ನೇಹಾ ಹತ್ಯೆ ಪ್ರಕರಣ | ವಿಶೇಷ ನ್ಯಾಯಾಲಯ ಸ್ಥಾಪನೆಗೆ ಹೈಕೋರ್ಟ್‌ಗೆ ಪತ್ರ: ಎಚ್ ಕೆ ಪಾಟೀಲ್
ನೇಹಾ ಹತ್ಯೆ ಪ್ರಕರಣದ ವಿಚಾರಣೆಗೆ ರಾಜ್ಯ ಸರ್ಕಾರ ವಿಶೇಷ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಿದ್ದು, ಈ ಬಗ್ಗೆ ಹೈಕೋರ್ಟ್ ಗೆ ಪತ್ರ ಬರೆಯಲಾಗುವುದು ಎಂದು ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.;
ದೇಶಾದ್ಯಂತ ಚರ್ಚೆಗೆ ಕಾರಣವಾದ ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದ ವಿಚಾರಣೆಗೆ ರಾಜ್ಯ ಸರ್ಕಾರ ವಿಶೇಷ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಿರುವುದಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಧಾರವಾಡದ ಮೃತ ನೇಹಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಸಂತೈಸಿದ ಬಳಿಕ ಮಾತನಾಡಿದ ಅವರು, ನೇಹಾ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತನಿಖೆಗೆ ಈಗಾಗಲೇ ಸಿಐಡಿಗೆ ಒಪ್ಪಿಸಲಾಗಿದೆ. ಪ್ರಕರಣದ ವಿಚಾರಣೆಗೆ ರಾಜ್ಯ ಸರ್ಕಾರ ವಿಶೇಷ ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಿದ್ದು, ಈ ಬಗ್ಗೆ ಹೈಕೋರ್ಟ್ ಗೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದ್ದಾರೆ.
ಅನಿವಾರ್ಯ ಕಾರಣಗಳಿಂದ ನಿರಂಜನ (ಮೃತ ಯುವತಿಯ ತಂದೆ) ಮನೆಗೆ ಸಿದ್ಧರಾಮಯ್ಯ ಅವರಿಗೆ ಭೇಟಿ ನೀಡಲಾಗಲಿಲ್ಲ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ನಿರಂಜನ ಜೊತೆಗೆ ಮಾತನಾಡಿ, ಧೈರ್ಯ ತುಂಬಿದ್ದಾರೆ. ಸರ್ಕಾರ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯನ್ನು ನೀಡಲಿದೆ. ಪ್ರಕರಣದ ಸಂಬಂಧ ಸಿದ್ಧರಾಮಯ್ಯ ಅವರೇ ಸ್ವತಃ, ನಿರಂಜನ ಅವರಿಗೆ ಸರ್ಕಾರದ ಕ್ರಮಗಳನ್ನು ವಿವರಿಸಿದ್ದಾರೆ ಎಂದು ಪಾಟೀಲ್ ಅವರು ತಿಳಿಸಿದರು.
ನೇಹಾ ಹತ್ಯೆ ಪ್ರಕರಣದಲ್ಲಿ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ, ತನಿಖೆ ಸರಿಯಾಗಿ ನಡೆಸುತ್ತಿಲ್ಲ ಎಂದು ಯುವತಿಯ ತಂದೆ ಈ ಹಿಂದೆ ಆರೋಪಿಸಿದ್ದರು. ಇದೀಗ, ಅವರು ತಮ್ಮ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿದ್ದು, ಮಾಹಿತಿಯ ಕೊರತೆಯಿಂದ ಸರ್ಕಾರ ಮತ್ತು ಪೊಲೀಸ್ ಕಮಿಷನರ್ ಬಗ್ಗೆ ಮಾತನಾಡಿದ್ದೆ. ನೋವಿನ ಭರದಲ್ಲಿ ಏನಾದರೂ ತಪ್ಪಾಗಿ ಹೇಳಿದ್ದರೆ, ಕ್ಷಮಿಸುವಂತೆ ನಿರಂಜನ ಅವರು ಹೇಳಿದ್ದಾರೆ.