Nandini Ghee | ಮಲೆ ಮಾದಪ್ಪನ 'ಲಡ್ಡು ಪ್ರಸಾದ'ದಲ್ಲಿ ನಂದಿನಿ ಘಮಲು; ಇರಲಿದೆ ತಿರುಪತಿ ಲಡ್ಡಿನ ಸ್ವಾದ
ರಾಜ್ಯದಲ್ಲಿ ಅತಿ ಹೆಚ್ಚಿನ ಆದಾಯ ಬರುವ ದೇವಸ್ಥಾನಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ನಂತರ ಎರಡನೇ ಸ್ಥಾನದಲ್ಲಿ ಮಲೆ ಮಹದೇಶ್ವರ ದೇವಸ್ಥಾನವಿದೆ. ತಿರುಪತಿ ದೇವಸ್ಥಾನದಂತೆ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಬಳಸುವಂತೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿರುವುದರಿಂದ ಲಡ್ಡುವಿನ ಸ್ವಾದ ಹೆಚ್ಚಲಿದೆಯೇ ಎಂಬ ಕುತೂಹಲ ಭಕ್ತರಲ್ಲಿದೆ.;
ನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದ ಲಡ್ಡು ಪ್ರಸಾದಕ್ಕೆ ಈಗ ಮತ್ತಷ್ಟು ನಂದಿನಿ ತುಪ್ಪದ ಘಮಲು ಸೇರಿಕೊಳ್ಳಲಿದೆ.
ಈ ಬಗ್ಗೆ ಏ. 24ರಂದು ನಡೆದ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ಮಾದಪ್ಪನ ಲಡ್ಡು ಪ್ರಸಾದ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಂತೆಯೇ ರುಚಿ, ಪರಿಮಳ, ಸ್ವಾದದಲ್ಲಿ ಹೆಚ್ಚುಗಾರಿಕೆ ಪಡೆದುಕೊಳ್ಳಲಿದೆ ಎನ್ನುವ ನಿರೀಕ್ಷೆ ಭಕ್ತರಲ್ಲಿ ಹೆಚ್ಚಿದೆ.
ರಾಜ್ಯದಲ್ಲಿ ಅತಿ ಹೆಚ್ಚಿನ ಆದಾಯ ಬರುವ ದೇವಸ್ಥಾನಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ನಂತರ ಎರಡನೇ ಸ್ಥಾನದಲ್ಲಿ ಮಲೆ ಮಹದೇಶ್ವರ ದೇವಸ್ಥಾನವಿದೆ. 2022ರಲ್ಲಿಯೇ ವಾರ್ಷಿಕ 100 ಕೋಟಿ ರೂ. ಆದಾಯದ ಗಡಿ ದಾಟಿದ ಇಲ್ಲಿ ಸತತ 3 ವರ್ಷಗಳಿಂದಲೂ ಆದಾಯದ ಮಟ್ಟದಲ್ಲಿ ಏರಿಕೆ ಕಂಡು ಬರುತ್ತಲೇ ಇದೆ. ಹುಂಡಿ ಹಣವೇ ಮಾಸಿಕ ಸರಾಸರಿ 3.5 ಕೋಟಿಯಷ್ಟಿದ್ದರೆ, ಪ್ರಸಾದ, ತೀರ್ಥ ಮಾರಾಟ, ಹೂಡಿಕೆಗಳ ಮೇಲಿನ ಬಡ್ಡಿ, ವಸತಿ ಗೃಹಗಳಿಂದ ಬರುವ ಆದಾಯ, ಸೇವೆಗಳು ಸೇರಿ ಎಲ್ಲಾ ಮೂಲಗಳಿಂದ ವಾರ್ಷಿಕ 100 ಕೋಟಿ ರೂ.ಗಳ ಗಡಿ ದಾಟುತ್ತಿದೆ. ಇನ್ನು ದೀಪಾವಳಿ, ಶಿವರಾತ್ರಿ, ಯುಗಾದಿ, ಕಾರ್ತಿಕ ಸೋಮವಾರಗಳಂದು ನಡೆಯುವ ಜಾತ್ರೆ, ಅಮವಾಸ್ಯೆ, ಹುಣ್ಣಿಮೆ, ರಜಾ ದಿನಗಳು, ಶನಿವಾರ, ಭಾನುವಾರ, ಸೋಮವಾರಗಳಂದು ಭಕ್ತರ ಸಂಖ್ಯೆ ಹೆಚ್ಚಿದ್ದು, ಆದಾಯದ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗುತ್ತದೆ.
