ನೆಟ್ಟಾರು ಹತ್ಯೆ ಪ್ರಕರಣ | ಮುಸ್ತಫಾ ಪೈಚಾರ್ ಮುಖ್ಯ ಸೂತ್ರಧಾರ: ಆರೋಪ ಪಟ್ಟಿ ಸಲ್ಲಿಸಿದ ಎನ್‌ಐಎ

ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಯ ಹಿಂದಿನ ಪ್ರಮುಖ ಉದ್ದೇಶ ಜನರಲ್ಲಿ ಭಯ ಹುಟ್ಟಿಸುವುದಾಗಿತ್ತು ಎಂದು ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿದೆ.

Update: 2024-08-03 10:18 GMT

ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಯ ಹಿಂದಿನ ಪ್ರಮುಖ ಉದ್ದೇಶ ಜನರಲ್ಲಿ ಭಯ ಹುಟ್ಟಿಸುವುದಾಗಿತ್ತು ಎಂದು ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿದೆ.

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26 ರಂದು ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಮೇಲೆ ಅವರ ಕೋಳಿ ಅಂಗಡಿ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ತೀವ್ರ ಗಾಯಗೊಂಡಿದ್ದ ಪ್ರವೀಣ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) 19 ಆರೋಪಿಗಳನ್ನು ಬಂಧಿಸಿತ್ತು. ಪ್ರಕರಣದ ಆರೋಪಿ ಮುಸ್ತಫಾ ಪೈಚಾರ್ ಈ ಕೃತ್ಯದ ಮುಖ್ಯ ರೂವಾರಿ ಆಗಿದ್ದ ಎಂದು ಎನ್‌ಐಎ, ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಪೈಚಾರ್‌ ಜೊತೆಗೆ ಇನ್ನೊಬ್ಬ ಆರೋಪಿ ರಿಯಾಜ್ ಎಚ್.ವೈ. ವಿರುದ್ಧವೂ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಪೈಚಾರ್‌ನನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬಂಧಿಸಲಾಗಿತ್ತು. ಎಚ್‌.ವೈ. ರಿಯಾಜ್‌ ಆರೋಪಿ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದ. ರಿಯಾಜ್‌ ಭಾರತದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಜೂನ್‌ 3ರಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 7 ಆರೋಪಿಗಳ ಪತ್ತೆ ಆಗಬೇಕಿದೆ.

ಆರೋಪ ಪಟ್ಟಿಯಲ್ಲಿ ಏನಿದೆ?

ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆಯ ಮಾರ್ಗದರ್ಶನದಲ್ಲಿ ಹಿಂದೂ ಸಮುದಾಯದಲ್ಲಿ ಆತಂಕ ಹುಟ್ಟಿಸುವ ಉದ್ದೇಶದಿಂದಲೇ ಪ್ರವೀಣ್‌ ನೆಟ್ಟಾರು ಹತ್ಯೆ ನಡೆದಿದೆ ಎಂಬ ಅಂಶವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಆರೋಪ ಪಟ್ಟಿಯಲ್ಲಿ ಹೇಳಿದೆ. ಈ ಸಂಬಂಧ ಎನ್‌ಐಎ ಶುಕ್ರವಾರ ನ್ಯಾಯಾಲಯಕ್ಕೆ 1500 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದೆ.

2047ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ತನ್ನ ಕಾರ್ಯಸೂಚಿಯ ಭಾಗವಾಗಿ ಹತ್ಯೆ ನಡೆಸಲಾಗಿದೆ. ಈ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯರೇ ನಡೆಸಿದ್ದಾರೆ ಎಂಬುದನ್ನು ಕೂಡ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ರೆಡಿಯಾಗಿತ್ತು ಸರ್ವೀಸ್ ಟೀಂ-ಕಿಲ್ಲರ್ ಸ್ಕ್ವಾಡ್!

