Naxal Encounter | ಅನುಮಾನ ಮೂಡಿಸಿದ ನಕ್ಸಲ್‌ ಮುಖಂಡ ವಿಕ್ರಂಗೌಡ ಹತ್ಯೆ; ಸಿಎಂ ಸ್ಪಷ್ಟನೆ

ನಕ್ಸಲ್‌ ನಿಗ್ರಹ ಪಡೆ ನಕ್ಸಲ್‌ ನಾಯಕ ವಿಕ್ರಮ್‌ ಗೌಡನನ್ನು ಗುಂಡಿನ ದಾಳಿ ನಡೆಸಿ ಸಾಯಿಸಿರುವ ಪ್ರಕರಣದ ಎಂದು ಪ್ರಗತಿಪರರು, ಚಿಂತಕರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಸಂಶಯ ವ್ಯಕ್ತಪಡಿಸಿದ್ದಾರೆ.;

Update: 2024-11-20 12:21 GMT

ನಕ್ಸಲ್ ಮುಖಂಡ ವಿಕ್ರಂಗೌಡ ಎನ್‌ಕೌಂಟರ್ ಸಾವು ಪ್ರಕರಣದ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ನಕ್ಸಲ್‌ ನಿಗ್ರಹ ಪಡೆಯ ಎನ್‌ಕೌಂಟರ್‌ ಕುರಿತು ಎಂದು ಪ್ರಗತಿಪರರು, ಚಿಂತಕರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಸಂಶಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸಲು ಆತನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಗತಿಪರರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರ ಈ ಆರೋಪಗಳಿಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ವಿಕ್ರಂಗೌಡ ಹಲವು ನಕ್ಸಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದ. ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸಲು ಆತನನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

"ವಿಕ್ರಂಗೌಡ ಅವರಿಗೆ ಶರಣಾಗುವಂತೆ ಆದೇಶ ನೀಡಲಾಗಿತ್ತು. ಆದರೆ ಅವರು ಶರಣಾಗಿರಲಿಲ್ಲ. ವಿಕ್ರಂಗೌಡ ಅವರನ್ನು ಹಿಡಿದವರಿಗೆ ಕೇರಳ ಸರ್ಕಾರ 25 ಲಕ್ಷ ಹಾಗೂ ಕರ್ನಾಟಕ ಸರ್ಕಾರ 5 ಲಕ್ಷ ಬಹುಮಾನ ಸಹ ಘೋಷಿಸಿತ್ತು. ಹಾಗಾಗಿ ಎನ್ಕೌಂಟರ್ನಲ್ಲಿ ಯಾವುದೇ ಅನುಮಾನಗಳಿಲ್ಲ,"  ಎಂದು ವಿವರಿಸಿದರು.

ಈ ನಡುವೆ ಪ್ರಗತಿಪರ ಹೋರಾಟಗಾರರು, ವಿಕ್ರಮ್‌ ಗೌಡನ  ಮೇಲಿನ 20 ವರ್ಷದ ಹಳೆಯ ಪ್ರಕರಣ ಮುಂದಿಟ್ಟುಕೊಂಡು ನಕಲಿ ಎನ್‌ಕೌಂಟರ್‌ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಕಳೆದ ಸೋಮವಾರ ರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಬಳಿ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂಗೌಡ ಹತ್ಯೆಯಾಗಿದ್ದಾನೆ ಎಂದು ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್‌) ಪೊಲೀಸರು ಹೇಳಿದ್ದರು. ಆದರೆ, 20 ವರ್ಷಗಳಿಂದ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ವಿಕ್ರಂಗೌಡ ಅಷ್ಟು ಸುಲಭವಾಗಿ ಎಎನ್‌ಎಫ್‌ ಕೈಗೆ ಬಿದ್ದಿದ್ದು ಹೇಗೆ ಎಂದ ಪ್ರಶ್ನಿಸುತ್ತಿದ್ದಾರೆ. 