ಕೋಟ್ಯಂತರ ಭಕ್ತರ ಮನದೊಡೆಯ
ಹಳೆ ಮೈಸೂರು ಭಾಗದಲ್ಲಿ ಮನೆ ದೇವರಾಗಿ ಮಾದಪ್ಪನನ್ನು ಪೂಜೆ ಮಾಡುವ ಕುಟುಂಬಗಳು ಸಾಕಷ್ಟಿವೆ. ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ತಮಿಳು ನಾಡಿನ ಕೃಷ್ಣಗಿರಿ, ಈರೋಡ್, ಧರ್ಮಪುರಿ, ಮೆಟ್ಟೂರು ಸೇಲಂ ಪ್ರದೇಶಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಇದೊಂದು ರೀತಿಯಲ್ಲಿ ಕನ್ನಡ ಮತ್ತು ತಮಿಳು ಭಾಷಿಕರ ಸೌಹಾರ್ಧದ ಭಕ್ತಿ ಕೇಂದ್ರವೂ ಹೌದು.
ಈಗಲೂ ಹಳೆ ಮೈಸೂರು ಭಾಗದಲ್ಲಿನ ಗ್ರಾಮೀಣ ಭಾಗಗಳಿಂದ ನಡೆದುಕೊಂಡೇ ಮಾದಪ್ಪನ ಪರಿಷೆಗೆ ಭಕ್ತರು ಶಿವರಾತ್ರಿ, ಯುಗಾದಿ, ದೀಪಾವಳಿ ಸಂದರ್ಭಗಳಲ್ಲಿ ಬರುತ್ತಾರೆ. ಮಾದಪ್ಪನ ಪರಿಷೆಗೆ ಹೊರಟವರನ್ನು ಊರಿನ ತುಂಬೆಲ್ಲಾ ಮೆರವಣಿಗೆ ಮಾಡಿ, ಅವರನ್ನು ಬೀಳ್ಕೊಡುವ ಸಂಪ್ರದಾಯ ಇದೆ. ಅಲ್ಲದೇ ಬಸ್ ಸೌಲಭ್ಯಗಳು, ಸಾರಿಗೆ ಸಂಪರ್ಕ ವ್ಯವಸ್ಥೆ ಬಲವಾದ ಈ ಸಂದರ್ಭದಲ್ಲಿ ಮಾದಪ್ಪನ ಸನ್ನಿಧಾನಕ್ಕೆ ಬರುವ ಭಕ್ತರ ಸಂಖ್ಯೆ ಪ್ರತಿ ದಿನ ಸರಾಸರಿ 3000 ರಿಂದ 4000 ದಷ್ಟಿದೆ. ಅಲ್ಲಿಗೆ ವಾರ್ಷಿಕವಾಗಿ 12 ರಿಂದ 15 ಲಕ್ಷ ಭಕ್ತರ ಆಗಮನವಾಗುತ್ತದೆ ಎಂಬುದು ಅಂಕಿಅಂಶಗಳಿಂದ ಗೊತ್ತಾಗುತ್ತದೆ.
ಕಳೆದ ವರ್ಷ 85 ಲಕ್ಷ ಲಡ್ಡು ಮಾರಾಟದ ದಾಖಲೆ
ಮಾದಪ್ಪನ ಪರಿಷೆಗೆ ಬರುವವರು ತಮ್ಮ ಶಕ್ತಿಯನುಸಾರ ಹುಲಿ ವಾಹನ ಸೇವೆ, ಬಸವ ವಾಹನ ಸೇವೆ, ರುದ್ರಾಕ್ಷಿ ಸೇವೆ, ಧೂಪದ ಸೇವೆ, ದುಂಡುಕೋಲು ಸೇವೆ, ಮುಡಿ ಸೇವೆ ಮಾಡಿಸುತ್ತಾರೆ. ಚಿನ್ನದ ಹುಲಿ ವಾಹನ ಸೇವೆ ಮಾಡಿಸಿದವರಿಗೆ 10 ಲಡ್ಡು, ಇತರ ಸೇವೆ ಮಾಡಿಸಿದವರಿಗೆ 2 ಲಡ್ಡುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇನ್ನು ಹೆಚ್ಚಿನ ಲಡ್ಡುಗಳು ಬೇಕೆಂದವರು ದುಡ್ಡುಕೊಟ್ಟು ಕೊಂಡುಕೊಳ್ಳುತ್ತಾರೆ. ಹೀಗಾಗಿ ವಾರ್ಷಿಕ ಸುಮಾರು 60 ರಿಂದ 80 ಲಕ್ಷದಷ್ಟು ಲಡ್ಡುಗಳಿಗೆ ಬೇಡಿಕೆ ಇದೆ. 2024ರಲ್ಲಿ 85 ಲಕ್ಷ ಲಡ್ಡು ಮಾರಾಟವಾಗಿದೆ ಎಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ದ ಫೆಡರಲ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.
