ಕನ್ನಡದಲ್ಲಿಯೇ ಮಾತು ಆರಂಭಿಸಿ ಅಣ್ಣಮ್ಮದೇವಿ, ಕೆಂಪೇಗೌಡಗೆ ನಮನ ಸಲ್ಲಿಸಿದ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ನಾಡಿನ ಸಂಸ್ಕೃತಿ, ತ್ಯಾಗವನ್ನು ಹೊಗಳಿದರು.ತಂತ್ರಜ್ಞಾನವನ್ನು ಪರಂಪರೆಗೆ ಜೋಡಿಸಿರುವ ಬೆಂಗಳೂರು, ಹೊಸ ಭಾರತದ ಸಂಕೇತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.;
ಮೂರನೇ ಹಂತದ ಕಿತ್ತಳೆ ಮಾರ್ಗದ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ ಬಳಿಕ ಕನ್ನಡದಲ್ಲಿಯೇ ಭಾಷಣ ಆರಂಭಿಸಿ, ಅಣ್ಣಮ್ಮ ದೇವಿ ಹಾಗೂ ಕೆಂಪೇಗೌಡರನ್ನು ಸ್ಮರಿಸಿ, ನಮನ ಸಲ್ಲಿಸಿದರು.
ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಬೆಂಗಳೂರಿನ ನಾಗರಿಕ ಬಂಧು ಭಗಿನಿಯರೇ, ನಿಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. ನಾಡಿನ ಸಂಸ್ಕೃತಿ, ತ್ಯಾಗವನ್ನು ಹೊಗಳಿದ ಅವರು, ಬೆಂಗಳೂರಿನ ಅಣ್ಣಮ್ಮ ದೇವಿಗೆ ನಮಸ್ಕಾರ ಎಂದು ಎಂದು ಹೇಳಿದರು. ಇದೇ ವೇಳೆ ನಾಡಪ್ರಭು ಕೆಂಪೇಗೌಡರ ಸ್ಮರಿಸಿದರು.
ವಿಶ್ವದ ನಗರ ಜತೆಗೆ ಬೆಂಗಳೂರಿನ ಅಭಿವೃದ್ಧಿಯಾಗುತ್ತಿದೆ. ಬೆಂಗಳೂರು ಗ್ಲೋಬಲ್ ಐಟಿಯಲ್ಲಿ ಭಾರತದ ಕೀರ್ತಿಯನ್ನು ಹಾರಿಸಿದೆ. ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಚ್ಚುತ್ತಿದೆ. 2014ಕ್ಕಿಂತ ಮೊದಲು ದೇಶದಲ್ಲಿ ಮೆಟ್ರೋ, ವಿಮಾನ ನಿಲ್ದಾಣ, ಶಿಕ್ಷಣ ಕ್ಷೇತ್ರ, ಬಾಹ್ಯಾಕಾಶಯಾನದಲ್ಲಿ ದೊಡ್ಡ ಬದಲಾವಣೆಗಳು ಆಗಿವೆ. 12 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಈಗ 160 ವಿಮಾನ ನಿಲ್ದಾಣಗಳು ಇವೆ ಎಂದು ಹೇಳಿದರು.
