ನೇಹಾ ಹತ್ಯೆ ಪ್ರಕರಣ | ಹಿಂದೂ, ಮುಸ್ಲಿಂ ಸೇರಿ ಹಲವು ಸಂಘಟನೆಗಳಿಂದ ಪ್ರತಿಭಟನೆ

Update: 2024-04-20 10:48 GMT

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಹಾಗೂ ಕಾಂಗ್ರೆಸ್‌ ನಾಯಕ ನಿರಂಜನ ಅವರ ಪುತ್ರಿ ನೇಹಾ ಹಿರೇಮಠ ಅವರನ್ನು ಕಾಲೇಜು ಆವರಣದಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಸಹಪಾಠಿ ಫಯಾಜ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸುತ್ತಿವೆ. ವಿದ್ಯಾರ್ಥಿಗಳು ಮೇಣದ ಬತ್ತಿ ಉರಿಸಿ ಪ್ರತಿಭಟಿಸುತ್ತಿದ್ದಾರೆ. ಈ ಹತ್ಯೆಯನ್ನು ಹಿಂದೂ ಪರ ಸಂಘಟನೆಗಳು ಲವ್‌ ಜಿಹಾದ್‌ ಎಂದು ಬಿಂಬಿಸುತ್ತಿವೆ. ಇನ್ನು ಕೆಲವರು ಹೆಣ್ಣುಮಗುವಿನ ಮೇಲೆ ನಡೆದ ಕ್ರೌರ್ಯ, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಮುಸ್ಲಿಂ ಸಮುದಾಯದಿಂದ ಖಂಡನೆ

ಕೊಲೆ ಆರೋಪಿ ಫಯಾಝ್ ಬೆಳಗಾವಿ ಜಿಲ್ಲೆಯ ಸವದತ್ತಿಯ ಹತ್ತಿರದ ಮುನವಳ್ಳಿ ನಿವಾಸಿಯಾಗಿದ್ದು, ಅಲ್ಲಿ ಹಿಂದೂ, ಮುಸ್ಲಿಮರು ಜಂಟಿಯಾಗಿ ಹತ್ಯೆ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಸಂಕೇಶ್ವರ - ಸವದತ್ತಿ ಹೆದ್ದಾರಿಯಲ್ಲಿ ಮುಸ್ಲಿಂ ಸಮುದಾಯದ ನೂರಾರು ಮಂದಿ ನೇಹಾ ಹಿರೇಮಠ ಫೊಟೋ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲೂ ಸಹ ನೇಹಾ ಹತ್ಯೆಯನ್ನು ಮುಸ್ಲಿಂ ಸಮುದಾಯ ತೀವ್ರವಾಗಿ ಖಂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ. ಅಳ್ಳಾವರ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ ಹಾಗೂ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷರು ಕಮಿಷನರ್ ಅವರಿಗೆ ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮವಹಿಸಲು ಆಗ್ರಹಿಸಿದ್ದಾರೆ.

ಈ ಕುರಿತು ಅಂಜುಮನ್ ಸಂಸ್ಥೆಯ ಪ್ರಮುಖರಾದ ಅಲ್ತಾಫ್ ಮಾತನಾಡಿ, ʻʻಆರೋಪಿಯನ್ನು ಎನ್‌ಕೌಂಟರ್ ಮಾಡುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇವೆ. ಏನೇ ಆಗಲಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದೇವೆ. ಆದರೆ, ಭಾರತೀಯ ಜನತಾ ಪಕ್ಷದವರು ಇದರಲ್ಲಿ ರಾಜಕೀಯ ಮಾಡಬಾರದುʼʼ ಎಂದು ಹೇಳಿದರು.

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ಕನ್ನಡ ಜಯ ಜರ್ನಾಟಕ, ದಲಿತ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಶನಿವಾರ ಬೆಳಿಗ್ಗೆಯೇ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ನೇಹಾ ಕೊಲೆ‌ ಖಂಡಿಸಿ ಶನಿವಾರ ಹುಬ್ಬಳ್ಳಿಯಲ್ಲಿ ಸಾಂಕೇತಿಕ ಬಂದ್ ಮಾಡಲಾಗಿದೆ. ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

ಜಯಕರ್ನಾಟಕ,‌ ಕನ್ನಡಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿದೆ. ಹುಬ್ಬಳ್ಳಿಯ ಚೆನ್ನಮ್ಮ‌ಸರ್ಕಲ್ ಬಳಿ ಪ್ರತಿಭಟನೆ ಆರಂಭಿಸಿದರು. ಚೆನ್ನಮ್ಮ ವೃತ್ತದಿಂದ ಬಿವಿಬಿ ಕಾಲೇಜು ವರೆಗೆ ಘೋಷಣೆ ಕೂಗುತ್ತಾ ಚಪ್ಪಲಿ ತೋರಿಸಿ ಆಕ್ರೋಶ ಹೊರ ಹಾಕಿದರು. ನೇಹಾ ಕೊಲೆ ಇದೊಂದು ಪ್ರಕರಣವಲ್ಲ. ಹೀಗೇ ಅನೇಕ ಪ್ರಕರಣಗಳು ನಡೆಯುತ್ತಿವೆ. ನೇಹಾ ಕೊಲೆ ಇದೊಂದು ಲವ್ ಜಿಹಾದ್. ರಾಜ್ಯ ಸರ್ಕಾರ ನೇಹಾ ಕೊಲೆಯಲ್ಲಿ ಹಗುರವಾಗಿ ನಡೆದುಕೊಳ್ಳುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆ ಮುಖಂಡ ಸುಧೀರ ಮುಧೋಳ ಹಾಗೂ ಸಂಘ ಸಂಘಟನೆಯ ಮುಖಂಡೆ ಮಧು ಪಟ್ಟಣಶೆಟ್ಟಿ ಒತ್ತಾಯಿಸಿದರು.