ಈಗಲೂ ನಂದಿನಿ ತುಪ್ಪವೇ ಬಳಕೆ
ಮಲೆ ಮಹದೇಶ್ವರನ ಪ್ರಸಾದದಲ್ಲಿ ಈಗಲೂ ನಂದಿನಿ ತುಪ್ಪವನ್ನೇ ಬಳಕೆ ಮಾಡಲಾಗುತ್ತಿದೆ. ಆದರೆ ಲಡ್ಡುವಿನ ಬೂಂದಿ ಕರಿಯಲು ಸೂರ್ಯಕಾಂತಿ ಎಣ್ಣೆಯ ಬಳಕೆ ಮಾಡಲಾಗುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ ನಂದಿನಿ ತುಪ್ಪದ ಬಳಕೆ ಆಗುತ್ತಿದೆ. ಇದೀಗ ಸಿಎಂ ಆದೇಶದ ಮೇರೆಗೆ ಬೂಂದಿಯನ್ನೂ ನಂದಿನಿ ತುಪ್ಪದಲ್ಲಿಯೇ ಕರಿಯಲಾಗುತ್ತದೆ. ಇದರಿಂದ ಲಡ್ಡುವಿನ ಸ್ವಾದ ಇನ್ನಷ್ಟು ಹೆಚ್ಚಾಗಲಿದೆ ಎಂದು ಲಡ್ಡು ತಯಾರಿಕಾ ಕೇಂದ್ರದ ಉಸ್ತುವಾರಿ ಹೊತ್ತಿರುವ ಮಹದೇವಸ್ವಾಮಿ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಈಗ ಬಳಕೆ ಮಾಡಲಾಗುತ್ತಿರುವ ಪದಾರ್ಥಗಳು
ಇಲ್ಲಿ ಒಂದು ಸಲಕ್ಕೆ 720 ಲಡ್ಡುಗಳನ್ನು ತಯಾರು ಮಾಡಲಾಗುತ್ತದೆ. ಅದಕ್ಕೆ ಕ್ರಮವಾಗಿ 16 ಕೆಜಿ ಕಡಲೆ ಹಿಟ್ಟು, 26 ಕೆಜಿ ಸಕ್ಕರೆ, 1 ಕೆಜಿ ಗೋಡಂಬಿ, 1.5 ಕೆಜಿ ಒಣದ್ರಾಕ್ಷಿ, 100 ಗ್ರಾಂ ಏಲಕ್ಕಿ, 50 ಗ್ರಾಂ ಪಚ್ಚಕರ್ಪೂರ, 100 ಗ್ರಾಂ ಲವಂಗ, 18 ಲೀಟರ್ ಸನ್ ಫ್ಲವರ್ ಆಯಿಲ್ ಬಳಕೆ ಮಾಡಲಾಗುತ್ತಿದೆ. ಜೊತೆಗೆ ಇದೆಲ್ಲವನ್ನೂ ಹದ ಮಾಡಿ ಹೊಂದಿಸಿ ಲಡ್ಡು ಕಟ್ಟಲು 1.5 ಕೆಜಿ ನಂದಿನಿ ತುಪ್ಪದ ಬಳಕೆ ಮಾಡಲಾಗುತ್ತಿದೆ. ಇದೀಗ ಬೂಂದಿ ಕರಿಯಲು ನಂದಿನಿ ತುಪ್ಪವನ್ನೇ ಬಳಕೆ ಮಾಡುವುದರಿಂದ ಸರಾಸರಿ 720 ಲಡ್ಡು ತಯಾರಿಕೆಗೆ ಸುಮಾರು 20 ಕೆಜಿಯಷ್ಟು ನಂದಿನಿ ತುಪ್ಪದ ಅಗತ್ಯ ಬೀಳಲಿದೆ ಎಂದು ಮಹದೇವಸ್ವಾಮಿ ವಿವರ ನೀಡಿದ್ದಾರೆ.