ಬೆಂಗಳೂರು ನವಭಾರತದ ಸಂಕೇತವಾಗಿದೆ. ಬೆಂಗಳೂರು ನಗರದ ಯಶಸ್ಸಿಗೆ ಇಲ್ಲಿನ ಜನರ ಶ್ರಮ, ಪ್ರತಿಭೆ ಮುಖ್ಯವಾಗಿದೆ. ಮೆಡಿಕಲ್ ಶಿಕ್ಷಣ ಸುಧಾರಿಸಿದೆ. 2014ಕ್ಕಿಂತ ಮೊದಲು ದೇಶದ 4 ನಗರಗಳಲ್ಲಿ ಮಾತ್ರ ಮೆಟ್ರೋ ಇತ್ತು. ಆದರೆ ಈಗ 24 ನಗರಗಳಲ್ಲಿ ಮೆಟ್ರೋ ಅಭಿವೃದ್ಧಿಯಾಗುತ್ತಿದೆ. ವಿಶ್ವದಲ್ಲಿ ಭಾರತ ಸದ್ಯ 4ನೇ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿದೆ. ಆಪರೇಷನ್ ಸಿಂಧೂರು ಆದ ಮೇಲೆ ಮೊದಲ ಬಾರಿಗೆ ನಾನು ಬೆಂಗಳೂರಿಗೆ ಬಂದಿದ್ದೇನೆ. ಬೆಂಗಳೂರು ವಿಶ್ವದಲ್ಲಿ ಪ್ರಸಿದ್ಧಿ ಪಡೆದಿದೆ. ಭಾರತದ ಕೀರ್ತಿ ಹೆಚ್ಚಿಸಿದೆ. ಕನ್ನಡ ಭಾಷೆಯಲ್ಲಿ ಸಿಹಿ ಇದೆ. ಇಲ್ಲಿನ ಜನರ, ಯುವಕರ ಪರಿಶ್ರಮ, ಪ್ರತಿಭೆ ಸಾಕಷ್ಟು ಇದೆ. ಅದಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ನಮ್ಮ ರಕ್ಷಣಾ ಇಲಾಖೆಯಲ್ಲಿ ಮೇಕ್ ಇನ್ ಇಂಡಿಯಾದ ತಾಕತ್ ಇದೆ. ಆಪರೇಷನ್ ಸಿಂಧೂರು ಮೇಕ್ ಇಂಡಿಯಾದ ಬಲಿಷ್ಠವಾದ ಶಕ್ತಿ ಆಗಿತ್ತು. ಭಾರತದ ಗಡಿ ದಾಟಿ ಹೋಗಿ ಶತ್ರುಗಳನ್ನು ನಾಶ ಪಡಿಸಿದ್ದೇವೆ. ಭಯೋತ್ಪಾದಕರ ತಾಣಗಳನ್ನು ನಾಶ ಪಡಿಸಲಾಗಿದೆ. ಆಪರೇಷನ್ ಸಿಂಧೂರಿನಲ್ಲಿ ನಮ್ಮ ಸೈನಿಕರ ಯುಕ್ತಿ, ಶಕ್ತಿ ಎಲ್ಲವನ್ನು ನೋಡಿದ್ದೇನೆ. ಎದುರಾಳಿಗೆ ಸರಿಯಾದ ಉತ್ತರವನ್ನು ನಮ್ಮವರು ಕೊಟ್ಟಿದ್ದಾರೆ ಎಂದರು.
ಆಟೋಮೊಬೈಲ್, ಮೊಬೈಲ್ ಕ್ಷೇತ್ರದಲ್ಲಿ ರಫ್ತು ಹೆಚ್ಚಾಗಿದೆ. ಸೆಮಿಕಂಡಕ್ಟರ್ ಉತ್ಪಾದನೆ ಹೆಚ್ಚುತ್ತಿದೆ. ವಿಶ್ವದ ಶೇಕಡಾ 50 ರಷ್ಟು ಡಿಜಿಟಲ್ಕರಣ ಭಾರತದಲ್ಲಿ ಆಗುತ್ತಿದೆ. ಡಿಜಿಟಲ್ ಇಂಡಿಯಾದ ಕನಸು ಪೂರ್ಣಗೊಳಿಸೋಣ. ಮುಂದಿನ ವರ್ಷಗಳಲ್ಲಿ ಭಾರತ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಹೋಗುವ ಭರವಸೆಯನ್ನು ವ್ಯಕ್ತಪಡಿಸಿದರು.
ಬೆಂಗಳೂರು ಜಗತ್ತಿನ ಮಹಾನಗರಗಳ ಸಾಲಿನಲ್ಲಿ ನಿಲ್ಲುತ್ತದೆ. ನಾವು ಜಗತ್ತನ್ನು ಮುನ್ನಡೆಸುವ ಸಾಲಿನಲ್ಲಿದ್ದೇವೆ. ರಾಗಿಗುಡ್ಡದಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗವು ಎಲೆಕ್ಟ್ರಾನಿಕ್ಸಿಟಿಗೆ ಕಡಿಮೆ ಅವಧಿಯಲ್ಲಿ ಸಾಗಬಹುದು. ಇದು ಜನರ ಜೀವನವನ್ನು ಇನ್ನಷ್ಟು ಸರಳಗೊಳಿಸುತ್ತಿದೆ. ಅಲ್ಲದೇ, ಬೆಂಗಳೂರಿನ ಸಾರಿಗೆ ಹೊಸ ತಾಕತ್ತು ನೀಡಲಿದೆ. ಸಾರ್ವಜನಿಕ ಸಾರಿಗೆಗೆ ಬೆಂಗಳೂರು ಮಾದರಿಯಾಗಿ ನಿಲ್ಲಲಿದೆ ಎಂದು ತಿಳಿಸಿದರು.