ಹೊಸ ಬಿಪಿಎಲ್‌ ಕಾರ್ಡ್ ವಿತರಣೆಗೆ ಕ್ರಮ: ಸಚಿವ ಕೆ.ಹೆಚ್.ಮುನಿಯಪ್ಪ

ಪರಿತರ ಕಾರ್ಡ್‌ಗಳ ಪರಿಷ್ಕರಣೆ ಪೂರ್ಣಗೊಂಡ ತಕ್ಷಣ ಹೊಸ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಸಚಿವ ಕೆ.ಎಚ್‌.ಮುನಿಯಪ್ಪ ಭರವಸೆ ನೀಡಿದರು.;

Update: 2025-08-19 12:43 GMT

ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ

ಹೊಸ ಪಡಿತರ ಚೀಟಿಗಾಗಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಶೀಘ್ರದಲ್ಲಿಯೇ ಪರಿಷ್ಕರಿಸಿ, ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಅವರು ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಕೆ. ಮತ್ತು ಡಾ.ಯತೀಂದ್ರ ಎಸ್. ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಮಾಹಿತಿ ನೀಡಿದರು.

ಕಳೆದ ಸರ್ಕಾರಗಳ ಅವಧಿಯಿಂದಲೂ ಬಾಕಿ ಉಳಿದಿದ್ದ ಪಡಿತರ ಚೀಟಿ ಅರ್ಜಿಗಳನ್ನು ಹಂತ ಹಂತವಾಗಿ ಪರಿಷ್ಕರಿಸಲಾಗುತ್ತಿದ್ದು, ಈ ಕಾರ್ಯವು ಅಂತಿಮ ಹಂತದಲ್ಲಿದೆ. ಪರಿಷ್ಕರಣೆ ಪೂರ್ಣಗೊಂಡ ತಕ್ಷಣ ಹೊಸ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿಯು ಮಹಾರಾಷ್ಟ್ರದ ನಂತರ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಇಂತಹ ಅಭಿವೃದ್ಧಿ ಹೊಂದುತ್ತಿರುವ ರಾಜ್ಯದಲ್ಲಿ ಶೇಕಡಾ 75ರಿಂದ 80ರಷ್ಟು ಜನರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂಬುದು ಸಾದ್ಯವೇ ಎಂದು ಸಚಿವರು ಪ್ರಶ್ನಿಸಿದರು.

ಕಳೆದ ಅವಧಿಯಲ್ಲಿ, ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯದ ಸಮಯದಲ್ಲಿ ಸುಮಾರು 15 ಲಕ್ಷ ಕಾರ್ಡ್‌ಗಳನ್ನು ಅನರ್ಹ ಎಂದು ಗುರುತಿಸಲಾಗಿತ್ತು. ಆದರೆ, ಇದಕ್ಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಆ ಕಾರ್ಯವನ್ನು ಕೈಬಿಡಬೇಕಾಯಿತು. ಈ ವಿಷಯದಲ್ಲಿ ಯಾವುದೇ ರಾಜಕೀಯ ಬೆರೆಸದೆ, ಕೇವಲ ಅರ್ಹರಿಗೆ ಮಾತ್ರ ಈ ಸೌಲಭ್ಯಗಳು ದೊರಕುವಂತೆ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ನಮ್ಮ ಸರ್ಕಾರವು ಜನಪರವಾಗಿದ್ದು, ಅರ್ಹ ಫಲಾನುಭವಿಗಳಿಗೆ ಮಾತ್ರ ಕಾರ್ಡ್ ವಿತರಿಸುವ ಕುರಿತು ಕ್ರಮ ವಹಿಸಲಾಗುವುದು ಎಂದು ಸಚಿವರು ಪುನರುಚ್ಚರಿಸಿದರು. ಪರಿಷ್ಕರಣೆ ಕಾರ್ಯ ಪೂರ್ಣಗೊಂಡ ಕೂಡಲೇ ಹೊಸ ಕಾರ್ಡ್‌ಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.


Tags:    

Similar News