ತಿರುಪತಿ ಲಡ್ಡುಗೆ ಪೈಪೋಟಿ..!
ತನ್ನ ವಿಶಿಷ್ಟ ಸ್ವಾದ, ರುಚಿಯಿಂದಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಸರಿ ಸಮವಾಗಿಯೇ ಮುಂದಿನ ದಿನಗಳಲ್ಲಿ ಮಲೆ ಮಹದೇಶ್ವರ ಬೆಟ್ಟದ ಲಡ್ಡು ಪ್ರಸಾದ ತಯಾರಾಗುವ ನಿರೀಕ್ಷೆ ಇದೆ. ತಿಮ್ಮಪ್ಪನ ಲಡ್ಡು ಪ್ರಸಾದ ಈಗಾಗಲೇ ಭೌಗೋಳಿಕ ಸೂಚನೆ (GI) ಟ್ಯಾಗ್ ಪಡೆದುಕೊಂಡಿದ್ದು, ಅದೇ ರೀತಿಯಲ್ಲಿ ಮಾದಪ್ಪನ ಪ್ರಸಾದವೂ ಮಾನ್ಯತೆ ಪಡೆಯುವ ಸಾಧ್ಯತೆ ಇದೆ.
ಕೆಎಂಎಫ್ ಜೊತೆಗೆ ರೈತರಿಗೂ ಅನುಕೂಲ
ಈಗಾಗಲೇ ತಿರುಪತಿ ತಿಮ್ಮಪ್ಪನ ದೇವಸ್ಥಾನ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ ಸೇರಿ ದೇಶದ ನಾನಾ ಭಾಗಗಳಲ್ಲಿ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಂಡಿರುವ ಕೆಎಂಎಫ್ ಗೆ ಮತ್ತೊಂದು ದೊಡ್ಡ ಮಟ್ಟದ ಪೂರೈಕೆ ಜಾಲ ಸಿಕ್ಕಂತಾಗಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ವರ್ಷಕ್ಕೆ ಸುಮಾರು 80 ರಿಂದ 90 ಲಕ್ಷದಷ್ಟು ಲಡ್ಡುಗಳು ಮಾರಾಟವಾಗಲಿವೆ. ಅವುಗಳಲ್ಲಿ ಸಂಪೂರ್ಣವಾಗಿ ನಂದಿನಿ ತುಪ್ಪವನ್ನೇ ಬಳಕೆ ಮಾಡುವುದರಿಂದ ಮಾಸಿಕವಾಗಿ 16 ರಿಂದ 20ಟನ್ ಗಳಷ್ಟು ತುಪ್ಪದ ಬೇಡಿಕೆ ಬರಲಿದೆ. ಹೀಗಾಗಿ ಕೆಎಂಎಫ್ ಗೂ ಹೆಚ್ಚಿನ ವರಮಾನ ಬರಲಿದೆ, ಆ ಮೂಲಕ ಹಾಲು ಉತ್ಪಾದಕರಿಗೂ ಹೆಚ್ಚಿನ ಅನುಕೂಲ ಆಗಲಿದೆ.
