
ರಾಜ್ಯದಲ್ಲಿ ಜವರಾಯನ ಅಟ್ಟಹಾಸ; ಕರುನಾಡನ್ನು ಬೆಚ್ಚಿ ಬೀಳಿಸಿದ್ದ ಅಪಘಾತಗಳು
ಕರ್ನಾಟಕದಲ್ಲಿ ಸಂಭವಿಸಿದ ಅತಿ ದೊಡ್ಡ ರಸ್ತೆ ಅಪಘಾತಗಳ ಸಮಗ್ರ ಪಟ್ಟಿ ಇಲ್ಲಿದೆ. ಕನಗನಮರಡಿ ನಾಲೆಯ ದುರಂತದಿಂದ ಹಿಡಿದು ಚಿತ್ರದುರ್ಗದ ಬೆಂಕಿ ಅವಘಡದವರೆಗಿನ ಸಂಪೂರ್ಣ ಮಾಹಿತಿ.
ಕಿಸ್ಮಸ್ ಹಬ್ಬದ ದಿನವೇ ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿದೆ. ಚಿತ್ರದುರ್ಗದಲ್ಲಿ ಬೆಳ್ಳಂ ಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಸ್ಲೀಪರ್ ಬಸ್ಸೊಂದು ಸುಟ್ಟು ಕರಕಲಾಗಿದೆ. ಬೆಂಗಳೂರಿನಿಂದ ಶಿವಮೊಗ್ಗ ಹೊರಟಿದ್ದ ಸೀಬರ್ಡ್ ಬಸ್‌ಗೆ ಲಾರಿಯೊಂದು ಡಿಕ್ಕಿಯಾಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ 15ಕ್ಕೂ ಹೆಚ್ಚು ಪ್ರಯಾಣಿಕರು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದ್ದಾರೆ. ಇನ್ನು ರಾಜ್ಯದಲ್ಲಿ ಇಂತಹ ಭೀಕರ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಕರ್ನಾಟಕದ ಇತಿಹಾಸದಲ್ಲಿ ಸಂಭವಿಸಿದ ಕೆಲವು ಅತ್ಯಂತ ಭೀಕರ ಮತ್ತು ಹೃದಯವಿದ್ರಾವಕ ರಸ್ತೆ ಅಪಘಾತಗಳ ವಿವರ ಇಲ್ಲಿದೆ. ಈ ಘಟನೆಗಳು ಸಂಭವಿಸಿದಾಗ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು.
ಚಳ್ಳಕೆರೆ ಅಗ್ನಿ ದುರಂತ (2010)
ಚಿತ್ರದುರ್ಗದ ಚಳ್ಳಕೆರೆ ಬಳಿ ನಡೆದ ಈ ಘಟನೆಯು ಇಂದಿನ ಹಿರಿಯೂರು ಘಟನೆಯನ್ನೇ ಹೋಲುತ್ತದೆ. ಮುಂಜಾನೆ ವೇಳೆ ಬಸ್ ಮತ್ತು ಲಾರಿ ಡಿಕ್ಕಿಯಾಗಿ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡಿತ್ತು. ಅಂದು ಕೂಡ 30 ಮಂದಿ ನಿದ್ರೆಯಲ್ಲೇ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದರು.
ಕನಗನಮರಡಿ ಬಸ್ ದುರಂತ 2018
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಖಾಸಗಿ ಬಸ್ ನಾಲೆಯೊಳಗೆ ಉರುಳಿತ್ತು. ಬಸ್ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದರಿಂದ ಮತ್ತು ಕಿಟಕಿಗಳನ್ನು ತೆಗೆಯಲು ಸಾಧ್ಯವಾಗದ ಕಾರಣ 30 ಪ್ರಯಾಣಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಇದರಲ್ಲಿ ಶಾಲೆಯಿಂದ ಹಿಂತಿರುಗುತ್ತಿದ್ದ ಮಕ್ಕಳೇ ಹೆಚ್ಚಾಗಿದ್ದರು.
ಧಾರವಾಡ ಇಟ್ಟಿಗಟ್ಟಿ ಅಪಘಾತ (2021)
ಧಾರವಾಡದ ಬೈಪಾಸ್ ರಸ್ತೆಯಲ್ಲಿ ಟಿಪ್ಪರ್ ಲಾರಿ ಮತ್ತು ಟ್ರಾವೆಲರ್ ವಾಹನ ಮುಖಾಮುಖಿ ಡಿಕ್ಕಿಯಾಗಿದ್ದವು. ಮೃತರಲ್ಲಿ ಹೆಚ್ಚಿನವರು ದಾವಣಗೆರೆಯ ಕ್ಲಬ್‌ವೊಂದರ ಸದಸ್ಯರು ಮತ್ತು ವೈದ್ಯರಾಗಿದ್ದರು. ಈ ಅಪಘಾತದ ನಂತರ ಈ ರಸ್ತೆಯನ್ನು ಅಗಲೀಕರಣ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬಂದಿತ್ತು.
BMTC ಬಸ್ ಅಪಘಾತ
ಇತ್ತೀಚಿನ ವರದಿಗಳ ಪ್ರಕಾರ, 2024ರಿಂದ ಈವರೆಗೆ (ಆಗಸ್ಟ್ 2025ರ ಅಂತ್ಯದವರೆಗೆ) ಬಿಎಂಟಿಸಿ ಬಸ್‌ಗಳು ಸೇರಿದಂತೆ ವಿವಿಧ ಅಪಘಾತಗಳಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 80 ದಾಟಿದೆ. ಬಿಎಂಟಿಸಿ ಬಸ್‌ಗಳಿಂದ ಸಂಭವಿಸಿದ ಅಪಘಾತಗಳಲ್ಲಿ 42 ಮಂದಿ ಸಾವನ್ನಪ್ಪಿದ್ದು, 155 ಮಂದಿ ಗಾಯಗೊಂಡಿದ್ದರು. ಆ ವರ್ಷ ಒಟ್ಟು 190 ಅಪಘಾತಗಳು ವರದಿಯಾಗಿದ್ದವು. ಈ ವರ್ಷದ ಮೊದಲ ಎಂಟು ತಿಂಗಳಲ್ಲೇ 124 ಅಪಘಾತಗಳು ಸಂಭವಿಸಿದ್ದು, 38 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ 2024ರ ಆರಂಭದಿಂದ 2025ರ ಆಗಸ್ಟ್‌ವರೆಗಿನ 20 ತಿಂಗಳಲ್ಲಿ ಒಟ್ಟು ಸಾವಿನ ಸಂಖ್ಯೆ 80 ತಲುಪಿದೆ.

