ ಎಫ್ಐಆರ್ ಬುಕ್ ಮಾಡಿ ಬಂಧಿಸಲಾಗುವುದು ಎಂದೂ ಬೆಂಗಳೂರು ಪೊಲೀಸ್ ಆಯುಕ್ತರು ಖಡಕ್ ವಾರ್ನಿಂಗ್ ನೀಡಿದ್ದಾರೆ.