ಮಲೆನಾಡ ಭಾಗದಲ್ಲಿ ನಕ್ಸಲ್‌ ನಾಯಕಿ ಮುಂಡಗಾರು ಲತಾ ಭೇಟಿಯ ನಂತರ ಎಎನ್‌ಎಫ್‌ ತಂಡ ನಕ್ಸಲರ ವಿರುದ್ಧ ಕೂಂಬಿಂಗ್‌ ಕಾರ್ಯಾಚರಣೆ ಆರಂಭವಾಗಿತ್ತು. ವಿಕ್ರಂಗೌಡ ಎನ್‌ಕೌಂಟರ್ ಮೂಲಕ ಮಲೆನಾಡಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿರುವುದು ಆಶ್ಚರ್ಯ ತಂದಿದೆ. ಎನ್‌ಕೌಂಟರ್‌ ಎಂಬುದು ಪೊಲೀಸರು ಹಾಗೂ ಸರ್ಕಾರಕ್ಕೆ ಮಾದರಿಯಂತಾಗಿದೆ ಎಂದು ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಪ್ರೊ.ವಿ.ಎಸ್‌. ಶ್ರೀಧರ್‌ ಹೇಳಿದ್ದಾರೆ. ವಿಕ್ರಂಗೌಡನನ್ನು ಸುತ್ತುವರೆದಿದ್ದ ಪೊಲೀಸರು ಜೀವಂತವಾಗಿ ಬಂಧಿಸಬಹುದಾಗಿತ್ತು. ಎನ್‌ಕೌಂಟರ್‌ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.  

ಎನ್‌ಕೌಂಟರ್ ಕುರಿತು ಸರ್ಕಾರ ತನಿಖೆ ನಡೆಸಬೇಕು. ನಕ್ಸಲ್‌ ನಿಗ್ರಹ ಪಡೆಯ ಎನ್‌ಕೌಂಟರ್‌ ಮಾಡಿರುವ ಬಗ್ಗೆ ಸ್ಥಳೀಯ ಠಾಣೆಗಳಲ್ಲಿ ಎಲ್ಲೂ ಪ್ರಕರಣ ದಾಖಲಾಗಿಲ್ಲ. ಹೀಗಿರುವಾಗ ಎನ್‌ಕೌಂಟರ್‌ ಅನ್ನು ನಂಬುವುದು ಹೇಗೆ ಎಂದಿದ್ದಾರೆ. ನಕ್ಸಲರ ಹೋರಾಟದ ಕುರಿತು ನಮಲ್ಲೂ ಭಿನ್ನಾಭಿಪ್ರಾಯವಿದೆ. ಆದರೆ, ನಕ್ಸಲರು ಎತ್ತಿದ ಪ್ರಶ್ನೆಗಳಿಗೆ ಎನ್‌ಕೌಂಟರ್‌ ಮೂಲಕ ಉತ್ತರಿಸುವುದೇ ಮಾರ್ಗವಲ್ಲ. ಪೊಲೀಸರು ಎನ್‌ಕೌಂಟರ್‌ ಪರಂಪರೆ ನಿಲ್ಲಿಸಬೇಕು. ವಿಕ್ರಂಗೌಡ ಎನ್‌ಕೌಂಟರ್ ಅಸಲಿಯೇ, ನಕಲಿಯೇ ಎಂದು ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ  ಶಿವಸುಂದರ್‌ ಕೂಡ ಕಾಂಗ್ರೆಸ್‌  ನೀತಿಯನ್ನು ಟೀಕಿಸಿದ್ದಾರೆ. ನಕ್ಸಲ್‌ ಚಟುವಟಿಕೆ ನಿಗ್ರಹದ ಹೆಸರಿನಲ್ಲಿ ಆದಿವಾಸಿ ನಾಯಕನನ್ನು ಹತ್ಯೆ ಮಾಡಿರುವ ನಿಮ್ಮ ಕೈಗೆ ರಕ್ತ ಅಂಟಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪೊಲೀಸರು ನಕ್ಸಲ್ ಮುಖಂಡ ವಿಕ್ರಂಗೌಡರನ್ನು ಬಂಧಿಸದೇ ಹತ್ಯೆ ಮಾಡಿರುವುದು ಸರಿಯಲ್ಲ. ನಕ್ಸಲ್ ಚಟುವಟಿಕೆ ನಿರ್ನಾಮದ ಹೆಸರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿರುವ ಅದಿವಾಸಿಗಳ ನಿರ್ನಾಮದ ಯಜ್ಞಕ್ಕೆ ನಿಮ್ಮ ಕೊಡುಗೆ ಇದೇನಾ ಎಂದು ಪ್ರಶ್ನಿಸಿದ್ದಾರೆ.