'ನಮ್ಮ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಲಡ್ಡು ಪ್ರಸಾದಕ್ಕೆ ಸಾಕಷ್ಟು ಬೇಡಿಕೆ ಇದೆ. ವಾರ್ಷಿಕ 80ರಿಂದ 85 ಲಕ್ಷದಷ್ಟು ಲಡ್ಡುಗಳು ಮಾರಾಟ ಆಗುತ್ತಿವೆ. ಲಡ್ಡುಗಳ ತಯಾರಿಕೆಯಲ್ಲಿ ಸಂಪೂರ್ಣವಾಗಿ ನಂದಿನಿ ತುಪ್ಪದ ಬಳಕೆ ಸಂಬಂಧ ಪ್ರಾಧಿಕಾರದ ಸಭೆಯ ಅಜೆಂಡಾದಲ್ಲಿ ಸೇರಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ಕೊಟ್ಟು, ನಂದಿನಿ ತುಪ್ಪದ ಬಳಕೆಗೆ ಸೂಚನೆ ನೀಡಿದ್ದಾರೆ. ಈಗ ಒಂದು ಲಡ್ಡು ತಯಾರಿಕೆಗೆ 17.50 ರೂ. ಖರ್ಚು ಬರುತ್ತಿದ್ದು, 25 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದೇವೆ. ಮುಂದೆ ನಂದಿನಿ ತುಪ್ಪದ ಬಳಕೆ ಮಾಡುವುದರಿಂದ ಖರ್ಚು ತುಸು ಹೆಚ್ಚಾಗಲಿದ್ದು, ಅದಕ್ಕೆ ತಕ್ಕಂತೆ ದರ ನಿಗದಿ ಮಾಡಲಿದ್ದೇವೆ' ಎಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
'ದಸರಾ, ದೀಪಾವಳಿ, ಶಿವರಾತ್ರಿ, ಯುಗಾದಿ ಸೇರಿ ಪ್ರಮುಖ ದಿನಗಳಲ್ಲಿ ದಿನಕ್ಕೆ 50 ಸಾವಿರದಿಂದ 1 ಲಕ್ಷದ ವರೆಗೂ ಲಡ್ಡುಗಳ ಮಾರಾಟವಾಗುತ್ತದೆ. ತಿಂಗಳಿಗೆ ಸರಾಸರಿ 7 ಲಕ್ಷ ಲಡ್ಡು ಮಾಡುತ್ತೇವೆ. 50 ಜನರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಜಾತ್ರೆ ವಿಶೇಷ ಸಂದರ್ಭಗಳಲ್ಲಿ ಇನ್ನೂ ಹೆಚ್ಚಿನ ಜನರನ್ನು ತೆಗೆದುಕೊಳ್ಳುತ್ತೇವೆ. ಒಂದು ಲಡ್ಡು ಸರಿಯಾಗಿ 100 ಗ್ರಾಂ ತೂಕ ಬರುತ್ತದೆ. 2013ರಂದು ಪ್ರಾಧಿಕಾರ ರಚನೆಯಾದಾಗಿನಿಂದಲೂ ನಾವು ನಂದಿನಿ ತುಪ್ಪ ಬಳಕೆ ಮಾಡುತ್ತಿದ್ದೇವೆ. ಇದೀಗ ಸಂಪೂರ್ಣವಾಗಿ ನಂದಿನಿ ತುಪ್ಪವನ್ನೇ ಬಳಕೆ ಮಾಡುವುದರಿಂದ ಗುಣಮಟ್ಟ, ಸ್ವಾದ, ಬೇಡಿಕೆಯಲ್ಲಿಯೂ ಏರಿಕೆ ಕಂಡುಬರುವ ವಿಶ್ವಾಸ ಇದೆ' ಎಂದು ಲಡ್ಡು ತಯಾರಿಕಾ ಘಟಕದ ಉಸ್ತುವಾರಿ ಮಹದೇವಸ್ವಾಮಿ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಯಾವುದೇ ಆರ್ಡರ್ ಬಂದಿಲ್ಲ
ಮಲೆ ಮಹದೇಶ್ವರ ದೇವಸ್ಥಾನದ ಪ್ರಸಾದ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಬಳಸುವಂತೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಆದರೆ, ದೇವಾಲಯದಿಂದ ಇನ್ನೂ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿಲ್ಲ. ಪ್ರಸ್ತುತ, ಸ್ವಲ್ಪ ಪ್ರಮಾಣದಲ್ಲಿ ನಂದಿನಿ ತುಪ್ಪ ಬಳಸುತ್ತಿದ್ದಾರೆ. ಲಡ್ಡು ಪ್ರಸಾದ ತಯಾರಿಕೆಗೆ ಸಂಪೂರ್ಣವಾಗಿ ನಂದಿನಿ ತುಪ್ಪವನ್ನೇ ಬಳಸುವಂತೆ ಸಿಎಂ ಅವರು ಸೂಚಿಸಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಬೇಡಿಕೆ ಆಧರಿಸಿ, ತುಪ್ಪ ಪೂರೈಸಲಾಗುವುದು. ಈ ಸಂಬಂದ ಮಾತುಕತೆ ನಡೆಸಲಾಗುವುದು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.