2047 ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ಗುರಿಯೊಂದಿಗೆ ಪಿಎಫ್‌ಐ ಸಂಚು ರೂಪಿಸಿದ್ದು, ಇದಕ್ಕಾಗಿ ಇಂಥಹ ಕೃತ್ಯ ನಡೆಸಲು ಸರ್ವೀಸ್ ಟೀಂ ಮತ್ತು ಕಿಲ್ಲರ್ ಸ್ಕ್ವಾಡ್‌ಗಳನ್ನು (ಕೊಲೆಗಾರರ ತಂಡ) ರಚಿಸಿತ್ತು. ಪಿಎಫ್‌ಐನ ಸೂಚನೆಯಂತೆ ಈ ತಂಡಗಳು ಸಮಾಜದಲ್ಲಿ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿ ಹತ್ಯೆ ನಡೆಸಲು ಸಂಚು ರೂಪಿಸುತ್ತಿದ್ದವು. ಇದಕ್ಕಾಗಿ ಪಿಎಫ್‌ಐ ಸದಸ್ಯರಿಗೆ ತರಬೇತಿಯನ್ನೂ ನೀಡಲಾಗಿತ್ತು.

ಬೆಂಗಳೂರು ನಗರ, ಸುಳ್ಯ ಮತ್ತು ಬೆಳ್ಳಾರೆ ಗ್ರಾಮದಲ್ಲಿ ಪಿಎಫ್‌ಐ ಸಭೆಗಳು ನಡೆದಿದ್ದವು. ಈ ಸಭೆಗಳಲ್ಲಿ ಜಿಲ್ಲಾ ಸೇವಾ ತಂಡದ ಮುಖ್ಯಸ್ಥ ಮುಸ್ತಫಾ ಪೈಚಾರ್‌ಗೆ ನಿರ್ದಿಷ್ಟ ಸಮುದಾಯದ ಪ್ರಮುಖರನ್ನು ಗುರುತಿಸಿ, ಗುರಿಯಾಗಿಸಲು ಸೂಚಿಸಲಾಗಿತ್ತು. ಅಂತಿಮವಾಗಿ ನಾಲ್ವರನ್ನು ಈ ʼಸೇವಾ ತಂಡ (ಸರ್ವೀಸ್‌ ಟೀಂ)ʼಗುರುತಿಸಿತ್ತು. ಅದರಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಜು.26ರಂದು ಹತ್ಯೆ ಮಾಡಲಾಗಿತ್ತು ಎಂದು ವರದಿ ಹೇಳಿದೆ..

ಇದುವರೆಗೆ ಬಂಧಿತ ಆರೋಪಿಗಳು

ಸುಳ್ಯದ ಮಹಮ್ಮದ್ ಸೈಯ್ಯದ್(26), ಅಬ್ದುಲ್ ಬಶೀರ್(29) ಎಲಿಮಲೆ ಸುಳ್ಯ, ರಿಯಾಜ್(28) ಅಂಕತಡ್ಕ, ಮುಸ್ತಫಾ ಪೈಚಾರ್(48) ಸುಳ್ಯ, ಮಸೂದ್ ಕೆ.ಎ.(40), ನೆಕ್ಕಿಲಾಡಿ, ಕೊಡಾಜೆ ಮೊಹಮ್ಮದ್ ಶರೀಫ್(53), ಅಬೂಬಕ್ಕರ್ ಸಿದ್ದಿಕ್(38) ಬೆಳ್ಳಾರೆ, ನೌಫಾಲ್(38) ಬೆಳ್ಳಾರೆ, ಇಸ್ಮಾಯಿಲ್ ಶಾಫಿ ಬೆಳ್ಳಾರೆ, ಮಹಮ್ಮದ್ ಇಕ್ಬಾಲ್ ಬೆಳ್ಳಾರೆ(37), ಶಹೀದ್ ಎಂ.(38) ಮಂಜನಾಡಿ, ಮಹಮ್ಮದ್ ಶಫೀಕ್(28) ಸುಳ್ಯ, ಉಮರ್ ಫಾರೂಕ್(22) ಸುಳ್ಯ, ಅಬ್ದುಲ್ ಕಬೀರ್(33) ಸುಳ್ಯ, ಮಹಮ್ಮದ್ ಇಬ್ರಾಹಿಂ ಷಾ(23) ಸುಳ್ಯ, ಜೈನುಲ್ ಅಬೀದ್(23) ಸುಳ್ಯ, ಶೇಖ್ ಸದ್ದಾಂ ಹುಸೇನ್(28) ಬೆಳ್ಳಾರೆ, ಝಾಕೀರ್ ಎ.(30)ಬೆಳ್ಳಾರೆ, ಅಬ್ದುಲ್ ಹ್ಯಾರಿಸ್(40) ಬೆಳ್ಳಾರೆ, ತುಫಾಯಿಲ್ ಎಂ.ಎಚ್ ಮಡಿಕೇರಿ(36).

Tags:    

Similar News