ಧರ್ಮಸ್ಥಳದಲ್ಲಿ ಬಂಧಿಸಿದ ನಕ್ಸಲರು ಯಾರು?

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ವಿರೋಧಿಸಿ ಚಳವಳಿಗೆ ಧುಮುಕಿದ ಆದಿವಾಸಿ ನಾಯಕನಿಗೆ ನಕ್ಸಲ್‌ ಎಂದು ಬಿಂಬಿಸಿ ಹತ್ಯೆ ಮಾಡಿರುವುದು ಅಕ್ಷಮ್ಯ. ವಿಕ್ರಂಗೌಡ ಎನ್‌ಕೌಂರ್‌ ಸಾವಿನಲ್ಲಿ ಸಾಕಷ್ಟು ಅನುಮಾನಗಳಿವೆ. ವಾರದ ಹಿಂದ ಧರ್ಮಸ್ಥಳದಲ್ಲಿ ಶಂಕಿತ ಮೂವರು ನಕ್ಸಲರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಡಿತ್ತು. ಹಾಗಾದರೆ ಆ ಮೂವರು ನಕ್ಸಲರು ಯಾರು, ಅವರನ್ನು ಯಾಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಿಲ್ಲ. ಅವರು ಏನಾದರು ಎಂದು ಹಿರಿಯ ಪತ್ರಕರ್ತ ನವೀನ್‌ ಸೂರಿಂಜೆ ಪ್ರಶ್ನಿಸಿದ್ದಾರೆ.

ಬಂಧಿತ ಮೂವರು ಶಂಕಿತರಲ್ಲಿ ವಿಕ್ರಂಗೌಡ ಕೂಡ ಇದ್ದರೆಂಬ ಮಾಹಿತಿ ಇದೆ. ಆತನ ವಿರುದ್ಧದ ಹಳೆಯ ಪ್ರಕರಣ ಮುಂದಿಟ್ಟುಕೊಂಡು ಎನ್‌ಕೌಂಟರ್ ಹೆಸರಲ್ಲಿ ಹತ್ಯೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಮನೆ ಖಾಲಿ ಮಾಡಿಸಿದ್ದ ಎಎನ್‌ಎಫ್

ಎನ್‌ಕೌಂಟರ್‌ಗೂ ಮೂರು ದಿನಗಳ ಮುಂಚೆ ಸುಧಾಕರ್ ಗೌಡ ಎಂಬುವವರ ಮನೆಗೆ ವಿಕ್ರಂಗೌಡ ಹಾಗೂ ತಂಡವು ದಿನಸಿ ಸಾಮಗ್ರಿಗಳಾಗಿ ಬರುವ ಮಾಹಿತಿ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರು ಸುಧಾಕರ್ ಗೌಡ ಮನೆಯನ್ನು ಖಾಲಿ ಮಾಡಿಸಿದ್ದರು. ಆ ಮನೆಯಲ್ಲಿ ಎಎನ್ಎಫ್ ಸಿಬ್ಬಂದಿಯೇ ತಂಗಿದ್ದರು. ಆದರೆ, ಮನೆಯೊಳಗೆ ಎಎನ್ಎಫ್ ಪಡೆ ಇರುವುದರ ಸುಳಿವು ಅರಿಯದ ವಿಕ್ರಂ ಗೌಡ ಮನೆಯೊಳಗೆ ಬಂದಾಗ ಎಎನ್ಎಫ್ ಖೆಡ್ಡಾಗೆ ಬಿದ್ದಿದ್ದರು. ಎಎನ್‌ಎಫ್‌ ಸಿಬ್ಬಂದಿಯನ್ನು ಕಂಡ ಕೂಡಲೇ ವಿಕ್ರಂಗೌಡ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದಾಗ ಅಂಗಳದಲ್ಲೇ ವಿಕ್ರಂಗೌಡನನ್ನು ಎಎನ್ಎಫ್ ಸಿಬ್ಬಂದಿ ಸುತ್ತುವರೆದಿದ್ದರು ಎನ್ನಲಾಗಿದೆ.

Tags:    

Similar News