ಹೊಸೂರ ಸರ್ಕಲ್‌ ಬಳಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಯಿತು. ಈ ವೇಳೆ ಪೊಲೀಸ್ ಅಧಿಕಾರಿ ಜೊತೆಗೆ ಮಾತಿನ ಚಕಮಕಿ ನಡೆಯಿತು. ಮಾನವ ಸರಪಳಿಗೆ ಪೊಲೀಸರು ಅಡ್ಡಿ ಪಡಿಸಿದರು. ಅನುಮತಿ ನೀಡದೇ ಕಾರ್ಯಕರ್ತರನ್ನು ಚದುರಿಸಲು ಪ್ರಯತ್ನಿಸಿದರು.

ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿ ಸಂಘಟನೆ ಸೇರಿದಂತೆ ಅನೇಕರು ಮೇಣದ ಬತ್ತಿ ಹಚ್ಚಿ ಉಗ್ರ ಶಿಕ್ಷೆ ಕೈಗೊಳ್ಳುವಂತೆ ಒತ್ತಾಯಿಸಿದರು.

ನೇಹಾ ಕುಟುಂಬಸ್ಥರಿಗೆ ಪೊಲೀಸರ ಅಭಯ

ಹತ್ಯೆಯಾದ ನೇಹಾ ಕುಟುಂಬಸ್ಥರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಅವರು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಕಠಿಣ ಶಿಕ್ಷೆಯಾಗುವ ರೀತಿಯಲ್ಲಿ ತನಿಖೆ ನಡೆಸುವುದಾಗಿ ಅಭಯ ನೀಡಿದ್ದಾರೆ. ತನಿಖೆ ಕುರಿತು ಒಂದಷ್ಟು ವರದಿಗಾಗಿ ಕಾಯುತ್ತಿದ್ದೇವೆ. ಅವು ಬಂದ ತಕ್ಷಣವೇ ಸೂಕ್ತ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಭರವಸೆ ನೀಡಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಸಾಂತ್ವನ

ಶನಿವಾರ ನೇಹಾ ಹಿರೇಮಠ ಅವರ ನಿವಾಸಕ್ಕೆ ಕಾಂಗ್ರೆಸ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಸಾಂತ್ವನ ಹೇಳಿದರು. ನಿಮ್ಮೊಂದಿಗೆ ಸರ್ಕಾರ ಇರುತ್ತದೆ. ಯಾವುದೇ ಆತಂಕ ಬೇಡ ಎಂದು ಧೈರ್ಯ ತುಂಬಿದರು.

ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ವಿವಿಧ ಭಾಗದಲ್ಲಿ ಕೊಲೆ ಖಂಡಿಸಿ, ಸರ್ಕಾರದ ಹೇಳಿಕೆಗಳ ವಿರುದ್ಧ ಪ್ರತಿಭಟನೆಗಳು ನಡೆದಿವೆ.

ಮೃತ ನೇಹಾ ನಿವಾಸಕ್ಕೆ ಸ್ವಾಮೀಜಿಗಳ ಭೇಟಿ

ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ನಿವಾಸಕ್ಕೆ ಶಿರಹಟ್ಟಿಯ ಫಕೀರ ಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀಗಳ ಗುಂಪು ಭೇಟಿ ನೀಡಿತು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹುಬ್ಬಳ್ಳಿಯಲ್ಲಿ ವಿವಿಧ ಮಠಾಧೀಶರು ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಫಕೀರ ಸಿದ್ಣದರಾಮೇಶ್ವರ ಸ್ವಾಮೀಜಿ ಮಾತನಾಡಿ, ʻʻತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ಎಲ್ಲರ ಮನಸ್ಸಿಗೆ ನೋವಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಇಲ್ಲದಿದ್ದಲ್ಲಿ ಈ ರೀತಿಯ ಘಟನೆ ಮರುಕಳಿಸುತ್ತದೆ. ಕಾಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕು. ಇಂದು ದುರಾಸೆ ಬಹಳ ಬೆಳೆದಿದೆ. ಆಚಾರ ವಿಚಾರ ಕಡಿಮೆ ಆಗಿದೆʼʼ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮ‌ಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್ ನನ್ನು ಹುಬ್ಬಳ್ಳಿ ಪೊಲೀಸರು ಕೋರ್ಟ್‌ ಗೆ ಹಾಜರುಪಡಿಸಿದ್ದು, ಆರೋಪಿ ಫಯಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ.

Tags:    

Similar News