Namma Nandini | ಪಿತೂರಿ ನಡುವೆಯೂ ದೆಹಲಿಯಲ್ಲಿ ನಂದಿನಿ ಹಾಲು ಮಾರಾಟ ನಿರಾತಂಕ

ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ಕಡಿಮೆ ಬೆಲೆಯಲ್ಲಿ 900 ಗ್ರಾಂ ಮತ್ತು 450 ಗ್ರಾಂ ದೋಸೆ, ಇಡ್ಲಿ ಹಿಟ್ಟನ್ನು ಮಾರಾಟ ಮಾಡಲು ಕೆಎಂಎಫ್‌ ಮುಂದಾಗಿತ್ತು. ಆದರೆ ಈ ತೀರ್ಮಾನವನ್ನು ಈಗ ವಾಪಸ್ ಪಡೆಯಲಾಗಿದೆ.;

Update: 2024-12-04 08:48 GMT
ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್‌

ದೆಹಲಿಯಲ್ಲಿ ನಂದಿನಿ ಹಾಲಿನ ಮಾರಾಟಕ್ಕೆ ಉತ್ತರಭಾರತದ ಸ್ಥಳೀಯ ಹಾಲು ಒಕ್ಕೂಟಗಳು ಅಡ್ಡಗಾಲು ಹಾಕಿದರೂ ನಂದಿನಿ ಮಾರಾಟ ನಿರಾತಂಕವಾಗಿದೆ. ಪ್ರತಿದಿನ 5ರಿಂದ 6 ಸಾವಿರ ಲೀಟರ್ ಹಾಲು ಮಾರಾಟ ಆಗುತ್ತಿದೆ. ಮುಂದಿನ ದಿನಗಳಲ್ಲಿ ಒಂದು ಲಕ್ಷ ಲೀಟರ್ ಹಾಲು ಮಾರಾಟ ಆಗುವ ನಿರೀಕ್ಷೆ ಇದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ.

ಅವರು ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನವೆಂಬರ್ 29 ರಂದು ನಂದಿನಿ ಹಾಲು, ಹಾಲಿನ ಉತ್ಪನ್ನಗಳ ಮಾರಾಟವನ್ನು ದೆಹಲಿಯಲ್ಲಿ ಆರಂಭಿಸಲಾಗಿದೆ. ನಮಗೆ ಗ್ರಾಹಕರ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಪೂರೈಕೆ ಮಾಡುತ್ತೇವೆ. ಆದರೆ ಇದಕ್ಕೆ ಅಲ್ಲಿನ ಮಾರುಕಟ್ಟೆಯಲ್ಲಿ ಅಡ್ಡಿ ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಉತ್ಪನ್ನಗಳು ಸ್ಥಳೀಯ ಗ್ರಾಹಕರ ಕೈಗೆ ಸಿಗದಂತೆ ಪಿತೂರಿ ನಡೆಸಲಾಗುತ್ತಿದೆ ಎಂಬ ಆರೋಪವಿದೆ. ವ್ಯವಹಾರ ಎಂದ ಮೇಲೆ ಸ್ಫರ್ಧೆ ಇದ್ದಿದ್ದೇ ಅವುಗಳನ್ನು ಎದುರಿಸಿ ಯಶಸ್ವಿಯಾಗುತ್ತೇವೆ ಎಂದು ಅವರು ರಾಷ್ಟ್ರರಾಜಧಾನಿಯಲ್ಲಿ ಕೆಎಂಎಫ್‌ ಬ್ರಾಂಡ್‌ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿವರಿಸಿದರು.

ಅಲ್ಲಿನ ಮಾರುಕಟ್ಟೆಯಲ್ಲಿ ಕೆಎಂಎಫ್‌ ಬ್ರಾಂಡ್‌ ಉತ್ತೇಜನಕ್ಕಾಗಿ ಯೋಜನೆ ಹೊಂದಿದ್ದೇವೆ ಎಂದ ಅವರು, ಡಿ.9 ರಂದು ನಾನು ಮತ್ತು ಕೆಎಂಎಫ್‌ ಎಂಡಿ ದೆಹಲಿಗೆ ಹೋಗುತ್ತೇವೆ ಎಂದು ತಿಳಿಸಿದರು. 

ನಂದಿನಿ ಜನರ ಕೈಗೆ ಸಿಗದಂತೆ ಪಿತೂರಿ

ನಂದಿನಿ ಪೈಪೋಟಿಯನ್ನು ನಿರೀಕ್ಷೆ ಮಾಡಿರುವ ಉತ್ತರ ಭಾರತದ ಹಾಲು ಒಕ್ಕೂಟಗಳು ದೆಹಲಿಯಲ್ಲಿ ನಂದಿನಿ ಉತ್ಪನ್ನ ಜನರ ಕೈ ಸೇರದಂತೆ ಪಿಯೂರಿ ನಡೆಸಿವೆ. ಡೀಲರ್‌ಗಳಿಂದ ಐದರಿಂದ ಆರು ಸಾವಿರ ಹಾಲನ್ನು ಖರೀದಿಸಿ ರಸ್ತೆಗೆ ಚೆಲ್ಲುತ್ತಿದ್ದಾರೆ. ಇದಕ್ಕಾಗಿಯೇ ಸುಮಾರು 300 ಜನರ ತಂಡ ಕೆಲಸ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ನಂದಿನಿ ಬಗ್ಗೆ ದೆಹಲಿ ಗ್ರಾಹಕರಲ್ಲಿ ವಿಶ್ವಾಸವಿದೆ. ಅಲ್ಲಿಯ ಜನರಿಗೆ ಉತ್ತಮ ಗುಣಮಟ್ಟ ಮತ್ತು ಉತ್ಕೃಷ್ಟ ಆಕಳು ಹಾಲು ಇಷ್ಟವಾಗಿದೆ. ಆದರೆ ನಂದಿನಿ ಹಾಲು ಜನರ ಕೈತಲುಪದಂತೆ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.

ಇದಲ್ಲದೆ ದೆಹಲಿಯಲ್ಲಿ ಡೈರಿ ಮಾಡಲು ಯಾವುದೇ ಅವಕಾಶ ಕೆಎಂಎಫ್‌ಗೆ ಸಿಕ್ಕಿರಲಿಲ್ಲ. ಕರ್ನಾಟಕದ ಹಾಲು ದೆಹಲಿಗೆ ತಲುಪಲು 48 ಗಂಟೆಗಳು ಬೇಕು. ಅಲ್ಲಿಯೇ ಪ್ಯಾಕ್‌ ಮಾಡಿ ಗ್ರಾಹಕರಿಗೆ ತಲುಪಿಸಬೇಕು. ಸದ್ಯ ಕೆಎಂಎಫ್‌ ಮಂಡ್ಯ ಹಾಲು ಒಕ್ಕೂಟದಿಂದ ದೆಹಲಿ, ಹರಿಯಾಣ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಮಾರಾಟ ಮಾಡಲು 2.50 ಲಕ್ಷ ಲೀಟರ್ ಹಾಲನ್ನು ಟ್ಯಾಂಕರ್ ಮೂಲಕ ಕಳಿಸುತ್ತಿದೆ. ದೆಹಲಿ ಹೊರವಲಯದ ಹರಿಯಾಣದಲ್ಲಿ ಹಾಲನ್ನು ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಆದರೆ ಇದಕ್ಕೆ ತಡೆಯೊಡ್ಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.

ಇದೆಲ್ಲವೂ ಒಂದು ವದಂತಿ 

ಅಮುಲ್ ಮತ್ತು ನಂದಿನಿ ವಿಲೀನ ಆಗಲಿದೆ ಎಂಬ ವದಂತಿ ವಿಚಾರ ಹಿನ್ನೆಲೆಯಲ್ಲಿ ಚರ್ಚೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಂದಿನಿ ಹಾಲಿನ ಉತ್ಪನ್ನ ಮಾರಾಟಕ್ಕೆ ಅಡ್ಡಿ ಮಾಡುತ್ತಿರುಬಹುದೆ? ಎಂಬ ಪ್ರಶ್ನೆಗೆ ಉತ್ತರಿಸಿದ ನಾಯಕ್, ಹಿಂದೆ ಅಮಿತ್ ಶಾ ಚುನಾವಣೆ ಸಂದರ್ಭದಲ್ಲಿ ಹೇಳಿದ್ದ ಯಾವುದೋ ಒಂದು ಮಾತಿನ ಹಿನ್ನೆಲೆಯಲ್ಲಿ ಆ ವದಂತಿ ಸೃಷ್ಟಿ ಆಗಿತ್ತು. ಅದೆಲ್ಲವೂ ಒಂದು ವದಂತಿ ಅಷ್ಟೇ. ಆ ರೀತಿ ವಿಲೀನ ಮಾಡಲು ಸಾಧ್ಯವೇ ಇಲ್ಲ ಎಂದು ಅವರು ತಿಳಿಸಿದರು. 

ಸದ್ಯಕ್ಕಂತೂ ದರ ಏರಿಕೆ ಬಗ್ಗೆ ಮಾಹಿತಿ ಇಲ್ಲ

ಹಾಲಿನ ದರದ ಹೆಚ್ಚಳದ ಬಗ್ಗೆ ಮಾತನಾಡಿದ ಅವರು, ಸದ್ಯಕ್ಕೆ ಹಾಲಿನ ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಆದರೆ ರೈತರ ಬೇಡಿಕೆ ಇದೆ ಎಂದು ಕೆಲವು ದಿನಗಳ ಹಿಂದೆ ಸಿಎಂ ರಾಮನಗರದಲ್ಲಿ ಒಂದು ವೇದಿಕೆಯಲ್ಲಿ ಹೇಳಿದ್ದರು. ಈ ಬಗ್ಗೆ ಎಲ್ಲಾ ಅಧಿಕಾರಿಗಳನ್ನು ಕರೆಸಿ ಮಾತಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ಸದ್ಯಕ್ಕಂತೂ ದರ ಏರಿಕೆ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ತಿಳಿಸಿದರು. ಕೆಎಂಎಫ್ ಎಂಡಿ ವರ್ಗಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೊಂದು ಆಡಳಿತಾತ್ಮಕ ತೀರ್ಮಾನ ಅಷ್ಟೇ ಎಂದರು.

ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬರುವುದಿಲ್ಲ 

ಕೆಎಂಎಫ್ ತನ್ನ 'ನಂದಿನಿ' ಬ್ರಾಂಡ್ ದೋಸೆ ಮತ್ತು ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆಗೆ ತಯಾರಾಗಿತ್ತು. ಆದರೆ  ಈಗ ನಂದಿನಿ ಬ್ರಾಂಡ್ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆ ಮಾಡುವುದಿಲ್ಲ ಎಂದು ಕೆಎಂಎಫ್ ಹೇಳಿದೆ.

ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ಕಡಿಮೆ ಬೆಲೆಯಲ್ಲಿ 900 ಗ್ರಾಂ ಮತ್ತು 450 ಗ್ರಾಂ ದೋಸೆ, ಇಡ್ಲಿ ಹಿಟ್ಟನ್ನು ಮಾರಾಟ ಮಾಡಲು ಕೆಎಂಎಫ್‌ ಮುಂದಾಗಿತ್ತು. ಆದರೆ ಈ ತೀರ್ಮಾನವನ್ನು ಈಗ ವಾಪಸ್ ಪಡೆಯಲಾಗಿದೆ. ದೋಸೆ, ಇಡ್ಲಿ ಹಿಟ್ಟಿನ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಅದರಿಂದ ನಂದಿಗೆ ಬ್ರಾಂಡ್‌ಗೆ ಕೆಟ್ಟ ಹೆಸರು ಬರುತ್ತದೆ. ಇದರಿಂದಾಗಿ ನಂದಿನಿ ಹಾಲು, ಹಾಲಿನ ಉತ್ಪನ್ನಗಳ ಮೇಲೆಯೂ ಪ್ರಭಾವ ಬೀರುವ ಆತಂಕವಿದೆ. ಆದ್ದರಿಂದ ನಂದಿನಿ ಬ್ರಾಂಡ್ ದೋಸೆ ಹಿಟ್ಟನ್ನು ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟಪಡಿಸಿದ್ದಾರೆ. 

Tags:    

Similar News