Milk Price Hike | ನಂದಿನಿ ಹಾಲಿನ ದರ ಲೀಟರ್ ಗೆ 4ರೂ. ಹೆಚ್ಚಳ ; ಸಂಪುಟ ಸಭೆ ಅನುಮೋದನೆ, ಏ.1 ರಿಂದ ಜಾರಿ

ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂಪಾಯಿ ಏರಿಕೆ ಮಾಡಿ ಇದೀಗ ಸಂಪುಟ ಸಭೆಯಲ್ಲಿ ಇದೀಗ ಅನುಮೋದನೆ ದೊರಕಿದೆ;

Update: 2025-03-27 09:06 GMT

ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ಮತ್ತೆ 4 ರೂಪಾಯಿ ಏರಿಕೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆ ಕುರಿತು ಚರ್ಚಿಸಿದ ಬಳಿಕ ದರ ಏರಿಕೆಗೆ ಅನುಮೋದನೆ ನೀಡಲಾಯಿತು. ಹೊಸ ದರಗಳು ಏ.1 ರಿಂದ ಜಾರಿಗೆ ಬರಲಿವೆ.

ಕಳೆದ ವಾರ ಕೆಎಂಎಫ್ ಅಧಿಕಾರಿಗಳ ಜೊತೆ​ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯಅವರು ಹಾಲಿನ ದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದ್ದರು. ಇದೀಗ ನಂದಿನ ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.  ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಂಎಫ್) ಪ್ರಸ್ತಾವಿಸಿದ ಈ ದರ ಏರಿಕೆಯು ರೈತರಿಗೆ ಬೆಂಬಲ ನೀಡುವ ಮತ್ತು ಹೈನುಗಾರಿಕೆಯಲ್ಲಿ ಉತ್ಪಾದನಾ ವೆಚ್ಚದ ಹೊರೆಯನ್ನು ಸರಿದೂಗಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಲಾಗಿದೆ.

ಕೆಲ ದಿನಗಳ ಹಿಂದೆ ರಾಜ್ಯದ ರೈತರು ಕೆಎಂಎಫ್ ಮುಂದೆ ಹಾಲಿನ ದರ ಏರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಜಿಲ್ಲಾ ಹಾಲು ಒಕ್ಕೂಟಗಳು ಸಹ ಈ ಬೇಡಿಕೆಗೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿ, ಸರ್ಕಾರಕ್ಕೆ ಪ್ರತಿ ಲೀಟರ್‌ಗೆ 10 ರೂಪಾಯಿ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈಗ ಸಂಪುಟ ಸಭೆಯಲ್ಲಿ ಚರ್ಚಿಸಿ 4 ರೂಪಾಯಿ ಏರಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ಈ ಏರಿಕೆಯಿಂದ ರೈತರಿಗೆ ಆರ್ಥಿಕ ನೆರವು ದೊರೆಯಲಿದ್ದು, ಜಿಲ್ಲಾ ಹಾಲು ಒಕ್ಕೂಟಗಳು ನಷ್ಟದಿಂದ ಪಾರಾಗಲಿವೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಪ್ರಸ್ತಾವದಲ್ಲಿ, ಗೋಮಾಳ ಆಹಾರದ ಬೆಲೆ ಏರಿಕೆ, ಕಾರ್ಮಿಕ ವೆಚ್ಚ ಹಾಗೂ ಸಾಗಾಣಿಕೆ ಖರ್ಚು ಹೆಚ್ಚಳವನ್ನು ದರ ಏರಿಕೆಗೆ ಕಾರಣ ಎಂದು ಉಲ್ಲೇಖಿಸಲಾಗಿದೆ. ಬ್ರ್ಯಾಂಡ್‌ಗಳಾದ ಅಮುಲ್, ಮದರ್ ಡೈರಿ ಮತ್ತು ಮಿಲ್ಮಾ ಹಾಲಿನ ದರಕ್ಕೆ ಹೋಲಿಸಿದರೆ ನಂದಿನಿ ಹಾಲಿನ ಬೆಲೆ ಇನ್ನೂ ಕಡಿಮೆಯಿದೆ ಎಂಬ ವಾದ ಮಂಡಿಸಲಾಗಿದೆ.

ಹಿಂದಿನ ದರ ಏರಿಕೆಗಳು

ಕಳೆದ ವರ್ಷ (2024) ಜೂನ್ 26 ರಿಂದ ಕೆಎಂಎಫ್ ಪ್ರತಿ ಲೀಟರ್‌ಗೆ 2 ರೂಪಾಯಿ ದರ ಏರಿಕೆ ಮಾಡಿತ್ತು. ಆಗ ಪ್ರತಿ 500 ಎಂಎಲ್ ಮತ್ತು 1000 ಎಂಎಲ್ ಪ್ಯಾಕೆಟ್‌ಗಳಲ್ಲಿ 50 ಎಂಎಲ್ ಹೆಚ್ಚುವರಿ ಹಾಲು ನೀಡುವ ಮೂಲಕ ಗ್ರಾಹಕರಿಗೆ ಪರಿಹಾರ ಕಲ್ಪಿಸಲಾಗಿತ್ತು. ಆದರೆ ಈಗಿನ 4 ರೂಪಾಯಿ ಏರಿಕೆಯಲ್ಲಿ ಹೆಚ್ಚುವರಿ ಪ್ರಮಾಣ ಹಾಲು ನೀಡುವ ಉಲ್ಲೇಖವಿಲ್ಲ, ಇದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಬಹುದು.

ರಾಜ್ಯ ಸರ್ಕಾರ ಈಗಾಗಲೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ, ಬೆಂಗಳೂರು ಮೆಟ್ರೋ ಟಿಕೆಟ್ ದರ ಮತ್ತು ವಿದ್ಯುತ್ ದರವನ್ನು ಏರಿಕೆ ಮಾಡಿದೆ. ಈಗ ನಂದಿನಿ ಹಾಲಿನ ದರವೂ 4 ರೂಪಾಯಿ ಹೆಚ್ಚಳವಾಗಿರುವುದರಿಂದ ರಾಜ್ಯದ ಜನತೆ, ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ಬೀಳಲಿದೆ. ಉದಾಹರಣೆಗೆ, ನಂದಿನಿ ಟೋನ್ಡ್ ಹಾಲಿನ ಬೆಲೆ ಈಗ 48 ರೂಪಾಯಿಗೆ ಏರಿದೆ. ಇದರ ಜೊತೆಗೆ ಮೊಸರು, ಮಜ್ಜಿಗೆ ಮತ್ತು ತುಪ್ಪದಂತಹ ಉತ್ಪನ್ನಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.

ದರ ಏರಿಕೆ ರೈತರಿಗೆ ಪ್ರಯೋಜನಕಾರಿಯಾದರೂ, ಗ್ರಾಹಕರಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಕೆಲವರು ರೈತರ ಬೆಂಬಲಕ್ಕಾಗಿ ಈ ಕ್ರಮವನ್ನು ಸಮರ್ಥಿಸಿದರೆ, ಇತರರು ದೈನಂದಿನ ಖರ್ಚು ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.  

Tags:    

Similar News