ನೇಹಾ ಹತ್ಯೆ ಪ್ರಕರಣ | ತನಿಖೆಯನ್ನು ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ʻʻಮೃತ ವಿದ್ಯಾರ್ಥಿನಿ ನೇಹಾ ಕೊಲೆಗೆ ಸೂಕ್ತ ನ್ಯಾಯ ದೊರಕಿಸಬೇಕು. ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಡಲು ಸರ್ಕಾರ ಸಿಐಡಿಗೆ ನೀಡಿದೆ. ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವಹಿಸಿಕೊಡಲು ನಿರ್ಧರಿಸಲಾಗಿದೆʼʼ ಎಂದು ಹೇಳಿದರು.;
ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (CID) ವಹಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ʻʻಮೃತ ವಿದ್ಯಾರ್ಥಿನಿ ನೇಹಾ ಕೊಲೆಗೆ ಸೂಕ್ತ ನ್ಯಾಯ ದೊರಕಿಸಬೇಕು. ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಡಲು ಸರ್ಕಾರ ಸಿಐಡಿಗೆ ನೀಡಿದೆ. ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವಹಿಸಿಕೊಡಲು ನಿರ್ಧರಿಸಲಾಗಿದೆʼʼ ಎಂದು ಹೇಳಿದರು.
ʻʻನಮ್ಮ ಆಡಳಿತ ಅವಧಿಯಲ್ಲಿ ಕಡಿಮೆ ಅಪರಾಧ ಪ್ರಕರಣಗಳು ನಡೆದಿವೆ. ನಮ್ಮ ಆಡಳಿತ ಅವಧಿಯಲ್ಲಿ 1390 ಪ್ರಕರಣಗಳು ನಡೆದಿವೆ. ಬಿಜೆಪಿ ಆಡಳಿತದಲ್ಲಿ ಹೆಚ್ಚು ನಡೆದಿವೆ. ನಮ್ಮ ಆಡಳಿತದಲ್ಲಿ ಎಲ್ಲರಿಗೂ ರಕ್ಷಣೆ ನೀಡುತ್ತೇವೆʼʼ ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ
ನೇಹಾ ಹಿರೇಮಠ ಎಂಬ ಎಂಸಿಎ ವಿದ್ಯಾರ್ಥಿನಿ ಗುರುವಾರ (ಏ.18) ರಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಿವಿಬಿ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದಿದ್ದರು. ಪರೀಕ್ಷೆ ಬರೆದು ಮನೆಗೆ ಹೋಗುವಾಗ ಫಯಾಜ್ ಎಂಬುವನು ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಅವರನ್ನು 14 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದನು. ಆರೋಪಿ ಫಯಾಜ್ ನೇಹಾ ಹಿರೇಮಠರನ್ನು ಕೊಲೆ ಮಾಡಿ ಪರಾರಿಯಾಗಿದ್ದನು. ಕೂಡಲೇ ಕಾಲೇಜು ಆವರಣದಲ್ಲಿದ್ದ ವಿದ್ಯಾರ್ಥಿಗಳು ನೇಹಾರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರು. ಅಷ್ಟೊತ್ತಿಗಾಗಲೆ ನೇಹಾ ಹಿರೇಮಠ ಸಾವು ಕಂಡಿದ್ದರು.
ಪ್ರಕರಣದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ವಿದ್ಯಾನಗರ ಪೊಲೀಸರು, ಆರೋಪಿ ಫಯಾಜ್‌ನನ್ನು ಕೆಲವೆ ಗಂಟೆಗಳಲ್ಲಿ ಬಂಧಿಸಿದರು. ಇನ್ನು ನೇಹಾ ಹಿರೇಮಠ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ. ಪ್ರೀತಿಸಲು ನಿರಾಕರಿಸಿದ್ದಕ್ಕೆ ಫಯಾಜ್ ನೇಹಾ ಹಿರೇಮಠರನ್ನು ಕೊಲೆ ಮಾಡಿದ್ದಾನೆ. ಇದು ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು, ಬಿಜೆಪಿ ಮತ್ತು ಎಬಿವಿಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿವೆ.
ಈ ಮಧ್ಯೆ ನೇಹಾ ಹಿರೇಮಠ ಮತ್ತು ಫಯಾಜ್ ಒಟ್ಟಿಗೆ ಇರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನೇಹಾ ಮತ್ತು ಫಯಾಜ್ ನಡುವೆ ಪ್ರೀತಿ ಇತ್ತು. ಮಗ ಮಾಡಿದ ಕೃತ್ಯ ತಪ್ಪು ಎಂದು ಆರೋಪಿಯ ತಂದೆ-ತಾಯಿ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು, “ಇದು ವೈಯಕ್ತಿಕ ಕಾರಣಕ್ಕೆ ಆದ ಕೊಲೆ” ಎಂದು ಹೇಳಿಕೆ ನೀಡಿದ್ದರು. ಪ್ರಕರಣ ತನಿಖೆಯಲ್ಲಿರುವಾಗಲೇ ಸಿಎಂ, ಡಿಸಿಎಂ ಮತ್ತು ಗೃಹ ಸಚಿವರ ಹೇಳಿಕೆ ಖಂಡನೀಯ ಅಂತ ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ, ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಹರಿಹಾಯ್ದಿದ್ದವು. ಇದರಿಂದ ಪ್ರಕರಣ ನಿಧಾನವಾಗಿ ರಾಜಕೀಯ ತಿರುವು ಪಡೆದುಕೊಳ್ಳುವ ಹಾದಿಯಲ್ಲಿತ್ತು.
ನೇಹಾ ಹಿರೇಮಠ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಭೇಟಿ ನೀಡಿದ್ದರು. ಈ ವೇಳೆ ನೇಹಾ ತಂದೆ ನಿರಂಜನ ಹಿರೇಮಠ ಅವರಿಗೆ ಸಾಂತ್ವನ ಹೇಳಿದರು. ಹಾಗೇ ಶಿರಹಟ್ಟಿಯ ಬಾಳೆಹೊಸೂರು ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿದ್ದರು. ನೇಹಾ ಕುಟಂಬಕ್ಕೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದರು. ಇನ್ನು ನೇಹಾ ಹಿರೇಮಠ ಕೊಲೆ ಖಂಡಿಸಿ ಸೋಮವಾರ (ಏ.22) ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ.